April 19, 2024

Bhavana Tv

Its Your Channel

ಡಿಸೆಂಬರ 17 ಮತ್ತು 18 ರಂದು ಸುಕ್ಷೇತ್ರ ಉಳವಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ದಾಂಡೇಲಿ: ಉತ್ತರ ಕನ್ನಡ ಜಿಲ್ಲಾ 22 ನೇ ಕನ್ನಡ ಸಾಹಿತ್ಯ ಸಮ್ಮೇಳನವು 2022 ರ ಡಿಸೆಂಬರ 17 ಮತ್ತು 18 ರಂದು (ಶನಿವಾರ, ರವಿವಾರ) ಷಟಸ್ಥಲ ಜ್ಞಾನಿ ಚನ್ನಬಸವಣ್ಣನ ಪುಣ್ಯ ನೆಲ, ಸುಕ್ಷೇತ್ರ ಜೋಯಿಡಾ ತಾಲೂಕಿನ ಉಳವಿಯಲ್ಲಿ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಿರುವ ಅವರು ಎರಡು ದಿನಗಳ ಕಾಲ ನಡೆಯಲಿರುವ ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ದಿನದ ಉದ್ಘಾಟನಾ ಸಮಾರಂಭ, ಎರಡನೇ ದಿನದ ಸಮಾರೋಪ ಸಮಾರಂಭದ ನಡುವೆ ಹಲವು ವೈಶಿಷ್ಟ್ಯಪೂರ್ಣ ವಿಚಾರ ಗೋಷ್ಠಿಗಳನ್ನು, ಕವಿ ಗೋಷ್ಠಿಗಳನ್ನು, ಉಪನ್ಯಾಸ ಕಾರ್ಯಕ್ರಮಗಳನ್ನು, ಸಾಧಕರ ಸನ್ಮಾನಗಳನ್ನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸಮ್ಮೇಳನದಲ್ಲಿ ಜಿಲ್ಲೆಯ ಬುಡಕಟ್ಟುಗಳ ಬಗ್ಗೆ, ಜಿಲ್ಲೆಯ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ, ಜಿಲ್ಲೆಯ ಕವಿ-ಕಲಾವಿದರ ಬವಣೆಗಳ ಬಗ್ಗೆ, ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಪರಿಕಲ್ಪನೆಯ ಬಗ್ಗೆ, ಜಿಲ್ಲೆಯ ಪರಿಸರ ಮತ್ತು ಪ್ರವಾಸೋದ್ಯಮದ ಬಗ್ಗೆ, ಜಿಲ್ಲೆಯ ಜನಪದ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಹಾಗೂ ವಚನ ವಿಚಾರಗಳು ಸೇರಿದಂತೆ ಹಲವು ಸಂಗತಿಗಳ ಬಗ್ಗೆ ಉಪನ್ಯಾಸ ಮತ್ತು ಗೋಷ್ಠಿಗಳನ್ನು ನಡೆಸಲಾಗುತ್ತದೆ. ಇವುಗಳ ಜೊತೆಗೆ ಸಮ್ಮೇಳನದ ಆಯೋಜನೆಯಲ್ಲಿ ಹಿರಿಯರಿಂದ ಬರುವ ಸಲಹೆಗಳನ್ನೂ ಕೂಡಾ ಸ್ವೀಕರಿಸಲಾಗುತ್ತದೆ.
ಈ ಹಿಂದೆ 2005 ಮಾರ್ಚ 2 ಮತ್ತು 3 ರಂದು ಜೋಯಿಡಾದಲ್ಲಿ 12 ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಇದೀಗ 17 ವರ್ಷಗಳ ನಂತರ ಮತ್ತೆ ಜೋಯಿಡಾದಲ್ಲಿ ಷಟಸ್ಥಲ ಜ್ಞಾನಿ ಚನ್ನಬಸವಣ್ಣನ ಸುಕ್ಷೇತ್ರ ಉಳವಿಯಲ್ಲಿ 22ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುತ್ತಿದ್ದು, ಹಲವು ಹೊಸತನ ಹಾಗೂ ವೈಶಿಷ್ಟ್ಯತೆಗಳೊಂದಿಗೆ ಈ ಸಮ್ಮೆಳನ ನಡೆಯಲಿದೆ.

ಸುಂದರವಾದ ಪರಿಸರ ಮತ್ತು ಕಾಡು ಮೇಡುಗಳಿಂದ ಆವೃತ್ತವಾಗಿರುವ ಜೋಯಿಡಾ ತಾಲೂಕಿನ ಐತಿಹಾಸಿಕ ಸ್ಥಳ, ಷಟಸ್ಥಲ ಜ್ಞಾನಿ ಚನ್ನಬಸವಣ್ಣನ ಪುಣ್ಯ ನೆಲ ಸುಕ್ಷೇತ್ರ ಉಳವಿಯಲ್ಲಿ ನಮ್ಮ ಅವಧಿಯ ಮೊದಲ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗುತ್ತಿದ್ದು, ಇದರ ಯಶಸ್ಸಿಗೆ ಜಿಲ್ಲೆಯ ಎಲ್ಲ ಸಾಹಿತ್ಯಾಸಕ್ತರು, ಎಲ್ಲ ಸಮಾಜಮುಖಿ ಸಂಘಟನೆಯವರು, ಎಲ್ಲ ಕನ್ನಡಪರ ಸಂಘಟಕರು, ನಾಡು ನುಡಿಯ ಚಿಂತಕರು, ಅದರಲ್ಲೂ ಹೆಚ್ಚಾಗಿ ಜೋಯಿಡಾ ತಾಲೂಕಿನ ಆಡಳಿತ ಹಾಗೂ ಜೋಯಿಡಾದ ಸಮಸ್ತ ಸಹೃದಯಿ ನಾಗರಿಕರು ಸಹಕರಿಸುವಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ, ಗೌರವ ಕಾರ್ಯದರ್ಶಿಗಳಾದ ಪಿ.ಆರ್. ನಾಯ್ಕ, ಜಾರ್ಜ ಫರ್ನಾಂಡೀಸ್, ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ, ಆನೆಹೊಸೂರ ಮನವಿ ಮಾಡಿದ್ದಾರೆ.

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತು ಪ್ರಸಕ್ತ ಅವಧಿಯ ಒಂದು ವರ್ಷ ಪೂರೈಸುವ ಅಂಚಿನಲ್ಲಿದೆ. ಒಂದು ವರ್ಷದ ಈ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಮಟ್ಟದ ಹಲವು ಕಾರ್ಯಕ್ರಮಗಳ ಜೊತೆಗೆ ಆಯಾ ತಾಲೂಕುಗಳ ವ್ಯಾಪ್ತಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತ ಗಮನ ಸೆಳೆಯುತ್ತಿದೆ. ಈಗಾಗಲೇ ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಯಾದ್ಯಂತ 150 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಸಂಘಟಿಸಲ್ಪಟ್ಟ ಹೆಮ್ಮೆ ನಮ್ಮದಾಗಿದೆ ಎಂದು ಬಿ.ಎನ್. ವಾಸರೆ ತಿಳಿಸಿದ್ದಾರೆ.

error: