April 19, 2024

Bhavana Tv

Its Your Channel

ಲಸಿಕಾಕರಣ ಕೇಂದ್ರಕ್ಕೆ ಶಾಸಕ ಸುನಿಲ್ ನಾಯ್ಕ ಅಡಿಗಲ್ಲು

ಭಟ್ಕಳ ; ತಾಲೂಕಾ ಆಸ್ಪತ್ರೆಗೆ ಲಸಿಕಾಕರಣ ಕೇಂದ್ರಕ್ಕೆ ಅಗತ್ಯವಿದ್ದ ಹಾಲ್ ಒಂದನ್ನು ನಿರ್ಮಿಸಲು ಶ್ರೀ ನಾಗಯಕ್ಷೆ ದೇವಿ ಚಾರಿಟೇಬಲ್ ಟ್ರಸ್ಟ್ ಮುಂದಾಗಿದ್ದು ಶಾಸಕ ಸುನಿಲ್ ನಾಯ್ಕ ಅವರು ಅಡಿಗಲ್ಲನ್ನಿಡುವ ಮೂಲಕ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸುನಿಲ್ ನಾಯ್ಕ ಅವರು ತಾಲೂಕಾ ಆಸ್ಪತ್ರೆಯಲ್ಲಿನ ವೈದ್ಯರು, ಸಿಬ್ಬಂದಿಗಳು ಅತ್ಯಂತ ಉತ್ತಮವಾಗಿ ಕೆಲಸ ಮಾಡುತ್ತಿರುವುದರಿಂದ ಇಲ್ಲಿನ ಆಸ್ಪತ್ರೆಗೆ ಬೇರೆ ಬೇರೆ ಕಡೆಯಿಂದ ಬಂದು ಚಿಕಿತ್ಸೆ ಪಡೆದು ಗುಣಮುಖರಾಗಿ ಹೋಗುತ್ತಿದ್ದಾರೆ. ಇಲ್ಲಿನ ಆಸ್ಪತ್ರೆಯಲ್ಲಿ ಮಕ್ಕಳ ಲಸಿಕಾಕರಣಕ್ಕೆ ಸರಿಯಾದ ಜಾಗಾ ಇಲ್ಲದ್ದನ್ನು ಮನಗಂಡು ನಾಗಯಕ್ಷೆ ಧರ್ಮದೇವಿ ಸಂಸ್ಥಾನದ ಅಧ್ಯಕ್ಷ ರಾಮದಾಸ ಪ್ರಭು ಅವರು ಕಳೆದ ಕೆಲವು ದಿನಗಳ ಹಿಂದೆ ಒಂದು ಕಟ್ಟಡ ಕಟ್ಟಿಸಿಕೊಡುವುದಾಗಿ ಭರವಸೆಯನ್ನು ನೀಡಿದ್ದರು. ಅದರಂತೆ ಸುಮಾರು ೭ ಲಕ್ಷ ರೂಪಾಯಿ ವೆಚ್ಚದಲ್ಲಿ ಒಂದು ಹಾಲ್ ನಿರ್ಮಿಸಲು ಮುಂದಾಗಿದ್ದು ಸಂತಸ ತಂದಿದೆ ಎಂದ ಶಾಸಕರು ತಾಲೂಕಿನ ಜನತೆಯ ಪರವಾಗಿ ಅವರ ಕಾರ್ಯವನ್ನು ಶ್ಲಾಘಿಸಿದರು.
ನಾಗಯಕ್ಷೆ ಧರ್ಮದೇವಿ ಸಂಸ್ಥಾನದ ಅಧ್ಯಕ್ಷ ರಾಮದಾಸ ಪ್ರಭು ಅವರು ಮಾತನಾಡಿ ಒಮ್ಮೆ ಆಸ್ಪತ್ರೆಗೆ ಭೇಟಿ ನೀಡಿದಾಗ ಚಿಕ್ಕ ಮಕ್ಕಳನ್ನು ಹೊತ್ತುಕೊಂಡು ಬಂದ ತಾಯಂದಿರು ಎಲ್ಲೆಂದರಲ್ಲಿ ಕುಳಿತುಕೊಂಡು ಲಸಿಕೆಯ ಸರದಿಗಾಗಿ ಕಾಯುತ್ತಿದ್ದರು. ಅದನ್ನು ನೋಡಿ ಇಲ್ಲಿ ತಾಯಂದಿರು ಬಂದು ಸರಿಯಾಗಿ ಕುಳಿತು, ಮಕ್ಕಳಿಗೆ ಲಸಿಕೆ ಹಾಕಿಸಿಕೊಂಡು ಹೋಗಬೇಕು. ಮಕ್ಕಳಿಗೆ ಹಾಲೂಡಿಸಲೂ ಕೂಡಾ ಅವರಿಗೆ ಪ್ರತ್ಯೇಕ ವ್ಯವಸ್ಥೆ ಇರಬೇಕು ಎಂದು ಯೋಚಿಸಿದ್ದೆನು. ತಾಯಿ ಅನುಗ್ರಹವಾಗಿದೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಒಂದು ಕಟ್ಟಡವನ್ನೇ ಕಟ್ಟಿಕೊಡಲು ತೀರ್ಮಾನಿಸಿದ್ದೇವೆ ಎಂದರು. ಅಡಿಗಲ್ಲು ಸಮಾರಂಭದ ಧಾರ್ಮಿಕ ಕಾರ್ಯಕ್ರಮವನ್ನು ಕಿಶೋರ ರಮೇಶ ಭಟ್ಟ ನೆರವೇರಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್, ಡಾ. ಸತೀಶ್ ಬಿ., ಡಾ. ದೀಪಾ ಕಾಮತ್, ಡಾ. ಶೃತಿ, ತಾಲೂಕಾ ಆರೊಗ್ಯಾಧಿಕಾರಿ ಡಾ. ಮೂರ್ತಿರಾಜ ಭಟ್ಟ ಸೇರಿದಂತೆ ಸಿಬ್ಬಂದಿಗಳು, ರಾಬಿತಾ ಸೊಸೈಟಿಯ ಅಬ್ದುಲ್ ಸಮಿ, ನಿಸಾರ್ ಅಹಮ್ಮದ್ ರುಕ್ನುದ್ದೀನ್, ಹಾಗೂ ಬಿ.ಜೆ.ಪಿ. ಪ್ರಮುಖರಾದ ರಾಜೇಶ ನಾಯ್ಕ, ಯುವ ಮೋರ್ಚಾ ಅಧ್ಯಕ್ಷ ಮಹೇಂದ್ರ ನಾಯ್ಕ, ಶ್ರೀಕಾಂತ ನಾಯ್ಕ, ಈಶ್ವರ ನಾಯ್ಕ, ಜಿ.ಎಸ್.ಬಿ. ಸಮಾಜದ ಪ್ರಮುಖ ನರೇಂದ್ರ ನಾಯಕ್, ಅಚ್ಚುತ ಕಾಮತ್, ಕಲ್ಪೇಶ ಪೈ, ಶ್ರೀಕಾಂತ ಬಡಾಳ್, ಚಂದ್ರಕಾoತ ಕಾಮತ್, ಕೃಷ್ಣಾನಂದ ಪ್ರಭು, ಪುಂಡಲೀಕ ಪೈ, ಕಿರಣ್ ಶ್ಯಾನುಭಾಗ್, ಊರಿನ ಪ್ರಮುಖರಾದ ನಾರಾಯಣ ನಾಯ್ಕ ಮುಂಡಳ್ಳಿ ಮುಂತಾದವರು ಉಪಸ್ಥಿತರಿದ್ದರು.

error: