April 19, 2024

Bhavana Tv

Its Your Channel

ಬ್ಲಾಕ್ ಕಾಂಗ್ರೆಸ್ ವತಿಯಿಂದ ಪದಗ್ರಹಣ ಮತ್ತು ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ಯದ ಉದ್ಘಾಟನೆ

ಭಟ್ಕಳ: ರಾಜ್ಯದಲ್ಲಿ ಕೋವಿಡ, ಬೆಲೆ ಏರಿಕೆ ಮತ್ತಿತರ ಕಾರಣದಿಂದ ಜನರು ತತ್ತರಿಸಿದ್ದರೂ ಸರ್ಕಾರ ಜನಪರ ಯಾವುದೇ ಕಾರ್ಯಕ್ರಮ ಹಾಕಿಕೊಂಡಿಲ್ಲ. ಸರ್ಕಾರ ಎಲ್ಲ ರಂಗದಲ್ಲೂ ವಿಫಲವಾಗಿದ್ದು, ಜನತೆ ಬಿಜೆಪಿ ಸರ್ಕಾರದ ಬಗ್ಗೆ ಭ್ರಮನಿರಸನ ಹೊಂದಿದ್ದಾರೆ ಎಂದು ಕೆಪಿಸಿಸಿ ಸಂಯೋಜಕಿ ಹಾಗೂ ಭಟ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಉಸ್ತುವಾರಿ ವೆರೋನಿಕಾ ಹೇಳಿದರು.
ಇಲ್ಲಿನ ಅರ್ಬನ್ ಬ್ಯಾಂಕ್ ಸಭಾಂಗಣದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪದಗ್ರಹಣ ಮತ್ತು ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್ಯದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ರಾಜ್ಯದ ಜನತೆ ಬಿಜೆಪಿ ಸರ್ಕಾರದ ಆಡಳಿತಕ್ಕೆ ಬೇಸತ್ತಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರಗಳೆರಡೂ ಗಗನಕ್ಕೇರುತ್ತಿರುವ ತೈಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಯಲು ವಿಫಲವಾಗಿದೆ ಎಂದರು.
ಮಾಜಿ ಶಾಸಕ ಜೆ.ಡಿ. ನಾಯ್ಕ ಮಾತನಾಡಿ, ಮುಖಂಡರು. ಕಾರ್ಯಕರ್ತರು ನೀಡಿರುವ ಜವಾಬ್ದಾರಿಯನ್ನು ಸಮರ್ಥ ವಾಗಿ ನಿಭಾಯಿಸಬೇಕು. ಸರ್ಕಾರದ ದುರಾಡಳಿತ ಕುರಿತು ಜನರಿಗೆ ತಿಳಿವಳಿಕೆ ಮೂಡಿಸುವ ಕೆಲಸ ಆಗಬೇಕು. ಕೋವಿಡ್‌ನಿಂದ ತೀವೃ ತೊಂದರೆಪಟ್ಟಿರುವ ಜನತೆ ಸಮರ್ಪಕ ಉದ್ಯೋಗ, ದುಡಿಮೆ ಇಲ್ಲದೆ ಊಟಕ್ಕೂ
ಪರದಾಡುವ ಸ್ಥಿತಿ ಇದೆ. ಬಿಜೆಪಿ ಸರ್ಕಾರದ ಬಗ್ಗೆ ಜನರು ಭ್ರಮನಿರಸನ ಹೊಂದಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಅಬ್ದುಲ್ ಮಜೀದ್ ಶೇಖ ಮಾತನಾಡಿ, ಭಟ್ಕಳ ಕ್ಷೇತ್ರದಲ್ಲಿ ಶಾಸಕರಾಗಿದ್ದಾಗ ಮಂಕಾಳ ವೈದ್ಯರು ಮಾಡಿದಷ್ಟು ಅಭಿವೃದ್ಧಿ ಕಾರ್ಯ ಯಾರೂ ಮಾಡಿಲ್ಲ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಭಾಗವತ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತಾ ಗಾಂವಕರ ಮಾತನಾಡಿದರು. ಮಾಜಿ ಶಾಸಕ ಮಂಕಾಳ ವೈದ್ಯ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿಲ್ಲಾ ಕಾಂಗ್ರೆಸ್ ಸದಸ್ಯ ಅಬ್ಬಾಸ್ ಫೋನ್ ಭಟ್ಕಳ ಅರ್ಬನ್ ಬ್ಯಾಂಕ್ ಅಧ್ಯಕ್ಷ ಇಮ್ತಿಯಾಜ್ ಜುಬಾಪು, ಜಯಲಕ್ಷ್ಮೀ ಗೊಂಡ, ಅಲ್ಬರ್ಟ್ ಡಿಕೋಸ್ತ, ಸಿಂಧು ನಾಯ್ಕ, ಈಶ್ವರ ನಾಯ್ಕ ಮುಂತಾದವರಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃಷ್ಣ ದೇವಡಿಗ ನಿರೂಪಿಸಿದರು. ತಾಲೂಕು ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ವಿಷ್ಣು ದೇವಡಿಗ ವಂದಿಸಿದರು. ಕಾರ್ಯಕ್ರಮದಲ್ಲಿ ಪಕ್ಷದ ವಿವಿಧ ವಿಭಾಗಗಳ ನೂತನ ಅಧ್ಯಕ್ಷರು, ಪದಾಧಿಕಾರಿಗಳಿಗೆ ಅದೇಶ ಪತ್ರ ನೀಡಲಾಯಿತು. ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

error: