ಕುಮಟಾ ಮಣಕಿ ಮೈದಾನದಲ್ಲಿ ನಡೆದ ಹೊಳಪು ಕಾರ್ಯಕ್ರಮವನ್ನು ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು.
ಕುಮಟಾ: ಕೇವಲ ಅಭಿವೃದ್ಧಿ ಕಾರ್ಯಗಳೊಂದೇ ಅಲ್ಲದೇ ಜನಪ್ರತಿನಿಧಿಗಳ ಜನರೊಂದಿಗಿನ ಒಡನಾಟದಿಂದ ಸರಕಾರದ ಬಗ್ಗೆ ಉತ್ತಮ ಅಭಿಪ್ರಾಯ ಕೇಳಿ ಬರಲು ಸಾಧ್ಯವಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಕುಮಟಾ ಪಟ್ಟಣದ ಮಣಕಿ ಮೈದಾನದಲ್ಲಿ ನಡೆದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಸ್ಪರ್ಧೆ ಹೊಳಪು-೨೦೨೩ ರ ಪಂಚಾಯತ್ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಗಣನೀಯ ಕೊಡುಗೆ ನೀಡಿದ್ದಾರೆ. ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ, ವಸತಿ ನಿಲಯ, ಪಂಚಾಯತ ಸದಸ್ಯರ ಅನುದಾನ ಹೆಚ್ಚಳ, ಹೀಗೆ ಹತ್ತು ಹಲವು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ.ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಜನರೂ ಕೂಡ ಅವರ ಮೇಲೆ ಅಪಾರ ನಂಬಿಕೆ ಇಟ್ಟಿದ್ದಾರೆ. ಅದೇ ರೀತಿ ಸ್ಥಳೀಯ ಸಂಸ್ಥೆಗಳ ಸದಸ್ಯರು ಜನರ ಸಮಸ್ಯೆಗೆ ಇನ್ನೂ ಹೆಚ್ಚಿನ ಸ್ಪಂದನೆ ತೋರಬೇಕು.ಜನ ತೀವ್ರ ಅಭಿವೃದ್ಧಿ ಬಯಸುತ್ತಿದ್ದಾರೆ,ಆದರೆ ಲಭ್ಯವಿರುವ ಅನುದಾನ ಇತರ ಕೆಲ ವಿಷಯಗಳನ್ನು ಗಮನಿಸಿ ಶೀಘ್ರ ಸೂಕ್ತ ಕ್ರಮ ವಹಿಸಬೇಕಾಗಿದೆ ಎಂದು ಸೂಚಿಸಿದ ಅವರು ವಿಕೇಂದ್ರೀಕರಣ ವ್ಯವಸ್ಥೆಯಡಿ ಪ್ರಜಾಪ್ರಭುತ್ವ ಯಶಸ್ವಿಯಾಗಿ ನಡೆಸುವ ಮೂಲಕ ಜನಮನ ಗೆಲ್ಲೋಣ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ ಹೊಳಪು ಕಾರ್ಯಕ್ರಮದಿಂದ ಜಿಲ್ಲೆಯ ಎಲ್ಲಾ ಸರಕಾರಿ ನೌಕರರು, ಜನಪ್ರತಿನಿಧಿಗಳು ಕ್ರೀಡೆಯಲ್ಲಿ ಪಾಲ್ಗೊಂಡು, ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ.ಇದರಿಂದಾಗಿ ಎಲ್ಲರಿಗೂ ಮನರಂಜನೆ ಜೊತೆಗೆ ವಿಶೇಷವಾದ ದಿನ ಅವರಿಗೆ ದೊರಕಿದಂತಾಗಿದೆ.ಈ ವೇಳೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ಕ್ರೀಡಾಂಗಣವನ್ನು ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿ ಮಾತನಾಡಿ ಮೈಸೂರು ದಸರೆಯಂತಹ ಕಾರ್ಯಕ್ರಮ ಕುಮಟಾ ಮಣಕಿ ಮೈದಾನದಲ್ಲಿ ನಡೆಸುತ್ತಿರುವ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ.ಜಿಲ್ಲೆಯವರಲ್ಲದೇ ಇದ್ದರೂ ಜಿಲ್ಲಾ ಉಸ್ತುವಾರಿ ಮಂತ್ರಿಗಳ ಜಿಲ್ಲೆಯ ಬಗೆಗಿನ ಈ ಅನನ್ಯ ಪ್ರೀತಿಗೆ ಅನಂತ ಅಭಿನಂದನೆಗಳು ಎಂದರು.
ಕಾರ್ಯಕ್ರಮದ ಆರಂಭದಲ್ಲಿ ವಿವಿಧ ಪಂಚಾಯತಿಗಳಿ0ದ ನಡೆದ ಛದ್ಮವೇಶ ಸ್ಪರ್ದೆಗಳು ಗಮನ ಸೆಳೆದವು.
ವಿಧಾನ ಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ, ಶಾಂತಾರಾಮ ಸಿದ್ದಿ, ಶಾಸಕರಾದ ಸುನೀಲ್ ನಾಯ್ಕ,ರೂಪಾಲಿ ನಾಯಕ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಸಹಾಯಕ ಆಯುಕ್ತರಾದ ರಾಘವೇಂದ್ರ ಜಗಲಾಸರ, ತಹಶೀಲ್ದಾರ್ ವಿವೇಕ ಶೆಣ್ವಿ, ಬಿಇಓ ರಾಜೇಂದ್ರ ಭಟ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಾಗರತ್ನ ನಾಯಕ್, ಡಿಡಿಪಿಐ ಈಶ್ವರ ನಾಯ್ಕ, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ, ತಾಲೂಕಾ ಪಂಚಾಯತ ಮತ್ತು ಜಿಲ್ಲಾ ಪಂಚಾಯತ, ಪಟ್ಟಣ ಪಂಚಾಯತ, ಪುರಸಭೆ, ನಗರಸಭೆಗಳ ಜನಪ್ರತಿನಿಧಿಗಳು, ಸೇರಿದಂತೆ ಸಾವಿರಾರು ಸಂಖ್ಯೆಯ ನೌಕರರು ಇದ್ದರು.
ವರದಿ ವಿಶ್ವನಾಥ ಜಿ ನಾಯ್ಕ ಕುಮಟಾ
More Stories
ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಶಾಲೆಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ: ಶೇ. 94.23
ಮೋದಿ ಒಬ್ಬ ಒಳ್ಳೆ ನಾಟಕಕಾರ, ಇವೆಂಟ್ ಮ್ಯಾನೇಜರ್: ಸಿದ್ದರಾಮಯ್ಯ
ಜೆಡಿಎಸ್ ತೊರೆದು ‘ಕೈ’ ಹಿಡಿದ ಶಾಬಂದ್ರಿ