March 29, 2024

Bhavana Tv

Its Your Channel

ಕ್ರೀಡೆ ಜೀವನದ ಅವಿಭಾಜ್ಯ ಅಂಗ-ಶ್ರೀ ದೇವಿದಾಸ ಮೊಗೇರ್.

ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ದಿನಾಂಕ 30/05/2023 ಮಂಗಳವಾರದAದು ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ 3ನೇ ವಲಯ ಮಟ್ಟದ ಪದವಿ ಕಾಲೇಜುಗಳ ಪುರುಷರ ವಾಲಿಬಾಲ್ ಪಂದ್ಯಾಟಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಟ್ಕಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ದೇವಿದಾಸ ಮೊಗೇರ ಕ್ರೀಡೆ ಕೇವಲ ಹವ್ಯಾಸವಲ್ಲ, ಇದೊಂದು ವೃತ್ತಿಯಾಗಿದೆ. ಕ್ರೀಡೆಯಲ್ಲಿ ಸೋಲು-ಗೆಲುವು ಇದ್ದೆ ಇರುತ್ತದೆ. ಅದನ್ನು ಕ್ರೀಡಾ ಸ್ಪೂರ್ತಿಯಿಂದ ಸರಿದೂಗಿಸಿಕೊಂಡು ಹೋಗಬೇಕೆಂದು ಕಿವಿಮಾತು ನುಡಿದರು. ಭಟ್ಕಳ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುರೇಶ್ ವಿ ನಾಯಕ ಅವರು ಮಾತನಾಡಿ ಯಾವುದೇ ಕ್ರೀಡೆಯ ಕ್ರೀಡಾಪಟುಗಳು ಸತತ ಅಭ್ಯಾಸದಲ್ಲಿ ತಲ್ಲಿನರಾಗಿರುವುದು ಅಗತ್ಯ ಎಂದರು. ಟ್ರಸ್ಟೀ ಮ್ಯಾನೇಜರ್‌ರಾದ ರಾಜೇಶ್ ನಾಯಕ ಮಾತನಾಡಿ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳು ಅಗತ್ಯ ಎಂದರು. ಇದೇ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದ ಸೇವೆಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಉತ್ತರ ಕನ್ನಡ ಜಿಲ್ಲೆಯ 15 ತಂಡಗಳು ಭಾಗವಹಿಸಿದ್ದು, ಡಾ. ಎ.ವಿ.ಬಾಳಿಗಾ ಪದವಿ ಕಾಲೇಜು, ಕುಮಟಾ ತಂಡವು ಪ್ರಥಮ ಹಾಗೂ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜು, ಸಿರ್ಸಿ ತಂಡವು ದ್ವಿತೀಯ ಸ್ಥಾನ ಪಡೆಯಿತು. ಕುಮಟಾದ ಡಾ. ಎ.ವಿ.ಬಾಳಿಗಾ ಪದವಿ ಕಾಲೇಜಿನ ಕುಮಾರ ದೀಪಕ ಪಟಗಾರ ಬೆಸ್ಟ್ ಎಟಾಕರ್, ಕುಮಾರ ಗಿರೀಶ ನಾಯ್ಕ ಬೆಸ್ಟ್ ಪಾಸರ್, ಸಿರ್ಸಿ ಪ್ರಥಮ ದರ್ಜೆ ಪದವಿ ಕಾಲೇಜಿನ ಕುಮಾರ ಸಂದೀಪ ಎಂ ಗೌಡ ಆಲ್‌ರೌಂಡರ್ ಪ್ರಶಸ್ತಿಗಳನ್ನು ಪಡೆದರು.
ಪ್ರಾಂಶುಪಾಲರಾದ ಶ್ರೀನಾಥ ಪೈ ಅತಿಥಿಗಳಿಗೆ ಸ್ವಾಗತ ಕೋರಿದರು. ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷರಾದ ಗಿರೀಶ್ ನಾಯ್ಕ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ವಿನಾಯಕ ನಾಯ್ಕ, ವಿವಿಧ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರು, ಕ್ರೀಡಾಪಟುಗಳು, ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪ್ರಾಧ್ಯಾಪಕರಾದ ಶ್ರೀ ದೇವೇಂದ್ರ ಕಿಣಿಯವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

error: