March 29, 2024

Bhavana Tv

Its Your Channel

ತೆಂಗು ಬೆಳೆಸಿದ ರೈತ ಉಳಿಯಬೇಕೋ, ತೆಂಗು ತಿಂದು ಹಾಕುವ ಮಂಗ ಉಳಿಯಬೇಕೋ ?

ಹೊನ್ನಾವರ ;ತಾಲೂಕಿನಲ್ಲಿ ವರ್ಷಕ್ಕೆ ಸುಮಾರು ಸಾವಿರ ಕೋಟಿ ರೂಪಾಯಿ ಆದಾಯ ತರುವ ತೆಂಗಿನ ಕಾಯಿಯನ್ನು ತಿಂದು ಹಾಕುತ್ತಿರುವ ಮಂಗಗಳು ಉಳಿಯಬೇಕೋ ಅಥವಾ ಇವುಗಳನ್ನು ಕಷ್ಟಪಟ್ಟು ಬೆಳೆಸಿದ ರೈತ ಉಳಿಯಬೇಕೋ. ಸರ್ಕಾರ ಈ ಕುರಿತು ತೀರ್ಮಾನಕ್ಕೆ ಬರಬೇಕಾಗಿದೆ.
ತೆಂಗು ಬೆಳೆಗಾರ ಉಳಿಯಬೇಕಾದರೆ ಮಂಗಗಳ ಹಾವಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು. ಸರ್ಕಾರಕ್ಕೆ ಅತಿಪ್ರಾಣಿದಯೆ ಇದ್ದರೆ ತೋಟಿಗರಿಗೆ ಸಾಯಲು ಪರವಾನಿಗೆ ಕೊಡಬೇಕು. ತಾಲೂಕಿನಲ್ಲಿ ೨೧೧೭.೮೯ ಹೆಕ್ಟೇರ್ ಅಂದರೆ ೫,೦೦೦ ಎಕರೆಯಷ್ಟು ಸಮೃದೃ ಭೂಮಿಯಲ್ಲಿ ತೆಂಗು ಬೆಳೆಯಲಾಗುತ್ತದೆ. ಸಹ್ಯಾದ್ರಿಯ ಬೆಟ್ಟದ ತುದಿಯಿಂದ ಕಡಲತೀರದವರೆಗೆ ಡ್ರೋಣ್‌ನಲ್ಲಿ ನೋಡಿದರೆ ತೆಂಗಿನಮರ ಬಿಟ್ಟು ಬೇರೇನೂ ಕಾಣುವುದಿಲ್ಲ. ಕರಾವಳಿ ಟೋಲ್ ಎಂದು ಪ್ರಸಿದ್ಧವಾದ ರೋಗರುಜನಿಗಳಿಲ್ಲದ ದೀರ್ಘಕಾಲ ಫಲಕೊಡುವ ಒಂದು ತೆಂಗಿನ ಮರ ಬೆಳೆಸಲು ಕನಿಷ್ಠ ೧೦ವರ್ಷ ಶ್ರಮಪಡಬೇಕು. ೧ಮರಕ್ಕೆ ಒಂದು ಕೊಯ್ಲಿಗೆ ೨೦೦-೨೫೦ ಕಾಯಿ ಸಿಗುತ್ತದೆ. ವರ್ಷಕ್ಕೆ ೬-೮ ಕೊಯ್ಲು ಮಾಡಲಾಗುತ್ತದೆ. ಅಂದರೆ ಒಂದು ವರ್ಷಕ್ಕೆ ೧೬೦೦ಕೋಟಿ ಬೆಲೆಯ ತೆಂಗು ಬೆಳೆಯುತ್ತದೆ, ೧೦೦೦ಕೋಟಿ ರೂಪಾಯಿ ತೆಂಗು ಮಂಗನ ಪಾಲಾಗುತ್ತದೆ. ಇದನ್ನು ತಪ್ಪಿಸಲೇಬೇಕಾದಂತಹ ಅನಿವರ‍್ಯ ಪರಿಸ್ಥಿತಿ ಉಂಟಾಗಿದೆ. ಇಲ್ಲವಾದರೆ ರೈತರೇ ಹೋರಾಟಕ್ಕಿಳಿಯುವ ಸ್ಥಿತಿ ಇದೆ.
ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ಬಂದೂಕು ತೋರಿಸಿ ಮಂಗನನ್ನು ಓಡಿಸಿದರು, ಕೆಲವರು ಮಂಗನನ್ನು ಹೊಡೆದುರುಳಿಸಿದರು, ಇನ್ನೂ ಕೆಲವರು ದುಡ್ಡು ಕೊಟ್ಟು ಮಂಗವನ್ನು ಹಿಡಿಸಿ ಬೇರೆಡೆ ಬಿಟ್ಟು ಬಂದರು. ಕೆಲವರು ಬಾಳೆಹಣ್ಣಿನಲ್ಲಿ ವಿಷಹಾಕಿದರು. ಏನೇ ಆದರೂ ಮಂಗನಕಾಟ ಕಡಿಮೆಯಾಗಿಲ್ಲ. ಬೆಳಿಗ್ಗೆ ಬೆಳಿಗ್ಗೆ ತೋಟಕ್ಕೆ ನುಗ್ಗುವಮಂಗಗಳು ಕಬ್ಬಿನಗದ್ದೆ ಆನೆಹೊಕ್ಕಂತೆ ಎಳೆನೀರನ್ನು ಖಾಲಿಮಾಡಿಯೇ ಹೋಗುತ್ತದೆ. ಯಾವ ಬೆದರಿಕೆಗೂ ಜಗ್ಗುವುದಿಲ್ಲ. ಉತ್ತರದ ರಾಜ್ಯಗಳಲ್ಲಿ ಮಂಗಗಳ ಕಾಟತಡೆಯಲಾರದೆ ಅವುಗಳನ್ನು ತಡೆಯಲು ಕುಟುಂಬದ ಯೋಜನೆಯ ಶಸ್ತçಚಿಕಿತ್ಸೆ ಮಾಡಲಾಯಿತು. ಇದರಿಂದ ಮಂಗಗಳು ವಿಕೃತಮನಸ್ಸಿನಿಂದ ಮನುಷ್ಯನಮೇಲೆ ಎರಗತೊಡಗಿದವು. ಮಂಗಗಳ ಪಾರ್ಕ್ ರಚಿಸಲಾಗಿದ್ದು ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಲಾಗಿದೆ.
ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಶರಾವತಿ ಹಿನ್ನೀರಿನಲ್ಲಿ ಮಂಗಗಳ ಪಾರ್ಕ್ ಮಾಡುವುದಾಗಿ ಹೇಳಿದ್ದರು. ಸರ್ಕಾರದ ಆದೇಶವೂ ಆಗಿದೆ, ನಿಜವಾಗಿ ಉತ್ತರ ಕನ್ನಡದ ಕರಾವಳಿಗೆ ಮಂಗಗಳ ಪಾರ್ಕಿನ ಅವಶ್ಯಕತೆಯಿದೆ. ತೆಂಗು ಹೆಚ್ಚು ಬೆಳೆಯುವ ಜಿಲ್ಲೆಯ ಇತರ ತಾಲೂಕುಗಳಲ್ಲಿಯೂ ಇದೇ ಅವಸ್ಥೆ ಇದೆ. ಮಂಗಗಳ ಕಾಟದಿಂದ ಆಗುವ ಅಗಾಧ ಹಾನಿಯನ್ನು ಲೆಕ್ಕಹಾಕಿದರೆ ಪಾರ್ಕ್ಗೆ ತಗಲುವ ವೆಚ್ಚ ಏನೂ ಅಲ್ಲ. ಸರ್ಕಾರ ಮನಸ್ಸು ಮಾಡದಿದ್ದರೆ ಆಹಾರವಾಗಬೇಕಾದ ತೆಂಗು ಪೋಲಾಗುತ್ತದೆ.
……………………….
ವರ್ಷಕ್ಕೆ ೭ ತೆಂಗಿನ ಕೊಯ್ಲು ಮಾಡುವ ಪ್ರತಿ ಕೊಯ್ಲಿಗೆ ೧೦ಸಾವಿರ ತೆಂಗಿನ ಕಾಯಿಯನ್ನು ಪಡೆಯುವ ಬೋಳಗೆರೆಯ ಜಿಜಿ ಭಟ್ ಇವರಿಗೆ ಈಗ ಕೊಯ್ಲಿಗೆ ಸಾವಿರ ಕಾಯಿಯೂ ಬರುವುದಿಲ್ಲ. ಪೂರಾ ಮಂಗನ ಪಾಲಾಗುತ್ತಿದೆ. ಮಂಗಗಳ ದಾಳಿಗೆ ನಾನು ಸೋತು ಹೋಗಿದ್ದೇನೆ, ಕಷ್ಟಪಟ್ಟು ನೀರು, ಗೊಬ್ಬರ ಹಾಕಿ ಬೆಳೆದ ಬೆಳೆ ಯಾರಿಗೂ ಇಲ್ಲದಂತೆ ಹೋಗುತ್ತಿರುವುದು ನೋಡಲಾಗುತ್ತಿಲ್ಲ. ಸರ್ಕಾರ ಏನಾದರೂ ಸಹಾಯಕ್ಕೆ ಬರದಿದ್ದರೆ ತೆಂಗಿನ ತೋಟದ ಆಸೆ ಬಿಡಬೇಕಾಗುತ್ತದೆ ಎಂದು ಬೇಸರದಿಂದ ಹೇಳುತ್ತಾರೆ. ತಾಲೂಕಿನಲ್ಲಿ ೧೦ಸಾವಿರಕ್ಕೂ ಹೆಚ್ಚು ತೆಂಗಿನ ಕಾಯಿ ಪಡೆಯುವ ನೂರಕ್ಕೂ ಹೆಚ್ಚು ರೈತರಿದ್ದಾರೆ. ಗೇರಸೊಪ್ಪಾದಿಂದ ಹೊನ್ನಾವರದವರೆಗೆ ೩೫ಕಿಮೀ ಶರಾವತಿ ಎಡಬಲದಂಡೆಯಲ್ಲಿ ಮತ್ತು ಸಹ್ಯಾದ್ರಿಯ ಸೆರಗಿನುದ್ದಕ್ಕೂ ಇರುವ ತೆಂಗಿನ ತೋಟಗಳ ಮಾಲಕರ ಗೋಳು ಇದೆ ಆಗಿದೆ.
ಜಿ.ಯು. ಹೊನ್ನಾವರ

error: