May 6, 2024

Bhavana Tv

Its Your Channel

ಸಂಗೀತದಿOದ ಜನರನ್ನಲ್ಲ, ಜನಾರ್ಧನನ್ನೂ ಮೆಚ್ಚಿಸಬಹುದು – ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಜೀ

ವರದಿ:- ವೇಣುಗೋಪಾಲ ಮದ್ಗುಣಿ.

ಗೋಕರ್ಣ : ಪುಣ್ಯಧರಣೀ ಗೋಕರ್ಣದ ಅಶೋಕೆಯ ಪಾವನ ಪರಿಸರದಲ್ಲಿ ಭೂಮಿ ಹುಣ್ಣಿಮೆಯ ಶುಭಸಂದರ್ಭದ ಇಂದು ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನ ಮತ್ತು ಉಪಸ್ಥಿತಿಯಲ್ಲಿ ನಡೆಯುವ ಎರಡು ದಿನದ ಸಂಗೀತೋತ್ಸವವು ಆರಂಭಗೊoಡಿತು. ಮೊದಲದಿನದ ಸಭೆಯಲ್ಲಿ ದಿವ್ಯಸಾನ್ನಿಧ್ಯವನ್ನು ಕರುಣಿಸಿದ ಶ್ರೀಗಳು ‘ವಿಷ್ಣುಗುಪ್ತ-ವಿಶ್ವವಿದ್ಯಾಪೀಠಕ್ಕೆ ಗಾಂಧರ್ವಲೋಕವೇ ಬಂದಿಳಿದಿದೆ. ಸಂಗೀತ ಎನ್ನುವುದು ಕೇವಲ ಮನೋರಂಜನೆಯ ಸಾಧನವಲ್ಲ. ಅದರಿಂದ ಜನರನ್ನೂ ಜನಾರ್ಧನನ್ನೂ ಮೆಚ್ಚಿಸಬಹುದು. ಅಂತಹ ಸಂಗೀತವನ್ನು ನೀವು ಅಭ್ಯಾಸ ಮಾಡಿ, ಸಂಗೀತಗಾರರoತೆ, ಸಂಗೀತಗಾರರೊoದಿಗೆ ನುಡಿಸುವಂಥ ಸಾಮಾರ್ಥ್ಯವನ್ನು ಪಡೆದುಕೊಳ್ಳಿ’ ಎಂದು ಗೋಕರ್ಣದ ವಿಷ್ಣುಗುಪ್ತ-ವಿಶ್ವವಿದ್ಯಾಪೀಠದ ಆವರಣದ ವಿದ್ಯಾವಿಶ್ವ ಸಭಾಂಗಣದಲ್ಲಿ ಗುರುಕುಲದ ಮಕ್ಕಳಿಗೋಸ್ಕರ ನಡೆದ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳನ್ನು ಆಶೀರ್ವದಿಸಿದರು. ವಿದ್ಯಾರ್ಥಿಗಳು ಕೇವಲ ಆಧುನಿಕ ವಿದ್ಯೆಗಳನ್ನು ಕಲಿತರೆ ಸಾಲದು. ಪಾರಂಪರಿಕವಾದ ಕಲೆಗಳನ್ನೂ ಅಭ್ಯಾಸ ಮಾಡಿ ಭಾರತೀಯ ವಿದ್ಯೆ ಮತ್ತು ಕಲೆಗಳನ್ನು ಮುಂದಿನ ಜನಾಂಗಕ್ಕೆ ಕೊಡುಗೆಯಾಗಿ ನೀಡುವ ಸದುದ್ದೇಶದಿಂದ ವಿದ್ಯಾರ್ಥಿಗಳೇ ಸಂಗೀತಕಾರ್ಯಕ್ರವನ್ನು ಕೇಳಿ, ಅದರ ಮೂಲಕ ತಮಗೆ ಬೇಕಾದ ವ್ಯಾದ್ಯ ಪ್ರಕಾರಗಳನ್ನು ಆಯ್ಕೆಯ ಮಾಡುವ ದೃಷ್ಟಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ‘ಸಂಗೀತ ಎನ್ನುವುದು ಮೋಕ್ಷಸಾಧನವಾಗಿದೆ ಎಂದು ಯಾಜ್ಞ್ಯವಲ್ಕ್ಯಸ್ಮೃತಿಯು ಹೇಳುತ್ತದೆ. ಹಾಗಾಗಿ ಇದು ಕೇವಲ ಮನಸ್ಸಿಗೆ ಮುದನೀಡುವ ಸಾಧನ ಮಾತ್ರವಲ್ಲ’ ಎಂದು ನುಡಿದರು.


ಇದಕ್ಕೂ ಮುನ್ನ ಬೆಳಗ್ಗೆ ಸರಿಯಾಗಿ ಹತ್ತು ಗಂಟೆಗೆ ಕರ್ನಾಟಕ ಸಂಗೀತದ ಪ್ರಾತ್ಯಕ್ಷಿಕೆಯೊಂದಿಗೆ ಆರಂಭವಾದ ಸಂಗೀತೋತ್ಸವ, ನಾಡಿನ ಶ್ರೇಷ್ಠ ಕಲಾವಿದರು ಗುರುಕುಲದ ಮಕ್ಕಳಿಗೆ ಕರ್ನಾಟಕ ಸಂಗೀತವಾದ್ಯದ ವೈಶಿಷ್ಟ್ಯ, ನುಡಿಸುವ ವಿಧಾನ, ಅದರ ಇತಿಹಾಸವನ್ನು ಸುಂದರವಾಗಿ ತಿಳಿಸಿಕೊಟ್ಟರು. ಕಾಂಚನ ಸಹೋದರಿಯರು ಎಂದೇ ಪ್ರಸಿದ್ಧರಾದ ವಿದುಷಿ ಶ್ರುತಿರಂಜಿನೀ ಮತ್ತು ವಿದುಷಿ ಶ್ರೀರಂಜಿನೀ ಅವರು ಸಂಗೀತದ ತಾಯಿಯಾದ ‘ಶ್ರುತಿ’ಯ ಪರಿಚಯವನ್ನು ಮಾಡಿಕೊಟ್ಟರು. ಅವರ ಜೊತೆ ವೇಣುವಿನ ವೈಶಿಷ್ಟ್ಯ, ತಯಾರಿಸುವ ವಿಧಾನದ ಕುರಿತು ವಿದ್ವಾನ್ ನಿತೀಶ್ ಅಮ್ಮಣ್ಣಾಯ ಮತ್ತು ವಾಯಲಿನ್ ಕುರಿತು ಕೆ.ಜೆ ಋತಾ ಅವರು ನಡೆಸಿಕೊಟ್ಟರೆ, ಮೃದಂಗವಾದನ ದಿಗ್ಗಜ ಎನ್ನಿಸಿಕೊಂಡ ವಿದ್ವಾನ್ ಕೆ.ಯು. ಜಯಚಂದ್ರ ರಾವ್, ಘಟವಾದನದಲ್ಲಿ ಖ್ಯಾತಿ ಪಡೆದ ವಿದ್ವಾನ್ ಗಿರಿಧರ ಉಡುಪ, ಖಂಜಿರ, ಮೋರ್ಚಿಂಗ್ ಮತ್ತು ರಿದಮ್ ಪ್ಯಾಡ್ ನಲ್ಲಿ ವಿದ್ವಾನ್ ಕಾರ್ತಿಕ್ ವೈದಾತ್ರಿ, ಕೊನ್ನಕ್ಕೋಲುವಿನಲ್ಲಿ ರಬಿನಂದನ್ ಅವರು ಸಂಗೀತದ ‘ತಂದೆ’ ಎನ್ನಿಸಿದ ಲಯವಾದ್ಯಗಳ ಹುಟ್ಟು, ತಯಾರಿಸುವ ವಿಧಾನ, ಇತಿಹಾಸ, ಸಂಗೀತದಲ್ಲಿ ಅವುಗಳ ಬಳಕೆಯ ಕುರಿತು ಸಮಗ್ರವಾಗಿ ಮಕ್ಕಳಿಗೆ ತಿಳಿಸಿಕೊಟ್ಟರು. ಸಂಜೆ ಈ ಎಲ್ಲಾ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಸಂಪನ್ನವಾಯಿತು. ಎಲ್ಲ ವಾದ್ಯಗಳೂ ಹೇಗೆ ಸಂಗೀತದಲ್ಲಿ ಬಳಕೆಯಾಗುತ್ತದೆ ಎನ್ನುವುದು ಪ್ರತ್ಯಕ್ಷವಾಗಿ ಮಕ್ಕಳಿಗೆ ತೋರಿಸಿಕೊಟ್ಟರು.


ಈ ಸಂದರ್ಭದಲ್ಲಿ ಕರ್ನಾಟಕ ಸಂಗೀತ ಕಾರ್ಯಕ್ರಮದ ನಿರ್ದೇಶಕರೂ, ವಿವಿವಿಯ ಕರ್ನಾಟಕ ಸಂಗೀತ ವಿಭಾಧ್ಯಕ್ಷರೂ ಆಗಿರುವ ವಿದುಷಿ ಕಾಂಚನ ರೋಹಿಣೀ ಸುಬ್ಬರತ್ನಂ ಉಪಸ್ಥಿತರಿದ್ದರು. ಗುರುಕುಲದ ವರಿಷ್ಠಾಚಾರ್ಯರಾದ ವಿದ್ವಾನ ಸತ್ಯನಾರಾಯಣ ಶರ್ಮರು ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮದ ಪ್ರಸ್ತುತತೆಯನ್ನು ತಿಳಿಸಿದರು. ಗುರುಕುಲದ ಕರ್ನಾಟಕ ಸಂಗೀತದ ಆಚಾರ್ಯರಾದ ವಿದ್ವಾನ ರಘುನಂದನ ಬೇರ್ಕಡವು ಕಲಾವಿದರನ್ನು ಸ್ವಾಗತಿಸಿದರು. ಗುರುಕುಲದ ವಿದ್ಯಾರ್ಥಿಗಳೇ ನಿರೂಪಣೆಯನ್ನು ಮಾಡಿದರು. ಗುರುಕುಲದ ಪ್ರಾಚಾರ್ಯರಾದ ಮಹೇಶ ಹೆಗಡೆ ಮಾಳ್ಕೋಡ ಸೇರಿದಂತೆ ಎಲ್ಲಾ ಶಿಕ್ಷಕವರ್ಗದವರು, ವಿದ್ಯಾರ್ಥಿಗಳು ಕಾರ್ಯಕ್ರಮದ ರಸವನ್ನು ಸವಿದರು.

error: