April 22, 2024

Bhavana Tv

Its Your Channel

ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ವಾರ್ಷಿಕ ಹಾಲುಹಬ್ಬ ಜಾತ್ರೆ

ಭಟ್ಕಳ: ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ವಾರ್ಷಿಕ ಹಾಲುಹಬ್ಬ ಜಾತ್ರೆ ಭಾನುವಾರ ಆರಂಭವಾಗಿದ್ದು ಕೋವಿಡ್ ನಿಯಮಾವಳಿಯಂತೆ ದೇವರ ದರ್ಶನಕ್ಕಷ್ಟೇ ಅವಕಾಶ ನೀಡಿರುವುದರಿಂದ ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಮುಖ ಕಂಡು ಬಂದಿತ್ತು.

ಬೆಳಿಗ್ಗೆಯಿಂದ ಆರಂಭವಾಗಿದ್ದ ದೇವರ ದರ್ಶನಕ್ಕೆ ಯಾವುದೇ ನೂಕು ನುಗ್ಗಲು ಇರಲಿಲ್ಲ. ಪ್ರತಿ ವರ್ಷ ಹಾಲಹಬ್ಬ ಜಾತ್ರೆಗೆ ಪರವೂರಿನಿಂದ ಭಕ್ತರು ಆಗಮಿಸುತ್ತಿದ್ದರೆ ಈ ಬಾರಿ ಪರವೂರಿನ ಭಕ್ತರು ಕೇವಲ ಕೆಲವೇ ಜನ ಬಂದಿದ್ದರೆ ಊರಿನ ಭಕ್ತರಷ್ಟೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಪ್ರತಿವರ್ಷ ಕಿ.ಮಿ. ಗಟ್ಟಲೆ ಸರದಿಯ ಸಾಲಿದ್ದರೆ ಈ ಬಾರಿ ಸರದಿಯ ಸಾಲು ಮಾಯವಾಗಿತ್ತು.
ಸೋಡಿಗದ್ದೆ ಮಹಾಸತಿ ದೇವಿಯು ಕರಾವಳಿ ಭಾಗವಷ್ಟೇ ಅಲ್ಲ ಮಲೆನಾಡಿನಲ್ಲಿಯೂ ಕೂಡಾ ಭಕ್ತರನ್ನು ಹೊಂದಿದ್ದು ದೂರದ ಭಕ್ತರು ಬರುವುದಕ್ಕೆ ಕೋವಿಡ್ ನಿಯಮ ಹಾಗೂ ಭಯ ಅಡ್ಡಿಯಾಗಿದೆ ಎನ್ನಲಾಗಿದೆ. ಈ ಮೊದಲೇ ಜಾತ್ರೆಯ ಸಂದರ್ಭದಲ್ಲಿ ಕೇವಲ ದರ್ಶನ ಮಾತ್ರ ಎನ್ನುವುದನ್ನು ಸಾಕಷ್ಟು ಪ್ರಚಾರ ಮಾಡಿದ್ದರಿಂದ ದೂರದ ಊರಿನಿಂದ ಬರುವ ಭಕ್ತರು ಹಿಂದೇಟು ಹಾಕಿದ್ದು ಇಂದು ಜಾತ್ರೆಯ ಪ್ರಥಮ ದಿನವೇ ಜನರಿಲ್ಲದೇ ಇರಲು ಕಾರಣ ಎನ್ನಲಾಗಿದೆ.
ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ್ ಎಸ್. ರವಿಚಂದ್ರ ಅವರು ದೇವಸ್ಥಾನದಲ್ಲಿಯೇ ಮೊಕ್ಕಾಂ ಹೂಡಿದ್ದು ಬೆಳಿಗ್ಗೆಯಿಂದಲೇ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ವ್ಯವಸ್ಥೆಯನ್ನು ಮಾಡುವುದಲ್ಲಿಯೇ ಮಗ್ನರಾಗಿದ್ದರು. ಕೋವಿಡ್ ನಿಯಮಾವಳಿಯನ್ನು ಚಾಚು ತಪ್ಪದಂತೆ ಪಾಲಿಸಲು ಆಗಾಗ ಮೈಕ್ ಮೂಲಕ ಪ್ರಸಾರ ಮಾಡಲಾಗುತ್ತಿತ್ತು.
ಬೆಳಿಗ್ಗೆಯಿಂದಲೇ ಜನರು ದೇವರ ದರ್ಶನಕ್ಕೆ ಬರುತ್ತಿದ್ದು ಕೇವಲ ಹೂವು ಹಿಡಿದುಕೊಂಡು ಬಂದು ದೇವರಿಗೆ ಸಮರ್ಪಿಸುತ್ತಿರುವುದು ಕಂಡು ಬಂತು. ಯಾವುದೇ ಪೂಜೆ, ಹಣ್ಣು ಕಾಯಿಗಳಿಗೆ ಅವಕಾಶ ನೀಡದೇ ಇರುವುದರಿಂದ ದೇವಿಗೆ ಹೂವು ಅರ್ಪಿಸಿ ತಮ್ಮ ಭಕ್ತಿಯನ್ನು ಮರೆದರು.

  • ಶಾಸಕ ಸುನಿಲ್ ನಾಯ್ಕ, ಗಣಪತಿ ಉಳ್ವೇಕರ್ ಭೇಟಿ: ಸೋಡಿಗದ್ದೆ ಶ್ರೀ ಮಹಾಸತಿ ಹಾಲಹಬ್ಬ ಜಾತ್ರೆಯ ಪ್ರಯುಕ್ತ ಶಾಸಕ ಸುನಿಲ್ ನಾಯ್ಕ ಅವರು ಬೆಳಿಗ್ಗೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
    ನೂತನವಾಗಿ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದ ಕಾರವಾರದ ಗಣಪತಿ ಉಳ್ವೇಕರ್ ಅವರು ಕೂಡಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ನಂತರ ಶಾಸಕ ಸುನಿಲ್ ನಾಯ್ಕ ಗಣಪತಿ ಉಳ್ವೇಕರ್, ಆಡಳಿತಾಧಿಕಾರಿ ಎಸ್. ರವಿಚಂದ್ರ ಅವರನ್ನು ದೇವಸ್ಥಾನದ ಅಭಿವೃದ್ಧಿ ಸಮಿತಿಯ ವತಿಯಿಂದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಈರಪ್ಪ ಜೆ. ನಾಯ್ಕ ಅವರು ಶಾಲು ಹೊದಿಸಿ, ದೇವರ ಪ್ರಸಾದವನ್ನು ನೀಡುವ ಮೂಲಕ ಗೌರವಿಸಿದರು.
error: