December 21, 2024

Bhavana Tv

Its Your Channel

ವೈದ್ಯಕೀಯ ಸಿಬ್ಬಂಧಿಗಳ ರಕ್ಷಣೆಗೆಫೇಸ್ ಶೀಲ್ಡ್ ಭಟ್ಕಳದ “ಮೇಕರ್ಸ್ ಹಬ್’ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ

ಭಟ್ಕಳ: ಕೊರೋನಾ ಸೋಂಕು ಜಗತ್ತಿನ ಎಲ್ಲರಿಗೂ ಜೀವಭಯದಲ್ಲಿ ಬದುಕುವಂತೆ ಮಾಡಿದೆ. ಕೊರೋನಾ ಸೋಂಕಿತರ ರಕ್ಷಣೆಗಾಗಿ ತಮ್ಮ ಜೀವದ ಹಂಗು ತೊರೆದು ಸಾವಿರಾರು ಮಂದಿ ವೈದ್ಯರು ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಜನರ ಪ್ರಾಣವನ್ನು ರಕ್ಷಿಸುವ ವೈದ್ಯರ ಪ್ರಾಣ ಇಂದು ಆಪಾಯದಲ್ಲಿದೆ. ಎಷ್ಟೋ ಮಂದಿ ವೈದ್ಯರು ಕೂಡ ಈ ಸೋಂಕಿಗೆ ಬಲಿಯಾಗಿದ್ದಾರೆ.

ಭಾರತದಲ್ಲಿ ಅದರಲ್ಲೂ ನಮ್ಮ ಕರ್ನಾಟಕದಲ್ಲಿ ವೈದ್ಯರಿಗೆ ಸರಿಯಾದ ಸಾಧನಗಳು ಲಭ್ಯವಾಗದೆ ಕೊರೋನಾ ವಿರುದ್ಧದ ಹೋರಾಟದಲ್ಲಿ ಹಿನ್ನೆಡೆಯಾಗುತ್ತಿದೆ ಎಂಬ ಮಾಧ್ಯಮ ವರದಿಗಳು ನಾವು ಎಷ್ಟರ ಮಟ್ಟಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದೇವೆ ಎಂಬುದನ್ನು ಬೆಟ್ಟುಮಾಡಿ ತೋರಿಸಿದೆ. ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯಕೀಯ ಸಿಬ್ಬಂಧಿಗಳು ಸರಿಯಾದ ಮಾಸ್ಕ್ ದೊರಕದೆ ಸಮಸ್ಯೆಗಳಲ್ಲಿ ಸಿಲುಕಿಕೊಂಡಿದ್ದಾರೆ. ಆದರೂ ಕೆಲವೊಂದು ಸಂಘ ಸಂಸ್ಥೆಗಳು, ಮಹಿಳೆಯರು ತಮ್ಮ ಮನೆಯಲ್ಲಿ ಸಿದ್ದಗೊಳಿಸಿದ ಮಾಸ್ಕಗಳನ್ನು ವೈದ್ಯಕೀಯ ಸಿಬ್ಬಂಧಿಗಳಿಗೆ ವಿತರಿಸುತ್ತಿದ್ದಾರೆ. ಆದರೆ ಕೊರೋನಾ ಯುದ್ಧದಲ್ಲಿ ಕೇವಲ ಮಾಸ್ಕ್ ವೊಂದೇ ಸಾಲದು ವೈರಸ್ ವಿರುದ್ಧ ಹೋರಾಡಲು “ಗುರಾಣಿ’ (ಶೀಲ್ಡ್) ಕೂಡ ಬೇಕು. ಅದು ನಮ್ಮ ಸರ್ಕಾರದ ಬಳಿ ಲಭ್ಯವಿಲ್ಲ. ಹಾಗೆ ಅಷ್ಟೊಂದು ಸುಲಭದಲ್ಲಿ ಅದು ಮಾರುಕಟ್ಟೆಯಲ್ಲಿ ದೊರೆಯದು. ಇದೆಲ್ಲ ಕಾರಣಗಳನ್ನು ಮುಂದಿಟ್ಟುಕೊಂಡು ಭಟ್ಕಳದ ಮದೀನಾ ಕಾಲೋನಿಯಲ್ಲಿರುವ “ಮೇಕರ್ಸ್ ಹಬ್” ನ ವಿದ್ಯಾರ್ಥಿಗಳು ತಮ್ಮಿಂದಾದ ಸಹಾಯ ಸಹಕಾರವನ್ನು ನೀಡಲು ವೈದ್ಯಕೀಯ ಸಿಬ್ಬಂಧಿ ಹಾಗೂ ಪೊಲೀಸರಿಗೆ ನೆರವಾಗಬಲ್ಲ “ಫೇಸ್ ಶೀಲ್ಡ್” (ಮುಖಕ್ಕೆ ಹಾಕಿಕೊಳ್ಳುವ ಗುರಾಣಿ) ಯನ್ನು ಸ್ವತಃ ಸಿದ್ಧಗೊಳಿಸುತ್ತಿದ್ದಾರೆ. ಅವರ ಉದ್ದೇಶ ಕೊರೋನಾ ವಿರುದ್ಧದ ಯುದ್ಧದಲ್ಲಿ ವೈದ್ಯಕೀಯ ಸಿಬ್ಬಂಧಿ ಹಾಗೂ ದಿನವಿಡಿ ರಸ್ತೆಯಲ್ಲೆ ಓಡಾಡುವ ಪೊಲೀಸರ ರಕ್ಷಣೆಗಾಗಿ ಮುಖ ಗುರಾಣಿಯನ್ನು ಸಿದ್ದಗೊಳಿಸಿ ವಿತರಿಸುವುದಾಗಿದೆ.

ಈ ಕುರಿತು ಮಾತನಾಡಿದ ಮೇಕರ್ಸ್ ಹಬ್ ಸದಸ್ಯ ನುಹೇಲ್ ದಾಮೋದಿ ವೈದ್ಯಕೀಯ ಸಿಬ್ಬಂಧಿಗಳು ಮಾಸ್ಕ್ ಧರಿಸುವುದರಿಂದಾಗಿ ಅದು ಮೂಗು ಮತ್ತು ಬಾಯಿಯನ್ನು ರಕ್ಷಣೆ ಮಾಡುತ್ತದೆ ಹೊರತು ಕಣ್ಣುಗಳನ್ನಲ್ಲ. ನಾವು ಸಿದ್ಧಗೊಳಿಸುತ್ತಿರುವ ಫೇಸ್ ಶೀಲ್ಡ್ ಇದು ಸಂಪೂರ್ಣ ಮುಖವನ್ನು ಕವರ್ ಮಾಡುತ್ತದೆ. ಇದರಿಂದಾಗಿ ಕಣ್ಣುಗಳಿಗೆ ಸೋಂಕು ಹರಡುವುದರಿಂದ ತಡೆಯಬಹುದಾಗಿದೆ ಎಂದ ಅವರು, ಅಲ್ಲದೆ ಕ್ಷೇತ್ರ ರಕ್ಷಣೆಯಲ್ಲಿ ತೊಡಗಿರುವ ಕರ್ತವ್ಯ ನಿರತ ಪೊಲೀಸ್ ಸಿಬ್ಬಂಧಿಗಳಿಗೂ ಇದು ಅತ್ಯಂತ ಉಪಯುಕ್ತವಾಗಿದ್ದು ಬಾಯಿ,ಕಣ್ಣು, ಮೂಗುಗಳಿಗೆ ಇದರಿಂದ ರಕ್ಷಣೆ ಸಿಗುತ್ತದೆ ಎಂದರು.

ಸಧ್ಯಕ್ಕೆ ಮೇಕರ್ಸ್ ಹಬ್ ನ ಸದಸ್ಯರು ಕೈಯಿಂದಲೆ ಇದನ್ನು ಸಿದ್ದಿಗೊಳಿಸುತ್ತಿದ್ದು ಆರಂಭದಲ್ಲಿ ಕನಿಷ್ಠ ೧೦೦ ಫೇಸ್ ಶೀಲ್ಡ್ ಗಳನ್ನು ಸಿದ್ದಿಗೊಳಿಸಲು ಯೋಜಿಸಲಾಗಿದ್ದು ಇದಕ್ಕಾಗಿ ಕೋವಿಡ್-೧೯ ವೈದ್ಯಕೀಯ ನೋಡಲ್ ಅಧಿಕಾರಿ ಡಾ.ಶರದ್ ನಾಯಕರು ನಮಗೆ ಅನುಮತಿಯನ್ನು ನೀಡಿದ್ದಾರೆ. ಮುಂದೆ ಇದನ್ನು ಸಿದ್ದಗೊಳಿಸುವ ಯಂತ್ರವನ್ನು ತರುವ ಯೋಜನೆಯಿದ್ದು ಒಂದು ದಿನಕ್ಕೆ ೫೦೦ಕ್ಕೂ ಹೆಚ್ಚು ಫೇಸ್ ಶೀಲ್ಡ್ ಗಳನ್ನು ಸಿದ್ಧಗೊಳಿಸಬಹುದಾಗಿದೆ ಎಂದು ಅವರು ತಿಳಿಸಿದರು.
ಇಂಜಿನೀಯರಿಂಗ್ ಕಲಿಯುತ್ತಿರುವ ಹಾಗೂ ಇತರ ಆಸಕ್ತ ವಿದ್ಯಾರ್ಥಿಗಳು ೨೦೧೭ರಲ್ಲಿ ”ಮೇಕರ್ಸ್ ಹಬ್’ ಹೆಸರಲ್ಲಿ ಮದೀನಾ ಕಾಲೋನಿಯ ಕುತುಬ್ ಹಾಲ್ ನಲ್ಲಿ ಸಂಸ್ಥೆಯೊಂದನ್ನು ಹುಟ್ಟು ಹಾಕಿದ್ದು ಅದೀಗ ತನ್ನ ಮೂರನೇ ವರ್ಷಕ್ಕೆ ಕಾಲಿಟ್ಟಿದೆ. ಇಂಜಿನೀಯರಿಂಗ್ ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಯೋಜನೆಗಳನ್ನು ಸಿದ್ದಗೊಳಿಸಿವುದು ಅವರಿಗೆ ಮಾರ್ಗದರ್ಶನ ನೀಡುವುದು, ಯುವ ಪೀಳಿಗೆಗೆ ತಂತ್ರಜ್ಞಾನದಲ್ಲಿ ಆಸಕ್ತಿಯನ್ನು ಬೆಳೆಸಲು ಕಾರ್ಯಗಾರಗಳನ್ನು ಆಯೋಜುವುದು ಈ ಮೇಕರ್ಸ್ ಹಬ್ ನ ಕಾರ್ಯವಾಗಿದೆ. ತಂತ್ರಜ್ಞಾನವನ್ನು ಬಳಿಸಿಕೊಂಡು ಜಗತ್ತಿನ ಸರಳ ಮತ್ತು ಸಂಕೀರ್ಣ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದು, ಎನ್.ಜಿ.ಓ ಮತ್ತು ಕೈಗಾರಿಕೆಗಳೊಂದಿಗೆ ಸಹಕರಿಸುವುದು ಮೇಕರ್ಸ ಹಬ್ ಮಾಡುತ್ತಿದೆ.
ಮೇಕರ್ಸ್ ಹಬ್ ತಂತ್ರಜ್ಞಾನ, ನಾವೀನ್ಯತೆ ಮತ್ತು ಸೃಜನಶೀಲತೆಗಾಗಿ ಉತ್ಸಾಹ ಹೊಂದಿರುವ ಯಾರಿಗಾದರೂ ಇದು ಅವಕಾಶವನ್ನು ನೀಡುತ್ತದೆ. ತಯಾರಕರು, ಹವ್ಯಾಸಿಗಳು, ಟಿಂಕರ್ ಮಾಡುವವರಿಗೆ ಇದೊಂದು ಯೋಗ್ಯ ಸಾಧನವಾಗಿದೆ.ಎಲ್ಲಾ ತಾಂತ್ರಿಕ ಪರಿಕರಗಳು, ಯಂತ್ರೋಪಕರಣಗಳು, ಸಾಫ್ಟ್‌ವೇರ್‌ಗಳು, ತಾಂತ್ರಿಕ ಬೆಂಬಲ ಮತ್ತು ಮಾರ್ಗದರ್ಶನವನ್ನು ಒಂದೇ ಸೂರಿನಡಿ “ಮೇಕರ್ಸ್‌ಹಬ್” ಒದಗಿಸುತ್ತದೆ.
ವಿದ್ಯಾರ್ಥಿಗಳಿಗೆ ತಂತ್ರಜ್ಞಾನದಲ್ಲಿ ನಾಯಕರನ್ನಾಗಿ ರೂಪಿಸುವುದು, ತಂತ್ರಜ್ಞಾನದ ಪ್ರಸ್ತುತ ಪ್ರವೃತ್ತಿಗಳ ಬಗ್ಗೆ ಈ ಪೀಳಿಗೆಯ ಯುವಕರಿಗೆ ಅರಿವು ಮೂಡಿಸುವುದು, ಬದಲಾಗುತ್ತಿರುವ ಸನ್ನಿವೇಶದಲ್ಲಿ ಸರ್ಕಾರ, ಸಂಘಸಂಸ್ಥೆಗಳು, ಶಿಕ್ಷಣಸಂಸ್ಥೆಗಳು, ಮತ್ತು ಖಾಸಗಿ ವಲಯದ ನಾವಿನ್ಯಕಾರರು, ತಂತ್ರಜ್ಞಾನವನ್ನು ಸಾಧನವಾಗಿ ಬಳಸಿಕೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು, ತಾಂತ್ರಿಕ ಕ್ಷೇತ್ರದಲ್ಲಿವವರಿಗೆ ಅವರ ಜ್ಞಾನ ಮತ್ತು ಕೌಶಲ್ಯಗಳನ್ನು ಕಾರ್ಯಗತಗೊಳಿಸಲು ಸುರಕ್ಷಿತ ಮತ್ತು ಸುಸಜ್ಜಿತ ಕಾರ್ಯಕ್ಷೇತ್ರವನ್ನು ಒದಗಿಸುವ ಉದ್ದೇಶಗಳನ್ನು ಇದು ಹೊಂದಿದೆ.

error: