November 21, 2024

Bhavana Tv

Its Your Channel

ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ

ಹೊನ್ನಾವರ: ಮೊಬೈಲ್ ತೀವ್ರ ಬಳಕೆಯು ಯುವಜನರ, ಮಕ್ಕಳ ಹಾದಿ ತಪ್ಪಿಸುತ್ತಿದೆ. ಇಂತಹ ಕಾಲದಲ್ಲಿ ಓದುಗರ ಸಮಾವೇಶವನ್ನು ಹಮ್ಮಿಕೊಂಡು ಪುಸ್ತಕ ಓದು ಬಗ್ಗೆ ಜಾಗೃತಿ ಮೂಡಿಸುವ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿರುವ ಕಾರ್ಯಕ್ಕೆ ಸಾಲ್ಕೋಡ ಗ್ರಾ.ಪಂ.ಅಧ್ಯಕ್ಷೆ ಯಮುನಾ ಕೃಷ್ಣಮೂರ್ತಿ ನಾಯ್ಕ ಪ್ರಶಂಸೆ ವ್ಯಕ್ತಪಡಿಸಿದರು.


ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ ಶಿರ್ಷಿಕೆ ಅಡಿಯಲ್ಲಿ ಉತ್ತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಡಿ ತಾಲೂಕ ಸಂಘಟನೆ ಜೊತೆಗೆ ಡಾ. ದಿನಕರ ದೇಸಾಯಿ ಗ್ರಾಮ ಪಂಚಾಯತ ಗ್ರಂಥಾಲಯ ಕೆರೆಕೋಣ ಮತ್ತು ಕುಮುದಾ ಅಭಿವೃದ್ಧಿ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಓದುಗರ ಸಮಾವೇಶ ಮತ್ತು ಸಾಧಕರಿಗೆ ಅಭಿನಂದಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕನ್ನಡ ನಾಡಭಾಷೆಯಾಗಿದ್ದು, ಈ ಭಾಷೆಯ ಬಗ್ಗೆ ಎಲ್ಲರಿಗೂ ಅಭಿಮಾನ ಇರಬೇಕು. ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಕಾರ್ಯಕ್ರಮ ಸಂಘಟನೆ ಮಾಡಿರುವುದು ಮೆಚ್ಚುವಂತಹುದಾಗಿದೆ ಎಂದರು.


ವಿಶೇಷ ಆಹ್ವಾನಿತರಾಗಿ ಆಗಮಿಸಿದ ನಿವೃತ್ತ ಉಪನ್ಯಾಸಕರಾದ ಹೊನ್ನಪ್ಪಯ್ಯ ಗುನಗಾ ಮಾತನಾಡಿ ಮಹಾನ್ ಸಾಧಕರೆಲ್ಲ ಬಡತನದಿಂದ ಓದಿ ಮೇಲೆ ಬಂದವರು, ಕನ್ನಡ ನಾಡು ನುಡಿಯ ಸೇವೆ ನಮ್ಮ ಪ್ರಥಮ ಆದ್ಯತೆ ಆಗಿರಬೇಕು. ಪುಸ್ತಕಗಳನ್ನು ಓದುವುದರಿಂದ ನಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳುವುದರ ಜೊತೆಗೆ ಅದರ ಸಾರವನ್ನು ಅನುಭವಿಸಬಹುದು ಎಂದರು.


ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಎಂ ಎಸ್ ಡಬ್ಲ್ಯೂ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದ ಸಂಧ್ಯಾ ಅಶೋಕ ನಾಯ್ಕ, ಶಾಲಾ ಕ್ರೀಡಾಕೂಟದ ಹೈಸ್ಕೂಲ್ ವಿಭಾಗದಲ್ಲಿ ಗುಂಡು ಎಸೆತಕ್ಕೆ ರಾಜ್ಯಮಟ್ಟಕ್ಕೆ ಆಯ್ಕೆಯಾದ ಅಭಯ್ ಭಾಸ್ಕರ ಭಂಡಾರಿ, ಪ್ರಾಥಮಿಕ ವಿಭಾಗದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಆದ ಅದಿತಿ ರಾಮ ಭಂಡಾರಿ ಇವರನ್ನು ಗೌರವಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೊನ್ನಾವರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಸ್.ಎಚ್. ಗೌಡ ಮಾತನಾಡಿ ನಿರಂತರ ಒಂದು ತಿಂಗಳ ಕಾಯ9ಕ್ರಮ ಕನ್ನಡ ಸೇವೆಯ ಕಾರ್ಯಕ್ರಮ ಇದಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ನಡೆಸುವ ಈ ರೀತಿಯ ಕಾರ್ಯಕ್ರಮಗಳು ನಿಜವಾದ ಕನ್ನಡಿಗರ ಹೃದಯ ಮುಟ್ಟುತ್ತದೆ. ಇದು ಕನ್ನಡದ ಅಭಿವೃದ್ಧಿಗೆ ಪೂರಕವಾಗಿದೆ. ಓದು ಜ್ಞಾನ ವೃದ್ಧಿಗೆ ಸಹಕಾರಿ ಆಗಿ ವ್ಯಕ್ತಿತ್ವ ವಿಕಸನ ಆಗುತ್ತದೆ. ಗ್ರಂಥಾಲಯ ಊರಿನ ಪ್ರತಿಯೊಬ್ಬರ ಬೌದ್ಧಿಕ ವಿಕಸನ ಹಾಗೂ ಸುಜ್ಞಾನ ಸಮಾಜ ನಿರ್ಮಾಣದ ಕೇಂದ್ರವಾಗಿದೆ, ಹಾಗಾಗಿ ಹಿರಿ-ಕಿರಿಯರೆಲ್ಲ ಯಾವುದೇ ಸಾಧನೆಗೆ ಅಗತ್ಯ ಪುಸ್ತಕ ಹೊಂದಿರುವ ಗ್ರಂಥಾಲಯದ ಪ್ರಯೋಜನ ಪಡೆಯಬೇಕು ಎಂದರು.


ಗ್ರಾ.ಪಂ. ಮಾಜಿ ಅಧ್ಯಕ್ಷ ಕೇಶವ ಶೆಟ್ಟಿ, ಕೆರೆಕೋಣ ಎಸ್.ಡಿ.ಎಂ.ಸಿ ಅಧ್ಯಕ್ಷ ರಾಮ ಭಂಡಾರಿ, ಯಕ್ಷಗಾನ ಕಲಾವಿದ ಗಣೇಶ ಭಂಡಾರಿ, ಕೆರೆಕೋಣ ಶಾಲೆಯ ಶಿಕ್ಷಕಿ ಲಲಿತಾ ಹೆಗಡೆ ಮಾತನಾಡಿದರು.


ವೇದಿಕೆಯಲ್ಲಿ ಡಾ. ದಿನಕರ ದೇಸಾಯಿ ಗ್ರಾಮ ಪಂಚಾಯತ ಗ್ರಂಥಾಲಯದ ಮೇಲ್ವಿಚಾರಕಿ ಜ್ಯೋತಿ ಶೆಟ್ಟಿ, ಸಾಹಿತಿ ಕನ್ನಡ ಪ್ರೇಮಿ ಮಾಸ್ತಿಗೌಡ, ಮೀನಾ ಗೌಡ, ಹೊನ್ನಾವರ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕರಾದ ರೂಪಾ ಅಗೇರ ಮತ್ತು ಸಮಾಜ ಸೇವಕಿ ಮಮತಾ ಹರಿಕಂತ್ರ, ಅಕ್ಷರ್ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮಂಜುನಾಥ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ಸಂಘಟಕ ಮಹೇಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವರದಿ ; ವಿಶ್ವನಾಥ ಸಾಲ್ಕೋಡ್ ಹೊನ್ನಾವರ

error: