March 24, 2024

Bhavana Tv

Its Your Channel

ಖಾಕಿ ಚಡ್ಡಿ , ಕಪ್ಪು ಟೋಪಿ ಹಾಗೂ ಕೈಯಲ್ಲೊಂದು ದೊಣ್ಣೆ ಹಿಡಿಯುವವರಿಂದ ದೇಶದ ರಕ್ಷಣೆ ಸಾಧ್ಯವಿಲ್ಲ -ಬಿ.ಕೆ. ಹರಿಪ್ರಸಾದ

ಕುಮಟಾ : ಖಾಕಿ ಚಡ್ಡಿ , ಕಪ್ಪು ಟೋಪಿ ಹಾಗೂ ಕೈಯಲ್ಲೊಂದು ದೊಣ್ಣೆ ಹಿಡಿಯುವವರಿಂದ ದೇಶದ ರಕ್ಷಣೆ ಸಾಧ್ಯವಿಲ್ಲ . ಕಂಡವರ ಮಕ್ಕಳನ್ನು ಬಾವಿಗೆ ಹಾಕಿ ಆಳ ನೋಡುವುದು ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಂಸ್ಕೃತಿ , ಆದರೆ ಕಾಂಗ್ರೆಸ್ ಭಾರತ ದೇಶವನ್ನು ರಕ್ಷಣೆ ಮಾಡಲು ಜನ್ಮ ತಾಳಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ ಹೇಳಿದರು .

ಅವರು ಪಟ್ಟಣದ ಗಿಬ್ ಹೈಸ್ಕೂಲಿನ ಸಮೀಪದ ಲಕ್ಷ್ಮೀಬಾವಿ ಬುರ್ಡೇಕರ ಹಾಲ್‌ನಲ್ಲಿ ಬಿ.ಕೆ. ಹರಿಪ್ರಸಾದ ಅಭಿನಂದನಾ ಸಮಿತಿ ‘ ಆಯೋಜಿಸಿದ್ದ ” ಅಭಿನಂದನಾ ಕಾರ್ಯಕ್ರಮ’ದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು . ದೌರ್ಜನ್ಯ ಮತ್ತು ದಬ್ಬಾಳಿಕೆ , ಶೋಷಣೆಗಳು ಕಡಿಮೆಯಾಗಿ ರಾಮ ರಾಜ್ಯ ನಿರ್ಮಾಣವಾಗಬೇಕೆಂದು ಗಾಂಧೀಜಿ ಕನಸು ಕಂಡಿದ್ದರು . ಆದರೆ ಬಿಜೆಪಿ ನಾಯಕರು ಇಂದು ಮಹಿಳೆಯರ ಧರ್ಮಗಳ ಮೇಲೆ ದೌರ್ಜನ್ಯ , ನಡುವೆ ಸಂಘರ್ಷ ಏರ್ಪಡಿಸಿ , ರಾಮಮಂದಿರ ಅಯೋಧ್ಯೆಯಲ್ಲಿ ನಿರ್ಮಾಣಕ್ಕೆ ಹೊರಟಿದ್ದಾರೆ . ನಮ್ಮ ದೇಶದಲ್ಲಿ ವಿವಿಧ ಧರ್ಮ , ಜಾತಿ , ಮತಗಳಿವೆ . ಎಲ್ಲರೂ ನಮಗೆ ಒಂದೇ ಎಂಬ ಭಾವನೆಯನ್ನು ಭಾವನೆಯನ್ನು ಕಾಂಗ್ರೆಸ್ ಮೂಡಿಸಿದೆ ಎಂದರು .

135 ವರ್ಷಗಳ ಕಾಲ ರಾಷ್ಟ್ರದ ಏಕತೆ , ಅಖಂಡತೆ ಮತ್ತು ಅಭಿವೃದ್ಧಿಗೆ ಕಾಂಗ್ರೆಸ್ ಬಹುಮುಖ್ಯ ಪಾತ್ರ ವಹಿಸಿದ್ದು , ನಮ್ಮ ದೇಶದ ಸಲುವಾಗಿ ಸಾಕಷ್ಟು ಮಹಾನ್ ನಾಯಕರು ತ್ಯಾಗ – ಬಲಿದಾನ ಗೈದಿದ್ದಾರೆ . ಸಂವಿಧಾನ ಬದಲಾಯಿಸಲು ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂಬ ಹೇಳಿಕೆ ಈ ಜಿಲ್ಲೆಯಿಂದ ಪ್ರಾರಂಭವಾಗಿತ್ತು . ಸಂವಿಧಾನ ಬದಲಾವಣೆ ಮಾಡಿ ಏನು ಮಾಡಲು ಬಿಜೆಪಿ ಹೊರಟಿದೆ ಎಂದು ಪ್ರಶ್ನಿಸಿದ ಅವರು , ಹಿಟ್ಲರ್ ಪದ್ದತಿ ಆರ್.ಎಸ್.ಎಸ್ ಅನುಸರಿಸುತ್ತಿದೆ . ಲೂಟಿ ಸರ್ಕಾರದ ವೈಫಲ್ಯವನ್ನು ಮುಚ್ಚಿ ಹಾಕಿಕೊಳ್ಳಲು ಹಿಜಾಬ್ , ಹಲಾಲ್ , ಆಜಾನ್ ಹೆಸರಿನಲ್ಲಿ ಧರ್ಮಗಳ ನಡುವೆ ಸಂಘರ್ಷ ಏರ್ಪಡಿಸಿ , ಕೋಮು ಪ್ರಚೋದನೆ ನೀಡುತ್ತಿದೆ ಎಂದು ಆರೋಪಿಸಿದರು . ನಾನು ಮಂತ್ರಿ ಅಥವಾ ಶಾಸಕನಾಗಲು ಇಲ್ಲಿಗೆ ಬಂದಿಲ್ಲ . ಸ್ವಾತಂತ್ರ‍್ಯ ಹೋರಾಟದಲ್ಲಿ ಉತ್ತರಕನ್ನಡ ಜಿಲ್ಲೆಯಿಂದ ಸಾಕಷ್ಟು ಸಂಖ್ಯೆಯಲ್ಲಿ ಹೋರಾಟಗಾರರರು ಪಾಲ್ಗೊಂಡಿದ್ದರು . ಈ ಪುಣ್ಯ ಭೂಮಿಯಲ್ಲಿ ಅಭಿನಂದನೆ ಸ್ವೀಕರಿಸಲು ಬಂದಿದ್ದೇನೆ . ಈ ಸನ್ಮಾನ ಕಾಂಗ್ರೆಸ್ ಪಕ್ಷಕ್ಕೆ ಸಮರ್ಪಣೆ ಎಂದು ಹೇಳಿದರು . ಮಾಜಿ ಸಚಿವ ಹಾಗೂ ಹಾಲಿ ಶಾಸಕ ಆರ್.ವಿ.ದೇಶಪಾಂಡೆ ಮಾತನಾಡಿ , ಕಾಂಗ್ರೆಸ್ ಜಾತ್ಯತೀತ ವ್ಯವಸ್ಥೆಯಲ್ಲಿ ವಿಶ್ವಾಸವಿಟ್ಟಿದೆ . ಆದರೆ ಬಿಜೆಪಿ ಜಾತಿ – ಧರ್ಮಗಳ ನಡುವೆ ಸಂಘರ್ಷ ಏರ್ಪಡಿಸಿದೆ . 2014 ರಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಪ್ರತಿ ವರ್ಷ 2 ಕೋಟಿ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿತ್ತು . ಸುಳ್ಳು ಹೇಳುವುದರಲ್ಲೇ 8 ವರ್ಷ ಕಳೆದಿದೆ . ಬೆಲೆ ಏರಿಕೆಯಿಂದ ಬಡವರು ಮತ್ತು ಮಧ್ಯಮ ವರ್ಗದವರು ಹೈರಾಣಾಗಿದ್ದಾರೆ . ಬಿಜೆಪಿಯಿಂದ ಅಭಿವೃದ್ಧಿ ಶೂನ್ಯವಾಗಿದೆ . ಬಿ.ಕೆ. ಹರಿಪ್ರಸಾದ ತಮ್ಮ 36 ನೆಯ ವರ್ಷದಲ್ಲಿ ರಾಜ್ಯಸಭೆ ಸದಸ್ಯರಾಗಿದ್ದರು . ಇಂದು ಸಣ್ಣ ವಯಸ್ಸಿನಲ್ಲಿಯೇ ವಿಧಾನಸಭೆ ಮತ್ತು ಲೋಕಸಭೆ ಪ್ರವೇಶಿಸಿದ್ದಾರೆ ಎಂದರು . ಮಾಜಿ ಶಾಸಕಿ ಶಾರದಾ ಶೆಟ್ಟಿ ಮಾತನಾಡಿ , ಬಿ.ಕೆ. ಹರಿಪ್ರಸಾದ ನೇರ ಮತ್ತು ಸರಳ ವ್ಯಕ್ತಿ . ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಯೋಜನೆಗಳು ಮಂಜೂರಾಗಿದ್ದವು .ಮಂಜುನಾಥ ನಾಯ್ಕ ನೇತೃತ್ವದಲ್ಲಿ ರಾಜ್ಯ ಹಾಗೂ ರಾಷ್ಟ್ರದ ಮುತ್ಸದ್ದಿ ನಾಯಕ ಬಿ.ಕೆ. ಹರಿಪ್ರಸಾದ ಅವರನ್ನು ಸನ್ಮಾನಿಸಿರುವುದು ಸಂತಸದ ಸಂಗತಿ ಎಂದರು . ಕಿಸಾನ್ ಕಾಂಗ್ರೆಸ್ ಸೆಲ್ ಜಿಲ್ಲಾಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ , ಮಂಜುನಾಥ ನಾಯ್ಕ ನೇತೃತ್ವದಲ್ಲಿ ಕಾರ್ಯಕ್ರಮ ಸಂಘಟಿಸಿ , ಬಿ.ಕೆ.ಹರಿಪ್ರಸಾದ ಅವರನ್ನು ಅಭಿನಂದಿಸುವ ಕಾರ್ಯ ಅರ್ಥಪೂರ್ಣವಾಗಿದೆ . ಹರಿಪ್ರಸಾದ ಅವರು 16 ರಾಜ್ಯಗಳ ಉಸ್ತುವಾರಿಯಾಗಿ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ . ಸರ್ಕಾರದ ತಪ್ಪನ್ನು ಸಾರ್ವಜನಿಕರಿಗೆ ತಿಳಿಸಿ , ಸರಿದಾರಿಗೆ ತರುವ ಕೆಲಸವನ್ನು ಬಿ.ಕೆ.ಹರಿಪ್ರಸಾದ ಸಮರ್ಥವಾಗಿ ನಿರ್ವಹಿಸಿದ್ದಾರೆ ಎಂದರು . ನೇಮಕಗೊಂಡು ಬಿ.ಕೆ.ಹರಿಪ್ರಸಾದ ಅಭಿನಂದನಾ ಸಮಿತಿ ಅಧ್ಯಕ್ಷ ಮಂಜುನಾಥ ನಾಯ್ಕ ಪ್ರಾಸ್ತಾವಿಕ ಮಾತನಾಡಿ , ಹರಿಪ್ರಸಾದ ಓರ್ವ ವ್ಯಕ್ತಿಯಲ್ಲ , ಅವರೊಂದು ಶಕ್ತಿ . 16 ರಾಜ್ಯಗಳ ಉಸ್ತುವಾರಿಯಾಗಿ ಪಕ್ಷ ಸಂಘಟನೆ ಮಾಡಿ , ವರಿಷ್ಠರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ . ವಿದ್ಯಾರ್ಥಿ ದೆಸೆಯಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡು ಕೇಂದ್ರದಲ್ಲಿ ಮಂತ್ರಿ ಸ್ಥಾನ ಲಭಿಸಿದರೂ ಅದನ್ನು ತ್ಯಜಿಸಿ , ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದವರು . ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇವೆ ಎಂದರು .
ಮಾಜಿ ಸಚಿವ ಆರ್.ಎನ್.ನಾಯ್ಕ , ಅಂಜುಮಾನ ಸಮೂಹ ಸಂಸ್ಥೆಯ ಅಧ್ಯಕ್ಷ ಮುಜಾಮಿಲ್ ಖಾಜಿಯಾ , ಮಾಜಿ ಶಾಸಕ ಜೆ.ಡಿ.ನಾಯ್ಕ , ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಮಾನಂದ ನಾಯ್ಕ ಮಾತನಾಡಿದರು .

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ , ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ , ಮಾಜಿ ಶಾಸಕ ಕೆ.ಎಚ್.ಗೌಡ , ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ಸುಷ್ಮಾ ರಾಜಗೋಪಾಲ ರೆಡ್ಡಿ , ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎಂ.ಎನ್.ಸುಬ್ರಹ್ಮಣ್ಯ , ಅಲ್ಪ ಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಅಬ್ದುಲ ಮಜೀದ , ಹಿಂದುಳಿದ ಘಟಕದ ಜಿಲ್ಲಾಧ್ಯಕ್ಷ ನಾಗರಾಜ ನಾರ್ವೆಕರ , ಜಿ.ಪಂ ಮಾಜಿ ಉಪಾಧ್ಯಕ್ಷ ರಾಮ ಮೊಗೇರ , ಕಾಂಗ್ರೆಸ್ ಸೇವಾದಲದ ಹೆಚ್ಚುವರಿ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ , ಸೇವಾದಲದ ಜಿಲ್ಲಾಧ್ಯಕ್ಷ ಆರ್.ಎಚ್.ನಾಯ್ಕ , ಜಿ.ಪಂ ಮಾಜಿ ಸದಸ್ಯರಾದ ಪ್ರದೀಪ ನಾಯಕ ದೇವರಬಾವಿ , ಗಾಯತ್ರಿ ಗೌಡ , ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್ ನಾಯ್ಕ , ಹೊನ್ನಾವರ ಬ್ಲಾಕ್ ಅಧ್ಯಕ್ಷ ಜಗದೀಪ ತೆಂಗೇರಿ , ಅಲ್ಪ ಸಂಖ್ಯಾತ ಘಟಕದ ತಾಲೂಕಾಧ್ಯಕ್ಷ ಮುಜಾಫರ ಶೇಖ್ ಮತ್ತಿತರರು ಉಪಸ್ಥಿತರಿದ್ದರು . ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಅಭಿನಂದನಾ ಸಮಿತಿಯ ಕಾರ್ಯಾಧ್ಯಕ್ಷ ಲೋಹಿತ ನಾಯ್ಕ ಸ್ವಾಗತಿಸಿದರು . ಗೌರವಾಧ್ಯಕ್ಷ ಆರ್.ಜಿ.ನಾಯ್ಕ ಸನ್ಮಾನ ಪತ್ರ ವಾಚಿಸಿದರು . ಮೂಡಲಮನೆ , ಶೀಲಾ ಮೇ ಪ್ರಶಾಂತ ನಿರೂಪಿಸಿದರು . ಸುಗ್ಗಿ ಕುಣಿತ , ಗುಮಟೆ ಪಾಂಗ್ , ಡೊಳ್ಳು ಕುಣಿತದೊಂದಿಗೆ ಬಿ.ಕೆ. ಹರಿಪ್ರಸಾದ , ಆರ್.ವಿ . ದೇಶಪಾಂಡೆ ಸೇರಿದಂತೆ ವಿವಿಧ ಗಣ್ಯರನ್ನು ವೇದಿಕೆಯತ್ತ ಸ್ವಾಗತಿಸಲಾಯಿತು

ವರದಿ: ನಟರಾಜ ಗದ್ದೆಮನೆ ಕುಮಟಾ

error: