December 22, 2024

Bhavana Tv

Its Your Channel

ವೀರ ಯೋಧ ಅಶೋಕ ಮಂಜುನಾಥ ಹೆಗಡೆ (೩೮) ಅವರ ಪಾರ್ಥಿವ ಶರೀರವನ್ನು ಮಂಗಳವಾರ ಅವರ ಸ್ವಗೃಹವಾದ ವಾಲಗಳ್ಳಿಯ ಕೋಟೆಗುಡ್ಡೆಗೆ ತರಲಾಗಿದ್ದು, ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.

ಕುಮಟಾ: ದೇಶದ ಭದ್ರತೆಯ ರಕ್ಷಣಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೀರ ಯೋಧ ಅಶೋಕ ಹೆಗಡೆ ಅವರು ಕೆಲ ತಿಂಗಳುಗಳಿAದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ಕೆಲ ತಿಂಗಳುಗಳ ಹಿಂದೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದ ಅವರು, ಕೊಂಚ ಸುಧಾರಿಸಿಕೊಂಡು ನಂತರ ತಮಿಳುನಾಡಿನಲ್ಲಿ ಪುನಃ ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಮತ್ತೆ ಕಳೆದ ೧೫ ದಿನಗಳ ಹಿಂದೆ ಆರೋಗ್ಯದಲ್ಲಿ ತೀವ್ರ ಏರುಪೇರು ಕಾಣಿಸಿಕೊಂಡಿದ್ದ ಪರಿಣಾಮ ಅವರನ್ನು ಬೆಂಗಳೂರಿನ ಮಿಲಿಟರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಿಗ್ಗೆ ಅವರು ಕೊನೆಯುಸಿರೆಳೆದಿದ್ದಾರೆ. ಮಂಗಳವಾರ ಅವರ ಪಾರ್ಥಿವ ಶರೀರವನ್ನು ವಾಲಗಳ್ಳಿಯ ಕೋಟೆಗುಡ್ಡೆಯ ಅವರ ಸ್ವಗೃಹಕ್ಕೆ ತಂದು ಸಕಲ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.
ಮಂಗಳವಾರ ಮುಂಜಾನೆ ಅವರ ಮೃತ ದೇಹವನ್ನು ಈರ್ವರು ಸೈನಿಕರ ನೇತೃತ್ವದಲ್ಲಿ ಹುಟ್ಟೂರಿಗೆ ತರಲಾಯಿತು. ಮೃತರ ಅಂತಿಮ ನಮನಕ್ಕಾಗಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯಿಂದ ಗಾಳಿಯಲ್ಲಿ ಮೂರು ಸುತ್ತು ಕುಶಾಲ ತೋಪು ಚಲಾಯಿಸಿ ಗೌರವ ಸಮರ್ಪಿಸಲಾಯಿತು. ೨ ನಿಮಿಷಗಳ ಕಾಲ ಮೌನಾಚರಣೆ ನಡೆಸಲಾಯಿತು. ನಂತರ ಸೇನೆಯ ಈರ್ವರು ಸೈನಿಕರು ಹಾಗೂ ಎನ್.ಸಿ.ಸಿ ಅಧಿಕಾರಿಗಳು ಹಾಗೂ ಕೆಡೆಟ್‌ಗಳನ್ನು ಒಳಗೊಂಡ ತಂಡ ಮೃತರ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿ ಗೌರವಸಲ್ಲಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ, ಜೆಡಿಎಸ್ ಮುಖಂಡ ಸೂರಜ ನಾಯ್ಕ ಸೋನಿ, ಕಾಂಗ್ರೆಸ್ ಯುವ ಮುಖಂಡ ರವಿಕುಮಾರ ಶೆಟ್ಟಿ ಹಾಗೂ ಇತರ ಜನಪ್ರತಿನಿಧಿಗಳು, ಅನೇಕ ಗಣ್ಯರು, ಉಪವಿಭಾಗಾಧಿಕಾರಿ ಅಜೀತ ಎಂ, ತಹಸೀಲ್ದಾರ್ ಮೇಘರಾಜ ನಾಯ್ಕ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಊರ ನಾಗರಿಕರು ಅಂತಿಮ ದರ್ಶನ ಪಡೆದರು. ಬಳಿಕ ಕುಮಟಾ ತಾಲೂಕು ಆಡಳಿತದಿಂದ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು. ಮೃತರು ಪತ್ನಿ, ಮಗಳು, ತಾಯಿ, ತಮ್ಮ, ತಂಗಿ ಹಾಗೂ ಅಪಾರ ಬಂಧುಬಳಗದವರನ್ನು ಅಗಲಿದ್ದು, ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡ ಗಣ್ಯರು ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

error: