April 25, 2024

Bhavana Tv

Its Your Channel

ಹೊಟ್ಟೆ ಹಸಿವಿನ ಜತೆ ನೆತ್ತಿಯ ಹಸಿವು ನೀಗಿಸಿದ ಸಂತರು-ರುದ್ರದೇವರಮಠದ ಮಲ್ಲಿಕಾರ್ಜುನ ಮಹಾಸ್ವಾಮಿ

ವರದಿ: ವೇಣುಗೋಪಾಲ ಮದ್ಗುಣಿ

ಶಿರಸಿ-– ಹತ್ತು ಸಾವಿರಕ್ಕೂ ಹೆಚ್ಚು ಬಡಮಕ್ಕಳ ಹೊಟ್ಟೆ ಹಸಿವಿನ ಜತೆ ನೆತ್ತಿಯ ಹಸಿವನ್ನು ನೀಗಿಸಿಕೊಳ್ಳಲು ಆಸರೆ ನೀಡಿದ ಮಹಾನ್ ಸಂತ ಸಿದ್ಧಗಂಗಾ ಕ್ಷೇತ್ರದ ಶತಾಯು ಡಾ. ಶಿವಕುಮಾರ ಮಹಾಸ್ವಾಮಿಗಳೆಂದು ನಗರದ ರುದ್ರದೇವರಮಠದ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಪ್ರತಿಪಾದಿಸಿದರು.
ಶ್ರೀಮಠದ ಸಭಾಂಗಣದಲ್ಲಿ ಶ್ರೀಸಿದ್ದಗಂಗಾ ಶಿವಕುಮಾರ ಸ್ವಾಮಿ ಸೇವಾ ಸಮಿತಿ ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಶಿರಸಿ ಶೈಕ್ಷಣಿಕ ಜಿಲ್ಲಾ ಘಟಕ, ಸಾಹಿತ್ಯ ಬಳಗ ಸಂಯುಕ್ತಾಶ್ರಯದಲ್ಲಿ ಸಂಘಟಿಸಿದ್ದ ಲಿಂ. ಕುಮಾರಸ್ವಾಮಿಗಳ ಮೂರನೆಯ ಪುಣ್ಯತಿಥಿ ಅಂಗವಾಗಿ ದೇಹದಾನ,ನೇತ್ರದಾನ, ರಕ್ತ ಮತ್ತು ಅಂಗಾAಗ ದಾನ ಜಾಗೃತಿ ಆಂದೋಲನ ಮತ್ತು ದಾಸೋಹ ಕವಿಗೋಷ್ಟಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಸ್ವಾಮಿಗಳು ಪೂಜ್ಯರು ಹಾಕಿದ ಪರಂಪರೆ ಸಮಸ್ತ ಮನುಕುಲಕ್ಕೆ ಮಾದರಿಯಾಗಿದೆ. ವಿಶ್ವದ ಜನತೆಯನ್ನು ಪ್ರೀತಿಸುವ ಹೃದಯವಂತರು ಅವರಾಗಿದ್ದರು ಎಂದು ಹೇಳಿ ಶಿವಕುಮಾರಸ್ವಾಮಿಗಳ ಕುರಿತು ಬರೆದ ಕವನ ವಾಚನ ಮಾಡುವುದರೊಂದಿಗೆ ಕವಿಗೋಷ್ಟಿಗೆ ಚಾಲನೆ ನೀಡಿದರು.
ಕಚುಸಾಪ ರಾಜ್ಯ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಮಾತನಾಡಿ ಕಚುಸಾಪ ರಾಜ್ಯದ ಎಲ್ಲ ಜಿಲ್ಲಾ ಘಟಕಗಳು ಲಿಂ.ಕುಮಾರಸ್ವಾಮಿಗಳ ಸಂಸ್ಮರಣೆಯAಗವಾಗಿ ದಾಸೋಹ ಕವಿಗೋಷ್ಟಿ ಹಮ್ಮಿಕೊಂಡಿವೆ, ಆಧ್ಯಾತ್ಮದ ಜತೆ ಸಾಮಾಜಿಕ ಚಿಂತನೆಯ ಅಗತ್ಯವಿದೆ ಎಂದರು.
ಹಿರಿಯ ಚಿಂತಕರಾದ ಜಗದೀಶ ಭಂಡಾರಿ ಹಾಗೂ ರಕ್ತದಾನದಲ್ಲಿ ದಾಖಲೆ ನಿರ್ಮಿಸಿದ ಪೊಲೀಸ ಕರಬಸಪ್ಪ ಗೊಂದಿ ಅವರು ಮಾತನಾಡಿ ರಕ್ತದಾನ, ದೇಹದಾನ ಮಹತ್ವಸಾರಿ ಹೇಳಿ ಜನರಲ್ಲಿ ಸಂಚಲನ ಮೂಡಿಸಿದರು.
ನಿವೃತ್ತ ಪ್ರಾಚಾರ್ಯ ಡಿ.ಎಂ.ಭಟ್ ಕುಳವೆ ಅವರು ಲಿಂ.ಶಿವಕುಮಾರಸ್ವಾಮಿಗಳ ಅಕ್ಷರ ಹಾಗೂ ಅನ್ನ ದಾಸೋಹ ಕುರಿತು ಉಪನ್ಯಾಸ ನೀಡಿದರು. ಹಿರಿಯ ಚಿಂತಕ ಗಣಪತಿ ಭಟ್ಟ ವರ್ಗಾಸರ ಪ್ರಾಸ್ತಾವಿಕ ಮಾತನಾಡಿದರು. ಶ್ರೀ ಮಠದ ಅಕ್ಕಮಹಾದೇವಿ ಮಹಿಳಾ ಸಂಘದ ಸದಸ್ಯೆಯರು ಪ್ರಾರ್ಥನೆ ಹಾಡಿದರು. ಸಾಹಿತ್ಯ ಬಳಗದ ರೂವಾರಿ ಕೃಷ್ಣ ಪದಕಿ ಸ್ವಾಗತಿಸಿದರು.ರಾಜು ಉಗ್ರಾಣಕರ ನಿರೂಪಿಸಿದರು. ಶೈಕ್ಷಣಿಕ ಜಿಲ್ಲಾಘಟಕದ ಅಧ್ಯಕ್ಷ ಮಹೇಶಕುಮಾರ ಹನಕೆರೆ ವಂದಿಸಿದರು.
ಸನ್ಮಾನ-– ಕಾರ್ಯಕ್ರಮದಂಗವಾಗಿ ಮಲ್ಲಿಕಾರ್ಜುನ ಸ್ವಾಮಿಗಳು, ಕೃಷ್ಣಮೂರ್ತಿ ಕುಲಕರ್ಣಿ, ಜಗದೀಶ ಭಂಡಾರಿ, ರಕ್ತದಾನಿ ಕರಬಸಪ್ಪ ಗೊಂದಿ, ಡಿ.ಎಂ.ಭಟ್, ಯುವ ಸಂಘಟನೆಯ ಪ್ರದೀಪ ಮೈಸೂರು ಅವರನ್ನು ಗೌರವಿಸಲಾಯಿತು.
ಕವಿಗೋಷ್ಟಿ-– ಲಿಂ. ಡಾ.ಶಿವಕುಮಾರಸ್ವಾಮಿಗಳ ಮೂರನೆಯ ಸ್ಮರಣೋತ್ಸವ ಅಂಗವಾಗಿ ಜರುಗಿದ ಕವಿಗೋಷ್ಟಿಯಲ್ಲಿ ದಿನೇಶ ಎನ್. ಅಮ್ಮಿನಳ್ಳಿ, ವಿಮಲಾ ಭಾಗ್ವತ, ಪರಮ ಕಾಳೇಬೈಲ್, ಉಷಾ ರವೀಂದ್ರ ಭಟ್ಟ, ಮಹೇಶಕುಮಾರ ಹನಕೆರೆ, ರೇವತಿ ಭಟ್, ಹೊಸಕೆರೆ,ಶ್ರೀಮತಿ ದಾಕ್ಷಾಯಿಣಿ ಪಿ.ಸಿ, ಕೃಷ್ಣ ಪದಕಿ, ಕೃಷ್ಣಮೂರ್ತಿ ಕುಲಕರ್ಣಿ, ನಾಗವೇಣಿ ಹೆಗಡೆ ಹೆಗ್ಗರ್ಸಿಮನೆ, ಪ್ರೊ ಡಿ.ಎಮ್.ಭಟ್ಟ ಕುಳವೆ, ಕೆ.ಎಸ್.ಅಗ್ನಿಹೋತ್ರಿ, ಆನಂದಿ ಬಿ.ಜಿ. ಕವನ ವಾಚನ ಮಾಡಿದರು. ನಂತರ ಶ್ರೀ ಗಳು ಅವರಿಗೆಲ್ಲ ಪುಸ್ತಕಗಳ ಕಾಣಿಕೆ ನೀಡಿ ಗೌರವಿದರು. ದಾಸೋಹದಿನ ನಿಮಿತ್ತ ಬಂದ ಗಣ್ಯ ಮಾನ್ಯರಿಗೆ ಹಾಗೂ ಕವಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ರಥಕ್ಕೆ ಚಾಲನೆ- ಶ್ರೀ ಸಿದ್ದಗಂಗಾ ಶಿವಕುಮಾರ ಸ್ವಾಮಿ ಸೇವಾ ಸಮಿತಿ ಯವರು ದೇಹದಾನ, ರಕ್ತ,ಅಂಗಾAಗ ದಾನ ಕುರಿತಾದ ಜಾಗೃತಿ ಮೂಡಿಸುವ ಫಲಕಗಳಿಂದ ಅಲಂಕರಿಸಿದ ನಗರ ಸಾರಿಗೆ ಬಸ್ ಗೆ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಠದ ಮುಖ್ಯದ್ವಾರದ ಬಳಿ ಚಾಲನೆ ನೀಡಿದರು, ಶಿರಸಿ ಬಸ್ ಘಟಕ ವ್ಯವಸ್ಥಾಪಕರು ಸೇರಿದಂತೆ ಗಣ್ಯ ಮಾನ್ಯರು ಪಾಲ್ಗೊಂಡಿದ್ದರು

error: