December 19, 2024

Bhavana Tv

Its Your Channel

ಹೊಸತನದ ಸ್ವಾಗತಕ್ಕೆ ‘ಹೊಸ್ತು’ ಹಬ್ಬ; ಭಟ್ಕಳ ಹಲವೆಡೆ ಸಂಭ್ರಮದ ಆಚರಣೆ.

ಮೈತುಂಬಿ ಹಸಿರುಟ್ಟು ನಿಂತ ನಿಸರ್ಗದ ಸೊಬಗು

ಭಟ್ಕಳ: ಮಳೆಗಾಲ ಮುಗಿದು ಮಾಘ ಮಾಸದ ಸಂಕ್ರಮಣ ಕಾಲದಲ್ಲಿ ಪ್ರಕೃತಿಗೆಲ್ಲಾ ಹೊಸತನ ಸಂಭ್ರಮ. ಮೈತುಂಬಿ ಹಸಿರುಟ್ಟು ನಿಂತ ನಿಸರ್ಗದ ಸೊಬಗು ಕಣ್ಮನ ಸೂರೆಗೊಳ್ಳುತ್ತದೆ. ನವರಾತ್ರಿ ಆಚರಣಿಯ ಜೊತೆ ಜೊತೆಗೆ ಗ್ರಾಮೀಣಭಾಗದಲ್ಲಿ ಆಚರಿಸಲ್ಪಡುವ ಹಬ್ಬ ‘ಹೊಸ್ತು’.‘ಹೊಸತು’ ಎಂಬ ಹೆಸರೇ ಹೇಳುವಂತೆ ಹೊಸತನದ ಸ್ವಾಗತ ಕಳೆದ ನಾಲ್ಕು ತಿಂಗಳಿಂದ ಕೃಷಿ ಕೈಂಕರ್ಯದಲ್ಲಿ ತೊಡಗಿ ವಿರಾಮದಲ್ಲಿದ್ದ ರೈತರಿಗೆ ಹೊಸತನದ ಚೇತನವನ್ನಿಕ್ಕುತ್ತಾರೆ. ಹೊಲಗದ್ದೆಗಳಲ್ಲಿ ಉಳುಮೆ ಮಾಡಿದ ಭತ್ತದ ಪೈರುಗಳು ತೆನೆಬಿಟ್ಟು ಸಂಭ್ರಮವನ್ನು ಭಕ್ತಿ ಭಾವದಿಂದ ಬರಮಾಡಿಕೊಳ್ಳುತ್ತದೆ. ಹೀಗಾಗಿ ಮನೆ ಮಂದಿಯೆಲ್ಲಾ ಸಡಗರದಿಂದ ಈ ಹಬ್ಬವನ್ನು ಆಚರಿಸುತ್ತಾರೆ.

ಸಾಮಾನ್ಯವಾಗಿ ‘ಹೊಸ್ತು’ ಹಬ್ಬದ ಆಚರಣಿ ವಿಶಿಷ್ಟತೆಯಿಂದ ಕೂಡಿರುತ್ತದೆ. ವಾರದ ಹಿಂದೆಯೇ ಮನೆಯನ್ನೆಲ್ಲಾ ಸ್ಪಷ್ಟಗೊಳಿಸಿ ಬಳಿಕ ಹೊಸತು ಹಬ್ಬದ ದಿನ ಮನೆಮಂದಿಯಲ್ಲಾ ಹೊಸ ಬಟ್ಟೆಯನ್ನುಟ್ಟುಕೊಳ್ಳುತ್ತಾರೆ. ಯಜಮಾನ ಸಾಂಪ್ರದಾಯಿಕ ಶೈಲಿಯಲ್ಲಿ ಶುಭ ಮೂಹೂರ್ತದಲ್ಲಿ ಪೂಜಾ ಸಾಮಾಗ್ರಿಗಳೊಂದಿಗೆ ಗಂಟೆಯ ಶಬ್ದಮಾಡುತ್ತ ತನ್ನ ಭತ್ತದ ಗದ್ದೆಯ ತೆನೆಗಳಿಗೆ ಭಕ್ತಿಯಿಂದ ಪೂಜಾ ವಿಗಳನ್ನು ನೆರವೇರಿಸುತ್ತಾನೆ. ಬಳಿಕ ಓಪಚಾರಿಕವಾಗಿ ತಲೆಯ ಮೇಲೆ ತೆನೆಯ ಕಟ್ಟನ್ನು ಹೊತ್ತು ಮನೆಯಂಗಳಕ್ಕೆ ಬಂದಾಗ ಮನೆಯೊಡತಿ ಕಾಲು ತೊಳೆದು ತಿಲಕವನ್ನಿಟ್ಟು ಸ್ವಾಗತಿಸುತ್ತಾಳೆ. ಮನೆಯ ಸರ್ವ ಸದಸ್ಯರು ತಳಿರು ಕಟ್ಟುವ ಕಾರ್ಯದಲ್ಲಿ ತೊಡಗಿ ದ್ವಾರಬಾಗಿಲು ಪೂಜಾಸ್ಥಳ,ವಾಹನ,ನೆಗಿಲು,ಕೊಟ್ಟಿಗೆ ಸೇರಿದಂತೆ ಎಲ್ಲಾ ಕಡೆ ತೆನೆ ಕಟ್ಟುವ ಕಾರ್ಯಕ್ಕೆ ಕದಿರು ಕಟ್ಟುವುದು ಎನ್ನುತ್ತೇವೆ. ಹೊಸ ಭತ್ತದಿಂದ ಅಕ್ಕಿಯನ್ನು ಬೇರ್ಪಡಿಸಿ ಪಾಯಸ ಮಾಡುವ ಜೊತೆಗೆ ಹಿರಿಯರ ಆರ್ಶೀವಾದ ಪಡೆದು ಸಾಮೂಹಿಕ ಬೋಜನ ಮಾಡುವ ‘ಹೊಸ್ತು’ ಹಬ್ಬಕ್ಕೆ ವಿಶೇಷ ಹಿನ್ನೆಲೆಯನ್ನು ಹೊಂದಿದೆ.ಭಟ್ಕಳ ವ್ಯಾಪ್ತಿಯಲ್ಲಿ ಈ ಬಾರಿ ಸೋಮವಾರ ಮತ್ತು ಗುರುವಾರ ಆಚರಣೆ ಮಾಡುತ್ತಿದ್ದು ಪ್ರತಿ ಊರಿನಲ್ಲಿ ಈ ದಿನದಿಂದ ವಿಶೇಷ ಮನರಂಜನೆ,ಕ್ರೀಡಾ ಸ್ಪರ್ಧೆಯನ್ನು ಯೋಜಿಸುತ್ತಾರೆ.ಆಧುನಿಕತೆಯ ಅಭಿವೃದ್ದಿಯ ನಡುವೆ ಗ್ರಾಮೀಣ ಸಿರಿವಂತಿಕೆ ಸಾರುವ ಇಂತಹ ಹಬ್ಬಗಳ ಮೂಲಕ ಕೌಟಂಬಿಕ ಕೂಡುವಿಕೆ,ಗ್ರಾಮೀಣ ಸಂಸ್ಕ್ರತಿ ಸದಾ ಹಸಿರಾಗಿರುತ್ತದೆ.

error: