March 29, 2024

Bhavana Tv

Its Your Channel

ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಕವಿಗೋಷ್ಠಿ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ಇಂದಿನ ತಲೆಮಾರಿನ ಮಕ್ಕಳಿಗೆ ಸಾಹಿತ್ಯಾಸಕ್ತಿ ಕುರಿತು ಯೋಚನೆಯೇ ಇಲ್ಲ. ಇದಕ್ಕೆ ಪಾಲಕರೇ ಕಾರಣ. ಕೇವಲ ಪಠ್ಯವನ್ನೇ ಓದಿ ಎಂದು ಮಕ್ಕಳ ಮೇಲೆ ಒತ್ತಡ ಹೇರುತ್ತಿರುತ್ತಾರೆ. ಮಕ್ಕಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಹಿತ್ಯ, ಕಲೆ, ಸಂಸ್ಕೃತಿ, ಚಿಂತನೆಗಳ ಬಗೆಗಿನ ಆಸಕ್ತಿ ಮೂಡಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಎನ್.ವಾಸರೆ ಹೇಳಿದರು.
ಅವರು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಶ್ರೀಮದ್ ಗಂಗಾಧರೇAದ್ರ ಸರಸ್ವತೀ ಸಭಾಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಯಲ್ಲಾಪುರ ಹಾಗೂ ವಿಶ್ವದರ್ಶನ ಕನ್ನಡ ಸಂಘದ ಆಶ್ರಯದಲ್ಲಿ ನಡೆದ `ಚಿಂತನಗೋಷ್ಟಿ ಮತ್ತು ಕವಿಗೋಷ್ಟಿ’ ಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಉತ್ತಮ ಸಂಸ್ಕಾರಯುತ ಶಿಕ್ಷಣ ಅತ್ಯಗತ್ಯ. ಶಿಕ್ಷಣವೊಂದೇ ವ್ಯಕ್ತಿತ್ವವನ್ನು ರೂಪಿಸಲು ಸಾಧ್ಯವಾಗದು. ಉತ್ತಮ ಬದುಕಿಗೆ ಸಂಸ್ಕಾರ ಬೇಕು. ಸಾಹಿತ್ಯ, ಕಲೆ, ಸಂಸ್ಕೃತಿಯ ಅಭಿರುಚಿಯುಳ್ಳ ಶಿಕ್ಷಕರಿರುವ ಕೆಲ ಶಾಲೆಗಳಲ್ಲಿ ಮಾತ್ರ ಉತ್ತಮ ವಿದ್ಯಾರ್ಥಿಗಳು ರೂಪುಗೊಳ್ಳಬಹುದು. ಹೆಚ್ಚು ಹೆಚ್ಚು ಅಧ್ಯಯನ ಮಾಡಿದಾಗ ಮಾತ್ರ ಪ್ರಶ್ನಿಸುವ ಆತ್ಮಸ್ಥೈರ್ಯ ಮೂಡುತ್ತದೆ ಎಂದ ಅವರು. ಮನುಷ್ಯ ಎಂಬ ಪದಕ್ಕೆ ವಿಶಾಲ ಅರ್ಥವಿದೆ. ಸಮಾಜವನ್ನು ಧರ್ಮ, ಜಾತಿ, ಮತ, ಪಂಥಗಳ ಹೆಸರಿನಲ್ಲಿ ಒಡೆಯುವ ಕಾರ್ಯ ನಡೆಯುತ್ತಿದೆ. ಸದೃಢ ಸಮಾಜ ನಿರ್ಮಾಣಕ್ಕೆ ಒಳ್ಳೆಯದನ್ನೇ ಆಯ್ಕೆ ಮಾಡಿಕೊಳ್ಳಿ ಎಂದರು.
ಶಿಕ್ಷಣ ತಜ್ಞ, ಮಾರ್ಗದರ್ಶಕ ಕಾರವಾರದ ಜಿ.ಕೆ.ವೆಂಕಟೆಶಮೂರ್ತಿ ವ್ಯಕ್ತಿತ್ವ ವಿಕಸನ ಮತ್ತು ಸುಂದರವಾದ ಕೈ ಬರಹದ ಕುರಿತು ಮಾತನಾಡಿ, ಸುಂದರವಾದ ಲಿಪಿ ಕನ್ನಡವೆಂಬುದು ವಿದೇಶಗಳಲ್ಲಿಯೂ ದೃಢಪಟ್ಟಿದೆ, ಕನ್ನಡಕ್ಕೆ ತೆಲುಗು ಭಾಷೆ ಹತ್ತಿರವಾಗಿದೆ. ದುಂಡನೆಯ ಅಕ್ಷರಗಳು ಕನ್ನಡದಲ್ಲಿದೆ. ಅವು ಹೇಗೆ ಎಂಬ ಕುರಿತು ಸಂಶೋಧನೆಯಾಗಿದೆ. ಹಿಂದೆ ತಾಳೇಗರಿಯಲ್ಲಿ ಬರೆಯಲಾಗುತ್ತಿತ್ತು. ಸುಂದರವಾದ ಅಕ್ಷರ ಬರೆಯಲು ಕೈಯೊಂದೇ ಕೆಲಸ ಮಾಡಿದರೆ ಆಗದು. ನಿಮ್ಮ ಮನಸ್ಸಿನ ಏಕಾಗ್ರತೆಯೂ ಮುಖ್ಯ. ಹಿಂದಿನ ಕಾಲದಲ್ಲಿ ಮಕ್ಕಳಿಗೆ ಮನೆಗೆಲಸ ನೀಡಲಾಗುತ್ತಿತ್ತು. ಇದರಿಂದ ಬದುಕಿನ ಸಂಸ್ಕಾರ ಲಭಿಸುತ್ತಿತ್ತು. ಇಂದು ಕೇವಲ ಅಂಕ, ಪರೀಕ್ಷೆಗಳಿಗಷ್ಟೇ ಶಿಕ್ಷಣ ಸೀಮಿತವಾಗಿದೆ ಎಂದರು.
ಅಧ್ಯಕ್ಷತೆವಹಿಸಿದ್ದ ಅ.ಭಾ.ಸಾ.ಪ. ಉಪಾಧ್ಯಕ್ಷ ಜಿ.ಎಸ್.ಗಾಂವ್ಕರ ಮಾತನಾಡಿ, ಸಂಕುಚಿತವಾದ ಕುಟುಂಬ ವ್ಯವಸ್ಥೆ ಬೆಳೆಯುತ್ತಿದೆ. ನಮ್ಮ ಮೌಲ್ಯಯುತ ಸಂಸ್ಕಾರ, ಸಂಸ್ಕೃತಿಗಳು ಛಿದ್ರಗೊಳ್ಳುತ್ತಿದೆ. ಆ ನಿಟ್ಟಿನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಭಾರತದ ಎಲ್ಲ ಭಾಷೆಗಳಿಗೂ ಮಹತ್ವ ನೀಡಿ, ಈ ನೆಲದ ಸಂಸ್ಕಾರ, ಸಂಸ್ಕೃತಿ ಉಳಿಸಲು ಮುಂದಾಗಿದೆ. ಮಕ್ಕಳಿಗೆ ಸಾಹಿತ್ಯಾಭಿರುಚಿ ಮೂಡಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಈ ದೇಶದಲ್ಲಿ ಸಾವಿರಾರು ವರ್ಷ ವಿದೇಶಿಗರು ಬಂದರೂ ನಮ್ಮ ಸಂಸ್ಕೃತಿಗೆ ಧಕ್ಕೆಯಾಗಲಿಲ್ಲ ಎಂದರು.
ಅ.ಭಾ.ಸಾ.ಪ.ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಗುರುರಾಜ ಘಂಟಿಹೊಳಿ, ಹಿರಿಯ ಕವಿ ವನರಾಗ ಶರ್ಮ ಮತ್ತಿತರರು ಉಪಸ್ಥಿತರಿದ್ದರು.
ಸಿಂಚನಾ ಭಟ್ಟ, ಸೌದರ್ಯ ಭಟ್ಟ, ದಿಶಾ ಹೆಗಡೆ ಪ್ರಾರ್ಥಿಸಿದರು. ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿ ಪ್ರೇಮಾ ಗಾಂವ್ಕರ ನಿರ್ವಹಿಸಿದರು, ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ.ಡಿ.ಕೆ.ಗಾಂವ್ಕರ ವಂದಿಸಿದರು.

error: