
ಭಟ್ಕಳ: ಕಾಂಗ್ರೆಸ್ ಪಕ್ಷದ ದೇವರಾಜ ಅರಸ್ ಅವರು ಭೂ ಸುಧಾರಣಾ ಕಾಯ್ದೆ ತಂದು ಭೂ ಒಡೆತನವನ್ನು ನೀಡಿದ್ದರೆ ಅದು ನಮ್ಮ ಸರಕಾರ ಮಾತ್ರ, ಇದೊಂದು ದೇಶದಲ್ಲಿಯೇ ಮೊದಲ ಕಾರ್ಯವಾಗಿತ್ತು ಎನ್ನುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳಬಹುದು ಎಂದು ಮಾಜಿ ಸಚಿವ ಹಾಗೂ ಶಾಸಕ ಆರ್. ವಿ. ದೇಶಪಾಂಡೆ ಅವರು ಹೇಳಿದರು.
ಅವರು ಭಟ್ಕಳದಲ್ಲಿ ಡಿಜಿಟಲ್ ಅಭಿಯಾನದ ಪ್ರಗತಿ ಪರಿಶೀಲನೆ ಯನ್ನು ನಡೆಸಿ ನಂತರ ನೆರೆದಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಎಲ್ಲಾ ವರ್ಗದವರೂ ಲಾಭ ಪಡೆದಿದ್ದು ಲಾಭ ಪಡೆದವರು ಪಕ್ಷವನ್ನು ಮರೆಯುವುದು ಸರಿಯಲ್ಲ. ಇಂದಿನ ಯುವ ಪೀಳಿಗೆಗೆ ಭೂ ಸುಧಾರಣಾ ಕಾರ್ಯದ ಕುರಿತು ತಿಳಿದಿಲ್ಲದೇ ಇರಬಹುದು ಆದರೆ ಹಿರಿಯರು ಅವರಿಗೆ ತಿಳಿಹೇಳಿ ಪಕ್ಷವನ್ನು ಬೆಂಬಲಿಸುವAತೆ ತಿಳಿಸಬೇಕು ಎಂದ ಅವರು ಹಿಂದೆ ಸಿದ್ಧರಾಮಯ್ಯ ಅವರು ಮುಖ್ಯ ಮಂತ್ರಿಗಳಾಗಿದ್ದಾಗ ಅನೇಕ ಭಾಗ್ಯಗಳನ್ನು ಜನರಿಗೆ ನೀಡಿ ಅಭಿವೃದ್ಧಿಯಲ್ಲಿ ನಮ್ಮ ರಾಜ್ಯ ಮುಂದೆ ಇರುವಂತೆ ನೋಡಿಕೊಂಡರು. ಆ ಸಮಯದಲ್ಲಯೂ ಕೂಡಾ ಹೆಚ್ಚಿನ ಜನರು ಭಾಗ್ಯಗಳನ್ನು ಪಡೆದುಕೊಂಡಿದ್ದು ಅವರೆಲ್ಲರೂ ಮುಂದೆ ಬಂದು ಸದಸ್ಯತ್ವವನ್ನು ಪಡೆಯಬೇಕಾಗಿದೆ ಎಂದರು.
ರಾಜಕೀಯದಲ್ಲಿ ಹೆಣ್ಣು ಮಕ್ಕಳು ಮುಂದೆ ಬರಬೇಕು, ಮುಂದಿನ ಚುನಾವಣೆಯಲ್ಲಿ ಬದಲಾವಣೆಯಾಗುವಂತೆ ಕೆಲಸ ಮಾಡಬೇಕು ಎಂದು ಕರೆ ನೀಡಿದ ದೇಶಪಾಂಡೆ ಅವರು ಕಾಂಗ್ರೆಸ್ ಪಕ್ಷ ಜನಪರವಾಗಿರುವ ಪಕ್ಷವಾಗಿದ್ದು ಎಲ್ಲಾ ಜಾತಿ ಜನಾಂಗದವರನ್ನು ಸಮಾನವಾಗಿ ಕಾಣುವ ಪಕ್ಷವಾಗಿದ್ದರೆ ಬಿ.ಜೆ.ಪಿ. ಕೇವಲ ಹಿಂದುತ್ವದ ಹಿಂದೆ ಬಿದ್ದಿರುವ ಪಕ್ಷವಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ ಪಕ್ಷದಿಂದ ಉಪಯೋಗ ತೆಗೆದುಕೊಂಡ ನಾವು ಪಕ್ಷಕ್ಕಾಗಿ ದುಡಿಯಬೇಕಾಗಿರುವುದು ಅನಿವಾರ್ಯವಾಗಿದೆ. ಕೇಂದ್ರ ಸರಕಾರದ ದುರಾಡಳಿತ, ಹಿಂಬಾಗಿಲ ಪ್ರವೇಶ ಮಾಡಿದ ರಾಜ್ಯ ಸರಕರದ ವೈಫಲ್ಯ ಜನರಿಗೆ ತಿಳಿಸಬೇಕಾಗಿದೆ. ಕಾಂಗ್ರೆಸ್ ಪಕ್ಷದ ಅವಧಿಯಲ್ಲಾದ ಅಭಿವೃದ್ಧಿಯನ್ನು ತಿಳಿಸಿ ಸದಸ್ಯತ್ವ ನೋಂದಣಿಯನ್ನು ಯಶಸ್ವೀಗೊಳಿಸುವಂತೆ ಕರೆ ನೀಡಿದರು.
ಮಾಜಿ ಸಚಿವ ಆರ್. ಎನ್. ನಾಯ್ಕ ಮಾತನಾಡಿ ಕಾಂಗ್ರೆಸ್ ಪಕ್ಷದಿಂದ ಹಿಂದುಳಿದವರು, ಪರಿಶಿಷ್ಟರಿಗೆ ಅತೀ ಹೆಚ್ಚು ಲಾಭವಾಗಿದೆ. ಭೂ ಸುಧಾರಣಾ ಕಾಯ್ದೆಯಡಿಯಲ್ಲಿ ಹೆಚ್ಚು ಲಾಭ ಪಡೆದಿದ್ದರೆ ಅದು ಹಿಂದುಳಿದವರು. ಹಿಂದೆ ಕಾಂಗ್ರೆಸ್ ಸಭೆಯಲ್ಲಿ ನೂರಾರು ಯುವಕರು ಕಂಡು ಬರುತ್ತಿದ್ದರೆ ಇಂದು ಯುವಕರೇ ಇಲ್ಲದ ಸಭೆ ನಮ್ಮದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಹಿಂದೆ ಲಾಭ ಪಡೆದವರು ಪಕ್ಷವನ್ನು ಮರೆಯದೇ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮಾಜಿ ಶಾಸಕ ಮಂಕಾಳ ವೈದ್ಯ ಮಾತನಾಡಿ ಸದಸ್ಯತ್ವ ನೋಂದಣಿಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದ್ದು ಬೂತ್ ಮಟ್ಟದಲ್ಲಿ ಹೆಚ್ಚು ಸದಸ್ಯರನ್ನು ನೋಂದಾಯಿಸಿಕೊಳ್ಳಬೇಕು. ಗ್ರಾಮೀಣ ಭಾಗದ ಕೆಲವು ಕಡೆಗಳಲ್ಲಿ ನೆಟ್‌ವರ್ಕ ಸಮಸ್ಯೆ ಇರುವುದು ನಿಜ, ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದರು.
ಮಾಜಹಿ ಶಾಸಕ ಜೆ.ಡಿ.ನಾಯ್ಕ, ಕೆ.ಪಿ.ಸಿ.ಸಿ. ವೀಕ್ಷಕಿ ವೆರೋನಿಕಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ.ಯ ಶ್ರೀನಿವಾಸ, ಪ್ರಮುಖರಾದ ಸುಷ್ಮಾ ರಾಜಗೋಪಾಲ, ಅಲ್ಪ ಸಂಖ್ಯಾತರ ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ್, ಜಿ.ಪಂ. ಮಾಜಿ ಅಧ್ಯಕ್ಷೆ ಜಯಶ್ರೀ ಮೊಗೇರ, ಮಾಜಿ ಸದಸ್ಯ ಆಲ್ಬರ್ಟ ಡಿಕೋಸ್ತ, ಸಿಂಧು ನಾಯ್ಕ, ಪ್ರಮುಖರಾದ ರಾಮಾ ಮೊಗೇರ ಅಳ್ವೇಕೋಡಿ, ವಾಮನ ನಾಯ್ಕ ಮಂಕಿ, ಎಲ್. ಎಸ್. ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಬ್ಲಾಕ್ ಅಧ್ಯಕ್ಷ ಸಂತೋಷ ಎಂ. ನಾಯ್ಕ ಸ್ವಾಗತಿಸಿದರು. ಡಿಜಿಟಲ್ ವಿಭಾಗದ ಪ್ರಮುಖ ಪ್ರಶಾಂತ ಶೆಟ್ಟಿ ನೋಂದಣಿ ವಿವರ ನೀಡಿದರು. ತಾ.ಪಂ.ಮಾಜಿ ಸದಸ್ಯ ವಿಷ್ಣು ದೇವಾಡಿಗ ವಂದಿಸಿದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ