March 20, 2025

Bhavana Tv

Its Your Channel

ಗೋಬರ್ ಧನ್ ಯೋಜನೆಗೆ ಜಿಲ್ಲಾಡಳಿತ ಆಸಕ್ತಿ: ಸೊಂದಾ ಮಠದಲ್ಲಿ ಜಿಲ್ಲಾ ಉಸ್ತುವಾರಿ ಸಚೀವರಿಂದ ಚಾಲನೆ.

ಕಾರವಾರ: – ಸ್ವಚ್ಛ ಭಾರತ ಮಷೀನ್ ಯೋಜನೆಯಡಿ ಮಠ, ಅನ್ನ ಛತ್ರ ಹಾಗೂ ಗೋ ಶಾಲೆ ಇರುವ ಸ್ಥಳದಲ್ಲಿ ಗೋಬರ್ ಧನ್ ಯೋಜನೆ ಜಾರಿಗೊಳಿಸಲು ಉತ್ತರಕನ್ನಡ ಜಿಲ್ಲಾ ಪಂಚಾಯತ ಮುಂದಾಗಿದೆ. ಸಾರ್ವಜನಿಕ ಸಹಭಾಗಿತ್ವದಲ್ಲಿ ಗೋಬರ್ ಧನ್ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸಿದ್ಧತೆ ನಡೆಸಿದೆ.
ಇನ್ನು ಶಿರಸಿ ತಾಲೂಕಿನ ಸೋಂದಾ ವಾದಿರಾಜ ಮಠದಲ್ಲಿ ಸ್ಥಾಪಿಸಲಾದ ಗೋಬರ್ ಧನ್ ಯೋಜನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಮತ್ತು ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಜೊತೆಯಾಗಿ ಉದ್ಘಾಟಿಸಿದರು.

ಏನಿದು ಗೋಬರ್ ಧನ್ ಯೋಜನೆ :

ಇದು ಕೇಂದ್ರ ಸರಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯನ್ನು ಸಾರ್ವಜನಿಕ ಸಹಭಾಗಿತ್ವದ ಮೂಲಕ ಅನುಷ್ಠಾನಗೊಳಿಸಲು ಉತ್ತರಕನ್ನಡ ಜಿಲ್ಲಾ ಪಂಚಾಯತ್ ಕಾರ್ಯಕ್ರಮ ಹಾಕಿಕೊಂಡಿದೆ. ಸ್ವಚ್ಛ ಭಾರತ ಮಷೀನ್ ಅಡಿಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಈಗ ಪ್ರಾಯೋಗಿಕವಾಗಿ ಶಿರಸಿ ತಾಲೂಕಿನ ವಾದಿರಾಜ ಮಠ ಹಾಗೂ ಸಿದ್ದಾಪುರ ತಾಲೂಕಿನ ಭಾನ್ಕುಳಿ ಮಠದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ ಭಾನ್ಕುಳಿ ಮಠದಲ್ಲಿ ಚಾಲನೆ ನೀಡಲಾಗಿದೆ. ಗೋಬರ್ ಧನ್ ಯೋಜನೆಯ ಪರಿಕಲ್ಪನೆ ಅಂದರೆ ಸಮುದಾಯಕ್ಕೆ ನೆರವಾಗಬೇಕು ಎಂಬ ಉದ್ದೇಶದಿಂದ ಅನುಷ್ಠಾನಕ್ಕೆ ತರಲಾಗುತ್ತಿದೆ. ಜಾನುವಾರು ಸೆಗಣಿ, ಹಸಿ ಕಸ ಉತ್ಪತ್ತಿಯಾಗುವ ಮಠ, ಗೋಶಾಲೆ, ಅನ್ನ ಛತ್ರ ಇಂತಹ ಸ್ಥಳಗಳಲ್ಲಿ ಆದ್ಯತೆ ಮೇರೆಗೆ ಅನುಷ್ಠಾನಕ್ಕೆ ತರಲಾಗುತ್ತಿದೆ. ಹೆಚ್ಚು ಸೆಗಣಿ, ಹಸಿ ಕಸ ದೊರಕುವ ಪ್ರದೇಶದಲ್ಲಿ ತ್ಯಾಜ್ಯದ ಪ್ರಮಾಣವನ್ನು ಆಧರಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಹೆಚ್ಚು ತ್ಯಾಜ್ಯ ದೊರಕುವ ಸ್ಥಳದಲ್ಲಿ ೬೦ ಕ್ಯೂಬಿಕ್ ಮೀಟರ್ ಗಾತ್ರದ ಸುಮಾರು ೧೪.೫ ಲಕ್ಷ ರೂಪಾಯಿ ವೆಚ್ಚದ ಗೋಬರ್ ಗ್ಯಾಸ್ ಘಟಕಕ್ಕೆ ಯೋಜನೆ ರೂಪಿಸಲಾಗಿದೆ. ಶೇಕಡಾ ೫೦:೫೦ ರ ಅನುಪಾತದಲ್ಲಿ ಯೋಜನಾ ವೆಚ್ಚವನ್ನು ಭರಿಸಲಾಗುತ್ತದೆ. ಈ ಯೋಜನೆಯನ್ನು ರಾಜ್ಯದಲ್ಲಿ ಹೊಸದಾಗಿ ಜಾರಿಗೆಗೊಳಿಸಲಾಗಿದೆ.
ಇನ್ನು ಉತ್ತರಕನ್ನಡ ಜಿಲ್ಲೆಯಲ್ಲಿ ತ್ಯಾಜ್ಯಗಳನ್ನು ಬಳಸಿ ಇಂಧನ ಉತ್ಪಾದನೆಗೆ ಒತ್ತು ನೀಡಲು ಜಿಲ್ಲಾ ಪಂಚಾಯತ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಭಾನ್ಕುಳಿ ಮತ್ತು ವಾದಿರಾಜ ಮಠದಲ್ಲಿ ಹಿಂದಿನಿoದಲೂ ಸಾಂಪ್ರದಾಯಿಕವಾಗಿ ಬಳಕೆಯಲ್ಲಿರುವ ಗೋಬರ್ ಗ್ಯಾಸ್ ಅನ್ನು ಇನ್ನಷ್ಟು ಹೆಚ್ಚು ಪ್ರಚಲಿತಕ್ಕೆ ತರುವ ಉದ್ದೇಶದಿಂದ ಜಿಲ್ಲಾ ಪಂಚಾಯತ ಪ್ರಯತ್ನ ನಡೆಸಿದೆ.
ರಾಜ್ಯದಲ್ಲಿ ಮಾದರಿ ಯೋಜನೆ : ಹೊಸದಾಗಿ ಜಾರಿಗೆ ತಂದಿರುವ ಗೋಬರ್ ಧನ್ ಯೋಜನೆ ರಾಜ್ಯದಲ್ಲಿ ಮಾದರಿಯಾಗಿದೆ.
ಯೋಜನೆಯನ್ನು ಉತ್ತರಕನ್ನಡ ಜಿಲ್ಲೆಯಲ್ಲಿ ಮಾದರಿ ರೂಪದಲ್ಲಿ ಜಾರಿಗೊಳಿಸಲು ಜಿಲ್ಲಾ ಪಂಚಾಯತ ಮುಂದಾಗಿದೆ. ಪಿಪಿಪಿ ಮಾದರಿಯಲ್ಲಿ ರೂಪಿಸಿದ ಈ ಕಾರ್ಯಕ್ರಮವನ್ನು ರಾಜ್ಯ ಮಟ್ಟದಲ್ಲಿ ಗುರುತಿಸಲಿದ್ದು, ರಾಜ್ಯದ ಪ್ರತಿ ತಾಲೂಕಿನಲ್ಲಿ ೧೦ ನೂತನ ಘಟಕ ನಿರ್ಮಿಸಲು ಸ್ವಚ್ಛ ಭಾರತ ಮಷೀನ್ ಯೋಜನೆಯ ಆಯುಕ್ತರು ರಾಜ್ಯದ ಎಲ್ಲ ಜಿಲ್ಲಾ ಪಂಚಾಯತಗಳಿಗೆ ಈಗಾಗಲೇ ಸಲಹೆ ನೀಡಿದ್ದಾರೆ. ೧೫ನೇ ಹಣಕಾಸಿನ ಯೋಜನೆಯ ಅನುದಾನದಡಿ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಯೋಜನೆಯನ್ನು ತ್ವರಿತವಾಗಿ ಕಾರ್ಯಗತಗೊಳಿಸಲು ಯೋಜನೆಯನ್ನು ರೂಪಿಸಿರುವ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ ರೋಶನ್ ಪ್ರತಿಕ್ರಿಯಿಸಿದ್ದಾರೆ.
ಪಶು ಸಂಗೋಪನೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿರುವ ಜೊತೆಗೆ ಇದರ ಉಪ ಉತ್ಪನ್ನಗಳ ಸದ್ಬಳಕೆಗೆ ಇದು ಸಹಕಾರಿಯಾಗುತ್ತದೆ. ಸಗಣಿಯಿಂದ ಗೋಬರ್ ಗ್ಯಾಸ್ ಉತ್ಪಾದನೆ ಮಾಡಿ ಇದನ್ನು ಅಡುಗೆ ತಯಾರಿಸಲು ಬಳಕೆ ಮಾಡಿದ್ದಲ್ಲಿ ಎಲ್.ಪಿ.ಜಿ ಗ್ಯಾಸ್ ಅವಲಂಬಿಸುವುದು ಕಡಿಮೆಯಾಗಲಿದೆ. ಮಠ ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಅಡುಗೆ ತಯಾರಿಸುವ ಅನ್ನಛತ್ರಗಳಲ್ಲಿ ಈ ಪುನರುತ್ಪಾದಿನ ಗೋಬರ್ ಗ್ಯಾಸ್ ಬಳಕೆ ಹೆಚ್ಚಾಗಬೇಕು. ಇದು ಸರಿಯಾಗಿ ಅನುಷ್ಠಾನಕ್ಕೆ ಬಂದಲ್ಲಿ ಎಲ್.ಪಿ.ಜಿ ಗ್ಯಾಸ್ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಅಲ್ಲದೆ ರಾಜ್ಯದಲ್ಲಿ ಈ ಯೋಜನೆ ಮಾದರಿಯಾಗಲಿದೆ ಎಂದು ಹೇಳಿದ್ದಾರೆ.

error: