ಮಳವಳ್ಳಿ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸೇರಿದ ಕಟ್ಟಡವೊಂದಕ್ಕೆ ಗುದ್ದಲಿ ಪೂಜೆ ಮಾಡುವ ವೇಳೆ ಎರಡು ಗುಂಪಿನ ನಡುವೆ ಪರಸ್ಪರ ವಾಗ್ವಾದ ಮಾತಿನ ಚಕಮಕಿ ನಡೆದು ಸೊಸೈಟಿ ಆವರಣದಲ್ಲಿ ಕೆಲಕಾಲ ಉದ್ರಿಕ್ತ ನಿರ್ಮಾಣವಾಗಿದ್ದ ಪ್ರಸಂಗ ಮಳವಳ್ಳಿ ತಾಲೂಕಿನ ಅಮೃತೇಶ್ವರನಹಳ್ಳಿ ಕಾಲೋನಿಯಲ್ಲಿರುವ ಕೆಂಬೂತಗೆರೆ ಪ್ರಾಥಮಿಕ ಸಹಕಾರ ಸಂಘದ ಆವರಣದಲ್ಲಿ ಜರುಗಿತು.
ಸೊಸೈಟಿ ಆವರಣದಲ್ಲಿ ನಬಾರ್ಡ ಯೋಜನೆಯಡಿ ಸುಮಾರು ೪೫ ಲಕ್ಷ ರೂ ವೆಚ್ಚದಲ್ಲಿ ಗೋದಾಮು ಕಟ್ಟಡ ನಿರ್ಮಾಣಕ್ಕೆ ಆಡಳಿತ ಮಂಡಳಿ ತೀರ್ಮಾನಿಸಿದ್ದು ಈ ಕಾಮಗಾರಿಗೆ ಬೆಳಿಗ್ಗೆ ಭೂಮಿ ಪೂಜೆ ಮಾಡುವ ಕಾರ್ಯಕ್ರಮವನ್ನು ಸೊಸೈಟಿ ಅಧ್ಯಕ್ಷ ದ್ಯಾಪೇಗೌಡ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು. ಶಾಸಕರಾದ ಡಾ ಕೆ ಅನ್ನದಾನಿ ಹಾಗೂ ಸಂಸದರಾದ ಸುಮಲತಾ ಅಂಬರೀಶ್ ಅವರಿಗೆ ಸಹ ನಿಯಮಾವಳಿಯಂತೆ ಆಹ್ವಾನ ನೀಡಲಾಗಿತ್ತಾದರೂ ಅವರು ಗೈರು ಹಾಜರಿ ಕಾರಣ ಆಡಳಿತ ಮಂಡಳಿಯೇ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗುತ್ತಿದೆ ಎಂದು ದ್ಯಾಪೇಗೌಡ ಸ್ಪಷ್ಟನೆ ನೀಡಿದರು.
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಜೆಡಿಎಸ್ ಬೆಂಬಲಿತ ನಿರ್ದೇಶಕ ಕೆಂಪರಾಜು, ಮುಖಂಡರಾದ ಶಂಕರೇಗೌಡ ಮತ್ತಿತರ ಜೆಡಿಎಸ್ ಬೆಂಬಲಿಗರ ಗುಂಪು ಶಾಸಕರು ನೀಡಿದ ದಿನಾಂಕ ದಂದು ಕಾರ್ಯಕ್ರಮ ನಡೆಸದ ತಾವೇ ದಿನಾಂಕ ನಿಗದಿಪಡಿಸಿ ಕೊಂಡು ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಕಿಡಿ ಕಾರಿದರು.
ಅಲ್ಲದೆ ಕಾಮಗಾರಿಗೆ ಟೆಂಡರ್ ನೀಡಿಕೆಯಲ್ಲಿ ಸಹ ಅಕ್ರಮ ನಡೆದಿದ್ದು ಈ ಕಟ್ಟಡ ಸಹ ಅಗತ್ಯವಿಲ್ಲದಿದ್ದರೂ ಕಮಿಷನ್ ಆಸೆಗಾಗಿ ನಿರ್ಮಾಣ ಮಾಡಲಾಗುತ್ತಿದ್ದು ಯಾವುದೇ ಕಾರಣಕ್ಕೂ ಭೂಮಿ ಪೂಜೆ ಮಾಡಲು ಬಿಡುವುದಿಲ್ಲ ಎಂದು ಹರಿಹಾಯ್ದರು.
ಈ ಸಂಬAಧ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ಕೈ ಕೈ ಮಿಲಾಯಿಸುವ ಹಂತ ತಲುಪಿ ಸೊಸೈಟಿ ಆವರಣದಲ್ಲಿ ಕೆಲ ಕಾಲ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿತ್ತು ಕೂಡಲೇ ಮಧ್ಯ ಪ್ರವೇಶಿಸಿದ ಗ್ರಾಮಾಂತರ ಠಾಣೆಯ ಪಿಎಸ್‌ಐ ರವಿಕುಮಾರ್ ಅವರು ಸಹಕಾರ ಇಲಾಖೆಯ ಹಿರಿಯ ಅಧಿಕಾರಿಗಳು ಬಂದು ಸೂಕ್ತ ತೀರ್ಮಾನ ಕೈಗೊಳ್ಳುವ ವರೆವಿಗೂ ಯಾವುದೇ ಗುದ್ದಲಿ ಪೂಜೆ ಮಾಡುವುದು ಬೇಡ ಎಂದು ಹೇಳಿ ಸೊಸೈಟಿ ನಿರ್ಧೇಶಕರನ್ನು ಬಿಟ್ಟು ಉಳಿದೆಲ್ಲಾ ಜೆಡಿಎಸ್ ಕಾಂಗ್ರೆಸ್ ಬೆಂಬಲಿಗರನ್ನು ಸೊಸೈಟಿ ಆವರಣದಿಂದ ಹೊರಹಾಕುವ ಯತ್ನದಲ್ಲಿ ಇರುವಾಗಲೇ ಮತ್ತೊಂದೆಡೆ ಅಧ್ಯಕ್ಷ ದ್ಯಾಪೇಗೌಡ ಹಾಗೂ ಬೆಂಬಲಿಗ ನಿರ್ಧೇಶಕರು ಏಕಾಏಕಿ ಹಾರೆ ಗುದ್ದಲಿ ತಂದು ಗಡಿಬಿಡಿಯಲ್ಲಿ ಪೊಲೀಸರ ವಿರೋಧದ ನಡುವೆಯೂ ಪೂಜೆ ಸಲ್ಲಿಸಿ ಗುದ್ದಲಿ ಪೂಜೆ ಆಯಿತು ಎಂದು ಘೋಷಿಸಿದರು.
ಈ ಹಂತದಲ್ಲಿ ಪೂಜೆಯನ್ನು ತಡೆಯುವ ಪ್ರಯತ್ನವಾಗಿ ಜೆಡಿಎಸ್ ಬೆಂಬಲಿತ ನಿರ್ಧೇಶಕ ಕೆಂಪರಾಜು ಹಾರೆ ಗುದ್ದಲಿಯನ್ನು ಕಿತ್ತಿಕೊಳ್ಳಲು ಮುಂದಾದಾಗ ಎರಡು ಕಡೆಯವರ ನಡುವೆ ಕೆಲಕಾಲ ಕಿತ್ತಾಟ ಜಟಾಪಟಿ ನಡೆಯಿತು.
ಈ ಸಂದರ್ಭದಲ್ಲಿ ಮಹಿಳೆಯರಾದ ನಮ್ಮನ್ನು ತಳ್ಳುವ ಮೂಲಕ ನಿರ್ಧೇಶಕ ಕೆಂಪರಾಜು ನಮ್ಮ ಮೇಲೆ ದೌರ್ಜನ್ಯ ನಡೆಸಿದರು ಎಂದು ಗ್ರಾ ಪಂ ಅಧ್ಯಕ್ಷರಾದ ಯಶೋದಮ್ಮ ಹಾಗೂ ಮಹಿಳಾ ನಿರ್ಧೇಶಕರು ಆರೋಪಿಸಿದರು.
ಈ ಎಲ್ಲಾ ಜಟಾಪಟಿ ನಡುವೆ ಗುದ್ದಲಿ ಪೂಜೆಗೆ ಅವಕಾಶ ನೀಡಿದ ಪೊಲೀಸರು ಹಾಗೂ ಆಡಳಿತ ಮಂಡಳಿ ವಿರುದ್ಧ ಜೆಡಿಎಸ್ ಬೆಂಬಲಿತ ಗುಂಪು ಘೋಷಣೆಗಳನ್ನು ಕೂಗಿದರು.
ಪರಿಸ್ಥಿತಿ ಬಿಗಡಾಯಿಸುವ ಸೂಚನೆ ಅರಿತ ಪೊಲೀಸರು ಎರಡು ಗುಂಪಿನವರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ವರದಿ: ಮಲ್ಲಿಕಾರ್ಜುನಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ