April 25, 2024

Bhavana Tv

Its Your Channel

ಮೇ 2 ರಂದು ಅಂಕೋಲೆಯಲ್ಲಿ ವಿನೂತನ ಪರಿಕಲ್ಪನೆಯ ‘ಅಕ್ಷರೋತ್ಸವ’.

ಅoಕೋಲಾ. ಉತ್ತರಕನ್ನಡ ಜಿಲ್ಲೆಯ ಸಾಹಿತಿಗಳು, ಲೇಖಕರು, ಪತ್ರಕರ್ತರು ಸೇರಿದಂತೆ ಎಲ್ಲ ಸ್ಥರದ ಬರಹಗಾರರನ್ನು ಒಂದೆಡೆ ಸೇರಿಸುವ ವಿಶೇಷವಾದ ಪರಿಕಲ್ಪನೆಯೊಂದಿಗೆ ‘ಅಕ್ಷರೋತ್ಸವ’ ಎಂಬ ಒಂದು ದಿನದ ಕಾರ್ಯಕ್ರಮವನ್ನು ಅಂಕೋಲಾದ ನಾಡವರ ಸಮುದಾಯ ಭವನ ಗಾಂಧಿನಿವಾಸದಲ್ಲಿ ಮೇ 2 ರಂದು ಹಮ್ಮಿಕೊಳ್ಳಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ಎನ್. ವಾಸರೆ ತಿಳಿಸಿದರು.

ಅವರು ಪಟ್ಟಣದಲ್ಲಿ ಅಕ್ಷರೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಇದು ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಮೊಟ್ಟ ಮೊದಲಿಗೆ ನಡೆಯುತ್ತಿರುವ ಬರಹಗಾರರ ಸಮ್ಮಿಲನ ಕಾರ್ಯಕ್ರಮವಾಗಿದೆ. ಆ ಮೂಲಕ ಜಿಲ್ಲೆಯ ಬರಹಗಾರರ ಕುಶಲೋಪರಿ ವಿನಿಮಯಕ್ಕೂ ಸಾದ್ಯವಾಗುತ್ತದೆ. ಜಿಲ್ಲೆಯ ಸಾಹಿತ್ಯ- ಸಂಸ್ಕೃತಿಯ ವಿಚಾರಕ್ಕೂ ವೇದಿಕೆಯಾಗುತ್ತದೆ. ಮದ್ಯಾಹ್ನ ಸಾಹಿತ್ಯ- ಸಂಸ್ಕ್ರತಿ, ಜಿಲ್ಲೆಗೊಂದು ಮುನ್ನೋಟ ಎಂಬ ವಿಷಯದ ಮೇಲೆ ಪರಿಕಲ್ಪನೆ ಮತ್ತು ಸ್ಪಂದನೆಯ ಗೋಷ್ಠಿ ನಡೆಯಲಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಕೇವಲ ತಾಲೂಕಾ ಘಟಕಗಳ ಮೇಲೆಯೆ ಜವಾಬ್ದಾರಿ ಹೇರದೆ ಜಿಲ್ಲಾ ಸಾಹಿತ್ಯ ಪರಿಷತ್ತು ಸಹ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಮೊದಲನೇ ಕಾರ್ಯಕ್ರಮವಾಗಿ ದಾಂಡೇಲಿಯಲ್ಲಿ ಕಗ್ಗದೊಳಗೆ ಮಂತ್ರಜಾಲದ ಸೊಬಗು, ಯಲ್ಲಾಪುರ ದಲ್ಲಿ ಕಳೆದ ಮಾರ್ಚ ತಿಂಗಳಲ್ಲಿ ಕವಿ ಕಾವ್ಯ ಸಮಯ ಈಗ 3ನೆ ಕಾರ್ಯಕ್ರಮವಾಗಿ ಅಂಕೋಲೆಯಲ್ಲಿ ಅಕ್ಷರೋತ್ಸವ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ. ಆಯಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕಗಳು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಅಕ್ಷರೋತ್ಸವ ಇದು ಎಲ್ಲಾ ಬರಹಗಾರರನ್ನು ಒಂದೆಡೆ ಸೇರುಸುವ ಪ್ರಯತ್ನ ವಾಗಿದ್ದು ಜಿಲ್ಲೆಯ ಹಿರಿ ಕಿರಿಯ ಸಾಹಿತಿಗಳು, ಪತ್ರಕರ್ತರು ಸೇರಿದಂತೆ ಎಲ್ಲ ಸ್ಥರದ ಬರಹಗಾರರು , ಸಾಹಿತ್ಯಾಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದ ವಿವರ:
ಮೇ 2 ರಂದು ಮುಂಜಾನೆ 10 ಗಂಟೆಗೆ ಮೈಸೂರಿನ ಹಿರಿಯ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕನ್ನಡಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ್ ಜೋಷಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರಾಗಿರುವ ಹಿರಿಯ ಸಾಹಿತಿಗಳಾದ ಡಾ. ಎನ್. ಆರ್. ನಾಯಕ, ವಿಷ್ಣು ನಾಯ್ಕ್, ವಿ. ಗ. ನಾಯಕ , ಡಾ ಜಯಂತ್ ಕಾಯ್ಕಿಣಿ, ಭಾಗೀರಥಿ ಹೆಗಡೆ, ಮಾಸ್ಕೇರಿ ಎಂಕೆ ನಾಯಕ , ಡಾ. ಜಮೀರುಲ್ಲಾ ಷರೀಫ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತಿನ ರಾಜ್ಯ ಗೌರವ ಕಾರ್ಯದರ್ಶಿ ನೇ. ಬ. ರಾಮಲಿಂಗ ಶೆಟ್ಟಿ ‘ ಗೌರವ ಕೋಶಾಧ್ಯಕ್ಷರಾದ ಡಾ. ಬಿ. ಎಂ. ಪಟೇಲ ಪಾಂಡು ಗೌರವ ಉಪಸ್ಥಿತಿಯಿರಲಿದ್ದಾರೆ.

ಮಧ್ಯಾಹ್ನ 2.15 ರಿಂದ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆಯವರ ಅಧ್ಯಕ್ಷತೆಯಲ್ಲಿ ಸಾಹಿತ್ಯ-ಸಂಸ್ಕೃತಿ , ಜಿಲ್ಲೆಗೊಂದು ಮುನ್ನೋಟ ಎಂಬ ಗೋಷ್ಠಿ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ಡಾ. ಜಿ.ಎಲ್. ಹೆಗಡೆ ಮುಖ್ಯ ಅತಿಥಿಗಳಾಗಿರಲಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ತಾಲೂಕಿನಿಂದ ಹಿರಿಯ ಸಾಹಿತಿಗಳು, ಪತ್ರಕರ್ತರು ಈ ವಿಷಯವಾಗಿ ತಮ್ಮ ಪರಿಕಲ್ಪನೆಯನ್ನು ಮಂಡಿಸಲಿದ್ದಾರೆ. ಬರಹಗಾರರ ಸ್ಪಂದನೆಗೂ ಅವಕಾಶವಿದೆ ಎಂದು ಕಸಾಪ ತಿಳಿಸಿದೆ.
ಈ ಕಾರ್ಯಕ್ರಮದ ಮೂಲಕ ಜಿಲ್ಲೆಯ ಎಲ್ಲ ಸ್ಥರದ ಬರಹಗಾರರನ್ನು ಒಂದೆಡೆ ಸೇರಿಸುವ ಪ್ರಯತ್ನ ಇದಾಗಿದ್ದು ಜಿಲ್ಲೆಯ ಎಲ್ಲ ತಾಲೂಕುಗಳಿಂದಲೂ ಪತ್ರಕರ್ತರೂ, ಬರಹಗಾರರು ಆಗಮಿಸಲಿದ್ದಾರೆ. ಆಗಮಿಸುವ ಪ್ರತಿಯೊಬ್ಬ ಬರಹಗಾರರಿಗೂ ಕನ್ನಡದ ಪುಸ್ತಕ ಕಾಣಿಕೆ ನೀಡಲಾಗುತ್ತದೆ.
ಸಾಹಿತ್ಯ ಪರಿಷತ್ತು ಕೇವಲ ಸಾಹಿತ್ಯ ಸಮ್ಮೇಳನಗಳಿಗೆ ಸೀಮಿತವಾಗಿರದೇ, ರಚನಾತ್ಮಕವಾದ ಹಾಗೂ ಪರಿಣಾಮಕಾರಿಯಾದ ಕಾರ್ಯಕ್ರಮ ಆಯೋಜಿಸುವ ಮುನ್ನೋಟವನ್ನಿಟ್ಟುಕೊಂಡಿದ್ದೇವೆ. ಅದರ ಭಾಗವಾಗಿಯೇ ಅಕ್ಷರೋತ್ಸವ ಎಂಬ ಈ ವಿನೂತನ ಕಾರ್ಯಕ್ರಮ ಆಯೋಜನೆಯಾಗಿದೆ. ಮುಂದಿನ ದಿನಗಳಲ್ಲಿ, ವಚನೋತ್ಸವ, ಯಕ್ಷಗಾನ ಸಾಹಿತ್ಯ ಸಮ್ಮೇಳನ, ಬುಡಕಟ್ಟು ಸಾಹಿತ್ಯ ಸಿರಿ, ಪರಿಸರ ಸಾಹಿತ್ಯ, ಮಕ್ಕಳ ಹಾಗು ಯುವ ಸಾಹಿತ್ಯ ಸಮ್ಮೇಳನ, ಮಹಿಳಾ ಸಾಹಿತ್ಯ ಸಮ್ಮೇಳನಗಳು ನಡೆಯಲಿವೆ. ಆರಂಭದ ಅಕ್ಷರೋತ್ಸವದ ಯಶಸ್ಸಿಗೆ ಜಿಲ್ಲೆಯ ಎಲ್ಲ ಬರಹಗಾರರ ಸಮಾಗಮದ ಅಗತ್ಯತೆಯಿದೆ. ಸೇರುತ್ತಾರೆಂಬ ನಿರೀಕ್ಷೆಯೂ ಇದೆ ಎಂದು ಬಿ.ಎನ್. ವಾಸರೆ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪಿ. ಆರ್. ನಾಯ್ಕ್, ಅಂಕೋಲಾ ತಾಲೂಕಾ ಘಟಕದ ಅಧ್ಯಕ್ಷ ಗೋಪಾಲಕೃಷ್ಣ ನಾಯಕ (ಕಾಂತ ಮಾಸ್ತರ), ಗೌರವ ಕಾರ್ಯದರ್ಶಿ ಜಗದೀಶ ನಾಯಕ ,ಹೊಸ್ಕೇರಿ, ಜಿಲ್ಲಾ ಸಮಿತಿ ಸದಸ್ಯ ಜಯಶೀಲ ಆಗೇರ, ಪತ್ರಕರ್ತರ ಸಂಘದ ಅಧ್ಯಕ್ಷ ರಾಘು ಕಾಕರಮಠ ಉಪಸ್ಥಿತರಿದ್ದರು.

error: