March 12, 2025

Bhavana Tv

Its Your Channel

ಕಿತ್ರೆ ದೇವಿಮನೆ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರವಾಗಿದೆ:- ರಾಘವೇಶ್ವರ ಭಾರತೀ ಮಹಾಸ್ವಾಮೀಜಿ

ಭಟ್ಕಳ : ಕಿತ್ರೆಯ ಶ್ರೀ ದೇವಿಮನೆ ಕ್ಷೇತ್ರ ಶಿವ ಮತ್ತು ಶಾಂತಿಕೆ ಒಟ್ಟಾಗಿ ನೆಲೆಸಿರುವ ಶಕ್ತಿಸ್ಥಳವಾಗಿದ್ದು, ವರ್ಷದಿಂದ ವರ್ಷಕ್ಕೆ ಈ ಕ್ಷೇತ್ರ ಹೆಚ್ಚು ಅಭಿವೃದ್ಧಿಯಾಗುವುದರ ಜೊತೆಗೆ ಭಕ್ತರನ್ನು ಸೆಳೆಯುವ ಸ್ಥಳವಾಗಿ ಮಾರ್ಪಟ್ಟಿದೆ ಎಂದು ರಾಮಚಂದ್ರಾಪುರಮಠದ ಶ್ರೀ ಮಜ್ಜಗದ್ಗುರು ರಾಘವೇಶ್ವರ ಭಾರತೀ ಮಹಾಸ್ವಾಮೀಜಿಯವರು ಹೇಳಿದರು.
ಕಿತ್ರೆಯ ಶ್ರೀ ಕ್ಷೇತ್ರ ದೇವಿಮನೆಯಲ್ಲಿ ನೂತನವಾಗಿ ನಿರ್ಮಿಸಲಾದ ಯಾತ್ರಿ ನಿವಾಸ ಉದ್ಘಾಟಿಸಿ,ದೇವಿಯ ರಥೋತ್ಸವದಲ್ಲಿ ಪಾಲ್ಗೊಂಡು ನಂತರ ಏರ್ಪಡಿಸಲಾದ ಧಾರ್ಮಿಕ ಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ದೇವಿಮನೆ ಕ್ಷೇತ್ರ ಸಾಕಷ್ಟು ಬದಲಾವಣೆ ಕಂಡಿದೆ. ಕ್ಷೇತ್ರದಲ್ಲಿ ಶಾಸಕ ಸುನೀಲ ನಾಯ್ಕ ಅವರು ಸರಕಾರದ ಯೋಜನೆಯಿಂದ ಯಾತ್ರಿ ನಿವಾಸ ನಿರ್ಮಿಸಿಕೊಟ್ಟಿರುವುದು ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲವಾಗಿದೆ. ಶಾಸಕರು ತಮ್ಮ ಸ್ವಂತ ಖರ್ಚಿನಲ್ಲಿ ದೇವಸ್ಥಾನಕ್ಕೆ ಮಹಾದ್ವಾರ ನಿರ್ಮಿಸುತ್ತಿರುವುದು ಅವರಿಗೆ ದೇವಿಮನೆ ಹಾಗೂ ಇಲ್ಲಿನ ಜನರ ಬಗ್ಗೆ ಇರುವ ಪ್ರೀತಿ, ವಿಶ್ವಾಸ, ಆತ್ಮೀಯತೆ ಎತ್ತಿ ತೋರಿಸುತ್ತದೆ ಎಂದ ಅವರು ದೇವಸ್ಥಾನಗಳ ಅಭಿವೃದ್ಧಿಗೆ ಆದ್ಯತೆ ನೀಡುವುದು ಪುಣ್ಯದ ಕಾರ್ಯವಾಗಿದ್ದು, ಇದು ಎಂದಿಗೂ ಕೈಬಿಡುವುದಿಲ್ಲ. ಯಾವುದೇ ದೇವಸ್ಥಾನದಲ್ಲಿರಲಿ ವಾಸ್ತವ್ಯಕ್ಕೆ ಸ್ಥಳ, ಊಟೋಪಚಾರ, ಉತ್ತಮ ವ್ಯವಸ್ಥೆ ಇದ್ದಲ್ಲಿ ಭಕ್ತರು ಹೆಚ್ಚು ಆಗಮಿಸುತ್ತಾರೆಂದ ಅವರು ದೇವಸ್ಥಾನಕ್ಕೆ ಹೋಗುವುದರಿಂದ ಭಕ್ತಿ,ಆಧ್ಯಾತ್ಮಿಕ ಧನ್ಯತಾಭಾವದ ಜೊತೆಗೆ ಆತ್ಮ ಸಂತೋಷ ಲಭಿಸುತ್ತದೆ. ಭವತಾರಿಣಿ ಸೀಮಾ ಪರಿಷತ್ತಿನವರು ದೇವರು, ಗುರುಗಳು, ಶ್ರೀ ಮಠದ ಬಗ್ಗೆ ಹೆಚ್ಚಿನ ಭಕ್ತಿಭಾವ, ಗೌರವ ಹೊಂದಿರುವುದರ ಜೊತೆಗೆ ಕ್ರಿಯಾಶೀಲತೆಯಿಂದ ಕಾರ್ಯ ಮಾಡುವವರಾಗಿದ್ದಾರೆ. ಕಿತ್ರೆ ದೇವಿಮನೆ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯ ಆಗಬೇಕಿದ್ದು, ಎಲ್ಲರ ಸಹಕಾರ ಅಗತ್ಯವೆಂದರು. ಶ್ರೀಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಸುನೀಲ ನಾಯ್ಕ ಅವರು ಶ್ರೀಗಳು,ದೇವಿಮನೆ ಹಾಗೂ ಇಲ್ಲಿನ ಜನರ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ. ಈಗಾಗಲೇ ಪ್ರವಾಸೋದ್ಯಮ ಇಲಾಖೆಯಿಂದ ದೇವಿಮನೆಗೆ ೫೦ ಲಕ್ಷ ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಿಸಿಕೊಟ್ಟಿದ್ದು, ಸ್ವಂತ ಖರ್ಚಿನಲ್ಲಿ ದೇವಸ್ಥಾನಕ್ಕೆ ಮಹಾದ್ವಾರ ನಿರ್ಮಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ದೇವಸ್ಥಾನದ ಅಭಿವೃದ್ಧಿಗೆ ಸರಕಾರದಿಂದ ಹೆಚ್ಚಿನ ಅನುದಾನ ಕಲ್ಪಿಸುವ ಭರವಸೆ ನೀಡಿದರು. ಶಾಸಕ ಸುನೀಲ ನಾಯ್ಕ, ವೈದ್ಯ ಡಾ. ಶಿವಾನಂದ ಹೆಗಡೆ, ಉತ್ತಮ ಕೃಷಿಕ ಜನ್ಮನೆ ಶ್ರೀಪಾದ ಹೆಬ್ಬಾರ ದಂಪತಿಗಳನ್ನು ದೇವಸ್ಥಾನದ ವತಿಯಿಂದ ಶ್ರೀಗಳು ಸನ್ಮಾನಿಸಿ ಗೌರವಿಸಿದರು. ಮೊಕ್ತೇಸರ ಉಮೇಶ ಹೆಗಡೆ ದಂಪತಿ ಸಭಾಪೂಜೆ ನೆರವೇರಿಸಿ ಸ್ವಾಗತಿಸಿದರು. ಗಣೇಶ ಹೆಬ್ಬಾರ ಮೂಡ್ಲಿಕೇರಿ ವರದಿ ವಾಚಿಸಿದರು. ಭವತಾರಿಣಿ ಸೀಮಾ ಪರಿಷತ್ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರು ವಂದಿಸಿದರು. ಅನಂತ ಹೆಬ್ಬಾರ, ಪ್ರಮೋದ ಜೋಷಿ ಕಾರ್ಯಕ್ರಮ ನಿರೂಪಿಸಿದರು.

error: