ಮಳವಳ್ಳಿ: ಕೋವಿಡ್ ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲಿ ನಿಯಂತ್ರಣಕ್ಕೆ ಸಹಕರಿಸಬೇಕಿದ್ದ ಕಾಂಗ್ರೆಸ್ ನವರು ಪಾದಯಾತ್ರೆ ನಡೆಸುತ್ತಿರುವುದು ಸರಿಯಲ್ಲ ಎಂದು ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಚಿವ ಕೆ.ಸಿ.ನಾರಾಯಣಗೌಡ ಅಭಿಪ್ರಾಯಪಟ್ಟರು.
ಪಟ್ಟಣದ ಕೆಎಸ್‌ಆರ್ ಟಿಸಿ ತರಬೇತಿ ಕೇಂದ್ರದ ಕೋವಿಡ್ ಸೆಂಟರ್ ಗೆ ಭೇಟಿ ನೀಡಿ ಸೋಂಕಿತರ ಯೋಗಕ್ಷೇಮ ವಿಚಾರಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ನವರಿಗೆ ಪಾದಯಾತ್ರೆ ಮಾಡಬೇಡಿ ಅನ್ನುವುದಿಲ್ಲ. ಆದರೆ ಇಂತಹ ಸಂದರ್ಭಗಳಲ್ಲಿ ಸರ್ಕಾರಕ್ಕೆ ಸಹಕರಿಸಬೇಕಿತ್ತು. ಪಾದಯಾತ್ರೆ ಮಾಡಿ ಸೋಂಕು ಅತಿಹೆಚ್ಚಿನ ರೀತಿಯಲ್ಲಿ ಹರಡಿದಾಗ ಅವರ ಹೆಸರೇ ಹಾಳಾಗುವುದು ಎಂದು ಬೇಸರ ವ್ಯಕ್ತಪಡಿಸಿದರು.
ಓಂ ಶಕ್ತಿ ಕೇಂದ್ರ ಹಾಗೂ ಬೇರೆ ಬೇರೆ ಕಡೆ ಹೊರಗಡೆ ಹೋಗಿ ಬಂದವರಲ್ಲಿ ಕೆಲವರು ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಿ ಹೊರಗಡೆ ಬಂದವರನ್ನು ಅವರ ಕುಟುಂಬದವರ ಸುರಕ್ಷತೆಯ ದೃಷ್ಟಿಯಿಂದ ಮನೆಗೆ ಕಳುಹಿಸದೇ ಏಳು ದಿನಗಳ ಕಾಲ ಚಿಕಿತ್ಸೆ ನೀಡಿ ಮತ್ತೆ ಪರೀಕ್ಷೆ ಒಳಪಡಿಸಿ ಅವರನ್ನು ಮನೆಗೆ ಕಳುಹಿಸಿ ಕೊಡಲಾಗುವುದು ಎಂದರು.
ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ಎರಡು ಸಾವಿರ ಹಾಸಿಗೆಗಳಿಗೆ ವ್ಯವಸ್ಥೆಗೆ ಸಿದ್ದತೆ ಮಾಡಿದ್ದು, ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಮಳವಳ್ಳಿಯಲ್ಲಿ ಆಮ್ಲಜನಕ ಘಟಕವನ್ನು ನಿರ್ಮಿಸಿದ್ದೇವೆ. ಔಷಧಿ ಮತ್ತು ಆಮ್ಲಜನಕ ಕೊರತೆ ಈ ಬಾರಿ ಎದುರಾಗುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಡಾ.ಕೆ.ಅನ್ನದಾನಿ, ಉಪವಿಭಾಗಾಧಿಕಾರಿ ಐಶ್ವರ್ಯಾ, ತಹಶೀಲ್ದಾರ್ ಎಂ.ವಿಜಯಣ್ಣ, ತಾ.ಪಂ.ಇಒ ರಾಮಲಿಂಗಯ್ಯ, ತಾಲ್ಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ, ಪುರಸಭೆ ಮುಖ್ಯಾಧಿಕಾರಿ ಪವನ್ ಕುಮಾರ್, ಸಿಡಿಪಿಒ ಕುಮಾರ್, ಬಿಜೆಪಿಯ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್.ಕೃಷ್ಣ, ಬಿಜೆಪಿ ಮುಖಂಡರಾದ ಯಮದೂರು ಸಿದ್ದರಾಜು, ಹಲವಾರು ಪುರಸಭಾ ಸದಸ್ಯರು ಸೇರಿದಂತೆ ಹಲವರು ಇದ್ದರು.
ವರದಿ: ಮಲ್ಲಿಕಾರ್ಜುನ ಸ್ವಾಮಿ ಮಳವಳ್ಳಿ
More Stories
ಮಂಡ್ಯ ಅಮೃತ ಲಯನ್ಸ್ ಸಂಸ್ಥೆಗೆ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ
ಮಳವಳ್ಳಿ ತಾಲೂಕಿನಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಕಾರ್ಯಗಾರ
ಮಂಡ್ಯ ಅಮೃತ ಲಯನ್ಸ್ ಸಂಸ್ಥೆ ಯಿಂದ ವಿವಿಧ ಕಾರ್ಯಕ್ರಮ