April 20, 2024

Bhavana Tv

Its Your Channel

ಶಿರಾಲಿಯ ಜಾಯಿಕಾಯಿಹಿತ್ತಲ್ ರಸ್ತೆಯಂಚಿನ ನದಿಗೆ ಹೇರಳವಾಗಿ ಎಸೆಯಲ್ಪಡುತ್ತಿದೆ ತ್ಯಾಜ್ಯ’

‘ಶಿರಾಲಿ ಪಂಚಾಯತ ಅಧ್ಯಕ್ಷರ ವಾರ್ಡನಲ್ಲಿಯೇ ಈ ಪರಿಸ್ಥಿತಿಗೆ ಸಿಕ್ಕಿಲ್ಲ ಮುಕ್ತಿ’

ಭಟ್ಕಳ: ಇಲ್ಲಿನ ಶಿರಾಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಡಿಹಿತ್ತಲ್ ವಾರ್ಡನ ಶ್ರೀ ಕಂಚಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ತೆರಳುವ ರಸ್ತೆಯುದ್ದಕ್ಕೂ ಕಸ ಎಸೆಯುತ್ತಿರುವುದರಿಂದ ಇಲ್ಲಿನ ನದಿ ಮಲೀನವಾಗುತ್ತಿದ್ದು ಪಂಚಾಯತ ಕ್ರಮಕ್ಕೆ ಮುಂದಾಗದಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಭಾಗದಲ್ಲಿ ಈಗಾಗಲೇ ಕಸ ಎಸೆಯುತ್ತಿದ್ದ ಬಗ್ಗೆ ಇಲ್ಲಿನ ನಿವಾಸಿಗಳು ಪಂಚಾಯತಗೆ ಪದೇ ಪದೇ ಗಮನಕ್ಕೆ ತರಲಾಗಿದ್ದು ಕಸ ವಿಲೇವಾರಿ ಮಾಡುವ ಬಗ್ಗೆ ಅಥವಾ ಕಸ ಎಸೆಯದಂತೆ ಯಾವುದೇ ಕಠಿಣ ಕ್ರಮ ತೆಗೆದುಕೊಂಡಿಲ್ಲ ಎಂಬ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಸುಮಾರು ೨೦೦ಕ್ಕೂ ಅಧಿಕ ಮನೆಗಳಿದ್ದು ದಿನನಿತ್ಯವೂ ಜನರ ಸಂಚಾರ, ವಾಹನ ಸಂಚಾರವಿದೆ. ಅದೇ ರೀತಿ ತೀರಾ ಇಕ್ಕಟ್ಟಾದ ರಸ್ತೆ ಇದಾಗಿದ್ದರಿಂದ ಒಮ್ಮೊಮ್ಮೆ ರಸ್ತೆಯ ಮೇಲೆಲ್ಲ ಕಸ, ಕೊಳೆತ ತ್ಯಾಜ್ಯ, ಮಕ್ಕಳ ಡೈಪರಗಳ ರಾಶಿ ರಾಶಿ ಎಸೆದು ಹೋಗುವದರಿಂದ ಜಾನುವಾರುಗಳು ರಸ್ತೆಯ ಮಧ್ಯೆ ಬಂದು ತಿನ್ನುತ್ತದೆ.

ಶಕ್ತಿ ಸ್ಥಳವಾದ ಶ್ರೀ ಕಂಚಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಎದುರಿನ ನದಿಯು ಈ ಕಸದ ತ್ಯಾಜ್ಯ, ರಾಶಿಯಿಂದ ಮಲೀನಗೊಳ್ಳುತ್ತಲಿದೆ. ಹಾಗೂ ರಸ್ತೆಯ ಎರಡು ಇಕ್ಕೆಲಗಳಲ್ಲಿ ಆಳೆತ್ತರಕ್ಕೆ ಗಿಡಗಂಟಿಗಳು ಬೆಳೆದಿದ್ದು ಅದರ ಸ್ವಚ್ಚತೆಗೆ ಪಂಚಾಯತ ಕ್ರಮಕ್ಕೆ ಮುಂದಾಗಬೇಕಿದೆ. ನಿತ್ಯವೂ ಜನರು ಮೂಗು ಮುಚ್ಚಿಯೇ ಈ ರಸ್ತೆಯಲ್ಲಿ ಸಾಗಬೇಕಾದ ಪರಿಸ್ಥಿತಿ ಇದ್ದರು ಸಹ ಜನರ ಸಮಸ್ಯೆಗಳನ್ನು ಬಗೆಹರಿಸಲು ಜನಪ್ರನಿಧಿಗಳು ಮುಂದಾಗದಿರುವ ಬಗ್ಗೆ ಹಿಡಿಶಾಪ ಹಾಕುವಂತಾಗಿದೆ.

ಅಧ್ಯಕ್ಷರ ವಾರ್ಡನಲ್ಲಿಯೇ ಸ್ವಚ್ಚತೆಗೆ ಕಿಮ್ಮತ್ತಿಲ್ಲ:
ಶಿರಾಲಿ ಪಂಚಾಯತಗೆ ಸತತ ಎರಡು ಬಾರಿ ನಿರ್ಮಲ ಗ್ರಾಮ ಯೋಜನೆ ಪ್ರಶಸ್ತಿ ಪಡೆದಿದ್ದು ಆದರೆ ನೈಜದಲ್ಲಿ ಸ್ವಚ್ಚತೆಗೆ ಯಾವುದೇ ಕಿಮ್ಮತ್ತಿಲ್ಲವಾಗಿದೆ. ಈಗ ಇಲ್ಲಿನ ಗ್ರಾಮ ಪಂಚಾಯತ್ ಅಧ್ಯಕ್ಷರು ಗೆದ್ದು ಬಂದ ವಾರ್ಡನಲ್ಲಿಯೇ ಕಸ ತ್ಯಾಜ್ಯಗಳು ರಾಶಿ ರಾಶಿ ಎಸೆಯಲ್ಪಟ್ಟು ನದಿ ಮಲೀನವಾಗುತ್ತಿದ್ದು ಕಸ ವಿಲೇವಾರಿಗೆ ಯಾವುದೇ ಕ್ರಮ ಇನ್ನು ತನಕ ಆಗಿಲ್ಲ ಎನ್ನುವುದು ಜಗಜ್ಜಾಹೀರವಾಗಿದೆ.

ದೇವಸ್ಥಾನದ ಎದುರು ಕಸದ ರಾಶಿ:
ಇಷ್ಟು ದಿನ ಕಸದ ರಾಶಿಯು ಮನೆ, ಬೀದಿ ಬದಿಗಳಲ್ಲಿ ಎಸೆಯುತ್ತಿದ್ದು ಈಗ ದೇವಸ್ಥಾನದ ಎದುರು ಹಾಕುವಂತಹ ಮನಸ್ಥಿತಿ ಜನರಲ್ಲಿ ಆಗಿದೆ. ಈಗ ಇದು ಇಲ್ಲಿನ ಶ್ರೀ ಕಂಚಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಎದುರಿನಲ್ಲಿ ಸ್ವಲ್ಪವೇ ದೂರದಲ್ಲಿ ಕಸ, ತ್ಯಾಜ್ಯ ಎಸೆಯುತ್ತಿದ್ದು ಧಾರ್ಮಿಕ ನಂಬಿಕೆಗೂ ಘಾಸಿಯಾಗುವಂತಾಗಿದೆ. ದೇವಸ್ಥಾನಕ್ಕೆ ತೆರಳುವ ರಸ್ತೆಯು ಅಶುಚಿಯಿಂದ ಕೂಡಿದ್ದರಿಂದ ಜನರಲ್ಲಿ ಬೇಸರ ಮೂಡುವಂತಾಗಿದೆ. ಈ ಬಗ್ಗೆ ತಕ್ಷಣ ಪಂಚಾಯತ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ.

‘ಕಸ ತ್ಯಾಜ್ಯ ಎಸೆಯುತ್ತಿರುವ ಬಗ್ಗೆ ಸಾಕಷ್ಟು ಬಾರಿ ಪಂಚಾಯತಗೆ ತಿಳಿಸಲಾಗಿದೆ. ಆದರೆ ಇನ್ನು ತನಕ ಇತ್ತ ಪಂಚಾಯತ ಅಧಿಕಾರ, ಜನಪ್ರತಿನಿಧಿಗಳು ಮುಖಮಾಡಿಲ್ಲ. ತಕ್ಷಣ ಇದಕ್ಕೊಂದು ಶಾಶ್ವತ ಪರಿಹಾರ ನೀಡಬೇಕು. ಕಸ ಇಲ್ಲಿ ಎಸೆಯದಂತೆ ಕಠಿಣ ಕ್ರಮ ಆಗಬೇಕಿದೆ. ಇಲ್ಲವಾದರೆ ಈ ರಸ್ತೆಯು ಕಸ ಎಸೆಯುವ ಸ್ಥಳವಾಗಿ ಮಾರ್ಪಾಡಾಗಲಿದೆ ಎಂದು ಸ್ಥಳೀಯರು ದೂರಿದ್ದಾರೆ.

error: