March 13, 2025

Bhavana Tv

Its Your Channel

ವಾರದಿಂದ ಬಿಡದೇ ಸುರಿಯುತ್ತಿರುವ ಭಾರೀ ಮಳೆ, ಅಪಾರ ಪ್ರಮಾಣದಲ್ಲಿ ಹಾನಿ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಗಾಳಿ ಮಳೆಯಾಗುತ್ತಿದ್ದು ಅನೇಕ ಕಡೆಗಳಲ್ಲಿ ನದಿಗಳು ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿವೆ.
ಈ ವರ್ಷದ ಮುಂಗಾರು ತಡವಾಗಿ ಪ್ರಾರಂಭವಾಗಿದ್ದರೂ ಸಹ ಜುಲೈ ತಿಂಗಳಿನ ಆರಂಭದಿ0ದಲೇ ಅಧಿಕ ಮಳೆ ಸುರಿಯುತ್ತಿದ್ದು ಭಟ್ಕಳ ತಾಲೂಕಿನಲ್ಲಿಯೂ ಕೂಡಾ ಧಾರಾಕಾರ ಮಳೆಯಾಗುತ್ತಿದೆ. ಕಳೆದ ಸುಮಾರು ಒಂದು ವಾರದಿಂದ ಬಿಡದೇ ಸುರಿಯುತ್ತಿರುವ ಭಾರೀ ಗಾಳಿಯಿಂದಾಗಿ ಅನೇಕ ಭಾಗಗಳಲ್ಲಿ ಅಡಿಕೆ, ತೆಂಗು ಸೇರಿದಂತೆ ಇತರೇ ಜಾತಿಯ ಮರಗಳು ಮುರಿದು ಬೀಳುತ್ತಿದ್ದು ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.
ತಾಲೂಕಿನ ಶಿರಾಲಿ ಭಾಗದಲ್ಲಿ ದೇವಿ ನಾರಾಯಣ ಬಾಕಡ್ ಎನ್ನುವವರಿಗೆ ಸೇರಿದ ಮನೆಗೆ ಭಾಗಶಃ ಹಾನಿಯಾಗಿವೆ. ನಾರಾಯಣ ಜಟ್ಟಾ ನಾಯ್ಕ ಎನ್ನುವವರ ಕೊಟ್ಟಿಗೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಕಾಯ್ಕಿಣಿಯಲ್ಲಿ ಗೌರಿ ದುರ್ಗಪ್ಪ ನಾಯ್ಕ,ಮಂಜುನಾಥ ವೆಂಕಪ್ಪ ನಾಯ್ಕ ಎನ್ನುವವರ ಮನೆಗಳು ಭಾಗಶಃ ಹಾನಿಯಾಗಿವೆ. ಯಲ್ಪಡಿಕವೂರು ಗ್ರಾಮದಲ್ಲಿ ಗೌರಿ ಮಾದೇವ ನಾಯ್ಕ,ಪದ್ಮಾವತಿ ತಿಮ್ಮಪ್ಪ ನಾಯ್ಕ ಎನ್ನುವವರ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಮುಟ್ಟಳ್ಳಿಯಲ್ಲಿ ನಾರಾಯಣ ದೇವರು ಹೆಬ್ಬಾರ ಮನೆ ಮೇಲೆ ಮರ ಬಿದ್ದು ಭಾಗಶ ಹಾನಿಯಾಗಿದೆ.
ಶಿರಾಲಿಯ ನಾಗಪ್ಪ ನಾಯ್ಕ ಎನ್ನುವವರ ಮನೆ ಮೇಲೆ ಹಲಸಿನ ಮರಬಿದ್ದ ಪರಿಣಾಮ ಮನೆಯಲ್ಲಿದ್ದ ನಾಗಪ್ಪ ಅವರಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಉಳಿದಂತೆ ಗ್ರಾಮೀಣ ಭಾಗದಲ್ಲಿ ಅತೀ ಹೆಚ್ಚು ಕಡೆಗಳಲ್ಲಿ ನದಿಯ ನೀರು ಉಕ್ಕಿ ಹರಿದು ನಾಟಿ ಮಾಡಿದ ಭತ್ತದ ಗದ್ದೆಗಳು ಮುಳುಗಡೆಯಾಗಿದ್ದರೆ ಅನೇಕ ಕಡೆಗಳಲ್ಲಿ ನದಿ ನೀರು ತೋಟಕ್ಕೆ ನುಗ್ಗಿ ತೋಟದ ಭಾಗವೇ ಕೊಚ್ಚಿ ಹೋಗಿ ಹಲವಾರು ಮರಗಳು ಧರಾಶಾಯಿಯಾಗಿ ಲಕ್ಷಾಂತರ ರೂಪಾಯಿ ನಷ್ಟವುಂಟಾಗಿದೆ.
ತಾಲೂಕಿನ ವಿವಿಧ ಭಾಗಗಳಲ್ಲಿ ಬೀಸಿದ ಗಾಳಿಯಿಂದಾಗಿ ಹೆಸ್ಕಾಂ ಇಲಾಖೆಯ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದಲ್ಲದೇ ಟ್ರಾನ್ಸ್ ಫಾರ್ಮರ್‌ಗಳಿಗೆ ಕೂಡಾ ಹಾನಿಯಾಗಿರುವ ವರದಿಯಾಗಿದೆ. ತಾಲೂಕಿನಲ್ಲಿ ಒಟ್ಟೂ 18 ವಿದ್ಯುತ್ ಕಂಬಗಳು ನೆಕ್ಕುರುಳಿದ್ದು ಎರಡು ಟ್ರಾನ್ಸ್ಫಾರ್ಮರ್‌ಗಳಿಗೆ ಹಾನಿಯಾಗಿದೆ ಎನ್ನಲಾಗಿದೆ. ಹೆಸ್ಕಾಂ ಸಿಬ್ಬಂದಿಗಳು ಕಂಬಗಳನ್ನು ಮರು ಸ್ಥಾಪನೆಗೆ ಕೆಲಸ ಮಾಡುತ್ತಿದ್ದಾರೆ. ಭಾರೀ ಗಾಳಿ ಮಳೆಯಾಗುತ್ತಿದ್ದು ರಾತ್ರಿ ವೇಳೆ ಮಳೆ ಇನ್ನೂ ಹೆಚ್ಚಾದಲ್ಲಿ ಅನೇಕ ತಗ್ಗು ಪ್ರದೇಶದ ಹಾಗೂ ನದಿ ಪಾತ್ರದ ಜನತೆ ವಿವಿಧ ಭಾಗಗಳಲ್ಲಿ ಬೀಸಿದ ಭಯದಲ್ಲಿಯೇ ರಾತ್ರಿ ಕಳೆಯುವಂತಾಗಿದೆ.

error: