March 12, 2025

Bhavana Tv

Its Your Channel

ಮುರುಡೇಶ್ವರ ಯಮುನಾ ನಾಯ್ಕ ಅತ್ಯಾಚಾರ,ಕೊಲೆ ಪ್ರಕರಣದ ಮರು ತನಿಖೆ: ಆರೋಪಿಗಳ ವೈದ್ಯಕೀಯ ಪರೀಕ್ಷೆ ನಡೆಸಲು ಹೈದರಾಬಾದ್ ಹೈಕೋರ್ಟ್ ಸೂಚನೆ

ಭಟ್ಕಳ: ಮುರ್ಡೇಶ್ವರದಲ್ಲಿ 2010ರಲ್ಲಿ ಸಂಚಲನ ಮೂಡಿಸಿದ್ದ ಯಮುನಾ ನಾಯ್ಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಚಾರ್ಜ್‌ಶೀಟ್‌ನಲ್ಲಿದ್ದ ಇತರ ಆರೋಪಿಗಳ ವೈದ್ಯಕೀಯ ಪರೀಕ್ಷೆ ನಡೆಸುವಂತೆ ಹೈದರಾಬಾದ್ ಹೈಕೋರ್ಟ್ ಸೂಚನೆ ನೀಡಿದೆ.
ಈ ಹಿನ್ನೆಲೆಯಲ್ಲಿ ಯುವತಿಯ ತಂದೆ ನೀಡಿದ್ದ ದೂರಿನಲ್ಲಿ ಹೆಸರಿಸಲಾಗಿದ್ದ ಮೂವರು ಆರೋಪಿಗಳನ್ನು ಬುಧವಾರ ಭಟ್ಕಳ ಜೆಎಮ್‌ಎಫ್‌ಸಿ ಕೋರ್ಟ ನ್ಯಾಯಾಧೀಶ ಘವಾಜ್ ಮುಂದೆ ಹಾಜರುಪಡಿಸಿ, ವಿಧಿ ವಿಜ್ಞಾನ ಪರೀಕ್ಷೆಯ ಸಂಬಂಧ ಆರೋಪಿಗಳ ರಕ್ತದ ಮಾದರಿ, ಉಗುರು, ಮೂತ್ರ ಇತ್ಯಾದಿಗಳನ್ನು ಸಂಗ್ರಹಿಸಲಾಯಿತು.
ಯಮುನಾ ನಾಯ್ಕ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ವೆಂಕಟೇಶ ಹರಿಕಂತ್ರ ಅವರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾದ ಕಾರಣ ಅವರನ್ನು ಕಾರವಾರ ಜಿಲ್ಲಾ ನ್ಯಾಯಾಲಯ ಖುಲಾಸೆಗೊಳಿಸಿತ್ತು. ಅಪರಾಧ ಕೃತ್ಯ ಎಸಗಿದವರ ಪತ್ತೆಯಾಗಬೇಕು ಎನ್ನುವ ನಿಟ್ಟಿನಲ್ಲಿ ಹೈದರಾಬಾದ್ ಹೈಕೋರ್ಟ್ ಚಾರ್ಜ್‌ಶೀಟ್‌ನಲ್ಲಿರುವ ಇತರ ಆರೋಪಿಗಳಿಗೂ ವೈದ್ಯಕೀಯ ಪರೀಕ್ಷೆ ನಡೆಸುವಂತೆ ಸೂಚನೆ ನೀಡಿತ್ತು.
ಏನಿದು ಪ್ರಕರಣ?: ಮುರ್ಡೇಶ್ವರದ ಹಿರೇದೋಮಿಯ ಮಡಿಯಂಗಡಿ ನಿವಾಸಿ ಯಮುನಾ ನಾಯ್ಕ ಮೇಲೆ 2010ರ ಅ.24ರಂದು ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿತ್ತು. ಯಮುನಾ ಪ್ರತಿದಿನ ಸ್ಥಳೀಯ ಮುಹಮ್ಮದ್ ಹಸೀಬ್ ದೊಣ್ಣಾ ಎಂಬವರ ಮನೆ ಕೆಲಸಕ್ಕೆ ಹೋಗಿ ಬರುತ್ತಿದ್ದಳು. ಅಂದು ಮಧ್ಯಾಹ್ನ 3 ಗಂಟೆಯಾದರೂ ಮನೆಗೆ ವಾಪಸಾಗದಿರುವುದನ್ನು ಕಂಡ ಆಕೆಯ ಮನೆಯವರು ಎಲ್ಲೆಡೆ ಹುಡುಕಾಡಿದ್ದರು. ಮರುದಿನ ಹಸೀಬ ದೊಣ್ಣಾ ಅವರ ಮನೆಯ ಕಟ್ಟಿಗೆ ರೂಂನಲ್ಲಿ ಯಮುನಾ ಶವ ಪತ್ತೆಯಾಗಿತ್ತು. ಇದರಿಂದ ಕಂಗಾಲಾದ ದೊಣ್ಣಾ ಮನೆಯವರು ನೇರ ಪೊಲೀಸ್ ಠಾಣಿಗೆ ಹೋಗಿದ್ದರು. ಮುಹಮ್ಮದ್ ಸಾದಿಕ್ ದೊಣ್ಣಾ, ಆತನ ಪತ್ನಿ ಸಲ್ಮಾ, ಮುಹಮ್ಮದ್ ಹಸೀಬ್ ದೊಣ್ಣಾ, ಪರ್ವೀನ್ ಹಾಗೂ ಸಾಕು ಮಗ ಮುಹಮ್ಮದ್ ಯಾಸೀನ್ ಹಾಗೂ ಇತರರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ನಂತರದ ಬೆಳವಣಿಗೆಯಲ್ಲಿ ದೊಣ್ಣಾ ಅವರ ಮನೆಯ ಪಕ್ಕದಲ್ಲಿ ಬೈಕ್ ನಿಲ್ಲಿಸುತ್ತಿದ್ದ ವೆಂಕಟೇಶ ಹರಿಕಾಂತ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಆರೂವರೆ ವರ್ಷಗಳ ನಂತರ ಜಿಲ್ಲಾ ನ್ಯಾಯಾಲಯ ವೆಂಕಟೇಶ ಹರಿಕಾಂತನನ್ನು ಖುಲಾಸೆಗೊಳಿಸಿತ್ತು.

ಚಾರ್ಜ್‌ಶೀಟ್‌ನಲ್ಲಿರುವವರು ಹತ್ತು ವರ್ಷಗಳ ಹಿಂದೆ ಹೈದರಾಬಾದ್‌ನಲ್ಲಿ ವೆಂಕಟೇಶ ಹರಿಕಾಂತನ ಡಿಎನ್‌ಎ ಪರೀಕ್ಷೆ ನಡೆಸಲಾಗಿತ್ತು. ಆದರೆ ಇದು ವೆಂಕಟೇಶಗೆ ಹೊಂದಿಕೆಯಾಗಿಲ್ಲ. ಪೊಲೀಸರು 51 ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದರಾದರೂ ಆರೋಪ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅಪರಾಧ ಕೃತ್ಯ ಎಸಗಿದವರ ಪತ್ತೆಯಾಗಬೇಕು ಎನ್ನುವ ನಿಟ್ಟಿನಲ್ಲಿ ಹೈದರಾಬಾದ್ ಹೈಕೋರ್ಟ್ ಮೊದಲು ಚಾರ್ಜ್‌ಶೀಟ್‌ನಲ್ಲಿರುವ ಇತರ ಆರೋಪಿಗಳಿಗೂ ವೈದ್ಯಕೀಯ ಪರೀಕ್ಷೆ ನಡೆಸಿ ತನಿಖೆ ನಡೆಸುವಂತೆ ಸೂಚಿಸಿದೆ.

ಈ ಸಂದರ್ಭದಲ್ಲಿ ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸವಿತಾ ಕಾಮತ್ ಹಾಗೂ ಭಟ್ಕಳ ಗ್ರಾಮೀಣ ಠಾಣಾ ಸಿಪಿಐ ಮಹಾಬಲೇಶ್ವರ ನಾಯ್ಕ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

error: