ಹೊನ್ನಾವರ ; `ಏ. 26 ರಂದು ಮುರ್ಡೇಶ್ವರದಲ್ಲಿ ರಾಜಕೀಯ ಸಭೆಯೊಂದರಲ್ಲಿ ಹೊನ್ನಾವರ ತಾಲೂಕು ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ಗೇರುಸೋಪ್ಪ ಅವರು ಸಮಾಜದ ಮತ್ತು ಕಟ್ಟಡದ ಕುರಿತು ಹಗುರವಾಗಿ ಮಾತನಾಡಿರುವುದು ಅವರ ಅಜ್ಞಾನವನ್ನು ಎತ್ತಿತೋರಿಸುತ್ತದೆ. ಅವರು ಕೂಡಲೇ ಕ್ಷಮೆ ಕೇಳಬೇಕು’ ಎಂದು ಜಿಲ್ಲಾ ನಾಮಧಾರಿ ಸಂಘದ ಕಾರ್ಯದರ್ಶಿ ಎನ್.ಕೆ.ನಾಯ್ಕ ಆಗ್ರಹಿಸಿದರು.
ಹೊನ್ನಾವರ ನಾಮಧಾರಿ ವಿದ್ಯಾರ್ಥಿ ನಿಲಯದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜಕೀಯ ಸಭೆಯೊಂದರಲ್ಲಿ ನಾಮಧಾರಿ ಕಟ್ಟದ ಕುರಿತಾಗಿ ಇಲ್ಲಸಲ್ಲದ ಭಾಷಣ ಮಾಡಿದ್ದು, ಇದು ಸಮಸ್ತ ನಾಮಧಾರಿಗಳಿಗೆ ಆದ ಅವಮಾನವಾಗಿದೆ. ಮಂಜುನಾಥ ನಾಯ್ಕ ಅವರಿಗೆ ಕಟ್ಟಡ ಭಿಕ್ಷೆ ಬೇಡಿ ಕಟ್ಟಿದ್ದಾರೆ ಎಂದು ಹೇಳುವ ಅಧಿಕಾರ ಇಲ್ಲ. ಅವರ ಮಾತಿನಿಂದ ಸಮಾಜಕ್ಕೆ ತೀವ್ರ ಆಘಾತವಾಗಿದೆ. ಸಮಾಜ ಬಾಂದವರು ಸ್ವ ಇಚ್ಛೆಯಿಂದ ಗೌರವಯುತವಾಗಿ ದೇಣಿಗೆ ಕೊಟ್ಟಿದ್ದು, ಯಾರಿಂದಲೂ ಭಿಕ್ಷೆ ಬೇಡಿ ಕಟ್ಟಿಲ್ಲ. ಅವರ ಈ ಹೇಳಿಕೆ ಹಿಂಪಡೆದು ಸಮಾಜದ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದರು.
ವಕೀಲ ವಿಕ್ರಮ್ ನಾಯ್ಕ ಮಾತನಾಡಿ, ಮಂಜುನಾಥ ನಾಯ್ಕ ಅವರು ತಾಲೂಕು ಸಂಘದ ಅಧ್ಯಕ್ಷ ಸ್ಥಾನವನ್ನು ದುರುಪಯೊಗಪಡಿಸಿಕೊಂಡಿದ್ದಾರೆ. ನಾಮಧಾರಿ ಸಮಾಜದ ಅಧ್ಯಕ್ಷೀಯ ಜವಾಬ್ದಾರಿ ಮರೆತು ಪಕ್ಷದ ಕಾರ್ಯಕ್ರಮದಲ್ಲಿ ಸಮಸ್ತ ನಾಮಧಾರಿ ಸಮಾಜದ ಪರವಾಗಿ ಬಾಲಿಷತನದ ಹೇಳಿಕೆ ನೀಡಿರುವುದು ತಪ್ಪು. ಕಟ್ಟಡ ನಿರ್ಮಾಣಕ್ಕೆ ಸಮಾಜದ ಅನೇಕರು ತಮ್ಮ ಸ್ವ ಇಚ್ಛೆಯಿಂದ ಧನಸಹಾಯ ನೀಡಿದ್ದಾರೆ. ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ದೇಣಿಗೆ ನೀಡಿದ್ದಾರೆ. ಇದನ್ನು ಮಂಜುನಾಥ ನಾಯ್ಕ ಅವರು ರಾಜಕೀಯವಾಗಿ ಬಳಸಿಕೊಂಡು, ಯಾರನ್ನೋ ಓಲೈಸಲು ಹೋಗಿ ಸಮಾಜದ ತೇಜೋವಧೆ ಮಾಡಿದ್ದಾರೆ. ಮಾಜಿ ಶಾಸಕಿ ಶಾರದಾ ಶೆಟ್ಟಿ,ಶಾಸಕ ಸುನೀಲ್ ನಾಯ್ಕರವರು ಸರ್ಕಾರದಿಂದ ಕಾನೂನುಬದ್ಧವಾಗಿ ದೊರಕಬಹುದಾದ ಅನುದಾನವನ್ನು ನಮ್ಮ ಕಟ್ಟಡ ನಿಧಿಗೆ ಕೊಡಿಸಿದ್ದಾರೆ. ಕಟ್ಟಡ ಕಟ್ಟಲು ಭಿಕ್ಷೆ ನೀಡಿ ಹಣ ಸಂಗ್ರಹಿಸಿದ್ದಾರೆ ಎಂದು ಭಾಷಣ ಮಾಡುವ ಮೂಲಕ ಮಾತಿನ ಹಿಡಿತವನ್ನು ತಪ್ಪಿದ್ದಾರೆ. ಇದು ಸಮಾಜಕ್ಕೆ ಆದ ದೊಡ್ಡ ಅನ್ಯಾಯವಾಗಿದೆ. ತಕ್ಷಣ ಅವರು ಈ ಬಗ್ಗೆ ಕ್ಷಮೇ ಕೇಳುವ ಮೂಲಕ ಪತ್ರಿಕೆಗೂ ಹೇಳಿಕೆ ನೀಡಬೇಕು. ಚುನಾವಣಾ ಪ್ರಚಾರದ ಸಭೆಯಲ್ಲಿ ಸಮಾಜದ ಸಂಘಟನೆಯ ಜವಾಬ್ದಾರಿ ಸ್ಥಾನದಲ್ಲಿರುವ ಯಾವುದೇ ವ್ಯಕ್ತಿಗಳು ಸಮಾಜದ ನಿಲುವನ್ನು ಪ್ರಕಟಿಸುವ ಹಕ್ಕನ್ನು ಯಾರು ಹೊಂದಿಲ್ಲ. ಇದೇ ರೀತಿ ಯಾರೇ ಆಗಲಿ ಸಮಾಜದ ವಿರುದ್ಧ ಇಲ್ಲಸಲ್ಲದ ಮಾತನಾಡಿದರೆ ಸ್ವಾಭಿಮಾನಿ ನಾಮಧಾರಿಗಳು ಎಚ್ಚೆತ್ತುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಂಘದ ಉಪಾಧ್ಯಕ್ಷ ವಿ.ಜಿ.ನಾಯ್ಕ ಮಾತನಾಡಿ,
ನಮ್ಮ ಸಮಾಜದ ಕಟ್ಟಡ ಕಟ್ಟುವಲ್ಲಿ ಸಮಾಜ ಬಾಂಧವರು ತನು-ಮನ-ಧನ-ಸಹಕಾರದಿಂದ ಹಾಗೂ ಕಟ್ಟಡ ಸಮಿತಿಯ ಅಧ್ಯಕ್ಷರು ಮತ್ತು ಜಿಲ್ಲಾ ನಾಮಧಾರಿ ಸಂಘದ ಅಧ್ಯಕ್ಷರ ನೇತೃತ್ವದಲ್ಲಿ ಈ ಭವ್ಯ ಸಭಾಭವನ ತಲೆ ಎತ್ತಿ ನಿಂತಿದೆ. ಮಂಜುನಾಥ ನಾಯ್ಕ ಹೇಳಿಕೊಳ್ಳುತ್ತಿರುವಂತೆ ಒಬ್ಬ ವ್ಯಕ್ತಿಯ ಪ್ರಯತ್ನದಿಂದ ಈ ಕಟ್ಟಡ ನಿರ್ಮಿಸಿದ್ದಲ್ಲ. ಸಭೆಯಲ್ಲಿ ಹೇಳಿರುವ ಹೇಳಿಕೆಯನ್ನು ಸಂಘದ ಪದಾಧಿಕಾರಿಗಳು ಅತ್ಯಂತ ಉಗ್ರವಾಗಿ ಖಂಡಿಸುತ್ತೇವೆ. ಅವರು ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿ.ಜೆ.ನಾಯ್ಕ, ಎಂ.ಜಿ.ನಾಯ್ಕ, ಡಿ.ಎನ್.ನಾಯ್ಕ, ರಾಮಪ್ಪ ನಾಯ್ಕ, ರಾಮಾ ನಾಯ್ಕ, ದತ್ತಾತ್ರೇಯ ನಾಯ್ಕ ಸೇರಿದಂತೆ ಸಮಾಜದ ಅನೇಕರು ಇದ್ದರು.
More Stories
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ
“ದಿ ಓಶೀಯನ್ ಕನೆಕ್ಷನ್” ಎಂಬ ಸಾಕ್ಷ್ಯಚಿತ್ರದ ಪ್ರದರ್ಶನ