February 1, 2023

Bhavana Tv

Its Your Channel

ಭುವನಗಿರಿಯ ಭುವನೇಶ್ವರಿ ದೇವಾಲಯದಲ್ಲಿ ಕನ್ನಡ ಜ್ಯೋತಿಯನ್ನು ಕೊಂಡೊಯ್ಯುವ ಕನ್ನಡ ರಥಕ್ಕೆ ಚಾಲನೆ

ವರದಿ: ವೇಣುಗೋಪಾಲ ಮದ್ಗುಣಿ

ಸಿದ್ದಾಪುರ: ನಮ್ಮ ಸಂಸ್ಕೃತಿ ಮತ್ತು ಪರಂಪರೆ ಆಧ್ಯಾತ್ಮಿಕ ಹಿನ್ನೆಲೆಯಿಂದ ಬಂದಿರುವುದು. ಆದಿಶಕ್ತಿಯಾದ ಭುವನೇಶ್ವರಿಯ ಸನ್ನಿಧಿಯಿಂದ ಕೊಂಡೊಯ್ಯುವ ಜ್ಯೋತಿಯಿಂದಲೇ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದೀಪ ಬೆಳಗಲಾಗುವುದು ಎಂದು ನಾಡೋಜ ಡಾ. ಮಹೇಶ್ ಜೋಶಿ ಹೇಳಿದರು.
ತಾಲ್ಲೂಕಿನ ಭುವನಗಿರಿಯ ಭುವನೇಶ್ವರಿ ದೇವಾಲಯದಲ್ಲಿ ಕನ್ನಡ ಜ್ಯೋತಿಯನ್ನು ಕೊಂಡೊಯ್ಯುವ ಕನ್ನಡ ರಥಕ್ಕೆ ಚಾಲನೆ ಕೊಡುವ ಮೊದಲು ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಗುರುವಾರ ಮಾತನಾಡಿದರು. ನದಿಯ ಮೂಲ ಚಿಕ್ಕದಾದರೂ ಹರಿಯುತ್ತಾ ತನ್ನ ಶಕ್ತಿಯನ್ನು ಮತ್ತು ವಿಸ್ತಾರವನ್ನು ಹೆಚ್ಚಿಸಿಕೊಳ್ಳುತ್ತದೆ. ಅಂತಯೇ ತಾಯಿ ಭುವನೇಶ್ವರಿ ಸನ್ನಿಧಿಯಲ್ಲಿ ಬೆಳಗಿದ ಈ ಚಿಕ್ಕ ಜ್ಯೋತಿ ರಾಜ್ಯಾದ್ಯಂತ ಸಂಚರಿಸಿ ನಂದಾದೀಪವಾಗಿ ಬೆಳಗಲಿದೆ. ಈ ಬಾರಿಯ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ ಎಂದರು.

ವಿಧಾನಪರಿಷತ್ ಸದಸ್ಯರಾದ ಶಾಂತರಾಮ ಸಿದ್ಧಿ ಮಾತನಾಡಿ ಕನ್ನಡ ಎನೆ ಕುಣಿದಾಡುವುದೆನ್ನೆದೆ ಎಂಬ ಮಾತಿನಂತೆ ಕನ್ನಡ ಕೇವಲ ಒಂದು ಭಾಷೆಯಾಗಿರದೆ ಜನರನ್ನು ತನ್ನತ್ತ ಸೆಳೆಯುವ ಶಕ್ತಿಯಾಗಿದೆ ಎಂದರು.
ಶಿರಸಿಯ ಉಪವಿಭಾಗಾಧಿಕಾರಿ ದೇವರಾಜ್ ಆರ್ ಮಾತನಾಡಿ, ಸ್ವಚ್ಛ ಕನ್ನಡವನ್ನು ಮುಂದಿನ ಪೀಳಿಗೆಗೆ ನೀಡಿದಾಗ ಕನ್ನಡ ಉಳಿಸುವುದರ ಜೊತೆಗೆ ಕನ್ನಡವನ್ನು ಮೆರೆಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ತಹಶೀಲ್ದಾರ್ ಸಂತೋಷ ಭಂಡಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ, ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜುಗೋಡು, ಹಾವೇರಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಕಲ್ಬುರ್ಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ವಿಜಯ್ ಕುಮಾರ್, ಕನ್ನಡ ರಥದ ಮೇಲುಸ್ತುವಾರಿ ನಬಿ ಸಾಬ್ ಮುಂತಾದವರು ಉಪಸ್ಥಿತರಿದ್ದರು.
ಪ್ರಾಚಾರ್ಯ ಎಂ ಕೆ ನಾಯಕ್ ಹೊಸಳ್ಳಿ ನಿರೂಪಿಸಿದರು. ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ ಎನ್ ವಾಸರೆ ಸ್ವಾಗತಿಸಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೋಪಾಲ್ ನಾಯ್ಕ ವಂದಿಸಿದರು.
ನAತರ ಭುವನಗಿರಿಯ ಭುವನೇಶ್ವರಿ ದೇವಾಲಯದಿಂದ ಜ್ಯೋತಿ ಬೆಳಗಿಸಿ ಹಾವೇರಿಯಲ್ಲಿ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಲುಪಲಿರುವ ಕನ್ನಡ ರಥಕ್ಕೆ ಚಾಲನೆ ನೀಡಲಾಯಿತು

About Post Author

error: