May 3, 2024

Bhavana Tv

Its Your Channel

ಇಂಧನ ದಕ್ಷ ಪಂಪ್ ಉಪಕರಣಗಳ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ

ಕೆ ಆರ್ ಪೇಟೆ ; ಪೆಟ್ರೋಲ್, ಡೀಸೆಲ್ ಅನ್ನು ನಿಯಮಿತವಾಗಿ ಬಳಕೆ ಮಾಡಿ ನಮ್ಮ ಮುಂದಿನ ತಲೆಮಾರಿಗೆ ಜೋಪಾನ ಮಾಡುವ ಜೊತೆಗೆ ಪರಿಸರ ಸಂರಕ್ಷಣೆಗೆ ಏಥೆನಾಲ್ ನಂತಹ ಪರ್ಯಾಯ ಇಂಧನವನ್ನು ಬಳಸಬೇಕು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಸತ್ಯ ಅರಿಯಬೇಕು ಎಂದು ಕೆ.ಆರ್. ಪೇಟೆ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಹುಲಿವಾನ ನಾಗರಾಜು ಮನವಿ ಮಾಡಿದರು .

ಜಾಗತಿಕ ತಾಪಮಾನದ ನಿಯಂತ್ರಣವು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ. ಇಂಧನ ಉಳಿತಾಯದ ಪ್ರತಿಫಲವು ನಮ್ಮ ಮುಂದಿನ ತಲೆಮಾರಿಗೆ ಅಗತ್ಯವಾಗಿ ಬೇಕಾಗಿರುವುದರಿಂದ ಇಂಧನ ಉಳಿಸಿ ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಕೆ. ಆರ್.ಪೇಟೆ ಸರ್ಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಹೆಚ್. ಎಸ್. ನಾಗರಾಜು ಹೇಳಿದರು.
ಅವರು ಕೆ.ಆರ್.ಪೇಟೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬ್ಯುರೋ ಆಫ್ ಎನರ್ಜಿ ಎಫಿಷಿಯೆನ್ಸಿ, ಕಾಲೇಜು ತಾಂತ್ರಿಕ ಶಿಕ್ಷಣ ಇಲಾಖೆ, ರಾಜ್ಯ ನವೀ ಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ಇವರ ಸಹಯೋಗದಲ್ಲಿ ಪಂಪ್ ಉಪಕರಣಗಳ ತಂತ್ರಜ್ಞರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಿಇಇ ಸ್ಟಾರ್ ಲೇಬಲ್ ಉಳ್ಳ ಇಂಧನ ದಕ್ಷ ಪಂಪ್ ಉಪಕರಣಗಳ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮವನ್ನು ಸಸಿಗೆ ನೀರೇರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ನಮಗೆ ದೊರೆಯುತ್ತಿರುವ ಪೆಟ್ರೋಲ್, ಡೀಸೆಲ್ ಸೇರಿದಂತೆ ನಿಸರ್ಗಿಕ ಅನಿಲವನ್ನು ಯಥೇ ಚ್ಚವಾಗಿ ಬಳಸುತ್ತಿರುವುದರಿಂದ ವಾಹನಗಳಿಂದ ಹೊರಬರುವ ಹೊಗೆಯಿಂದ ಪರಿಸರಕ್ಕೆ ಹಾನಿಯಾಗುವ ಜೊತೆಗೆ ಜಾಗತಿಕ ತಾಪಮಾನದಲ್ಲಿ ವ್ಯತ್ಯಯ ಉಂಟಾಗುವ ಜೊತೆಗೆ ಬಿಸಿಲಿನ ಧಗೆಯು ಹೆಚ್ಚಾಗಿ ಜೀವನ ನಡೆಸುವುದೇ ದುಸ್ತರವಾಗುತ್ತಿದೆ. ನಿಸರ್ಗಿಕವಾಗಿ ನಮಗೆ ದೊರೆಯುತ್ತಿರುವ ಪೆಟ್ರೋಲ್ ಡೀಸೆಲ್ ಇಂಧನವು ಖಾಲಿಯಾಗುತ್ತಿರುವುದರಿಂದ ನಾವು ನವೀಕರಿಸಬಹುದಾದ ಇಂಧನಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ. ಪೆಟ್ರೋಲ್ ಗೆ ಪರ್ಯಾಯವಾಗಿ ಎಥೆನಾಲ್ ಸೇರಿದಂತೆ ಬ್ಯಾಟರಿ ಚಾಲಿತ ಸ್ಕೂಟರ್ ಹಾಗೂ ಕಾರುಗಳನ್ನು ಬಳಸುವ ಮೂಲಕ ಪೆಟ್ರೋಲ್ ಡೀಸೆಲ್ ಬಳಕೆಯನ್ನು ಕಡಿಮೆ ಮಾಡಬೇಕು, ಜಲ ವಿದ್ಯುಚ್ಚಕ್ತಿಗೆ ಪರ್ಯಾಯವಾಗಿ ಸೋಲಾರ್ ಶಕ್ತಿಯ ಬಳಕೆ ಮಾಡುವ ಮೂಲಕ ಅನಗತ್ಯ ವೆಚ್ಚವನ್ನು ತಡೆಯಲು ಮುಂದಾಗಬೇಕು ಎಂದು ಮನವಿ ಮಾಡಿದ ಪ್ರಾಂಶುಪಾಲ ನಾಗರಾಜು, ಈ ಬಗ್ಗೆ ಶ್ರೀ ಸಾಮಾನ್ಯರಿಗೆ ಅರಿವಿನ ಜಾಗೃತಿ ಮೂಡಿಸುವ ಮೂಲಕ ವಿದ್ಯುತ್ ಉಳಿತಾಯ ಸೇರಿದಂತೆ ಪೆಟ್ರೋಲ್, ಡೀಸೆಲ್ ಉಳಿತಾಯದ ಬಗ್ಗೆ ಮಾಹಿತಿ ನೀಡಿ ಇಂಧನ ಉಳಿತಾಯದ ಪ್ರತಿಫಲವು ನಮ್ಮ ಮುಂದಿನ ಪೀಳಿಗೆಗೆ ದೊರೆಯುವಂತಾಗಬೇಕು. ಅನಗತ್ಯವಾಗಿ ವಾಹನಗಳನ್ನು ಬಳಸದೆ ಇಂಧನ ಉಳಿಸುವ ಮೂಲಕ ಪರಿಸರದ ಸಂರಕ್ಷಣೆಗೆ ಪಣ ತೊಡಬೇಕು ಮನೆಗೆರಡು ಮರಗಳು ಉರಿಗೊಂದು ತೋಪು ಎಂಬ ಹಿರಿಯರ ನಾಣ್ಣುಡಿಯನ್ನು ನಿಜ ಮಾಡಿ ಪರಿಸರ ಪ್ರೇಮವನ್ನು ಮೈಗೂಡಿಸಿಕೊಂಡು ಮರಗಿಡಗಳನ್ನು ನೆಟ್ಟು ಮಕ್ಕಳಂತೆ ಪೋಷಣೆ ಮಾಡಬೇಕು ಹಸಿರಿದ್ದರೆ ಉಸಿರು, ಶುದ್ಧವಾದ ಗಾಳಿ ನೀರು ಮತ್ತು ಆಹಾರದಿಂದ ಸಮೃದ್ಧ ಆರೋಗ್ಯ ಎಂಬ ಸತ್ಯ ಅರಿಯಬೇಕು ಎಂದು ನಾಗರಾಜು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ವಿದ್ಯುತ್ ವಿಭಾಗಾಧಿಕಾರಿ ಎ. ಎಸ್. ಹೇಮಲತಾ, ಯಂತ್ರಿಕ ವಿಭಾಗಾಧಿಕಾರಿ ಎಂ.ಎನ್. ಲೋಕೇಶ್, ದೂರಸಂಪರ್ಕ ವಿಭಾಗಾಧಿಕಾರಿ ಮಂಜಪ್ಪಗೌಡ, ಕಾಮಗಾರಿ ವಿಭಾಗದ ಎಸ್. ನಾಗೇಶ್, ಗಣಕಯಂತ್ರ ವಿಭಾಗದ ಆಶಾಲತಾ, ವಿಜ್ಞಾನ ವಿಭಾಗದ ಚಂದ್ರಮೌಳೇಶ್ವರ, ಕಚೇರಿ ಅಧಿಕ್ಷಕಿ ಸುರೇಖ, ಕಾರ್ಯಕ್ರಮ ಸಂಯೋಜಕರಾದ ಮಹಾಲಿಂಗೇಗೌಡ, ಸಿ. ದರ್ಶನ್, ಅಸ್ಮತ್, ಶಶಿಕಲಾ, ಚಾಂದಿನಿ, ನಂದಿನಿ ಸೇರಿದಂತೆ ವಿದ್ಯಾರ್ಥಿಗಳು, ವಿವಿಧ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ವರದಿ.ಡಾ.ಕೆ.ಆರ್.ನೀಲಕಂಠ , ಕೃಷ್ಣರಾಜಪೇಟೆ, ಮಂಡ್ಯ .

error: