
ಪೋಲಿಸ್ ಸರ್ಪಗಾವಲಿನಲ್ಲಿ ಆರಂಭವಾದ ಬೈಪಾಸ್ ರಸ್ತೆ ಕಾಮಗಾರಿ.. ಅಧಿಕಾರಿಗಳ ವರ್ತನೆಗೆ ರೈತರು ಆಕ್ರೋಶ.
ಕೆ.ಆರ,ಪೇಟೆ ; ಬೆಂಗಳೂರು ಜಲಸೂರು ರಾಜ್ಯ ಹೆದ್ದಾರಿ ಕಾಮಗಾರಿಯ ಕೆ ಆರ್ ಪೇಟೆ ಬೈಪಾಸ್ ರಸ್ತೆಯ ಕೆಲಸವನ್ನು ಬಾರಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಕೆ.ಎನ್.ಆರ್.ಸಿ.ಎಲ್ ಕಂಪನಿಯ ಇಂಜಿನಿಯರುಗಳು ಹಾಗೂ ಕೇಶಿಫ್ ಅಧಿಕಾರಿಗಳು ಆರಂಭಿಸಿದಾಗ ರೈತರು ಕಾಮಗಾರಿಯನ್ನು ತಡೆದು ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು …
ಕರ್ನಾಟಕ ರಾಜ್ಯ ಬೆಂಗಳೂರು ಜಲಸೂರು ರಾಜ್ಯ ಹೆದ್ದಾರಿಯ ನಿರ್ಮಾಣಕ್ಕೆ ಭೂಮಿಯನ್ನು ಕಳೆದುಕೊಂಡಿರುವ ರೈತರಿಗೆ ತಾರತಮ್ಯ ಮಾಡಲಾಗಿದೆ. ರೈತರು ಕಳೆದುಕೊಂಡಿರುವ ಭೂಮಿಗೆ ವೈಜ್ಞಾನಿಕವಾಗಿ ದರವನ್ನು ನೀಡಿಲ್ಲ. ಒಂದು ಗುಂಟೆ ಜಮೀನಿಗೆ 25 ಸಾವಿರ ರೂ ಹಣವನ್ನು ಒಬ್ಬ ರೈತರಿಗೆ ನೀಡಿದರೆ, ಮತ್ತೊಬ್ಬ ರೈತನಿಗೆ ಒಂದು ಗುಂಟೆ ಜಮೀನಿಗೆ ಒಂದು ಲಕ್ಷ ರೂ ಪರಿಹಾರ ನೀಡಲಾಗಿದೆ. ಅಧಿಕಾರಿಗಳು ಮುಗ್ಧ ರೈತರಿಗೆ ಮೋಸ ಮಾಡಿದ್ದಾರೆ. ರೈತರು ಕಳೆದುಕೊಂಡಿರುವ ಭೂಮಿಗೆ ನೀಡಿರುವ ಪರಿಹಾರದ ಹಣದಲ್ಲಿ ಆಗಿರುವ ತಾರತಮ್ಯವನ್ನು ಸರಿಪಡಿಸಿ ನಂತರ ಕಾಮಗಾರಿ ಆರಂಭಿಸಬೇಕು ಎಂದು ರೈತರು ಪಟ್ಟು ಹಿಡಿದು ರಸ್ತೆ ಕಾಮಗಾರಿಯನ್ನು ತಡೆದು ಪ್ರತಿಭಟನೆಗೆ ಇಳಿದಾಗ ನಾಗಮಂಗಲ ಡಿವೈಎಸ್ ಪಿ ಲಕ್ಷ್ಮೀನಾರಾಯಣ ಪ್ರಸಾದ್ ಅವರ ನೇತೃತ್ವದಲ್ಲಿ ಪ್ರತಿಭಟನಾ ನಿರತ ರೈತರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು.
ಕೆ.ಆರ್.ಪೇಟೆ ತಾಲೂಕಿನಲ್ಲಿ ಹಾದು ಹೋಗುವ ಬೆಂಗಳೂರು ಜಲಸೂರು ರಾಜ್ಯ ಹೆದ್ದಾರಿಯ ಕೆ.ಆರ್.ಪೇಟೆ ಬೈಪಾಸ್ ಕಾಮಗಾರಿಯ ಸುಮಾರು ಎಂಟು ಕಿಲೋಮೀಟರ್ ನಷ್ಟು ರಸ್ತೆ ಕೆಲಸವು ಬಾಕಿ ಉಳಿದಿದ್ದು ಕಾಮಗಾರಿಯನ್ನು ಸಂಪೂರ್ಣಗೊಳಿಸುವ ನಿಟ್ಟಿನಲ್ಲಿ ಪೊಲೀಸ್ ಭದ್ರತೆಯನ್ನು ಪಡೆದು ರಸ್ತೆ ಕಾಮಗಾರಿಯನ್ನು ಸಂಪೂರ್ಣಗೊಳಿಸಲು ಕೆ.ಎನ್.ಆರ್.ಸಿ.ಎಲ್ ಕಂಪನಿಯು ಭರದಿಂದ ಕಾಮಗಾರಿಯನ್ನು ನಡೆಸುತ್ತಿದೆ.
ಕೃಷ್ಣರಾಜಪೇಟೆ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಪದವೀಧರ ಘಟಕದ ಅಧ್ಯಕ್ಷ ಚೇತನ್ ಕುಮಾರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪ್ರತಿಭಟನಾ ನಿರತ ರೈತರೊಂದಿಗೆ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಪಾಂಡವಪುರ ಉಪ ವಿಭಾಗಾಧಿಕಾರಿ ನಂದೀಶ್, ತಹಶೀಲ್ದಾರ್ ನಿಸರ್ಗಪ್ರಿಯ, ನಾಗಮಂಗಲ ಡಿ.ವೈ.ಎಸ್.ಪಿ ಲಕ್ಷ್ಮೀನಾರಾಯಣ ಪ್ರಸಾದ್, ಕೆ. ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಎಂ.ಕೆ. ದೀಪಕ್, ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಜಗದೀಶ್, ಮೇಲುಕೋಟೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುಮಾರಾಣಿ, ಸಬ್ ಇನ್ಸ್ಪೆಕ್ಟರ್ ಸುನಿಲ್ ಸೇರಿದಂತೆ ನೂರಾರು ಪೊಲೀಸರು ಭದ್ರತಾ ಕಾರ್ಯದಲ್ಲಿ ಭಾಗವಹಿಸಿದ್ದರು.
ವರದಿ: ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.
More Stories
ತಮಟೆಯ ಸದ್ದಿಗೆ ಲಯಬದ್ದವಾಗಿ ಹೆಜ್ಜೆ ಹಾಕಿ ರಂಗ ಕುಣಿದು ಸಂಭ್ರಮಿಸಿದ ಗ್ರಾಮಸ್ಥರು..
ಇಂಧನ ದಕ್ಷ ಪಂಪ್ ಉಪಕರಣಗಳ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ
ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಚುನಾವಣಾಧಿಕಾರಿ ಚಂದ್ರಯ್ಯ ಮನವಿ