April 25, 2024

Bhavana Tv

Its Your Channel

ಸಿದ್ದಾಪುರದ ಸಾರ್ವಜನಿಕ ಗ್ರಂಥಾಲಯದಲ್ಲಿ ಜಿ.ಎಸ್.ಶಿವರುದ್ರಪ್ಪನವರ ಕುರಿತು ಕಾರ್ಯಕ್ರಮ

ವರದಿ: ವೇಣುಗೋಪಾಲ ಮದ್ಗುಣಿ

ಸಿದ್ದಾಪುರ: ಸಾಹಿತಿಗಳು, ಕವಿಗಳು ಕೂಡ ತಮ್ಮ ಬರೆಹಗಳ ಮೂಲಕ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುತ್ತ ಬಂದಿದ್ದಾರೆ. ಅವರಿಂದ ಹೊಸ ಪ್ರಜ್ಞೆ ಪ್ರಾಪ್ತವಾಗುತ್ತದೆ. ಅಂಥ ಬರಹಗಾರರ ಕುರಿತಾಗಿ ಓದುಗರು ಆಸ್ಥೆ ವಹಿಸಬೇಕು ಎಂದು ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್ ಹೇಳಿದರು.
ಅವರು ಜಿಲ್ಲಾ ಗ್ರಂಥಾಲಯದ ಮಾರ್ಗದರ್ಶನದಲ್ಲಿ ಸ್ಥಳೀಯ ಗ್ರಂಥಾಲಯ ಶಾಖೆಯಲ್ಲಿ ಆಯೋಜಿಸಿದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಕೃತಿಗಳ ವಿಮರ್ಶೆ, ಚರ್ಚೆ, ವ್ಯಕ್ತಿ ಪರಿಚಯದ ಓದುಗರಿಂದಲೇ ಓದುಗರಿಗೆ ಹೇಳುವ ವಿನೂತನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ ಇಲ್ಲಿನ ಗ್ರಂಥಾಲಯಕ್ಕೆ ಸಮರ್ಪಕ ಕಟ್ಟಡದ ಕೊರತೆ ಇದ್ದು ಜನಪ್ರತಿನಿಧಿಗಳು ಉತ್ತಮ ಕಟ್ಟಡ ನಿರ್ಮಾಣ ಮಾಡುವಲ್ಲಿ ಪ್ರಯತ್ನಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ, ಪತ್ರಕರ್ತ ಗಂಗಾಧರ ಕೊಳಗಿ ಮಾತನಾಡಿ ಗ್ರಂಥಾಲಯಗಳು ಜ್ಞಾನದ ದೇವಾಲಯವಿದ್ದಂತೆ. ಸ್ವಂತ ಗ್ರಂಥಾಲಯವಿದ್ದರೂ ಸಾರ್ವಜನಿಕ ಗ್ರಂಥಾಲಯದಲ್ಲಿ ದೊರೆಯುವ ನೆಮ್ಮದಿ, ಖುಷಿ, ಅರಿವನ್ನು ಹಿಗ್ಗಿಸುವ ಮೌನ ಅಲ್ಲಿ ದೊರೆಯುವದಿಲ್ಲ. ಗ್ರಂಥಾಲಯ ಇಲಾಖೆ ರಾಷ್ಟ್ರಕವಿ ಶಿವರುದ್ರಪ್ಪನವರೂ ಸೇರಿದಂತೆ ಕನ್ನಡದ ಕವಿ,ಬರೆಹಗಾರರ ಕುರಿತಾಗಿ ಕಾರ್ಯಕ್ರಮ ಆಯೋಜಿಸಿರುವದು ಶಾಘ್ಲನೀಯ. ಇಂಥ ಕಾರ್ಯಕ್ರಮಗಳು ಬರಹಗಾರರ ಕುರಿತು ಹೆಚ್ಚಿನ ಮಾಹಿತಿ ಒದಗಿಸುವದಲ್ಲದೇ ಓದುಗರನ್ನೂ, ಇಲಾಖೆಯ ನಡುವೆ ಹಾರ್ದಿಕ ಸಂಪರ್ಕವನ್ನು ಕಲ್ಪಿಸುತ್ತದೆ ಎಂದರು.ವಿಶೇಷ ಉಪನ್ಯಾಸ ನೀಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗೋಪಾಲ ನಾಯ್ಕ ಮಾತನಾಡಿ ಸಮಾಜವನ್ನು ಅಕ್ಷರಗಳ ಮೂಲಕ ತಿದ್ದುವ ಪ್ರಯತ್ನ ಮಾಡಿದ ಜಿ.ಎಸ್.ಶಿವರುದ್ರಪ್ಪ ವೈಚಾರಿಕ ಚಿಂತನೆಯ ಸಾಹಿತಿ,ಕವಿ, ವಿಮರ್ಶಕರೂ ಕೂಡ. ಕನ್ನಡಕ್ಕೆ ವಿಶಿಷ್ಟವಾದ ಕಾವ್ಯ, ಲೇಖನಗಳನ್ನು ಕೊಟ್ಟವರು ಅವರು. ಅವರ ಭಾವಗೀತೆಗಳು ಹೃದಯಸ್ಪರ್ಶಿಯಾಗಿವೆ. ಅವರ ಸೃಜನಶೀಲತೆಗೆ ಅನೇಕ ಶ್ರೇಷ್ಠ ಪ್ರಶಸ್ತಿಗಳು ಸಂದಿವೆ ಎಂದರು.
ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಮಾತನಾಡಿ ಬೆಳಕಿನ ಕವಿ ಎಂದೇ ಹೆಸರಾದ ಶಿವರುದ್ರಪ್ಪ ಕನ್ನಡದ ಕುರಿತಾಗಿ ತುಂಬು ಕಾಳಜಿ ಹೊಂದಿದ್ದರು. ಸಮನ್ವಯದ ಕವಿಯಾದ ಅವರು ಸಾಕಷ್ಟು ಅತ್ಯುತ್ತಮ ಕವಿತಾ ಸಂಕಲನ, ವಿಮರ್ಶಾ ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಸಮಾಜದ ವಿಕಾಸಕ್ಕೆ ಕಾರಣರಾಗಿದ್ದಾರೆ ಎಂದರು.ಸಾಹಿತಿ ಜಿ.ಜಿ.ಹೆಗಡೆ ಬಾಳಗೋಡ ಸ್ವಾಗತಿಸಿ ನಿರೂಪಿಸಿದರು. ಗ್ರಂಥಾಲಯ ಮೇಲ್ವಿಚಾರಕಿ ಶೋಭಾ ಜಿ.ವಂದಿಸಿದರು. ಸಹಾಯಕಿ ಕುಸುಮಾ ಉಪಸ್ಥಿತರಿದ್ದರು.

error: