April 20, 2024

Bhavana Tv

Its Your Channel

ಹೊನ್ನಾವರ ತಾಲೂಕಿನ ಹಿರೇಬೈಲ್ ಗ್ರಾಮದ ಹರ್ಷಿತಾ ವಿಷ್ಣು ನಾಯ್ಕ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625/624 ಅಂಕ

ಹೊನ್ನಾವರ ; ಭಟ್ಕಳ ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಹರ್ಷಿತಾ ವಿಷ್ಣು ನಾಯ್ಕ್, ಈ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 624 ಅಂಕ ಗಳಿಸಿ ಉತ್ತಿರ್ಣಳಾಗಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಹಾಗೂ ತಾಲೂಕಿಗೆ ಪ್ರಥಮ ಸ್ಥಾನ ಪಡೆದು, ಶಾಲೆಗೆ ಹಾಗೂ ಊರಿಗೆ ಕೀರ್ತಿ ತಂದಿದ್ದಾಳೆ.

ಮೂಲತಃ ಈ ವಿದ್ಯಾರ್ಥಿನಿ ಹರ್ಷಿತಾ ಹೊನ್ನಾವರ ತಾಲೂಕಿನ ಹಿರೇಬೈಲ್ ಗ್ರಾಮದ ಶಾರದಾ ಮತ್ತು ವಿಷ್ಣು ನಾಯ್ಕ್ ದಂಪತಿಯ ಮಗಳು. 1 ರಿಂದ  5 ನೇ ತರಗತಿಯನ್ನು ಊರಿನ ಹತ್ತಿರದ "ಅಂದಬಳ್ಳಿ ಕಿರಿಯ ಪ್ರಾಥಮಿಕ ಶಾಲೆ" ಯಲ್ಲಿ ಅಭ್ಯಾಸ ಮಾಡಿರುವಳು. ಹಿರಿಯ ಪ್ರಾಥಮಿಕ ಶಾಲೆ ದೂರವಿದ್ದು, ಸರಿಯಾಗಿ ರಸ್ತೆ ಸಂಪರ್ಕವಿರದ ಈ ಕುಗ್ರಾಮದಲ್ಲಿ ಕಾಲು ಸಂಕದ ಮೂಲಕ ಹೊಳೆಯನ್ನು ದಾಟಿ ಬಿಸಿಲು ಮಳೆಯೇನ್ನದೆ ನಡೆಯಬೇಕು. 10 ಕಿಲೋಮೀಟರ್ ಅಂತರದಲ್ಲಿ ಎಲ್ಲಿಯೂ ಹೈಸ್ಕೂಲ್ ಇಲ್ಲಾ. ಆದ್ದರಿಂದ 6 ನೇ ತರಗತಿಗೆ ಭಟ್ಕಳದ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಗೆ ಹರ್ಷಿತಾ ಸೇರಿದಳು.

   ಅಂದಿನಿOದ ಇಂದಿನವರೆಗೂ ಶೃದ್ದೆಯಿಂದ ವಿದ್ಯಾಭ್ಯಾಸ ಮಾಡಿ, ಈಗ ವಿದ್ಯಾಸಂಸ್ಥೆಗೆ ಕೀರ್ತಿ ತಂದಿದ್ದಾಳೆ.  ಪಠ್ಯ ಪುಸ್ತಕದ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆ, ಪ್ರತಿಭಾ ಕಾರಂಜಿ, ಕೊಳಲು ವಾದನ, ಕರಾಟೆ ಸೇರಿದಂತೆ ಮುಂತಾದ ಚಟುವಟಿಕೆಗಳಲ್ಲಿ ಉತ್ತಮ ಕ್ರಿಯಾಶೀಲಳಾಗಿದ್ದಾಳೆ.  ಈಗ ಮುಂದಿನ ವಿದ್ಯಾಭ್ಯಾಸಕ್ಕೆ ಬೆಂಗಳೂರಿನ ಥಣಿಸಂದ್ರದ "ರಾಷ್ಟ್ರೋತ್ಥಾನ ಪಿ.ಯು. ಕಾಲೇಜ್" ನಲ್ಲಿ  "ಸಾಧನ" ಪ್ರಕಲ್ಪದ ಮೆಡಿಕಲ್ ವಿಭಾಗಕ್ಕೆ ಆಯ್ಕೆಯಾಗಿರುತ್ತಾಳೆ.

     ಈ ಸಂದರ್ಭದಲ್ಲಿ ವಿದ್ಯಾರ್ಥಿನಿ ಹರ್ಷಿತಾ ಮಾತನಾಡಿ "ರಾಜ್ಯಕ್ಕೆ ದ್ವಿತೀಯ ಸ್ಥಾನ ಬಂದಿರೋದು ಖುಷಿ ತಂದಿದೆ.  ನಮ್ಮ ಶಾಲೆಯಲ್ಲಿ ನೀಡಿದ ಉತ್ತಮ ಶಿಕ್ಷಣವೇ ಈ ಸಾಧನೆಗೆ ಕಾರಣ" ಎಂದಳು.

ಹರ್ಷಿತಾಳ ತಂದೆ ಪ್ರಗತಿಪರ ಕೃಷಿಕ ಚಿಕ್ಕನಕೋಡ ಗ್ರಾಮ ಪಂಚಾಯತ್ ಸದಸ್ಯ ವಿಷ್ಣು ನಾಯ್ಕ್ ಮಾತನಾಡಿ “ಮೂಲಭೂತ ಸೌಕರ್ಯಗಳ ಕೊರತೆಯಿಂದ ಅನಿವಾರ್ಯವಾಗಿ ಮಗಳನ್ನು ಚಿಕ್ಕ ವಯಸಿನಲ್ಲೇ ದೂರದ ಶಾಲೆಗೆ ಸೇರಿಸುವಂತಾಯಿತು. ಊರಿನ, ಗ್ರಾಮದವರ ಸಹಕಾರದಿಂದ ಮುಂದಿನ ದಿನಗಳಲ್ಲಿ ಸರಕಾರದಿಂದ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳಬೇಕೆಂಬ ಪ್ರಯತ್ನದಲ್ಲಿದ್ದೇನೆ” ಎಂದರು.

ಹಿತೈಷಿಗಳಾದ ಮಾರುತಿ ನಾಯ್ಕ್ ಮಾತನಾಡಿ “ಇವಳ ಸಾಧನೆ ನಮ್ಮೂರಿನಲ್ಲಿ ಇತಿಹಾಸ ನಿರ್ಮಿಸಿದೆ. ನಮ್ಮ ಊರಿಗಿದು ಹೆಮ್ಮೆಯ ಸಂಗತಿ” ಎಂದರು.

ಹರ್ಷಿತಾಳ ಮುಂದಿನ ಭವಿಷ್ಯ ಉಜ್ವಲವಾಗಿ ಸದಾ ಪ್ರಜ್ವಲಿಸಲೆಂದು ಪ್ರಾಂಶುಪಾಲರಾದ ಆರ್. ಕೆ. ನಾಯ್ಕ್, ಹಾಗೂ ಶಿಕ್ಷಕ ವೃಂದ, ವಿದ್ಯಾಸಂಸ್ಥೆ, ಮತ್ತು ಊರಿನವರು ಶುಭ ಹಾರೈಸಿರುವರು.

error: