
ಭಟ್ಕಳ: ಪುರಸಭೆಯ ಹಳೇ ಮೀನು ಮಾರುಕಟ್ಟೆಯಲ್ಲಿ ಕಸವನ್ನು ರಾಶಿ ಹಾಕಿದ್ದಾರೆ, ಮೀನು ಮಾರಾಟ ಮಾಡಲು ತೊಂದರೆ ಕೊಡುವ ಉದ್ದೇಶದಿಂದಲೇ ಸ್ವಚ್ಚತೆ ಮಾಡಿಲ್ಲ ಎಂದು ದೂರಿ ನೂರಾರು ಮಹಿಳೆಯರು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.


ಬುಧವಾರ ಬೆಳಿಗ್ಗೆ ಮೀನು ಮಾರಾಟಕ್ಕೆ ಬಂದ ಮಹಿಳೆಯರು ನೋಡುವಾಗ ಹಳೇ ಮೀನು ಮಾರುಕಟ್ಟೆಯಲ್ಲಿ ಹೊರಗಿನಿಂದ ಕಸ ತುಂಬಿದ್ದಲ್ಲದೇ ಸ್ವಚ್ಚತೆಯನ್ನೂ ಮಾಡಿಲ್ಲವಾಗಿತ್ತು. ಈ ಬಗ್ಗೆ ಕೇಳಿದರೆ ಪುರಸಭೆಯವರು ಹಳೇ ಮೀನು ಮಾರುಕಟ್ಟೆ ಚಾಲ್ತಿಯಲ್ಲಿಲ್ಲ, ಈಗಾಗಲೇ ಕಟ್ಟಡ ಶಿಥಿಲವಾಗಿದ್ದರಿಂದ ಮೀನುಮಾರುಕಟ್ಟೆಯನ್ನು ಸ್ಥಳಾಂತರಗೊಳಿಸಲಾಗಿದೆ ಎನ್ನುವ ಉತ್ತರ ನೀಡಿದ್ದರಿಂದ ತೀವ್ರ ಆಕ್ರೋಶಗೊಂಡ ಮಹಿಳೆಯರು ತಾವು ತಂದಿದ್ದ ಮೀನು ಬುಟ್ಟಿಯೊಂದಿಗೆ ಪುರಸಭಾ ಕಟ್ಟಡದ ಎದುರು ಬಂದು ಪುರಸಭಾ ಕಟ್ಟಡದ ಒಳಗೆ ಪ್ರವೇಶ ಮಾಡಲು ಪ್ರಯತ್ನಿಸಿದರು. ಅಷ್ಟರಲ್ಲಿ ಸ್ಥಳಕ್ಕಾಗಮಿಸಿದ್ದ ಪೊಲೀಸರು ಮಹಿಳೆಯರನ್ನು ತಡೆದು ಒಳ ಹೋಗದಂತೆ ನಿರ್ಬಂಧಿಸಿದರು. ಇದರಿಂದ ಇನ್ನ಼ಷ್ಟು ಆಕ್ರೋಶಗೊಂಡ ಮಹಿಳೆಯರು ಪುರಸಭಾ ಎದುರಿನಲ್ಲಿಯೇ ಮೀನು ಬುಟ್ಟಿಯಿಂದ ಮೀನನ್ನು ಚೆಲ್ಲಿ ರಾದ್ದಾಂತ ಮಾಡಿದ್ದಲ್ಲದೇ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಕೆಲ ಸಮಯ ಪೊಲೀಸರಿಗೂ ಮೀನು ಮಾರುವ ಮಹಿಳೆಯರಿಗೂ ಮಾತಿನ ಚಕಮಕಿ ನಡೆದು ಕೊನೆಗೂ ಅಲ್ಲಿಂದ ತೆರಳಿದರು. ಒಂದು ಹಂತದಲ್ಲಿ ಡಿ.ವೈ.ಎಸ್.ಪಿ. ಬೆಳ್ಳಿಯಪ್ಪ ಅವರು ಮಹಿಳೆಯರ ಕೃತ್ಯಕ್ಕೆ ಆಕ್ರೋಶಗೊಂಡಿದ್ದರೂ ಸಹ ಸಮಾಧಾನದಿಂದ ಅವರನ್ನೆಲ್ಲ ಅಲ್ಲಿಂದ ಕಳುಹಿಸುವಲ್ಲಿ ಯಶಸ್ವೀಯಾಗಿದ್ದರು.
ಪುರಸಭೆಯ ಮೇಲೆ ಆಕ್ರೋಶ: ಮೀನುಗಾರ ಮಹಿಳೆಯರು ತಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸಬೇಕು ಎನ್ನುವ ಉದ್ದೇಶದಿಂದ ಪುರಸಭೆಯವರೇ ಹೊರಗಿನಿಂದ ಕಸ ತಂದು ಹಾಕಿ, ಸ್ವಚ್ಚಗೊಳಿಸದೇ ತೊಂದರೆ ಕೊಡುತ್ತಿದ್ದಾರೆ. ಹೊಸ ಮೀನು ಮಾರುಕಟ್ಟೆಗೆ ಹೋಗಬೇಕೆನ್ನುವ ಉದ್ದೇಶ ಅವರದು. ನಾವು ಯಾವುದೇ ಕಾರಣಕ್ಕೂ ಹೊಸ ಮೀನು ಮಾರುಕಟ್ಟೆಗೆ ಹೋಗುವುದಿಲ್ಲ, ಇಲ್ಲಿಯೇ 70-80 ವರ್ಷದಿಂದ ಮೀನು ಮಾರಾಟ ಮಾಡಿಕೊಂಡು ಬಂದಿದ್ದು ಇಲ್ಲಿಯೇ ಮೀನು ಮಾರಾಟ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಸ ಹಾಕಿದ ಕುರಿತು ದೂರು ಸಲ್ಲಿಕೆ: ಪುರಸಭೆಯ ಹಳೆ ಮೀನು ಮಾರುಕಟ್ಟೆಯಲ್ಲಿ ಕಸ ಹಾಕಿರುವ ಕುರಿತು ಸಿ.ಸಿ. ಟಿ.ವಿ. ಫೋಟೋಗಳನ್ನು ಪಡೆದು ತಪ್ಪತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಮೀನುಗಾರರ ಆರೋಪಿಸಿದಂತೆ ಕಸ ಹಾಕಿದವರು ಯಾರು ಎನ್ನುವುದು ಪುರಸಭೆಗೂ ತಿಳಿಯಬೇಕು ಎಂದು ಪುರಸಭಾ ಮುಖ್ಯಾಧಿಕಾರಿ ನಗರ ಠಾಣೆಯಲ್ಲಿ ದೂರೊಂದನ್ನು ಕೊಟ್ಟಿದ್ದಾರೆ. ಅಕ್ಕ ಪಕ್ಕದ ಸಿ.ಸಿ. ಟಿ.ವಿಗಳನ್ನು ವಿಶ್ಲೇಷಣೆ ಮಾಡಿ ಕಸ ಹಾಕಿರುವವರ ಕುರಿತು ಸೂಕ್ತ ತನಿಖೆ ನಡೆಸಿ ಎಂದೂ ತಿಳಿಸಲಾಗಿದೆ.
ಈ ಕುರಿತು ಪುರಸಭಾ ಅಧ್ಯಕ್ಷ ಪರ್ವೇಜ್ ಕಾಶಿಮಜಿ ಅವರನ್ನು ಸುದ್ದಿಗಾರರು ಭೇಟಿಯಾದಾಗ ಅವರ ಹಳೇ ಮೀನು ಮಾರುಕಟ್ಟೆಯ ಶಿಥಿಲವಾಗಿದೆ ಎಂದು 2020ರಲ್ಲಿಯೇ ಲೋಕೋಪಯೋಗಿ ಇಲಾಖೆ ವರದಿ ನೀಡಿದ್ದು ಅಲ್ಲಿ ಯಾವುದೇ ಜನ ವಸತಿಗೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ. ಅದರಿಂದ ಕಳೆದ ಎರಡು ವರ್ಷಗಳ ಹಿಂದೆ ಮೀನು ಮಾರಾಟ ಟೆಂಡರ್ ನ್ನು ಸಹ ಹೊಸ ಮೀನು ಮಾರುಕಟ್ಟೆಯಲ್ಲಿಯೇ ಕರೆಯಲಾಗಿದೆ. ಈಗಾಗಲೇ ಮೀನು ಮಾರುಕಟ್ಟೆಯನ್ನು ತೆರವುಗೊಳಿಸುವಂತೆ ಪುರಸಭೆಗೆ ಲೋಕಾಯುಕ್ತರು ತಮ್ಮ ನೋಟೀಸು ದಿನಾಂಕ 10/2/2022ರಂತೆ ನೀಡಿದ್ದು ಸೂಕ್ತ ಕ್ರಮ ಕೈಗೊಳ್ಳಲು ಗಡುವು ನೀಡಿದ್ದಾರೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಹಳೆ ಮೀನು ಮಾರುಕಟ್ಟೆಯನ್ನು ಮುಂದುವರಿಸಲು ಸಾಧ್ಯವಿಲ್ಲ ಕಾನೂನು ತೊಡಕು ಉಂಟಾಗುತ್ತದೆ. ಮುಂದೆ ಕಟ್ಟಡ ಕುಸಿದು ಏನಾದರೂ ಅನಾಹುತವಾದರೆ ಯಾರು ಹೊಣೆ ಎನ್ನುವ ಅವರು ಹೊಸ ಮೀನು ಮಾರುಕಟ್ಟೆಯಲ್ಲಿ ಯಾವುದೇ ಸೌಲಭ್ಯ ನೀಡಲು ನಾವು ಬದ್ಧರಿದ್ದೇವೆ. ಎಪ್ರಿಲ್ ಒಂದು ತಿಂಗಳು ಯಾವುದೇ ಶುಲ್ಕ ವಸೂಲಿಯನ್ನು ಸಹ ಮಾಡುವುದಿಲ್ಲ ಎಂದು ಮೀನುಗಾರರು ನೂತನ ಮೀನು ಮಾರುಕಟ್ಟೆಯಲ್ಲಿ ಎಲ್ಲಾ ವ್ಯವಸ್ಥೇ ಮಾಡಿಕೊಡುತ್ತಿದ್ದು ಅಲ್ಲಿಯೇ ವ್ಯಾಪಾರ ಆರಂಭಿಸುವAತೆ ಕೋರಿದರು

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ