March 29, 2024

Bhavana Tv

Its Your Channel

ಡೊಂಗ್ರಿ ಗ್ರಾಮ ಪಂಚಾಯತನಲ್ಲಿ ಎಪ್ಪತ್ತೈದರ ಸ್ವಾತಂತ್ರ‍್ಯ ಸಂಭ್ರಮಕ್ಕೆ ಎಪ್ಪತೈದು ವರ್ಷ ದಾಟಿದ ಹಿರಿಯರಿಗೆ ಸನ್ಮಾನದ ಮೆರುಗು

ವರದಿ: ವೇಣುಗೋಪಾಲ ಮದ್ಗುಣಿ

ಅಂಕೋಲಾ : ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತವು ಗುಡ್ಡಗಾಡು, ಪ್ರವಾಹ ಪೀಡಿತ, ಮೂಲ ಸೌಕರ್ಯ ವಂಚಿತ ಪ್ರದೇಶವಾದರೂ ಸಹಾ ಇಲ್ಲಿನವರ ಸಂಸ್ಕಾರಯುತ ನಡವಳಿಕೆಯಿಂದ ಸಮಾಜದ ಗಮನವನ್ನು ಸೆಳೆಯುವಂತ ಪ್ರದೇಶವಾಗಿದೆ. ದೇಶಾದ್ಯಂತ ಪ್ರಧಾನ ಮಂತ್ರಿಗಳ ಆಶಯದಂತೆ ಸ್ವಾತಂತ್ಯದ ಅಮೃತ ಮಹೋತ್ಸವ ನಡೆಯುತ್ತಿರುವ “ಹರ್ ಘರ್ ತಿರಂಗಾ” ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿದ್ದು ಹಾಗೂ ಡೋಂಗ್ರಿ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮ ಪಂಚಾಯತ ಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರು, ದಾನಿಗಳು, ಊರ ಹಿರಿಯರು , ಹಾಗೂ ನಾಗರಿಕರು ಸೇರಿ ”ಸಮಾನ ಮನಸ್ಕ ಸಮಾಜಮುಖಿ” ಗಳ ಗುಂಪನ್ನು ರಚಿಸಿಕೊಂಡು ಡೋಂಗ್ರಿ ಗ್ರಾಮ ಪಂಚಾಯತ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿನ ಸುಮಾರು 130 ಕ್ಕೂ ಮಿಕ್ಕಿ , 75 ವರುಷಗಳನ್ನು ಕಳೆದ ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ದೇಶಕ್ಕೆ ಸ್ವಾತಂತ್ರ‍್ಯ ಸಿಕ್ಕಿ 75 ವರುಷಗಳ ಹಿನ್ನೆಲೆಯಲ್ಲಿ ಈ ಸನ್ಮಾನವನ್ನು 75 ವರುಷಗಳಿಗೂ ಮಿಕ್ಕಿದ ಹಿರಿಯ ನಾಗರಿಕರ ಮನೆಗಳಿಗೆ ಹೋಗಿ , ಅವರ ಯೋಗಕ್ಷೇಮ ವಿಚಾರಿಸಿ, ಸನ್ಮಾನಿಸಿ, ಅವರಿಂದ ಆಶೀರ್ವಾದ ಹಾಗೂ ಸಮಾಜಕ್ಕೆ ಸಂದೇಶ ಪಡೆಯುವ ಕುರಿತು ಹೆಗ್ಗಾರಿನ ಜಪದಮನೆಯಲ್ಲಿ ಚಾಲನೆ ನೀಡಲಾಯಿತು. ಜಪದಮನೆಯ ಶ್ರೀ ನರಸಿಂಹ ನಾರಾಯಣ ಭಾಗ್ವತ ದಂಪತಿಗಳನ್ನು ಅವರ ಸ್ವಗೃಹದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. 1976 ರಿಂದ ಬರಬಳ್ಳಿ ಎಂಬ ಯಲ್ಲಾಫುರ ತಾಲೂಕಿನ ಕುಗ್ರಾಮದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿ , ಅನೇಕ ಬಡ ಜನರ ಜೀವ ಉಳಿಸಿದ ಕೀರ್ತಿ ನರಸಿಂಹ ನಾರಾಯಣ ಭಾಗ್ವತ ಜಪದಮನೆಯವರು. ಹೆಗ್ಗಾರಿನ ಸಹಕಾರೀ ಕ್ಷೇತ್ರದ ಅಪಾರ ಅನುಭವಿ, ವೆಂಕಟ್ರಮಣ ಶಂಕರನಾರಾಯಣ ಭಟ್ಟರನ್ನೂ ಗಂಗಾ ನರಸಿಂಹ ಭಟ್ಟರನ್ನು, ಗಣಪತಿ ರಾಮಕೃಷ್ಣ ಭಟ್ಟರನ್ನು, ಸೂರಿ ಭಟ್ಟರನ್ನು, ಮುಕಾಂಬೆ ಭಟ್ಟರನ್ನು, ಸನ್ಮಾನಿಸಲಾಯಿತು. ಗ್ರಾಮ ಪಂಚಾಯತ ವ್ಯಾಪ್ತಿಯ 130 ಕ್ಕೂ ಮಿಕ್ಕಿದ ಹಿರಿಯ ನಾಗರಿಕರನ್ನು ಸನ್ಮಾನಿಸಲು ತೀರ್ಮಾನಿಸಲಾಗಿದ್ದು, ಇಂದು ಅದರ ಪ್ರಾರಂಭೊತ್ಸವ ನಡೆಸಲಾಗಿದೆ, ಸ್ವಾತಂತ್ರ‍್ಯದ ಅಮೃತ ಮಹೋತ್ಸವವನ್ನು ಸಮಾಜಮುಖಿಯಾಗಿ , ಒಗ್ಗಟ್ಟಿನಿಂದ ಆಚರಿಸುವುದು ನಮ್ಮ ಗುರಿಯಾಗಿದೆ ಎಂದು ಈ ಕಾರ್ಯಕ್ರಮದ ಮುಖ್ಯಸಂಘಟಕರಲ್ಲೊಬ್ಬರಾದ ಗ್ರಾಮ ಪಂಚಾಯತ ಉಪಾಧ್ಯಕ್ಷರು ಆದ ಪುಟ್ಟು ಕನಕನಹಳ್ಳಿ ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ಲತಾ ನಾಯ್ಕ, ಸದಸ್ಯರಾದ ನಾರಾಯಣ ಭಟ್ಟ, ಮೋಹನ ಪಟಗಾರ, ಮಂಜುಳಾ ಪೆಡ್ನೇಕರ್,ಪ್ರೇಮಾ ಹೆಬ್ಬಾರ, ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾದ ಗೋಪಣ್ಣ ವೈದ್ಯ, ಸಾಮಾಜಿಕ ಕಾರ್ಯಕರ್ತರಾದ ನಾರಾಯಣ ಹೆಗಡೆ, ವಿ ಎಸ್ ಭಟ್ಟ, ಮ.ರಾ ಭಟ್ಟ, ಸುಧಾಕರ ಭಟ್ಟ, ಹಾಗೂ ಊರ ಹಿರಿಯರಾದ ರವಿ ಭಟ್ಟ ಕೋನಾಳ,ಹಾಗೂ ಹೆಗ್ಗಾರ, ಶೇವಕಾರ, ಕಲ್ಲೇಶ್ವರ ಊರಿನ ಪ್ರಜ್ಞಾವಂತ ನಾಗರಿಕರು ಭಾಗವಹಿಸಿದ್ದರು.
ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 75 ವರುಷಗಳನ್ನು ಕಳೆದ ನಾಗರಿಕರು ಈ ಸಮಾಜದ ಹೆಮ್ಮೆ, ಅಂಥವರನ್ನು ಸನ್ಮಾನಿಸಲು ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅವಕಾಶ ಸಿಕ್ಕಿದ್ದೇ ನಮ್ಮ ಭಾಗ್ಯ ಎಂದು ತಿಳಿದಿದ್ದೇವೆ, ಸ್ವಾತಂತ್ರ‍್ಯದ ರಜತ ವರ್ಷ, ಸುವರ್ಣ ಮಹೋತ್ಸವಗಳಿಗೆ ಸಾಕ್ಷಿಯಾಗಿ ಈಗ ಅಮೃತ ಮಹೋತ್ಸವವನ್ನೂ ಕಾಣುತ್ತಿರುವ ಸಮೃಧ್ಧವಾದ ಸಮಾಜ ನಮ್ಮದು, ಹಿರಿಯ ಸೇವೆಯನ್ನು ಎಂದಿಗೂ ಜೀವಂತವಾಗಿರಿಸಿ, ಸಮಾಜಕ್ಕೆ ಹಿರಿಯರ ಮಾರ್ಗದರ್ಶನ ಪಡೆಯುವುದು ನಮ್ಮ ಗುರಿಯಾಗಿದ್ದು, ಸಾದಕರ ಮನೆಗೆ ಹೋಗಿ ಸನ್ಮಾನ ಮಾಡುತ್ತಿರುವುದರಿಂದ ಈ ಕಾರ್ಯಕ್ರಮವನ್ನು ಸಪ್ತಾಹದ ಅವಧಿಯಲ್ಲಿ ಕೈಗೊಳ್ಳಲು ನಿಶ್ಚಯಿಸಲಾಗಿದೆ.

error: