December 20, 2024

Bhavana Tv

Its Your Channel

ಭುವನಗಿರಿಯಲ್ಲಿ ಕುಮಟಾ ಕನ್ನಡ ಸಂಘದ ಕಾರ್ಯಕ್ರಮ

ವರದಿ: ವೇಣುಗೋಪಾಲ ಮದ್ಗುಣಿ

ಸಿದ್ದಾಪುರ : ಕುಮಟಾದ ಕನ್ನಡ ಸಂಘವು ಕನ್ನಡ ತಾಯಿ ಭುವನೇಶ್ವರಿಯ ತಾಣದಲ್ಲಿ ಮೊದಲ ಕಾರ್ಯಕ್ರಮ ಆಯೋಜಿಸುವ ಮೂಲಕ ಉತ್ತಮ ಹೆಜ್ಜೆಯನ್ನು ಇಟ್ಟಿದೆ. ಮುಂದಿನ ಹೆಜ್ಜೆಗಳು ಅರ್ಥಪೂರ್ಣವಾದ ದಿಸೆಯಲ್ಲಿ ಸಾಗುತ್ತವೆ ಎನ್ನುವದರಲ್ಲಿ ಸಂಶಯವಿಲ್ಲ ಎಂದು ತಾಲೂಕು ಮಾರ್ಕೆಟಿಂಗ್ ಸೊಸೈಟಿಯ ಅಧ್ಯಕ್ಷರಾದ ಆರ್.ಎಂ.ಹೆಗಡೆ ಬಾಳೇಸರ ಹೇಳಿದರು.

ಅವರು ಭುವನಗಿರಿಯ ಶ್ರೀ ಭುವನೇಶ್ವರಿ ಸಭಾ ಭವನದಲ್ಲಿ ಕುಮಟಾ ಕನ್ನಡ ಸಂಘ ಆಯೋಜಿಸಿದ ಅಕ್ಷರ ಸಂಕಲ್ಪ ಹಾಗೂ ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಾಹಿತಿಗಳು ಸಮಾಜದ ಅನಿಷ್ಠಗಳನ್ನು ತೆರೆದು ತೋರಿಸುವದರ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು. ಕನ್ನಡ ನಾಡು, ನುಡಿಯ ಬೆಳವಣಿಗೆಗೆ ಎಲ್ಲ ಕನ್ನಡಿಗರೂ ಮುಂದಾಗಬೇಕು ಎಂದರು.

ಯಲ್ಲಾಪುರ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಮಾತನಾಡಿ ಭಾಷೆ ಸಂಸ್ಕೃತಿಯನ್ನು ರೂಪಿಸುತ್ತದೆ. ಅದು ವ್ಯಕ್ತಿತ್ವವನ್ನು ಬೆಳೆಸುತ್ತದೆ. ಕನ್ನಡ ಭಾಷೆ, ನಾಡಿನ ಬಗ್ಗೆ ವಿಶೇಷ ಕಾಳಜಿ ನೀಡಬೇಕಿದೆ ಎಂದರು.

ಬರೆಹಗಾರ ಜಿ.ಜಿ.ಹೆಗಡೆ ಬಾಳಗೋಡ ಮಾತನಾಡಿ ಕನ್ನಡ ನಮ್ಮ ನಿತ್ಯ ಜೀವನದ ಅವಿಭಾಜ್ಯ ಅಂಗ. ಬರವಣಿಗೆ ನಮ್ಮ ನಡುವೆ ಇರುವ ಅಂತರವನ್ನು ಹೋಗಲಾಡಿಸಬೇಕು ಎಂದರು.

ಆಶಾ ಕಿರಣ ಟ್ರಸ್ಟ ಅಧ್ಯಕ್ಷ ಡಾ|ರವಿ ಹೆಗಡೆ ಹೂವಿನಮನೆ ಮಾತನಾಡಿ ಕನ್ನಡ ಸಮರ್ಥ ಕಾವ್ಯಭಾಷೆ. ಕನ್ನಡದ ಜೊತೆಗೆ ನಾವೂ ಬೆಳೆಯುವದು ಇಂದಿನ ಅಗತ್ಯವಾಗಿದೆ. ಕನ್ನಡ ಪ್ರಾಚೀನವಾದ ಭಾಷೆ ಎನ್ನುವ ಹೆಮ್ಮೆ ಕನ್ನಡಿಗರಿಗೆ ಇರಬೇಕು. ಅನ್ಯ ಭಾಷೆಯ ವ್ಯಾಮೋಹ ನಮ್ಮತನವನ್ನು ಮರೆಸುತ್ತಿದೆ. ಕನ್ನಡ ಭಾಷೆಯ ಜೀವಂತಿಕೆ ವಿಶಿಷ್ಠವಾದದ್ದು ಎಂದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಂಘದ ಅಧ್ಯಕ್ಷ,ಪತ್ರಕರ್ತ ಸದಾನಂದ ದೇಶಭಂಡಾರಿ ಕನ್ನಡ ಸಂಘ ಸಮಾಜದ ಎಲ್ಲರನ್ನೂ ಒಳಗೊಂಡು ಕನ್ನಡದ ಕೆಲಸ ಮಾಡುವ ಆಶಯ ಹೊಂದಿದೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಕವಿ ಎಂ.ಕೆ.ನಾಯ್ಕ ಮಾಸ್ಕೇರಿಯವರನ್ನು ಸನ್ಮಾನಿಸಲಾಯಿತು.
ಕನ್ನಡ ಸಂಘದ ಸಂಯೋಜಕ, ಕವಿ ತಿಗಣೇಶ ಮಾಗೋಡ ಪ್ರಾಸ್ತಾವಿಕ ಮಾತನಾಡಿ ಅವಕಾಶವಂಚಿತ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಆಶಯದೊಂದಿಗೆ ರೂಪುಗೊಂಡಿದೆ.ಸಾಹಿತಿಗಳಿಗೆ ನೆರಳಾಗಿ ಮುಂದುವರೆಯುತ್ತದೆ ಎಂದರು.

ಬರೆಹಗಾರ ಮಂಜುನಾಥ ಗಾಂವಕರ ಬರ್ಗಿ ಹಿರಿಯ ಚೇತನಗಳ ಸ್ಮರಣೆ ಮಾಡಿದರು. ತಾಲೂಕ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ,ವಿದ್ಯಾ ತಲಗೇರಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಗಂಗಾಧರ ಕೊಳಗಿಯವರನ್ನು ಅಭಿನಂದಿಸಲಾಯಿತು.
ಸAಘದ ಗೌರವಾಧ್ಯಕ್ಷ ಎಂ.ಆರ್.ನಾಯ್ಕ ಸ್ವಾಗತಿಸಿದರು. ಸುವರ್ಣ ಮಯ್ಯರ್ ಪ್ರಾರ್ಥಿಸಿದರು. ರವೀಂದ್ರ ಭಟ್ಟ ಸೂರಿ ನಿರೂಪಿಸಿದರು.

error: