March 29, 2024

Bhavana Tv

Its Your Channel

ವಿ.ಗ.ನಾಯಕರ ಬರೆಹಗಳಲ್ಲಿ ನಾಮಧಾರಿ ಜನಪದ ಸಾಹಿತ್ಯ” ಗ್ರಂಥ ಬಿಡುಗಡೆ ಸಮಾರಂಭ. ಎಪ್ರಿಲ್-೮-೨೦೨೩

ಕುಮಟಾ ; ನಾಯಕನ ಅರ್ಹತೆ ಇರುವ ನಾಮಧಾರಿಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹುಸಂಖ್ಯಾತರು. ನಾಮಧಾರಿಗಳು ಹಳೆಪೈಕ ಮೂಲದ ಜನವರ್ಗದವರು. ಹಳೆಪೈಕರು ಎಂದರೆ ಕನ್ನಡದ ಪ್ರಾಚೀನರು. ಕನ್ನಡ ಸಂಸ್ಕೃತಿಯನ್ನು ಕಟ್ಟಿ ಬೆಳೆಸುವುದರಲ್ಲಿ ಪ್ರಮುಖರಾದವರು. ಕನ್ನಡ ಭಾಷೆಯೊಂದಿಗೆ ಬದುಕಿ ಬಾಳಿದವರು. ಕನ್ನಡ ನೆಲವನ್ನು ಅಗೆದು ಉತ್ತಿ-ಬಿತ್ತಿ ಪೈರುಪಚ್ಚೆ ಗಳಿಂದ ಸಮೃದ್ಧಿ ಹೊಂದಿದವರು. ನಾಡು ಕಟ್ಟಿ ಆಳಿಕೊಂಡು ಬಾಳಿಕೊಂಡು ಬಂದ ವೀರರು. ಆರ್ಯರು ಬರುವ ಮೊದಲೇ ಈ ದೇಶದಲ್ಲಿ ನೆಲೆಗೊಂಡು ನಾಗರಿಕತೆಯ ತೊಟ್ಟಿಲಲ್ಲಿ ಮೆರೆದಾಡಿದ ದ್ರಾವಿಡ ಮೂಲ ಜನವರ್ಗದವರು. ಹೀಗೆ ಶೋಧಿಸುತ್ತ ಹೋದರೆ ನಾಮಧಾರಿಗಳ ಚಾರಿತ್ರಿಕ ಅಂಶಗಳು ಗರಿಬಿಚ್ಚಿ ಕೊಳ್ಳುವುದರ ಮೂಲಕ ಇಡೀ ಇತಿಹಾಸವನ್ನು ತೆರೆದಿಡಲು ಸಾಧ್ಯ.
ಅಪಾರ ಜನಪದ ಸಾಹಿತ್ಯ ಹೊಂದಿರುವ ನಾಮಧಾರಿಗಳು ತಮ್ಮ ಬದುಕಿನ ಅನುಭವ ರಾಶಿಯನ್ನು ಹಾಡಿನ ಮೂಲಕ ಸಾಕ್ಷಾತ್ಕರಿಸಿದ್ದಾರೆ. ತಾವು ಆಳಿ ಬಾಳಿದ ಬದುಕಿನ ಸತ್ಯವನ್ನು ಇಲ್ಲಿ ಕಂಡರಿಸಿದ್ದಾರೆ. ಇಡೀ ಜನವರ್ಗ ಒಂದಾಗಿ ನಿರ್ಮಿಸಿದ ಸಂಪತ್ತು ಇದು. ಪರಂಪರಾಗತವಾಗಿ ಬಾಯಿಂದ ಬಾಯಿಗೆ, ಕಿವಿಯಿಂದ ಕಿವಿಗೆ ಹರಿದುಬಂದ ಈ ಜ್ಞಾನ ಸಾಮ್ರಾಜ್ಯದ ಆಳ ಅಗಲ ಬಲ್ಲವರಿಲ್ಲ. ಇಲ್ಲಿ ಹಾಡುಗಳು, ಪದಗಳು, ಕಥನ ಗೀತೆಗಳು, ಖಂಡಕಾವ್ಯಗಳು ಹೀಗೆ ವಿವಿಧ ಸ್ವರೂಪಗಳಲ್ಲಿ ಬೆಳಗಿವೆ. ಅವರ ಆನಂದ, ಅನುಭವ ಹಾಡಾಗಿ ಹರಿದ ಬಗೆ ವರ್ಣನಾತೀತ.

ಆಧುನಿಕ ಸಂಸ್ಕೃತಿ ನಮ್ಮ ಸಮಾಜ ಆಡಂಬರ ಜೀವನದ ಒಂದು ಭಾಗವಾದಾಗ ನಮ್ಮ ಬದುಕಿನಲ್ಲಿ ಆಮೂಲಾಗ್ರ ಬದಲಾವಣೆ ಆರಂಭವಾಯಿತು. ಹಳೆಯ ಕೊಚ್ಚೆಗಳು ಕೊಚ್ಚಿಹೋಗಿ ಹೊಸ ಜ್ಞಾನ, ಹೊಸ ಮೌಲ್ಯಗಳು ಆವಿಷ್ಕಾರಗೊಂಡವು. ನಮ್ಮ ಆಚರಣೆ ಸಂಪ್ರದಾಯಗಳಲ್ಲಿ ಬದಲಾವಣೆ ಕಾಣಿಸಿಕೊಂಡು ಸಂಪ್ರದಾಯಗಳಲ್ಲಿ ಬದಲಾವಣೆ ಬಂದಮೇಲೆ ಹೊಸ ರೀತಿ ರಿವಾಜುಗಳು ಅಸ್ತಿತ್ವ ಪಡೆದು ಹಳೆಯ ಪದ್ಧತಿಗಳು ಹಿಂದಕ್ಕೆ ಸರಿದು ಮರೆಯಾಗತೊಡಗಿದೆ. ನಮ್ಮ ಜನಪದರು ಯಾವ ಹಾಡುಗಳನ್ನು, ಪದಗಳನ್ನು ತಮ್ಮ ಬದುಕಿನ ಭಾಗವಾಗಿ ಕಾಪಾಡಿಕೊಂಡು ಬಂದಿದ್ದರೋ ಈಗ ಆಧುನಿಕ ಮನಸ್ಸುಗಳಿಗೆ ಆಸಕ್ತಿ ಕಡಿಮೆಯಾಗಿ ಅವುಗಳ ಬಗ್ಗೆ ಉದಾಸೀನಭಾವ ಮೂಡಿದೆ. ಇದರಿಂದಾಗಿ ಹಿರಿಯ ತಲೆಮಾರಿನೊಂದಿಗೆ ಜನಪದ ಗೀತೆಗಳು ಮರೆಯಾಗುವಂತೆ ಪರಿಸ್ಥಿತಿ ಒದಗಿ ಬಂದಿದೆ.

ಈ ಆತಂಕವನ್ನು ದೂರ ಮಾಡಿ ಮುಂದಿನ ಪೀಳಿಗೆಗೆ ಇದನ್ನು ಪರಿಚಯಿಸುವ ಉದ್ದೇಶಕ್ಕಾಗಿ* ನಾಮಧಾರಿ ಜನವರ್ಗದ ಜನಪದ ಸಾಹಿತ್ಯವನ್ನು ಒಂದೆಡೆ ತರುವ ಉದ್ದೇಶದಿಂದ ಹಳೆಪೈಕ ನಾಮಧಾರಿ ಜನಪದ ಸಾಹಿತ್ಯ* ಪ್ರಕಟಣಾ ಸಮಿತಿ ರಚನೆಗೊಂಡಿದೆ.ಹಳೆಪೈಕ ನಾಮಧಾರಿ ಜನಪದ ಸಾಹಿತ್ಯ ಪ್ರಕಟಣಾ ಮಾಲೆಯಲ್ಲಿ ನಾಮಧಾರಿಗಳ ಜನಪದ ಸಾಹಿತ್ಯವನ್ನು ಪ್ರಕಟಿಸುವ ಯೋಜನೆಯನ್ನು ಹಾಕಿಕೊಂಡಿದೆ.ಎರಡನೇ ಸಂಪುಟವಾಗಿ ವಿ.ಗ. ನಾಯಕರು ಸಂಗ್ರಹಿಸಿರುವ ನಾಮಧಾರಿ ಜನಪದ ಸಾಹಿತ್ಯ ಸಮಗ್ರವಾಗಿ ಪ್ರಕಟಗೊಂಡು ಎಪ್ರಿಲ್ ೮ ರಂದು ಕುಮಟಾದ ಶಿವರಾಮ ಕಾಂಪ್ಲೆಕ್ಸ್ ವಿವೇಕ ನಗರ (ಶ್ರೀ ರೋಹಿದಾಸ ನಾಯಕ ರವರ ಮನೆಯಂಗಳದಲ್ಲಿ) ದಲ್ಲಿ ಸಮಾಜದ ಗಣ್ಯರ ಉಪಸ್ಥಿತಿಯಲ್ಲಿ ಗ್ರಂಥ ಬಿಡುಗಡೆಗೊಳ್ಳಲಿದೆ.
ಜಲವಳ್ಳಿ ಮೂಲದ ನಾಮಧಾರಿ ಸಮಾಜದ ಹಿರಿಯ ಸಾಹಿತಿಗಳಾದ ಸುಮುಖಾನಂದ ಜಲವಳ್ಳಿಯವರ ಪ್ರಧಾನ ಸಂಪಾದಕತ್ವದಲ್ಲಿ ಗ್ರಂಥ ಪ್ರಕಟಗೊಂಡಿದೆ. ಈ ಗ್ರಂಥವು ೪೫೦ ಪುಟಗಳನ್ನು ಹೊಂದಿದ್ದು, ಈ ಪುಸ್ತಕದ ಮುಖಬೆಲೆ ೫೫೦ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಈ ಪುಸ್ತಕವು ನ್ಯಾನೋ ಬೈಂಡಿ0ಗ್ ಮುಖಪುಟ ಹೊಂದಿದ್ದು ಇದರ ಪ್ರಕಟಣೆಗೆ ೧ ಲಕ್ಷದ ೨೦ ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ.
ಸಮಾಜದ ಹಿರಿಯ ತಲೆಮಾರಿನ ಪುರುಷ ಮತ್ತು ಮಹಿಳೆಯರ ಜನಪದ ಗೀತೆಗಳು ಸಂಗ್ರಹಯೋಗ್ಯ ಗ್ರಂಥ ಆಗಿರುವುದರಿಂದ , ಗ್ರಂಥ ರಚನೆಗೆ ಸಾಕಷ್ಟು ಹಣ ಖರ್ಚಾಗಿರುವುದರಿಂದ ಹಾಗೂ ಮುಂದಿನ ಗ್ರಂಥ ಪ್ರಕಟಣೆಗೆ ಆರ್ಥಿಕ ಸಹಾಯ ಕ್ರೋಡಿಕರಿಸುವ ಕಾರಣಕ್ಕಾಗಿ ಒಂದೊ0ದು ಪುಸ್ತಕವನ್ನು ಖರೀದಿಸಿ ಮುಂದಿನ ಗ್ರಂಥ ಪ್ರಕಟಣೆಗೆ ಸಹಕರಿಸಬೇಕಾಗಿ ಸಮಸ್ತ ನಾಮಧಾರಿ ಸಮಾಜ ಬಾಂಧವರಲ್ಲಿ ಸಮಿತಿಯ ಪರವಾಗಿ ವಿನಯಪೂರ್ವಕವಾಗಿ ಗ್ರಂಥ ಪ್ರಕಟಣಾ ಸಮಿತಿಯ ಸದಸ್ಯ ಹೊಳೆಗದ್ದೆಯ ಪಿ.ಆರ್. ನಾಯ್ಕ ವಿನಂತಿಸಿರುತ್ತಾರೆ.

error: