April 25, 2024

Bhavana Tv

Its Your Channel

ಕಟ್ಟುನಿಟ್ಟಿನ ಲಾಕ್ ಡೌನ್ ಘೋಷಣೆ ಮಾಡಬೇಕು -ಜಿ. ಏನ್.ರೇವಣಕರ್

ಭಟ್ಕಳ: ರಾಜ್ಯದ ಎ.ಪಿ.ಎಲ್ ಮತ್ತು ಬಿ.ಪಿ.ಎಲ್ ಪಡಿತರದಾರರಿಗೆ ಆಹಾರ ಭದ್ರತೆ (ಫುಡ್ ಕಿಟ್) ಕೂಡಲೇ ವಿತರಿಸಬೇಕು ಮತ್ತು ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ತಡೆಯಲು ಕಟ್ಟುನಿಟ್ಟಿನ ೧೫ ದಿನಗಳ ಕಾಲ ಲಾಕ್ಡೌನ್ ಘೋಷಣೆ ಮಾಡಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಏನ್. ರೇವಣಕರ್ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಕೋವಿಡ್-೧೯ ೨ ನೇ ಅಲೆಯ ಸಾಂಕ್ರಾಮಿಕ ರೋಗ ಹರಡುವಿಕೆಯ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಜನತಾ ಕರ್ಫ್ಯೂ ಘೋಷಿಸಿದೆ. ಆದರೆ ಯಾವುದೇ ಪ್ಯಾಕೇಜ್ ಘೋಷಣೆ ಮಾಡದೇ ಇರುವುದರಿಂದ ಜನಜೀವನ ತುಂಬಾ ಅಸ್ತವ್ಯಸ್ತವಾಗಿದೆ. ರಾಜ್ಯ ಸರ್ಕಾರ ಕೆಲವಷ್ಟು ಉದ್ಯಮವನ್ನು ಮಾತ್ರ ಪ್ರಾರಂಭಿಸಲು ಮತ್ತು ಕೆಲವೊಂದು ಅಂಗಡಿಯ ಮುಗ್ಗಟ್ಟುಗಳನ್ನು ತೆರೆದು ವ್ಯವಹರಿಸಲು ದಿನದ ಕೆಲವೇ ಸಮಯವನ್ನು ಮಾತ್ರ ನೀಡಿ ಅವಕಾಶ ಕಲ್ಪಿಸಿಕೊಟ್ಟಿದೆ . ಅದರಲ್ಲಿ ಕೆಲವರಿಗೆ ಮಾತ್ರ ದಿನದ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಅದರಲ್ಲಿ ಟೈಲರ್, ಗ್ಯಾರೇಜ್, ಸೈಕಲ್ ಶಾಪ್, ಸ್ಟೇಷನರಿ ಅಂಗಡಿ, ಅತಿ ಸಣ್ಣಪುಟ್ಟ ಬಟ್ಟೆ ಅಂಗಡಿ, ದೋಬಿ, ಸಲೂನ್, ಫೋಟೋ ಸ್ಟುಡಿಯೋ ಇನ್ನೂ ಹಲವಾರು ರೀತಿಯ ಚಿಕ್ಕ ಚಿಕ್ಕ ವ್ಯಾಪಾರಿಗಳನ್ನು ಹೊರಗಿಟ್ಟು ಕೆಲವೇ ವ್ಯಾಪಾರಿಗಳಿಗೆ ಉದ್ಯೋಗವನ್ನು ಮಾಡಲು ಅವಕಾಶ ನೀಡಿದ್ದೀರಿ.

ಕೋವಿಡ್ ಪಾಸಿಟಿವ್ ಕೇಸ್ ಗಳು ಎಲ್ಲಾ ಜಿಲ್ಲಾ ತಾಲೂಕು ಕೇಂದ್ರಗಳಲ್ಲಿ ಅತಿ ಹೆಚ್ಚಾಗಿ ಹಾಗೂ ವೇಗವಾಗಿ ಹರಡುತ್ತಿದೆ. ಇದನ್ನು ನಿಯಂತ್ರಿಸಲು ಜನತಾ ಕರ್ಫ್ಯೂಯಿಂದ ಸಾಧ್ಯವಾಗುವುದು ಕಂಡುಬರುತ್ತಿಲ್ಲ. ಆದ್ದರಿಂದ ಈ ಕೂಡಲೇ ಬಿ.ಪಿ.ಎಲ್ ಮತ್ತು ಎ.ಪಿ.ಎಲ್ ಪಡಿತರದಾರರಿಗೆ ಆಹಾರ ಭದ್ರತೆಯನ್ನು ( ಫುಡ್ ಕಿಟ್) ನೀಡಬೇಕು. ಫುಡ್ ಕಿಟ್ ನಲ್ಲಿ ಒಂದು ತಿಂಗಳಿಗಾಗುವ ದಿನಸಿ ಸಾಮಗ್ರಿಗಳು ಅಂದರೆ – ಉದ್ದಿನ ಬೆಳೆ ೨ ಕೆ.ಜಿ, ತೊಗರಿ ಬೇಳೆ ೨ ಕೆ.ಜಿ, ಸಕ್ಕರೆ ೨ ಕೆ.ಜಿ, ಟೀ-ಪುಡಿ ೧ಕೆ.ಜಿ, ಕಾರದ ಪುಡಿ ೧ ಕೆ.ಜಿ, ಸಾಸಿವೆ ೨೫೦ ಗ್ರಾಂ, ಜೀರಿಗೆ ೨೫೦ ಗ್ರಾಂ, ಬೆಳ್ಳುಳ್ಳಿ ೫೦೦ ಗ್ರಾಂ , ಈರುಳ್ಳಿ ೩ಕೆ.ಜಿ, ಗೋಧಿ ಹಿಟ್ಟು ೫ ಕೆ.ಜಿ, ಕೊತ್ತಂಬರಿ ಕಾಳು ೫೦೦ ಗ್ರಾಂ, ಹುಣಸೆಹಣ್ಣು ೧ಕೆ.ಜಿ, ರಾಗಿ ಹಿಟ್ಟು ೪ ಕೆ.ಜಿ, ಅರಿಶಿನ ೨೦೦ ಗ್ರಾಂ, ಉಪ್ಪು ೨ ಕೆ.ಜಿ, ಅಡಿಗೆ ಎಣ್ಣೆ ೨ ಲೀಟರ್ , ಕೊಬ್ಬರಿ ಎಣ್ಣೆ ೫೦೦ ಮಿಲಿ.ಲೀಟರ್, ಬೆಲ್ಲ ೧ ಕೆ.ಜಿ, ಸ್ನಾನದ ಸೋಪು ೫ , ವಾಷಿಂಗ್ ಪೌಡರ್ ೨ ಕೆ.ಜಿ, ಪೇಸ್ಟ್ ೨೦೦ ಗ್ರಾಂ, ಅಮೃತಾಂಜನ್ ೨ ಡಬ್ಬಿ, ವಿಕ್ಸ್ ೨ ಡಬ್ಬಿ, ಮಿಲ್ಕ್ ಪೌಡರ್ ೧ ಕೆ.ಜಿ , ಚಾಕ್ಲೇಟ್ ೧ಕೆ.ಜಿ, ಇದರ ಜೊತೆ ಆಯುಷ್ ಇಲಾಖೆಯ ಜಾಹೀರಾತಿನಂತೆ ಮನೆಯಲ್ಲಿ ಕಷಾಯಮಾಡಿ ಸೇವಿಸಲು ಅದಕ್ಕೆ ಬೇಕಾಗುವ ಅಂದಾಜು ೪೦೦ ವನಸ್ಪತಿ ಮೂಲಿಕೆಗಳು ಇವೆಲ್ಲವೂ ಒಳಪಟ್ಟ ಒಂದು ಕಿಟ್ ಅನ್ನು ರಾಜ್ಯದ ಏ.ಪಿ.ಎಲ್ ಮತ್ತು ಬಿ.ಪಿ.ಎಲ್ ಅಂದಾಜು ೧ ಕೋಟಿ ೫೦ ಲಕ್ಷದ ೭ ಸಾವಿರ ಪಡಿತರದಾರರಿಗೆ ಪಡಿತರ ಅಂಗಡಿಯಲ್ಲಿಯೇ ಈ ಕಿಟ್‌ನ್ನು ವಿತರಿಸಿದರೇ ರಾಜ್ಯದ ಶೇಕಡ ೮೫ ಕ್ಕೂ ಅಧಿಕ ಜನರಿಗೆ ಆಹಾರ ಭದ್ರತೆ ಒದಗಿಸಿದಂತಾಗುತ್ತದೆ. ಈ ಫುಡ್ ಕಿಟ್ ಅಂದಾಜು ೪೦೦೦ ಆಗುತ್ತದೆ. ಇದರ ಒಟ್ಟು ವೆಚ್ಚ ೬,೦೦೨ ಕೋಟಿ ೮೦ ಲಕ್ಷ ರೂಪಾಯಿ ಆಗುತ್ತದೆ. ಒಂದು ವೇಳೆ ಸರ್ಕಾರ ಎ.ಪಿ.ಎಲ್ ಪಡಿತರದಾರರಿಗೆ ಉಚಿತ ಕಿಟ್ ಕೊಡಲು ಸಾಧ್ಯವಿಲ್ಲ ಎಂದಾದರೆ ೨,೧೨೦ ಕೋಟಿ ಕಡಿಮೆ ಆಗುತ್ತದೆ. ಆದರೆ ಎ.ಪಿ.ಎಲ್ ಪಡಿತರ ದಾರರನ್ನು ಹೊರಪಡಿಸಿದರೆ ಇನ್ನೂ ಅನೇಕ ರೀತಿಯ ಸಮಸ್ಯೆಗಳು ಉದ್ಭವವಾಗುತ್ತದೆ. ಆದರೆ ಈ ಸಾಂಕ್ರಮಿಕ ಸಂದರ್ಭದಲ್ಲಿ ಇದು ಸರಿಯಲ್ಲ. ಅಲ್ಲಿಗೆ ೩,೮೮೨ ಕೋಟಿ ೮೦ ಲಕ್ಷದ ಯೋಜನೆ ಆಗುತ್ತದೆ. ಒಂದು ವೇಳೆ ಅದೇ ಕಿಟ್ ಅನ್ನು ಎ.ಪಿ.ಎಲ್ ಪಡಿತರದಾರರಿಗೆ ಅರ್ಧ ಬೆಲೆಗೆ ವಿತರಿಸುವುದಾದರೆ ಎ.ಪಿ.ಎಲ್ ಪಡಿತರದಾರರಿಂದ ೧,೦೬೦ ಕೋಟಿ ರೂಪಾಯಿ ಮರುಪಾವತಿ ಆಗುತ್ತದೆ . ಅಲ್ಲಿಗೆ ಈ ಯೋಜನೆ ಸಂಪೂರ್ಣ ಯಶಸ್ವಿಯಾಗಿ ಎ.ಪಿ.ಎಲ್ ಮತ್ತು ಬಿ.ಪಿ.ಎಲ್ ಪಡಿತರದಾರರಿಗೂ ಫುಡ್ ಕಿಟ್ ಕೊಟ್ಟಂತಾಗಿ ರಾಜ್ಯದ ಶೇಕಡ ೮೫ ಕ್ಕೂ ಅಧಿಕ ಜನರಿಗೆ ಅನುಕೂಲ ಆಗುವಂತಾಗುತ್ತದೆ. ಈ ಫುಡ್ ಕಿಟ್ಟಿನ ಒಟ್ಟು ತೂಕ ಅಂದಾಜು ೩೫ ಕೆ.ಜಿ ಆಗಬಹುದು. ಇದರಲ್ಲಿ ಪಡಿತರ ಅಂಗಡಿಯಲ್ಲಿ ಕೊಡುವಂತಹ ಅಕ್ಕಿ ಒಳಪಡುವುದಿಲ್ಲ ಅದನ್ನು ಎಂದಿನAತೆ ನೀಡಿ . ಇನ್ನು ಹೆಚ್ಚು ಅಕ್ಕಿ ನೀಡಬೇಕೆನ್ನುವುದೇ ನಮ್ಮ ಆಗ್ರಹ. ರಾಜ್ಯ ಸರ್ಕಾರಕ್ಕೆ ಈ ಯೋಜನೆ ೪,೯೪೨ ಕೋಟಿ ೮೦ ಲಕ್ಷ ರೂಪಾಯಿ ಭರಿಸಿದಂತಾಗುತ್ತದೆ. ತಕ್ಷಣ ಈ ಯೋಜನೆಯನ್ನು ಜಾರಿ ಮಾಡಿ ಪಡಿತರ ಅಂಗಡಿಯಲ್ಲಿಯೇ ದೊರಕುವಂತೆ ಮಾಡಿದರೆ ಯೋಜನೆ ಯಶಸ್ವಿಯಾಗುತ್ತದೆ. ಸಾಂಕ್ರಾಮಿಕ ರೋಗ ಹರಡುವಿಕೆಯ ವೇಗವನ್ನು ನೋಡಿದರೆ ಈ ಕೂಡಲೇ ಫುಡ್ ಕಿಟ್ ಅನ್ನು ಜಾರಿ ಮಾಡಿ ರಾಜ್ಯಾದ್ಯಂತ ಕಟ್ಟುನಿಟ್ಟಿನ ಸಂಪೂರ್ಣ ಲಾಕ್ಡೌನ್ ೧೫ ದಿನಗಳವರೆಗೂ ಮಾಡಿದರೆ ಸಾಂಕ್ರಮಿಕ ರೋಗದ ಹರಡುವಿಕೆಯನ್ನು ತಡೆಯಲು ಸಾಧ್ಯವಿದೆ. ಇಲ್ಲವಾದರೆ ಕೇವಲ ಜನತಾ ಕರ್ಫ್ಯೂ ಯಿಂದ ಈ ಸಾಂಕ್ರಮಿಕ ರೋಗದ ಹರಡುವಿಕೆಯನ್ನು ತಡೆಯಲು ಸಾಧ್ಯವಿಲ್ಲ. ಎಂದು ಪತ್ರಿಕಾ ಪ್ರಕಟಣೆಯಲ್ಲಿ ಜಿ.ಎನ್. ರೇವಣಕರ್ ತಿಳಿಸಿರುತ್ತಾರೆ.

error: