April 25, 2024

Bhavana Tv

Its Your Channel

ಸ್ವಾತಂತ್ರ‍್ಯ ಹೋರಾಟದ ಕುಟುಂಬದವರಿಗೆ ಸಾಹಿತ್ಯ ಪರಿಷತ್ತಿನಿಂದ ಗೌರವ.

ಹೊನ್ನಾವರ: ಸ್ವತಂತ್ರ ಭಾರತಕ್ಕೆ 75 ವರ್ಷ. ಅದರ ಅಂಗವಾಗಿ ನಮ್ಮ ದೇಶ ಸ್ವಾತಂತ್ರ‍್ಯ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಸ್ವಾತಂತ್ರ ಹೋರಾಟಗಾರರ ಮನೆಯಂಗಳಕ್ಕೆ ತೆರಳಿ ಅವರ ಕುಟುಂಬದವರನ್ನು ಸನ್ಮಾನಿಸಿ ಗೌರವಿಸುತ್ತಿರುವುದು ಅಭಿನಂದನೆಯ ಕಾರ್ಯವೆಂದು ಹಿರಿಯ ಸಾಹಿತಿ ರೋಹಿದಾಸ ನಾಯಕ ಹೇಳಿದರು.

ಇತ್ತೀಚೆಗೆ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಸ್ವಾತಂತ್ರ‍್ಯ ಯೋಧ ದಿ. ಹೊನ್ನಪ್ಪ ನಾಯಕರ ಧರ್ಮಪತ್ನಿ 93 ವಯೋಮಾನದ ಮಂಕಾಳಿ ಹೊನ್ನಪ್ಪ ನಾಯಕರವರಿಗೆ ಹಾಗೂ ವಾಲ್ಗಳ್ಳಿಯ ದಿ.ಶಾಂತಾರಾಮ ಶೇಟ್ ಯವರ ಧರ್ಮಪತ್ನಿ ಭವಾನಿ ಶಾಂತಾರಾಮ ಶೇಟ್ ಇವರಿಗೆ ಸನ್ಮಾನಿಸಿ ಮಾತನಾಡಿದರು. ಜಂಗಲ್ ಮತ್ತು ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿ ಸುಮಾರು 21 ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದ ನಾಯಕರ ಹೋರಾಟದ ದಿನಗಳನ್ನು ನೆನಪಿಸಿಕೊಂಡರು. ಸ್ವಾತಂತ್ರ‍್ಯ ಸಂಗ್ರಾಮದ ಕಾಲದಲ್ಲಿ ಸರ್ವಸ್ವವನ್ನು ಕಳೆದುಕೊಂಡು ದೇಹತ್ಯಾಗ ಮಾಡಿದ ಹಲವರ ಹೋರಾಟದ ಬದುಕು ಅವಿಸ್ಮರಣೀಯ ಎಂದರು.

ನಿವೃತ್ತ ಪ್ರಾಧ್ಯಾಪಕ ಎಂ.ಜಿ.ನಾಯ್ಕ ಮಾತನಾಡಿ, ಇತಿಹಾಸದ ವಿದ್ಯಾರ್ಥಿಯಾದ ನಾನು ಅನೇಕ ಸ್ವಾತಂತ್ರ‍್ಯ ಹೋರಾಟಗಾರರ ಜೀವನ ಚರಿತ್ರೆಯನ್ನು ಓದಿದಾಗ ಅವರ ಬದುಕು ತೀರಾ ಸಂಕಷ್ಟದಲ್ಲಿ ಇತ್ತು. ಬ್ರಿಟಿಷರು ಕೊಟ್ಟ ಹಿಂಸೆಯನ್ನು ಸಹಿಸಿ ಸ್ವಾತಂತ್ರ‍್ಯ ತಂದು ಕೊಟ್ಟರು. ಆದರೆ ಇತ್ತೀಚಿನ ದಿನಗಳಲ್ಲಿ ಅದು ತನ್ನ ಮಹತ್ವವನ್ನು ಕಳೆದುಕೊಂಡು ನಮ್ಮನ್ನು ಹತ್ತಿಕ್ಕುವ ಕಾರ್ಯ ನಡೆಯುತ್ತದೆ ಎಂದರು.

ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಪಿ.ಆರ್.ನಾಯ್ಕ ಮಾತನಾಡಿ, 75ರ ಸ್ವಾತಂತ್ರ‍್ಯ ಸಂಭ್ರಮದಲ್ಲಿರುವ ನಾವು ಜಿಲ್ಲೆಯಲ್ಲಿರುವ ಎಲ್ಲಾ ಸ್ವಾತಂತ್ರ‍್ಯ ಹೋರಾಟಗಾರರನ್ನು ಸ್ಮರಿಸಿಕೊಳ್ಳುವುದರ ಮೂಲಕ ಅವರನ್ನು ಗೌರವಿಸಿರುವುದು ಪರಿಷತ್ತಿಗೆ ಸಿಕ್ಕ ಸೌಭಾಗ್ಯ ಎಂದರು. ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆಯ ಮೂಲಕ ಬ್ರಿಟಿಷರ ವಿರುದ್ಧ ಹೋರಾಡಿದ ಮಹನೀಯರ ಬದುಕು ಆದರ್ಶನೀಯವಾದದ್ದು ಎಂದರು.

ಯಕ್ಷಗಾನ ಕಲಾವಿದ ಬೀರಣ್ಣ ನಾಯಕ ಮಾತನಾಡಿ, ಸ್ವಾತಂತ್ರ‍್ಯ ಯೋಧರನ್ನು ಸನ್ಮಾನಿಸುವುದು ಪುಣ್ಯದ ಕೆಲಸ. ಹೆತ್ತವರ ಋಣ ತೀರಿಸುವುದು ಅಸಾಧ್ಯವಾದರೂ, ಕನ್ನಡದ ಅಭ್ಯುದಯ ಕಾಲದಲ್ಲಿ ಸಾಹಿತ್ಯ ಪರಿಷತ್ತು ಇಂತಹ ಪವಿತ್ರ ಕಾರ್ಯಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದರು.

ಪ್ರೊ ಮಾಣೇಶ್ವರ ನಾಯಕ ಮಾತನಾಡಿ, ನಾಡುಮಾಸ್ಕರಿ ಈ ನೆಲವು ಹಲವು ಸಾಧಕರ ಹುಟ್ಟಿದೆ ಕಾರಣವಾಗಿದೆ. ನಮ್ಮ ಊರಿನಲ್ಲಿರುವ ಹಲವರು ಉನ್ನತ ಹುದ್ದೆಯಲ್ಲಿದ್ದು, ದೇಶ ಸೇವೆ ಮಾಡುವ ಕಾರ್ಯದಲ್ಲಿಯೂ ತೊಡಗಿಸಿಕೊಂಡಿರುತ್ತಾರೆ. ಈ ಸಂದರ್ಭದಲ್ಲಿ ಸಾಹಿತ್ಯ ಪರಿಷತ್ತು ನಮ್ಮ ಊರಿಗೆ ಬಂದು ಇಳಿ ವಯಸ್ಸಿನ ಮಂಕಾಳಜ್ಜಿಯನ್ನು ಸನ್ಮಾನಿಸಿರುವುದು ಇಡೀ ಊರಿಗೆ ಹೆಮ್ಮೆಯ ವಿಷಯ ಎಂದರು.
ಸಾಹಿತಿ ವಿಠ್ಠಲ ಪೇರುಮನೆ, ಮದನ ನಾಯಕ, ರಾಜೇಶ ನಾಯಕ ಮುಂತಾದವರು ಮಾತನಾಡಿದರು.

ವೇದಿಕೆಯಲ್ಲಿ ಸಾಹಿತಿ ಎನ್. ಆರ್.ಗಜು, ಘಟಕ ಅಧ್ಯಕ್ಷ ಸುಬ್ಬಯ್ಯ ನಾಯ್ಕ, ಜಿಲ್ಲಾ ಪದಾಧಿಕಾರಿ ಪಿ.ಎಂ.ಮುಕ್ರಿ, ಮಾಲತಿ ನಾಯಕ ಪ್ರದೀಪ ನಾಯಕ, ರಾಮಚಂದ್ರ ಮಡಿವಾಳ, ಶ್ರೀನಾಥ ಪ್ರಭು, ರಾಜು ನಾಯ್ಕ ,ಮುರುಳಿ ಶೇಟ್, ದಿವಾಕರ ಶೇಟ್ ಮುಂತಾದವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಪ್ರೊ. ಪ್ರಮೋದ ನಾಯ್ಕ ಸ್ವಾಗತಿಸಿದರೆ,ಪ್ರೋ.ಗಿರೀಶ ವನಳ್ಳಿ ವಂದಿಸಿದರು.

error: