ಕುಮಟಾ: ವಾರಿಯರ್ಸ್ಗಳ ಪರಿಶ್ರಮದಿಂದ ಕೊರೊನಾ ಸೋಂಕು ನಿಯಂತ್ರಿಸಲು ಸಾಧ್ಯವಾಗಿದೆ ಎಂದು ಆಳ್ವಾ ಫೌಂಡೇಶನ್ ಮುಖ್ಯಸ್ಥ ನಿವೇದಿತ್ ಆಳ್ವಾ ಹೇಳಿದರು.
ಅವರು ಶುಕ್ರವಾರ ಕುಮಟಾ ಪಟ್ಟಣದ ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಅಪೌಷ್ಠಿಕ ಮಕ್ಕಳಿಗೆ ಪೌಷ್ಠಿಕ ಆಹಾರದ ಕಿಟ್ ಮತ್ತು ಆಶಾ ಕಾರ್ಯಕರ್ತೆಯರಿಗೆ ಆರೋಗ್ಯದ ಕಿಟ್‌ಗಳನ್ನು ವಿತರಿಸಿ, ಮಾತನಾಡಿದರು.
ವೈದ್ಯರು, ಆಶಾ ಕಾರ್ಯಕರ್ತೆಯರ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು, ತಮ್ಮ ಆರೋಗ್ಯ ಕಾಪಾಡಿಕೊಂಡು, ದೈನಂದಿನ ಕಾರ್ಯದ ಜತೆಗೆ ತಮ್ಮ ವ್ಯಾಪ್ತಿಗಳ ಪ್ರತಿ ಮನೆಗಳಿಗೂ ಭೇಟಿ ನೀಡಿ, ಜನರಲ್ಲಿ ಆರೋಗ್ಯ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಲಾಕ್‌ಡೌನ್ ಸಮಯದಲ್ಲಿಯೂ ಎಲ್ಲರೂ ಮನೆಯಲ್ಲಿ ಇರುವಾಗ ಕರ್ತವ್ಯವನ್ನು ಅರಿತು ಕೊರೊನಾದ ಕುರಿತು ಜಾಗೃತಿ ಮೂಡಿಸುವ ಕೆಲಸ ಆಶಾ ಕಾರ್ಯಕರ್ತೆಯರು ಮಾಡಿದ್ದಾರೆ. ಅವರ ಕೆಲಸವನ್ನು ಗುರುತಿಸಿ, ಆಳ್ವಾ ಫೌಂಡೇಶನ್‌ನಿAದ ಅಗತ್ಯ ಆರೋಗ್ಯದ ಕಿಟ್‌ಗಳನ್ನು ವಿತರಿಸಲಾಗಿದೆ ಎಂದರು.
ಕಾಂಗ್ರೆಸ್ ಕಿಸಾನ್ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, ಮಾರ್ಗರೇಟ್ ಆಳ್ವಾ ನಮ್ಮ ಜಿಲ್ಲೆಯ ಸಂಸದರಾಗಿ ಆಯ್ಕೆಯಾಗಿ, ಸಂಸದರಾದವರು ಯಾವ ರೀತಿ ಅಭಿವೃದ್ಧಿಯ ಕೆಲಸ ಮಾಡಬೇಕೆಂಬುದನ್ನು ತೋರಿಸಿದ ರಾಷ್ಟ್ರಮಟ್ಟದ ಮಹಾನ್ ನಾಯಕಿ. ಜಿಲ್ಲೆಯ ಅಭಿವೃದ್ಧಿ ಸಾವಿರಾರು ಕೋಟಿ ರೂ.ಗಳನ್ನು ಅನುದಾನ ನೀಡಿ, ಜಿಲ್ಲೆಯ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅವರ ಪುತ್ರರಾದ ನಿವೇದಿತ್ ಅಳ್ವಾ ಜಿಲ್ಲೆಯ ಆಶಾ, ಅಂಗನವಾಡಿ ಕಾರ್ಯಕರ್ತೆಯರ ಸೇವೆಯನ್ನು ಗುರುತಿಸಿ, ಅವರಿಗೆ ತಮ್ಮ ಕೈಲಾದ ಸಹಾಯಹಸ್ತ ಚಾಚಲು ಮುಂದಾಗಿ ಆರೋಗ್ಯ ಕಿಟ್‌ಗಳನ್ನು ಜೊತೆಗೆ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಪೌಷ್ಠಿಕ ಆಹಾರದ ಕಿಟ್‌ಗಳನ್ನು ನೀಡುತ್ತಿದ್ದಾರೆ. ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಅಭಿನಂದಿಸುತ್ತೇನೆ ಎಂದರು.
ತಾಲೂಕಾ ಆರೋಗ್ಯಾಧಿಕಾರಿ ಡಾ.ಆಜ್ಞಾ ನಾಯಕ ಮಾತನಾಡಿ, ಆಶಾ ಕಾರ್ಯಕರ್ತೆಯರ ಕೆಲಸವನ್ನು ಗುರುತಿಸಿ, ಅವರ ಕಾರ್ಯಕ್ಕೆ ಸ್ಪೂರ್ತಿ ತುಂಬಲು ಆಳ್ವಾ ಫೌಂಡೇಶನ್ ಆರೋಗ್ಯದ ಕಿಟ್‌ಗಳನ್ನು ನೀಡುತ್ತಿದೆ. ಕುಮಟಾದಲ್ಲಿ ೧ ಮತ್ತು ೨ ನೆಯ ಅಲೆಗಳು ಸೇರಿ ಒಟ್ಟೂ ೫ ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದೆ. ಆದರೆ ಸಾವಿರ ಪ್ರಮಾಣ ತೀರಾ ಕಡಿಮೆಯಿದೆ. ಸೋಂಕು ಕಡಿಮೆಯಾಗುತ್ತಿದೆ ಎಂದು ಮೈ ಮರೆಯಬಾರದು. ಪ್ರತಿಯೊಬ್ಬರೂ ಸರ್ಕಾರದ ಕೊವಿಡ್ ನಿಯಮಗಳನ್ನು ಪಾಲಿಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಇಲಾಖೆಯ ನಾಗರತ್ನಾ ನಾಯಕ ಮಾತನಾಡಿ, ಮೂರನೆ ಅಲೆ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ಮಕ್ಕಳ ಮೇಲೆ ಪರಿಣಾಮ ಬೀರುವ ಅಲೆಯನ್ನು ಸಮರ್ಥವಾಗಿ ಎದುರಿಸಲು ಇಲಾಖೆಯಿಂದ ಸಿದ್ಧತೆ ಕೈಗೊಳ್ಳಲಾಗಿದೆ. ೨ ನೆಯ ಅಲೆಯಲ್ಲಿ ೧೮ ವರ್ಷದೊಳಗಿನ ೫೦೦ ಕ್ಕೂ ಅಧಿಕ ಮಕ್ಕಳಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಎಲ್ಲರೂ ಗುಣಮುಖರಾಗಿದ್ದು, ತಾಲೂಕಿನಲ್ಲಿ ೧೦ ಸಾವಿರ ಮಕ್ಕಳಿದ್ದು, ೫೪೧ ಸಾಧಾರಣ ಪೌಷ್ಠಿಕ ಮಕ್ಕಳಿದ್ದಾರೆ. ಅಂತವರಿಗೆ ಮೂರನೆಯ ಅಲೆ ಪರಿಣಾಮ ಬೀರುತ್ತದೆ ಎಂದು ಮುಂಜಾಗ್ರತವಾಗಿ ಜಿಲ್ಲಾಡಳಿತ ಹಾಗೂ ಇಲಾಖೆಯಿಂದ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು.
ತಾಲೂಕಿನ ಒಟ್ಟೂ ೧೫೩ ಆಶಾಕಾರ್ಯಕರ್ತೆಯರಿಗೆ ಆರೋಗ್ಯದ ಕಿಟ್‌ಗಳನ್ನು, ೫೫ ಅಪೌಷ್ಠಿಕ ಮಕ್ಕಳಿಗೆ ಪೌಷ್ಠಿಕ ಆಹಾರದ ಕಿಟ್‌ಗಳನ್ನು ಆಳ್ವಾ ಫೌಂಡೇಶನ್‌ನಿAದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ನಾಗೇಶ ನಾಯ್ಕ, ಮೋಂಟಿ ಫರ್ನಾಂಡಿಸ್, ಆರ್.ಎಚ್.ನಾಯ್ಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.