December 22, 2024

Bhavana Tv

Its Your Channel

ಶಾಲಾ ಆವರಣ ಪಕ್ಕದಲ್ಲೇ ನಿರ್ಮಾಣಗೊಳ್ಳುತ್ತಿರುವ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಸಾರ್ವಜನಿಕರಿಂದ ತೀವ್ರ ವಿರೋಧ

ಮಳವಳ್ಳಿ : ವಸತಿ ಶಾಲೆಯ ಪಕ್ಕದಲ್ಲೇ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಮುಂದಾಗಿರುವ ಗ್ರಾಮ ಪಂಚಾಯತಿ ಅಧಿಕಾರಿಗಳ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಳವಳ್ಳಿ ತಾಲೂಕಿನ ಐನೋರ ಹುಂಡಿ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಸದರಿ ಸ್ಥಳದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಮುಂದಾದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ತಾಲೂಕಿನ ಸರಗೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಐನೋರ ಹುಂಡಿ ಗ್ರಾಮದ ಸರ್ವೆ ನಂಬರ್ ೨೭೦ ರಲ್ಲಿರುವ ಸರ್ಕಾರಿ ಜಮೀನಿನ ೨೦ ಗುಂಟೆ ಜಾಗದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಈಗಾಗಲೇ ಪಂಚಾಯ್ತಿ ಯವರು ತಳಪಾಯ ತೋಡಲು ಮುಂದಾಗಿದ್ದು ಪಂಚಾಯ್ತಿಯವರ ಈ ಕ್ರಮದ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಗ್ರಾಮದ ಮುಖಂಡರಾದ ಸಿದ್ದಪ್ಪ ಅವರು ಸದರಿ ಕಸ ವಿಲೇವಾರಿ ಘಟಕ ಸ್ಥಾಪನೆಯ ಕೇವಲ ೨೦ ರಿಂದ ೩೦ ಮೀಟರ್ ಸನಿಹದಲ್ಲೇ ಇಂದಿರಾಗಾAಧಿ ವಸತಿ ಶಾಲೆಯ ನೂತನ ಬೃಹತ್ ಕಟ್ಟಡ ನಿರ್ಮಾಣ ವಾಗಿದ್ದು ಸುಮಾರು ೨೫೦ ಮಕ್ಕಳು ವ್ಯಾಸಂಗ ಮಾಡುವ ಈ ವಸತಿ ಶಾಲೆಯ ಕಟ್ಟಡದ ಜೊತೆಗೆ ಶಾಲೆಯ ಪ್ರಾಂಶುಪಾಲರ, ಶಿಕ್ಷಕರ ವಸತಿ ಗೃಹಗಳು ಸಹ ನಿರ್ಮಾಣವಾಗಿದ್ದು ಮುಂದಿನ ತಿಂಗಳು ಈ ಶಾಲೆ ಉದ್ಘಾಟನೆ ಯಾಗುತ್ತಿದೆ ಇಂತಹ ಬೃಹತ್ ಶಿಕ್ಷಣ ಸಂಸ್ಥೆಯ ಪಕ್ಕದಲ್ಲೇ ಅದೂ ೨೦-೩೦ ಮೀಟರ್ ದೂರದಲ್ಲಿ ಇಡೀ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಮುಂದಾಗಿರುವುದು ಅಧಿಕಾರಿಗಳ ಬೇಜವಾಬ್ದಾರಿ ತನದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಘಟಕ ಸ್ಥಾಪನೆಯಿಂದ ಶೈಕ್ಷಣಿಕ ಸಂಸ್ಥೆಯ ಸುತ್ತಮುತ್ತಲಿನ ಪರಿಸರ ಹಾಳಾಗುವುದರ ಜೊತೆಗೆ ಮಕ್ಕಳ ಆರೋಗ್ಯದ ಮೇಲೆ ಸಹ ದುಷ್ಪರಿಣಾಮಗಳು ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಗ್ರಾಮಸ್ಥರ ವಿರೋಧವನ್ನು ಲೆಕ್ಕಿಸದೆ ಇದೇ ಸ್ಥಳದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಗೆ ಮುಂದಾಗಿರುವ ಪಂಚಾಯ್ತಿ ಪಿಡಿಓ ಅವರು ತಡೆಯಲು ಬರುವ ಗ್ರಾಮಸ್ಥರ ವಿರುದ್ಧ ಕೇಸು ದಾಖಲಿಸುವುದಾಗಿ ಧಮಕಿ ಹಾಕುತ್ತಿದ್ದು ಇದು ಅಧಿಕಾರಿಗಳ ದುಂಡಾ ವರ್ತನೆಗೆ ಸಾಕ್ಷಿಯಾಗಿದೆ ಎಂದು ಕಿಡಿ ಕಾರಿದರು.
ಮಾಜಿ ಗ್ರಾ ಪಂ ಸದಸ್ಯ ಹಾಗೂ ಗ್ರಾಮದ ಮುಖಂಡರಾದ ಮಹಾದೇವು ಅವರು ಮಾತನಾಡಿ ಹಿಂದಿನ ಆಡಳಿತ ಮಂಡಳಿಯು ಈ ಘಟಕ ಸ್ಥಾಪನೆಗೆ ಬೇರೆ ಜಾಗ ಗುರುತಿಸಿದ್ದು ಅದನ್ನು ಬದಲಾಯಿಸಿರುವ ಈಗಿನ ಆಡಳಿತ ಮಂಡಳಿ ಈ ಶಿಕ್ಷಣ ಸಂಸ್ಥೆಯ ಪಕ್ಕದಲ್ಲಿರುವ ಜಾಗದಲ್ಲಿ ಘಟಕ ಸ್ಥಾಪನೆಗೆ ಮುಂದಾಗಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಕಾರಣಕ್ಕೂ ಇಲ್ಲಿ ಕಸ ವಿಲೇವಾರಿ ಘಟಕ ಸ್ಥಾಪಿಸಿ ಇಲ್ಲಿನ ಸುಂದರ ಪರಿಸರ ಹಾಳು ಮಾಡುವುದರ ಜೊತೆಗೆ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಲು ಬಿಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ ಗ್ರಾಮಸ್ಥರು ನಮ್ಮ ವಿರೋಧ ಲೆಕ್ಕಿಸದೆ ಘಟಕ ಸ್ಥಾಪನೆಗೆ ಮುಂದಾದರೆ ತೀವ್ರತರದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ಸರಗೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಚಂದ್ರಹಾಸ ಅವರು ಐನೋರ ಹುಂಡಿ ಗ್ರಾಮದ ಸರ್ವೆ ನಂಬರ್ ೨೭೦ ರ ಜಾಗದಲ್ಲಿ ಕಸ ವಿಲೇವಾರಿ ಘಟಕ ಸ್ಥಾಪನೆಯಿಂದ ಅಲ್ಲಿನ ವಸತಿ ಶಾಲಾ ಪರಿಸರಕ್ಕೆ ತೊಂದರೆ ಯಾಗಲಿದೆ ಎಂಬ ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಸದರಿ ಘಟಕವನ್ನು ಬೇರೆಡೆಗೆ ಸ್ಥಳಾಂತರಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಬದಲಿ ಜಾಗವನ್ನು ಗುರುತಿಸಿ ಕೊಡುವಂತೆ ಕಂದಾಯಾಧಿಕಾರಿ ಗಳನ್ನು ಈಗಾಗಲೇ ಕೋರಲಾ ಗಿದೆ ಎಂದು ಸ್ಪಷ್ಟನೆ ನೀಡಿದರು.

ವರದಿ:ಮಲ್ಲಿಕಾರ್ಜುನಸ್ವಾಮಿ ಮಳವಳ್ಳಿ

error: