May 17, 2024

Bhavana Tv

Its Your Channel

ಕಾಗೇರಿ ಕಣ್ಣಲ್ಲಿ ರಕ್ತವಿಲ್ಲ, ಬಡಜನರ ಕಾಳಜಿ ಇಲ್ಲ: ಮಾರ್ಗರೇಟ್ ಆಳ್ವಾ ವಾಗ್ದಾಳಿ

ಕಾರವಾರ: ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಕಣ್ಣಲ್ಲಿ ರಕ್ತವಿಲ್ಲ; ಬಡಜನರ ಬಗ್ಗೆ ಕಾಳಜಿ ಇಲ್ಲ ಎಂದು ಮಾಜಿ ರಾಜ್ಯಪಾಲರಾದ ಮಾರ್ಗರೇಟ್ ಆಳ್ವಾ ವಾಗ್ದಾಳಿ ನಡೆಸಿದರು.

ಶಿರವಾಡ ಬಂಗಾರಪ್ಪನಗರದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಸ್ಪೀಕರ್ ಇದ್ದರು. ಚುನಾವಣೆಯಲ್ಲಿ ಸೋತು ಈಗ ಮತ್ತೆ ಅಭ್ಯರ್ಥಿಯಾಗಿದ್ದಾರೆ. ಬೆಂಗಳೂರಿನಲ್ಲಿ ಅತಿಕ್ರಮಣದಾರರ ಹೋರಾಟ ನಡೆದಾಗ ಇಡೀ ದಿನ ಹೋರಾಟಗಾರರು ಬಿಸಿಲೆನ್ನದೆ ಕೂತರೂ ನಮ್ಮ ವಿಧಾನಸಭಾಧ್ಯಕ್ಷರು ವಿಧಾನಸಭೆಯಿಂದ ಒಂದು ಕಿ.ಮೀ. ದೂರದ ಪ್ರತಿಭಟನಾ ಸ್ಥಳಕ್ಕೆ ಬಂದಿರಲಿಲ್ಲ. ಈಗ ಬಂದು ಮತ ಕೇಳುತ್ತಿದ್ದಾರೆ. ಜನ ಕಷ್ಟದಲ್ಲಿದ್ದಾಗ ಸಹಾಯಕ್ಕೆ ಬಾರದವರನ್ನ ನೀವು ಗೆಲ್ಲಿಸುತ್ತೀರಾ? ಎಂದು ಪ್ರಶ್ನಿಸಿದರು.

‘ಹಮ್ ದೋ ಹಮಾರಾ ದೋ’ ಎಂಬುದು ಬಿಜೆಪಿಗರ ಕಥೆಯಾಗಿದೆ. ಮೋದಿ, ಶಾ ಸರ್ಕಾರಿ ಆಸ್ತಿಗಳನ್ನ ಮಾರಾಟ ಮಾಡುವುದು, ಅಂಬಾನಿ, ಅದಾನಿ ಅವುಗಳನ್ನ ಖರೀದಿ ಮಾಡುವುದು. ಕಾಂಗ್ರೆಸ್ ಸರ್ಕಾರ ಕೇಂದ್ರದಲ್ಲಿದ್ದಾಗ ದೇಶದಲ್ಲಿ ಜನರ ತೆರಿಗೆಯಿಂದ ಸಾರ್ವಜನಿಕ ಉದ್ದಿಮೆಗಳನ್ನ ಸ್ಥಾಪಿಸಿದ್ದೆವು. ಈಗ ಎಸಿ ರೂಮಲ್ಲಿ ಕುಳಿತು ಅವುಗಳನ್ನ ಮಾರಾಟ ಮಾಡುತ್ತಿದ್ದಾರೆ. ಪುನಃ ಇವರು ಬಂದರೆ ದೇಶದ ಕಥೆ ಮುಗಿದಂತೆ. ‘ಇಸ್ ಬಾರ್ 400 ಪಾರ್’ ಎಂದು ಮೋದಿಯವರು ಹೇಳುತ್ತಿದ್ದಾರೆ. ಸಂಸತ್‌ನಲ್ಲಿ ಸಂವಿಧಾನ ಬದಲಿಸಲು ಅವರಿಗೆ 400 ಬೇಕಾಗಿದೆ. ಎಸ್ಟಿ- ಎಸ್ಸಿ ಮೀಸಲಾತಿ ತೆಗೆಯಲು, ಹಿಂದುಳಿದವರ ಸೌಲಭ್ಯ ಕಡಿತಗೊಳಿಸಲು ಅವರು ಸಂವಿಧಾನ ಬದಲಿಸಲು ಯೋಚಿಸುತ್ತಿದ್ದಾರೆ. ದೇಶದಲ್ಲಿ ಶಾಂತಿ, ನೆಮ್ಮದಿ ಇರಲು, ಪ್ರೀತಿ- ವಿಶ್ವಾಸವಿರಲು ಕಾಂಗ್ರೆಸ್ ಬೇಕು. ಬಿಜೆಪಿ ಸಮಾಜವನ್ನು ತುಂಡು- ತುಂಡು ಮಾಡುತ್ತಿದೆ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಸಚಿವ ರಮಾನಾಥ ರೈ, ಕೆಪಿಸಿಸಿ ಕಾರ್ಯದರ್ಶಿ ನಿವೇದಿತ್ ಆಳ್ವಾ, ಮಾಧ್ಯಮ ವಕ್ತಾರ ನಿಕೇತರಾಜ್ ಮೌರ್ಯ, ಪ್ರಭಾಕರ್ ಮಾಳ್ಸೇಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಮೀರ್ ನಾಯ್ಕ, ಜಿ.ಪಿ.ನಾಯ್ಕ, ಶಂಭು ಶೆಟ್ಟಿ ಮುಂತಾದವರಿದ್ದರು.

error: