December 21, 2024

Bhavana Tv

Its Your Channel

ಮಾಜಿ ಶಾಸಕ ಮಂಕಾಳ ಎಸ್ ವೈದ್ಯರಿಂದ ಆಟೋ ಚಾಲಕರಿಗೆ ಜೀವನಾವಶ್ಯಕ ಕಿಟ್ಟ ವಿತರಣೆ

ಭಟ್ಕಳ: ತಾಲೂಕಿನ ಅಟೋ ಚಾಲಕರು, ಟ್ಯಾಕ್ಸಿ ಚಾಲಕರು, ಗೂಡ್ಸ ರಿಕ್ಷಾ ಚಾಲಕರಿಗಾಗಿ ಮಾಜಿ ಶಾಸಕ ಮಂಕಾಳ ಎಸ್. ವೈದ್ಯ ಅವರು ಸುಮಾರು ೧೮೦೦ಕ್ಕೂ ಹೆಚ್ಚು ಜೀವನಾವಶ್ಯಕ ವಸ್ತುಗಳ ಕಿಟ್ ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಳೆದ ೨೭ ದಿನಗಳಿಂದ ದುಡಿಮೆಯಿಲ್ಲದೇ ಮನೆಯಲ್ಲಿಯೇ ಇರುವ ಚಾಲಕರು ತೀವ್ರ ಸಂಕಷ್ಟದಲ್ಲಿರುವುದನ್ನು ಅರಿತು ಅವರಿಗೆ ಜೀವನಾವಶ್ಯಕ ವಸ್ತುಗಳ ಕಿಟ್ ವಿತರಿಸಿದ್ದೇನೆ. ಸಮಾಜದ ಬಗ್ಗೆ ಸದಾ ಚಿಂತಿಸುವ ವ್ಯಕ್ತಿಯಾದ ಅಟೋ ಚಾಲಕರು. ಸಮಾಜದಲ್ಲಿ ಯಾವುದೇ ತುರ್ತು ಸಂದರ್ಭದಲ್ಲಿ ನೆನಪಿಗೆ ಬರುವವರು ಅಟೋ ಚಾಲಕರು. ಆದರೆ ಅವರೇ ಇಂದು ಸಂಕಷ್ಟದಲ್ಲಿದ್ದಾರೆ. ತಾವು ದಿನದ ದುಡಿಮೆಯನ್ನು ಮಾಡಿ ಸಂಸಾರ ಸಾಗಿಸುತ್ತಿರುವಾಗ ಮಹಾ ಮಾರಿ ಕೊರೊನಾ ಅವರ ಜೀವನದ ಮೇಲೆ ಭಾರೀ ಪರಿಣಾಮ ಬೀರಿದೆ. ಚಾಲಕರು ಎಲ್ಲರೂ ತೀರಾ ಬಡವರಿದ್ದು ಅಟೋ ರಿಕ್ಷಾದ ಬ್ಯಾಂಕ್ ಕಂತು, ಬಡ್ಡಿ ಕಟ್ಟಿಕೊಂಡು ಹೋಗುವುದೇ ಕಷ್ಟಕರವಾಗಿದೆ. ಇಂತಹ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಮಿಕ ಸಚಿವರೂ ಆಗಿದ್ದು ಅವರು ಅಟೋ ಚಾಲಕರನ್ನು ಕಾರ್ಮಿಕರೆಂದು ಪರಿಗಣಿಸಿ ಅವರಿಗೆ ಕಾರ್ಮಿಕರಿಗೆ ನೀಡುವ ಸೌಲಭ್ಯವನ್ನು ನೀಡಬೇಕು ಎಂದು ಆಗ್ರಹಿಸಿದರು. ಅಲ್ಲದೇ ಸರಕಾರ ಅಟೋ, ಟ್ಯಾಕ್ಸಿ, ಗೂಡ್ಸ ರಿಕ್ಷಾಗಳ ಟ್ಯಾಕ್ಸ ಮನ್ನಾ ಮಾಡುವುದರೊಂದಿಗೆ ವಿಮೆಯ ಹಣವನ್ನು ಕೂಡಾ ಮನ್ನಾ ಮಾಡಬೇಕು ಎಂದು ಸರಕಾರವನ್ನು ಆಗ್ರಹಿಸಿದರು.

ಅಟೋ ಚಾಲಕರು ಸಮಾಜದ ಆಗು ಹೋಗುಗಳಿಗೆ ತಕ್ಷಣ ಸ್ಪಂಧಿಸುವವರಾಗಿದ್ದು ಅವರ ಕಷ್ಟಕಾಲದಲ್ಲಿ ಸಹಕರಿಸಲು ತಾವು ಸದಾ ಸಿದ್ಧರಿರುವುದಾಗಿಯೂ ಮಂಕಾಳ ಎಸ್. ವೈದ್ಯ ಹೇಳಿದರು. ಅಲ್ಲದೇ ಯಾರಿಗೆ ದಿನನಿತ್ಯದ ಅವಶ್ಯಕತೆಗೆ ತೀವ್ರ ತೊಂದರೆ ಇದೆ ಅವರಿಗೆ ಸಹಕರಿಸುವುದಾಗಿಯೂ ಭರವಸೆ ನೀಡಿದರು.
ಕೊರೊನಾ ವೈರಸ್‌ನಿಂದ ಪಾರಾಗಲು ಜನರು ಸರಕಾರದೊಂದಿಗೆ ಸಹಕರಿಸಬೇಕು ಎಂದು ಕೋರಿದ ಅವರು ಯಾರೂ ಕೂಡಾ ಮನೆಯಿಂದ ಅನಾವಶ್ಯಕವಾಗಿ ಹೊರಗೆ ಬಾರದೇ, ಪರಸ್ಪರ ಅಂತರವನ್ನು ಕಾಯ್ದುಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅಟೋ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ಕೃಷ್ಣಾ ನಾಯ್ಕ ಆಸರಕೇರಿ ಅಟೋ ಚಾಲಕರು ತೀವ್ರ ಸಂಕಷ್ಟದಲ್ಲಿದ್ದಾರೆ, ಅವರ ನೆರವಿಗೆ ಯಾರೂ ಬಾರದೇ ಇದ್ದ ಸಮಯದಲ್ಲಿ ನಾನಿದ್ದೇನೆ ಎಂದು ನೆರವಿಗೆ ಧಾವಿಸಿದ ಮಂಕಾಳ ವೈದ್ಯರನ್ನು ಅಟೋ ಚಾಲಕರ ಹಾಗೂ ಇತರ ಎಲ್ಲರ ಪರವಾಗಿ ಅಭಿನಂದಿಸುತ್ತೇನೆ. ತಾಲೂಕಿನ ಸುಮಾರು ೧೮೦೦ಕ್ಕೂ ಹೆಚ್ಚು ಚಾಲಕರ ನೆರವಿಗೆ ಧಾವಿಸುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ ಎಂದರು.
ಅಟೋ ಚಾಲಕರ ಸಂಘದ ಮಾಜಿ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿದರು. ಎ.ಪಿ.ಎಂ.ಸಿ. ಅಧ್ಯಕ್ಷ ಗೋಪಾಲ ನಾಯ್ಕ, ಅಟೋ ಚಾಲಕರ ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ನಾಯ್ಕ ಉಪಸ್ಥಿತರಿದ್ದರು. ಲಕ್ಷö್ಮಣ ನಾಯ್ಕ ಸ್ವಾಗತಿಸಿ, ನಿರ್ವಹಿಸಿದರು. ಸ್ಥಳದಲ್ಲಿ ಹಾಜರಿದ್ದ ೪-೫ ಜನ ಅಟೋ ಚಾಲಕರಿಗೆ ಸಾಂಕೇತಿಕವಾಗಿ ಕಿಟ್ ವಿತರಿಸಲಾಗಿದ್ದು ಎಲ್ಲಾ ಅಟೋ ಚಾಲಕರಿಗೂ ಕೂಡಾ ಅವರವರ ಮನೆಗಳಿಗೆ ತಲುಪಿಸುವುದಾಗಿ ಸಂಘದ ಪದಾಧಿಕಾರಿಗಳು ತಿಳಿಸಿದರು.

error: