March 22, 2024

Bhavana Tv

Its Your Channel

ದಾಂಡೇಲಿಯಲ್ಲಿ ಅಗಲಿದ ಚಂದ್ರಶೇಖರ ಪಾಟೀಲರಿಗೆ ನುಡಿನಮನ

ದಾಂಡೇಲಿ: ಚಂಪಾ ಎಂದೇ ನಾಮಾಂಕಿತರಾಗಿದ್ದ ಚಂದ್ರಶೇಖರ ಪಾಟೀಲರು ಸಾಹಿತ್ಯ ಹಾಗೂ ನಾಡು ನುಡಿಯ ಹೋರಾಟಗಳ ಜೊತೆಗೆ ಸಾಮಾಜಿಕ ಕ್ರಾಂತಿಯನ್ನು ಕೂಡ ಬಯಸಿದವರಾಗಿದ್ದರು ಎಂದು ಪ್ರಾಧ್ಯಾಪಕ ಲೇಖಕ ಡಾ. ಆರ್. ಜಿ. ಹೆಗಡೆ ನುಡಿದರು.

ಅವರು ದಾಂಡೇಲಿಯ ಕರ್ನಾಟಕ ಸಂಘದ ಪಂಚಗಾನ ಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಅಗಲಿದ ಚಂದ್ರಶೇಖರ ಪಾಟೀಲರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು .

ತಮ್ಮ ಮಾತುಗಳು ಹಾಗೂ ಬರಹಗಳ ಮೂಲಕ ಆಡಳಿತ ವ್ಯವಸ್ಥೆಗೆ ಬಿಸಿ ಮುಟ್ಟಿಸುತ್ತಿದ್ದ ಚಂಪಾರವರು ಅಷ್ಟೇ ಅಭಿವೃದ್ದಿಪರ ನಿಲುವುಳ್ಳವರೂ ಆಗಿದ್ದರು. ತಮ್ಮ ಹಾಸ್ಯ ಪ್ರಜ್ಞೆಯ ಮೂಲಕ ಎಂತಹದ್ದೇ ಸಂದರ್ಭದಲ್ಲಿಯೂ ಕೂಡ ಎದುರಿಗಿದ್ದವರನ್ನು ತಮ್ಮ ಮಾತುಗಳ ಮೂಲಕ ನಗಿಸುವಂತಹ ಕಲೆ ಹೊಂದಿದ್ದರು. ಶಿಕ್ಷಣದ ಜೊತೆಗೆ ಸಾಹಿತ್ಯ ಸಂಘಟನೆ ಹೋರಾಟಗಳಲ್ಲಿ ತೊಡಗಿಸಿಕೊಂಡು ತಮ್ಮ ಸಂಕ್ರಮಣ ಪತ್ರಿಕೆಯ ಮೂಲಕ ನಾಡಿನ ಮನೆಮಾತಾಗಿದ್ದರು. ಇಂದು ಅವರ ಅಗಲುವಿಕೆ ಈ ನಾಡಿನ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಬಿ. ಎನ್. ವಾಸರೆ ಮಾತನಾಡಿ ಚಂಪಾರವರು ಬರೆದಂತೆ ಬದುಕಿದರು. ಬದುಕಿದಂತೆ ಬರೆದಿದ್ದರು. ತಮ್ಮ ಬರಹಗಳ ಜೊತೆಗೆ ಯಾವುದೇ ಮಡಿವಂತಿಕೆಯಿಲ್ಲದೆ ನಾಡುನುಡಿಯ ಹೋರಾಟಗಳಲ್ಲಿ ಭಾಗವಹಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಮೂಲಾಗ್ರವಾದ ಸಂಘಟನೆಯನ್ನು ಮಾಡುವ ಮೂಲಕ ಜನರ ಮನದಲ್ಲಿ ಇನ್ನೂ ಅಚ್ಚಳಿಯದೆ ಉಳಿಯುವಂಥ ಕೆಲಸ ಮಾಡಿದ್ದರು ಎಂದ ವಾಸರೆಯವರು ಎಂತಹ ಕಿರಿಯನನ್ನು ಕೂಡ ಗುರುತಿಸಿ ಗೌರವಿಸುವ ಅವರ ಸರಳ ವ್ಯಕ್ತಿತ್ವ ಹಾಗೂ ಜೀವನ ಪ್ರೀತಿ ಮತ್ತೊಬ್ಬರಿಗೆ ಮಾದರಿಯಾದುದು ಎಂದ ವಾಸರೆಯವರು ಕುಮಟಾದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಜೊತೆಯಾಗಿದ್ದನ್ನು ನೆನೆದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅವರ ಅಗಲುವಿಕೆಗೆ ಶೋಕ ವ್ಯಕ್ತಪಡಿಸುತ್ತದೆ ಎಂದರು.

ದಾಂಡೇಲಿ ಪ್ರೆಸ್ ಕ್ಲಬ್ ನ ಅಧ್ಯಕ್ಷ ಯು. ಎಸ್. ಪಾಟೀಲ್ ಚಿಂತಕ ಎಸ್. ಎಸ್. ಪೂಜಾರ್ ಮಾತನಾಡಿ ಚಂಪಾರವರ ಹೋರಾಟದ ಗುಣಗಳನ್ನು ಸ್ಮರಿಸಿದರು.

ಈ ಸಂದರ್ಭದಲ್ಲಿ ಸಾಹಿತಿಗಳಾದ ಮುರ್ತುಜಾ ಹುಸೇನ ಆನೆಹೊಸೂರ್ ನರೇಶ ನಾಯ್ಕ, ನಾರಾಯಣ ನಾಯ್ಕ, ಪ್ರಮುಖರಾದ ಮೋಹನ ಹಲವಾಯಿ, ಕೀರ್ತಿ ಗಾಂವಕರ್ , ನಾಗೇಶ ನಾಯ್ಕ, ಹನ್ಮಂತ ಕುಂಬಾರ, ಸುರೇಶ ನಾಯಕ’ ತೃಪ್ತಿ ನಾಯಕ, ಸುರೇಶ್ ಕಾಮತ್, ಎಂ.ಬಿ. ಅಪ್ಪನ್ ಗೌಡರ್ , ಅಶೋಕ್ ಪಾಟೀಲ್, ಗೌರೀಶ ಬಾಬ್ರೇಕರ, ಸಾಧಿಕ್ ಮುಲ್ಲಾ, ಜಾಪರ್ ಮಸನಗಟ್ಟಿ,ಸುಭಾಶ ನಾಯಕ, ಬಸಪ್ಪ ಮುಂತಾದವರಿದ್ದರು. ಕಾರ್ಯಕ್ರಮದಲ್ಲಿ ಚಂದ್ರಶೇಖರ ಪಾಟೀಲರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ ಮೌನಾಚರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು

error: