ಯಸ್ಮಾತ್ ಜೀವಿತುಮಿಚ್ಛಂತಿ ಪ್ರಾಣಿನಃ ಸರ್ವ ಏವಹಿ/
ತಸ್ಮಾತ್ ಆನಂದ ರೂಪೋಯಾತ್ಮ ವೇದಾಂತ ಭಾಸ್ಕರಃ//
ಎಲ್ಲ ಪ್ರಾಣಿಗಳು ಇನ್ನೂ ಬದುಕಿರಬೇಕೆಂದು ಇಚ್ಛಿಸುತ್ತಾರಲ್ಲವೇ? ಏಕೆಂದರೆ ಅವರ ಆತ್ಮನು ಆನಂದ ಸ್ವರೂಪಿಯಾಗಿರುತ್ತಾನೆ. ಇದು ಮೇಲಿನ ಶ್ಲೋಕದ ಅರ್ಥ. ಭೂಮಿ ತನ್ನ ಒಡಲಲ್ಲಿರುವ ಸರ್ವ ಜೀವಿಗಳಿಗೂ ಬದುಕಲು ಸಮಾನವಾದ ಅವಕಾಶವನ್ನು ಕೊಟ್ಟಿದೆ. ಪ್ರಕೃತಿ ಮಾತೆಯ ಒಡಲಲ್ಲಿ ಯಾರೂ ಮೇಲಲ್ಲ ಕೀಳಲ್ಲ. ಹಸಿದವರಿಗೆ ಅನ್ನ ಅದರದ್ದಕ್ಕೆ ಯಾವತ್ತಿಗೂ ಇದೆ. ಆದರೆ ಮನುಷ್ಯನೆಂಬ ಜೀವಿ ಉಳಿದೆಲ್ಲ ಜೀವಿಗಳ ಆಹಾರ ಕಸಿಯುತ್ತಲೋ ಬದುಕು ನಾಶ ಮಾಡುತ್ತಲೋ ತಾನೊಬ್ಬನೇ ಬದುಕಬೇಕೆಂದು ಯೋಚಿಸುತ್ತಾ ಭೂಮಿಯ ಸುಸ್ಥಿರ ಬದುಕನ್ನು ಬರ್ಬರಗೊಳಿಸುತ್ತಾ ಸಾಗುತ್ತಿರುವುದು, ಸ್ವಾರ್ಥಪರತೆಯ ಪರಮಾವಧಿಯಾಗುತ್ತಿರುವುದು ಶೋಚನೀಯ ಸಂಗತಿ. ತನ್ನ ಸುತ್ತಲಿನ ಜೀವ ಜಗತ್ತಿಗೂ ಬದುಕಲು ತನ್ನಷ್ಟೇ ಹಕ್ಕಿದೆ ಎಂದು ತಿಳಿಯದ ಮನುಷ್ಯನ ಸ್ವಾರ್ಥ ಅದನ್ನು ಬಲಿ ತೆಗೆದುಕೊಳ್ಳುತ್ತಾ ಸಾಗುತ್ತಿದೆ. ಅದರಲ್ಲೂ ಕೆಲವು ಮನುಷ್ಯರ ಸ್ವಾರ್ಥವಂತೂ ಹಲವು ಅವರಂಥದ್ದೇ ಮನುಷ್ಯರ ಬದುಕನ್ನೂ ಬರ್ಬರಗೊಳಿಸುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಅದೆಷ್ಟೋ ಸಂಗತಿಗಳು ನಿಜವಾಗಿಯೂ ನಮ್ಮನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿವೆಯೇ ಎಂದು ಪ್ರಶ್ನೆ ಮಾಡಿಕೊಂಡರೆ ಉತ್ತರ ಶೂನ್ಯ.
ಕರ್ನಾಟಕವನ್ನೇ ತೆಗೆದುಕೊಳ್ಳಿ. ನಮ್ಮ ಎಷ್ಟು ಯೋಜನೆಗಳು ಪ್ರಾಕೃತಿಕವಾಗಿ ವಿಧ್ವಂಸಕಾರಿಯಾದವುಗಳು ಎಂಬುದನ್ನು ಒಮ್ಮೆ ಯೋಚಿಸಿದರೆ ಕಣ್ಣ ಮುಂದೆ ದುರಂತದ ಎಳೆಯೇ ಬಿಚ್ಚಿಕೊಂಡೀತು. ಈ ಸಲವಂತೂ ಕರ್ನಾಟಕದಲ್ಲಿ ಮಳೆಗಾಲದಲ್ಲಿ ಭೂಕುಸಿತ, ಅತಿವೃಷ್ಟಿಯಂತಹ ಅನಾಹುತಗಳನ್ನು ನಾವು ಅನುಭವಿಸಿದ್ದೇವೆ. ಕಾರಣಗಳನ್ನು ನೋಡಿದರೆ ಹಲವಾರು ವಿಷಯಗಳು ಗೋಚರವಾಗುತ್ತವೆ. ಅಣೆಕಟ್ಟುಗಳ ನಿರ್ಮಾಣ, ರಸ್ತೆ ಕಾಮಗಾರಿ, ನದಿತಿರುವು ಯೋಜನೆಗಳು, ಖನಿಜೋತ್ಪನ್ನಗಳ ಹೆಸರಿನಲ್ಲಿ ಭೂಮಿಯನ್ನು ಬಗೆಯುತ್ತಿರುವುದು ಮುಂತಾದ ಹಲವು ಹತ್ತು ಯೋಜನೆಗಳ ಪರಿಣಾಮವನ್ನು ನಾವು ಅನುಭವಿಸುತ್ತಿದ್ದೇವೆ. ಅದರಲ್ಲೂ ಮಲೆನಾಡು ಮತ್ತು ಕರಾವಳಿಯ ಪರಿಸರವನ್ನಂತೂ ಇನ್ನಿಲ್ಲದಂತೆ ಶೋಷಿಸಲಾಗುತ್ತಿದೆ. ಇದರ ಜೊತೆಗೆ ತುಂಬಾ ಆತಂಕಕಾರಿಯಾದ ವಿಷಯವೆಂದರೆ ಶರಾವತಿ ನದಿತಿರುವು ಯೋಜನೆಯೊಂದು ಸದ್ದಿಲ್ಲದಂತೆ ಸಿದ್ಧಗೊಳ್ಳಲು ತಯಾರಿಗಾಗುತ್ತಿರುವುದು. ಬೆಂಗಳೂರಿಗೆ ನೀರುಣ್ಣಿಸುವ ಹೆಸರಿನಲ್ಲಿ ಶರಾವತಿ ನದಿಯ ನೀರನ್ನು ಬೆಂಗಳೂರಿಗೆ ತಿರುಗಿಸುವ ಉಪಾಯದ ಅಂದಾಜನ್ನ ಸೂಚಿಸಲು ಅದಾಗಲೇ ತಂಡವೊAದು ಕೆಲಸ ಮಾಡುತ್ತಿದೆ ಎಂಬುದು ಅನೇಕ ಪರಿಸರವಾದಿಗಳ ಆತಂಕಕ್ಕೆ ಕಾರಣವಾಗುತ್ತಿದೆ.
ಬಹುಶ: ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರಹಾರಕ್ಕೆ ಒಳಗಾದ ನದಿ ಯಾವುದಾದರೂ ಇದ್ದರೆ ಅದು ಶರಾವತಿ. ಮಲೆನಾಡಿನ ಅಂಬು ತೀರ್ಥದಲ್ಲಿ ಹುಟ್ಟಿ ಪಶ್ಚಿಮಾಭಿಮುಖವಾಗಿ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರವನ್ನು ಸೇರುವ ಈ ನದಿಗೆ ಎಷ್ಟೊಂದು ಸಂಕಷ್ಟ! ತಾನು ಹರಿಯುವ ಜಾಗವನ್ನೆಲ್ಲಾ ಸಮೃದ್ಧಗೊಳಿಸಿ ಪಶ್ಚಿಮ ಘಟ್ಟದ ಹಸಿರನ್ನೂ ಸೌಂದರ್ಯವನ್ನೂ ಹೆಚ್ಚಿಸುತ್ತಾ, ಬಳುಕುತ್ತಾ, ಧುಮಕುತ್ತಾ ಸಾಗುವ ಶರಾವತಿಯನ್ನು ವಿದ್ಯುತ್ ಉತ್ಪಾದನೆಯ ಹೆಸರಿನಲ್ಲಿ ಕತ್ತರಿಸಿ ಲಿಂಗನಮಕ್ಕಿ, ಗೇರುಸೊಪ್ಪಾದ ಡ್ಯಾಮ್ ಗಳಲ್ಲಿ ಹಿಡಿದಿಡಲಾಗಿದೆ. ಕೈಗಾ ಅಣು ವಿದ್ಯುತ್ ಸ್ಥಾವರ, ಶರಾವತಿ ಟೇಲರೇಸ್, ಪ್ರವಾಸೋದ್ಯಮದ ಹೆಸರಿನಲ್ಲಿ ಉತ್ತರ ಕನ್ನಡದ ಜನತೆ ಹಾಗೂ ಅಲ್ಲಿಯ ಸಕಲ ಜೀವಿಗಳೂ ತಮ್ಮ ಸಂಕಷ್ಟದ ದಿನಗಳನ್ನು ಕಾಣುತ್ತಿವೆ.
ಬೆಂಗಳೂರಿಗೆ ನೀರುಣಿಸಲು ಲಿಂಗನಮಕ್ಕಿಯಿAದ ನೀರನ್ನು ಸುಮಾರು ೩೫೦- ೩೬೦ ಕಿಲೋ ಮೀಟರ್ ಆಚೆಯಿಂದ ತರುವುದು ಸದ್ಯ ಸರ್ಕಾರದ ಮುಂದಿರುವ ಯೋಜನೆ. ಒಮ್ಮೆ ಯೋಚಿಸೋಣ. ಒಂದು ವೇಳೆ ಈ ಯೋಜನೆ ಕಾರ್ಯಗತವಾದರೆ ಯಾವೆಲ್ಲ ತೊಂದರೆಗಳು ಎದುರಾಗಬಹುದು ಎಂದು. ಹರಿಯುವ ದಾರಿಗುಂಟ ಎಷ್ಟೊಂದು ಅರಣ್ಯದ ಜೀವಿಗಳಿಗೆ, ಅಂದರೆ ಮೊಲ ಜಿಂಕೆಯAತಹ ಪ್ರಾಣಿಗಳಿಂದ ಹಿಡಿದು ಸಮುದ್ರ ಸೇರುವಲ್ಲಿನ ಮೀನುಗಳ ಬದುಕಿನವರೆಗೆ ಜೀವದಾಯಿಯಾದ ನದಿಯನ್ನು ಬೆಂಗಳೂರಿಗೆ ತಿರುಗಿಸಿದರೆ ಅವುಗಳ ಬದುಕಿಗೆ ನೀವೆಲ್ಲಿ ಉತ್ತರ ಹೇಳಬಲ್ಲಿರಿ? ಅಳಿವೆ ಬಾಗಿಲಿಗೆ ಬಂದು ಮೊಟ್ಟೆ ಇಡುವ ಮೀನುಗಳ ಲೆಕ್ಕಾಚಾರ ನಿಮಗೆ ಗೊತ್ತೇ? ಈಗಾಗಲೇ ವಿನಾಶದ ಅಂಚಿನಲ್ಲಿರುವ ಸಿಗಡಿಗಳ ಜೀವನದ ಬಗ್ಗೆ ನಿಮ್ಮ ಅಭಿಪ್ರಾಯಗಳೇನು? ಅದಾಗಲೇ ಶರಾವತಿಯ ಯೋಜನೆಯಿಂದ ಐದಾರು ಕಿಲೋಮೀಟರ್ ಸಮುದ್ರದಲ್ಲಿ ಕ್ರಮಿಸಿದರು ಮೀನುಗಾರರಿಗೆ ಮೀನು ಸಿಗುತ್ತಿಲ್ಲ, ಅವರ ಸುಸ್ಥಿರ ಬದುಕಿಗೆ ಉತ್ತರ ಹೇಳಲು ಸಾಧ್ಯವಿದೆಯೇ? ಹೊನ್ನಾವರದ ಕೃಷಿ ಕುಟುಂಬಗಳಿಗೆ ನಿಮ್ಮ ಉತ್ತರವೇನು? ಆ ನದಿಯ ನೀರನ್ನು ಕುಡಿಯಲು, ಕೃಷಿ ಕೆಲಸಗಳಿಗೆ ನಂಬಿಕೊAಡಿದ್ದ ಉತ್ತರ ಕನ್ನಡದ ಜನತೆಯ ಅಭಿಪ್ರಾಯದ ಬಗ್ಗೆ ನಿಮ್ಮ ಅನಿಸಿಕೆಗಳೇನು? ಅದಕ್ಕೆ ತಗಲುವ ಅಂದಾಜು ವೆಚ್ಚವೇನು? ಪ್ರಾಕೃತಿಕವಾಗಿಯೂ ಆರ್ಥಿಕವಾಗಿಯೂ ಇದು ಹೆಚ್ಚು ಹೊರೆಯಲ್ಲವೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳದ ಹೊರತು ಈ ಯೋಜನೆಯನ್ನು ಕೈಗೆತ್ತಿಕೊಂಡಿರುವುದು ದುರಂತದ ಬೀಜವನ್ನು ಬಿತ್ತುತ್ತಿರುವಂತೆಯೇ ಸೈ.
ಇದರ ಬದಲಾಗಿ ಬೆಂಗಳೂರಿಗರು ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಅನೇಕ ಇವೆ. ಬೆಂಗಳೂರಿನ ಜನತೆಗೆ 'ಪ್ರಾಕೃತಿಕ ಪ್ರಜ್ಞೆ' ಏನಾದರೂ ಇದೆಯೇ ಎಂಬುದೊAದು ಪ್ರಶ್ನೆ. ಯಾವುದನ್ನೂ ಅಂದರೆ ತನ್ನ ಆಹಾರ ಪದಾರ್ಥವನ್ನು, ಹಾಲು ಮೊಸರಿನಂತಹ ದಿನ ಬಳಕೆ ವಸ್ತುಗಳನ್ನು, ಬಟ್ಟೆ ಬರೆಗಳನ್ನು, ಕೊನೆಗೆ ಕುಡಿಯುವ ನೀರನ್ನು- ತನಗೆ ತಾನೇ ಉತ್ಪಾದಿಸಲಾಗದ ಬೆಂಗಳೂರಿನ ಜನತೆ ಯಾರೆಲ್ಲರ ಬದುಕನ್ನು ದುರಂತವಾಗಿಸಿದೆ ಎಂಬ ಸಣ್ಣ ಯೋಚನೆಯನ್ನಾದರೂ ಮಾಡಬೇಕು. ಬೆಂಗಳೂರು ಪ್ರಾಕೃತಿಕ ಸಂಪನ್ಮೂಲಗಳ ಮಿತಬಳಕೆಯ ಬಗ್ಗೆ ಎಚ್ಚರ ವಹಿಸಬೇಕು. ಒಂದು ಬಕೆಟ್ ನೀರಿನಲ್ಲಿ ಮುಗಿಯಬೇಕಾದ ಕಾರ್ ವಾಷಿಂಗ್ ಗೆ ಬಳಕೆಯಾಗುವ ಅರ್ಧ ಟ್ಯಾಂಕ್ ನೀರು, ಎ.ಸಿ., ಫ್ಯಾನ್ ಅಷ್ಟೇ ಏಕೆ ಮರ ಗಿಡಗಳಿಗೂ ಸುತ್ತಿ ಮಜಾ ತೆಗೆದುಕೊಳ್ಳುವಾಗ ಬಳಕೆಯಾಗುವ ವಿದ್ಯುತ್ತು, ಸುಮ್ಮನೆ ಪೋಲಾಗುತ್ತಿರುವ ಬಾತ್ರೂಮಿನ ನಲ್ಲಿ, ಚಾಲೂ ಮಾಡಿ ಅರ್ಧ ಗಂಟೆ ನೀರು ಹರಿದರೂ ಬಂದಾಗದ ಪಂಪ್ಸೆಟ್ಟು, ವಾಲ್ವ್ ಸರಿ ಇಲ್ಲದೇ ಸುಮ್ಮನೆ ರಸ್ತೆ, ಚರಂಡಿಗಳಲ್ಲಿ ಹರಿದು ಹೋಗುತ್ತಿರುವ ಕಾವೇರಿ ಕುಡಿಯುವ ನೀರು, ಸಾರ್ವಜನಿಕ ಶೌಚಾಲಯಗಳಲ್ಲಿ ೨೪ ಗಂಟೆ ಹರಿಯುತ್ತಲೇ ಇರುವ ನಲ್ಲಿ ಸರಿ ಇಲ್ಲದ ನೀರು, ಯಾವುದ್ಯಾವುದೋ ಕಾರ್ಖಾನೆಯ ನೀರು, ಜೊತೆಗೆ ಬಳಸಿ ಬಿಟ್ಟು ವೃಷಭಾವತಿ ಸೇರುವ ವ್ಯರ್ಥ ಚರಂಡಿ ನೀರು- ಇವೆಲ್ಲದರ ಬಗ್ಗೆ ಪ್ರಜ್ಞಾಪೂರ್ವಕವಾಗಿ ಯೋಚಿಸದೇ ಕುಡಿಯುವ ನೀರಿನ ಹೆಸರಿನಲ್ಲಿ ಕಾವೇರಿ, ಮೇಕೆದಾಟು, ತಿಪ್ಪಗೊಂಡನಹಳ್ಳಿ, ಎತ್ತಿನಹೊಳೆ, ಶರಾವತಿ ಮುಂತಾದ ನದಿಗಳನ್ನೂ ಅದನ್ನು ನಂಬಿದವರ ಜೀವನವನ್ನೂ ಬರ್ಬರಗೊಳಿಸಿ ತಾವು ಬದುಕಲು ಯೋಚಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಅದಾಗಲೇ ಬೆಂಗಳೂರಿನ ನೀರು ನಿರ್ವಹಣೆಯ ಬಗ್ಗೆ ತಜ್ಞರ ಸಮಿತಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿಯಾಗಿದೆ. ಅವರ ಸಲಹೆಯಂತೆ ನಡೆದರೆ ಬೆಂಗಳೂರಿಗರಿಗೆ ನೀರಿನ ಕೊರತೆ ಆಗಲಾರದು. ಎಷ್ಟೋ ಕೆರೆಗಳನ್ನು ಹೊಂದಿರುವ ಬೆಂಗಳೂರಿಗೆ ಕಾಲುಭಾಗ ನೀರನ್ನು ಕೆರೆಗಳೇ ನಿರ್ವಹಿಸಬಲ್ಲವು. ಕೆರೆಗಳ ಸರಿಯಾದ ನಿರ್ವಹಣೆ ಆಗಬೇಕಷ್ಟೇ.
ಉತ್ತರ ಕನ್ನಡದ ಜನತೆ ಈಗಾಗಲೇ ಹಲವಾರು ಸಂಕಷ್ಟಗಳನ್ನು ಅನುಭವಿಸುತ್ತಿದೆ. ಕೃಷಿ ಕಾಯಕ ದುರ್ಬರವಾಗುತ್ತಿದೆ. ಭೂಕುಸಿತದ ಪರಿಣಾಮದಿಂದ ಭಯಗ್ರಸ್ಥ ವಾತಾವರಣ ನಿರ್ಮಾಣವಾಗಿದೆ. ಶರಾವತಿಯ ಯೋಜನೆಯಿಂದ ೭೦ಕ್ಕಿಂತಲೂ ಹೆಚ್ಚು ಕಿಲೋಮೀಟರ್ ಅರಣ್ಯ ಮುಳುಗಡೆಯಾಗಿ ನಾಶವಾಗಿದೆ. ಕರ್ನಾಟಕಕ್ಕೆ ವಿದ್ಯುತ್ ಕೊಟ್ಟ ಜಿಲ್ಲೆಯಲ್ಲಿ ಮನೆಯ ದೀಪ ಬೆಳಗುವವರಿಲ್ಲ. ಪ್ರವಾಸೋದ್ಯಮದ ಹೆಸರಿನಲ್ಲಿ ದೇಶದ ನಾನಾ ಭಾಗಗಳಿಂದ ಬರುವ ಜನರಿಂದ ಜಿಲ್ಲೆ ಕಸದ ರಾಶಿ ಆಗುತ್ತಿದೆ. ಕುಡಿತ, ಫೈರ್ ಕ್ಯಾಂಪ್, ಮೋಜು ಮಸ್ತಿಯ ಹೆಸರಿನಲ್ಲಿ ಶಾಂತ, ಸುಂದರ, ಸ್ವಚ್ಛ ಕಾಡುಗಳಲ್ಲಿ ಪ್ಲಾಸ್ಟಿಕ್ ಹಾಗೂ ಗಾಜಿನ ಬಾಟಲಿಗಳ ರಾಶಿಯೇ ಕಾಣಿಸುತ್ತಿದೆ. ಇಡೀ ಜೀವ ಪರಿಸರವೇ ವಿಧ್ವಂಸಕಾರೀ ಚಟುವಟಿಕೆಗಳಿಗೆ ಮೂಕ ಸಾಕ್ಷಿಯಾಗುತ್ತಿದೆ. ಸಮುದ್ರದಲ್ಲೂ, ದಂಡೆಯಲ್ಲೂ ಕಸದ ರಾಶಿಗಳು ತೇಲುತ್ತಿವೆ. ಕೊನೆಗೂ ನಾವು ಸಾಧಿಸಲು ಹೊರಟಿದ್ದಾದರೂ ಏನನ್ನು?
ಬೆಂಗಳೂರಿನ ನೀರಿನ ದಾಹ ಕರಾವಳಿಗರನ್ನೂ, ಮಲೆನಾಡಿಗರನ್ನೂ ಬಲಿ ತೆಗೆದುಕೊಳ್ಳುವಂತಾಗಬಾರದು. ಇರುವುದೊಂದೇ ಭೂಮಿ. ಉತ್ತರಕನ್ನಡದ ಮೇದಿನಿಯ ಮೂಕ ಮರ್ಮರ ನಮಗೆ ಕೇಳುವಂತಾಗಬೇಕು. ಪ್ರಾಕೃತಿಕವಾಗಿ ಹಾನಿಯಾಗುವ ಕೆಲಸ ಮಾಡುವುದಕ್ಕಿಂತ ಬೇರೆ ಪರ್ಯಾಯಗಳನ್ನು ಯೋಚಿಸುವುದು ಒಳಿತು. ಒಬ್ಬರ ಬದುಕು ಇನ್ನೊಬ್ಬರ ಬದುಕನ್ನು ಕಸಿಯುವಂತಾಗಬಾರದು. ಈ ನಿಟ್ಟಿನಲ್ಲಿ ಉತ್ತರ ಕನ್ನಡದ ಜನತೆ ರಾಜ್ಯಕ್ಕೆ ಮಹದುಪಕಾರ ಮಾಡಿದ್ದನ್ನು ಮರೆಯಬಾರದು. ಅವರ ಅಳಲನ್ನೂ ಅಭಿಪ್ರಾಯಗಳನ್ನೂ ಅರ್ಥಮಾಡಿಕೊಳ್ಳುವ ಕಿವಿಯ ಸೂಕ್ಷ್ಮ ನಮ್ಮದಾಗಬೇಕು.
ಕೊನೆಯಲ್ಲಿ ಹೇಳಬಹುದಾದ್ದೆಂದರೆ ಜೀವ ಪರಿಸರವನ್ನು ನಾಶ ಮಾಡಿಕೊಂಡರೆ ಅದು ಮನುಷ್ಯರ ಅಸ್ತಿತ್ವಕ್ಕೇ ಕುಂದು. ಈ ಭೂಮಿಯಲ್ಲಿ ಎಂಥೆAಥದ್ದೋ ಜೀವಿಗಳು ಹೇಳ ಹೆಸರಿಲ್ಲದಂತೆ ನಾಶವಾಗಿವೆ. ಒಂದು ದಿನ ಪ್ರಕೃತಿಯೇ ಮನುಷ್ಯನ ಅಟಾಟೋಪ ಸಹಿಸಲಾಗದೆ ಅವನ ಕುಲವನ್ನೇ ನಾಶ ಮಾಡುತ್ತೇನೆ ಎಂಬ ತೀರ್ಮಾನ ತೆಗೆದುಕೊಂಡರೆ ಬಹುಶಃ ಆಶ್ಚರ್ಯವಲ್ಲವೇನೋ. ಹಾಗಾಗುವುದಕ್ಕಿಂತ ಮುಂಚೆ ಇಡೀ ಇಕಾಲಜಿ ಸಿಸ್ಟಮ್ ಅನ್ನು ಅರ್ಥ ಮಾಡಿಕೊಂಡು ಇಂತಹ ಯೋಜನೆಗಳಿಂದ ಆದಷ್ಟು ದೂರ ಉಳಿದು ಆದಷ್ಟು ಪ್ರಕೃತಿಗೆ ಹತ್ತಿರವಾಗಿ ಬದುಕುವುದನ್ನು ಕಲಿಯುವುದು ಒಳಿತು. ಹಾಗೆ ಮಾಡಿದರೆ ಮಾತ್ರ ನಮಗೂ ಉಳಿಗಾಲ, ನಮ್ಮನ್ನು ನಂಬಿದವರಿಗೂ ಉಳಿಗಾಲ.
ಲೇಖಕರು : ಸಂಧ್ಯಾ ಹೆಗಡೆ, ದೊಡ್ಡಹೊಂಡ.
More Stories
ಸಾಹಿತಿ ಶಿಕ್ಷಕಿ ಜಯಶ್ರೀ ರಾಜು ರವರಿಗೆ ಉಮಾಶಂಕರ ಪ್ರತಿಷ್ಠಾನ ಪುಸ್ತಕ ಪ್ರಶಸ್ತಿ ಭಾಜನ
ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್:ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
ಭಾರತೀಯ ಜನತಾ ಪಾರ್ಟಿಯ ವೃತ್ತಿಪರರ ಪ್ರಕೋಷ್ಠದ ರಾಜ್ಯ ಸಹ-ಸಂಚಾಲಕರನ್ನಾಗಿ ಕೆ.ಆರ್. ವೆಂಕಟೇಶ್ಗೌಡ, ಬೆಂಗಳೂರು, ನೇಮಕ