
ಶಿರಸಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಸೋಂದಾ ಶ್ರೀ ಸ್ವರ್ಣವಲ್ಲಿ ಮಹಾಸಂಸ್ಥಾನಕ್ಕೆ ಭೇಟಿ ನೀಡಿ ಶ್ರಿ? ಗಂಗಾಧರೇAದ್ರ ಸರಸ್ವತೀ ಮಹಾಸ್ವಾಮಿಗಳ ಆಶೀರ್ವಾದ ಪಡೆದರು.




ಸ್ವರ್ಣವಲ್ಲಿ ಶ್ರೀಗಳು ಡಾ.ಅಂಜಲಿ ಅವರಿಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಶ್ರೀ ಸ್ವರ್ಣವಲ್ಲಿ ಮಠದ ಅಧ್ಯಕ್ಷರಾದ ವಿ.ಎನ್.ಹೆಗಡೆ ಬೊಮ್ಮನಳ್ಳಿ, ಕೆಪಿಸಿಸಿ ವಕ್ತಾರ ದೀಪಕ್ ದೊಡ್ಡುರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಗದೀಶ ಗೌಡ, ಪ್ರಮುಖರಾದ ರಮೇಶ ದುಬಾಶಿ, ಶ್ರೀಪಾದ ಹೆಗಡೆ ಕಡವೆ ಹಾಗೂ ಪ್ರಮುಖರು ಇದ್ದರು.

ಬಳಿಕ ಸೋಂದಾದ 1008 ಭಗವಾನ್ ಶ್ರೀನೇಮಿನಾಥ ಸ್ವಾಮಿ ಹಾಗೂ ಶ್ರೀ ಆಮ್ರ ಕೂಷ್ಮಾಂಡಿನಿ ಅಮ್ಮನವರ ಬಸದಿಗೆ ಭೇಟಿ ನೀಡಿ ದರ್ಶನ ಪಡೆದ ಅವರು, ಹೊರಡುವ ವೇಳೆ ಆಕಸ್ಮಿಕವಾಗಿ ಎದುರಾದ ಶ್ರೀ 108ನೇ ಅಮೋಘಕೀರ್ತಿ ಮಹಾರಾಜರು ಹಾಗೂ ಶ್ರೀ 108ನೇ ಅಮೋಲ್ ಕೀರ್ತಿ ಮಹಾರಾಜರ ಆಶೀರ್ವಾದ ಪಡೆದರು. ಈ ವೇಳೆ ಮಹಾರಾಜರು ಚುನಾವಣೆಯಲ್ಲಿ ಜಯಶಾಲಿಯಾಗಲಿ ಎಂದು ಶುಭ ಹಾರೈಸಿರುವುದು ನನ್ನ ಜೀವನದ ಅಮೋಘ ಕ್ಷಣ ಎಂದು ಭಾವಿಸಿದ್ದೇನೆ ಎಂದು ಡಾ.ಅಂಜಲಿ ಅಭಿಪ್ರಾಯಿಸಿದರು.

ಸೋಂದಾದ ಸ್ವಾದಿ ಜೈನ ಮಠದ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿಯವರನ್ನು ಕೂಡ ಭೇಟಿಯಾದ ಅವರು, ಶ್ರೀಗಳಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ‘ಕುರುಕ್ಷೇತ್ರ ಯುದ್ಧದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಯುದ್ಧಕ್ಕೂ ಮೊದಲೇ ಜಯ ನಿನದೇ ಎನ್ನುತ್ತಾನೆ. ಅದು ಹೇಗೆಂದು ಅರ್ಜುನ ಕೇಳಿದಾಗ, ಯುದ್ಧಾರಂಭದಲ್ಲೇ ಈರ್ವರು ಮುನಿಗಳು ಎದುರಾಗಿದ್ದಾರೆ. ಅದೇ ನಿನ್ನ ಜಯದ ಸಂಕೇತ. ಅಂತೆಯೇ ತಮಗೂ ಜೈನ ಮುನಿಗಳಿಬ್ಬರು ಎದುರಾಗಿದ್ದಾರೆ. ಶುಭವಾಗಲಿದೆ’ ಎಂದು ಶ್ರೀ ಭಟ್ಟಾಕಲಂಕರು ನುಡಿದರು. ‘ನನ್ನ ಚುನಾವಣಾ ಪ್ರಚಾರ ಕಾರ್ಯಕ್ಕೆ ಸ್ವಾಮೀಜಿಗಳೆಲ್ಲರ ಆಶೀರ್ವಾದ ಇನ್ನಷ್ಟು ಹುರುಪು ನೀಡಿದಂತಾಗಿದೆ’ ಎಂದು ಡಾ.ನಿಂಬಾಳ್ಕರ್ ಹೇಳಿದರು.

ಸೋದೆ ಶ್ರೀ ವಾದಿರಾಜ ಮಠಕ್ಕೆ ಭೇಟಿ ನೀಡಿ, ಭಾವಿಸಮೀರ ಶ್ರೀ ವಾದಿರಾಜ ಗುರುಸಾರ್ವಭೌಮರ ಬೃಂದಾವನ, ಶ್ರೀರಮಾ ತ್ರಿವಿಕ್ರಮ ದೇವರು ಹಾಗೂ ಭೂತರಾಜನ ದರ್ಶನ ಪಡೆದ ಡಾ.ಅಂಜಲಿ, ಪುಷ್ಕರಣಿ ಸೇರಿದಂತೆ ಮಠದ ಸುತ್ತೆಲ್ಲ ಸುತ್ತಾಡಿ ಮಾಹಿತಿ ಪಡೆದರು.
More Stories
ಪ್ರಕೃತಿ ವಿಸ್ಮಯ : ಅಪರೂಪದ ಅವಳಿ ಬೆಕ್ಕಿನ ಮರಿಗಳು.
ಮೇಸ್ತಾ ಪ್ರಕರಣದಲ್ಲಿ ಕಾಗೇರಿಯಿಂದ ಕೀಳುಮಟ್ಟದ ಹೇಳಿಕೆ ನಿರೀಕ್ಷಿಸಿರಲಿಲ್ಲ: ದೇಶಪಾಂಡೆ
ಶೂನ್ಯ ಸಾಧನೆ ಮುಚ್ಚಿಡಲು ಬಿಜೆಪಿಯಿಂದ ಮತ್ತೆ ಮೇಸ್ತಾ ಪ್ರಕರಣ ಮುನ್ನೆಲೆಗೆ: ಭೀಮಣ್ಣ ನಾಯ್ಕ