
ಭಟ್ಕಳ: ತಾಲೂಕಿನ ಜಾಲಿ ಪಟ್ಟಣ ಪಂಚಾಯತ ಸುಳ್ಳು ಮರಣ ದಾಖಲೆ ಪ್ರಕರಣದ ಕುರಿತಂತೆ ತನಿಖೆ ಮುಂದುವರೆಸಿರುವ ಪೊಲೀಸರು, ದ್ವಿತೀಯ ದರ್ಜೆಯ ಇಸ್ಮಾಯಿಲ್ ಗುಬ್ಬಿ ಹಾಗೂ ನೀರು ಸರಬರಾಜು ಹೊರ ಗುತ್ತಿಗೆ ಸಿಬ್ಬಂದಿ ಅನ್ವರ್‌ನನ್ನು ಬಂಧಿಸಿದ್ದಾರೆ.
ಮೀನಾಕ್ಷಿ ಬಿ.ಎಚ್. ಜಂಗನಗದ್ದೆ ಜಾಲಿ ಇವರ ಹೆಸರಿನಲ್ಲಿ ಕಳೆದ 2021, ಆಗಸ್ಟ 4ರಂದು ಜಾಲಿ ಪಟ್ಟಣ ಪಂಚಾಯತಗೆ ಅರ್ಜಿಯೊಂದು ಸಲ್ಲಿಕೆಯಾಗಿದ್ದು, ಅವರ ಪುತ್ರ ಕೆ.ವಿ.ಹರ್ಷವರ್ಧನರ ಮರಣ ದಾಖಲೆ ಪತ್ರ ಪೂರೈಸುವಂತೆ ವಿನಂತಿಸಿಕೊಳ್ಳಲಾಗಿತ್ತು. ಈ ಅರ್ಜಿಯ ಜೊತೆಗೆ ಬೆಂಗಳೂರು ಮಣಿಪಾಲ ಹಾಸ್ಪಿಟಲ್‌ನಲ್ಲಿ ಹರ್ಷವರ್ಧನ ಎಂಬುವವರು ಕಳೆದ 2021, ಜುಲೈ 21ರಂದು ಎದೆ ನೋವಿನ ಕಾರಣ ಚಿಕಿತ್ಸೆ ಪಡೆದ ಬಗ್ಗೆ ದಾಖಲೆಯೊಂದನ್ನು ಲಗತ್ತಿಸಲಾಗಿತ್ತು. ಅರ್ಜಿಯನ್ನು ಸ್ವೀಕರಿಸಿದ್ದ ಜಾಲಿ ಪಟ್ಟಣ ಪಂಚಾಯತ ಸಿಬ್ಬಂದಿ, ಹೆ.ವಿ.ಹರ್ಷವರ್ಧನ ಎಂಬಾತ ಕಳೆದ ಜುಲೈ 27ರಂದು ಮೃತ ಪಟ್ಟ ಬಗ್ಗೆ ವರದಿ ತಯಾರಿಸಿ, ಸೆ.13, 2021ರಂದು ಮರಣ ದಾಖಲೆ ಪತ್ರವನ್ನು ಅರ್ಜಿದಾರರಿಗೆ ನೀಡಿದ್ದರು. ಇದೇ ಮರಣ ದಾಖಲೆ ಪತ್ರದ ಆಧಾರದ ಮೇಲೆ ವಿಮೆ ಹಣವನ್ನು ಪಡೆಯಲು ಅರ್ಜಿದಾರರು ಇನ್ಸೂರೆನ್ಸ್ ಕಂಪನಿಗೆ ಅರ್ಜಿ ನೀಡಿದ್ದು, ವಿಮೆ ಅನ್ವ ಅಧಿಕಾರಿಗಳು ಮೃತರು ಹಾಗೂ ಅವರ ವಾರಸುದಾರರ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಮುಂದಾಗುತ್ತಿದ್ದAತೆಯೇ ಸುಳ್ಳು ಮರಣ ದಾಖಲೆ ಪ್ರಕರಣ ಹೊರ ಬಂದಿತ್ತು. ನಂತರ ಜಾಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ರಾಮಚಂದ್ರ ವರ್ಣೆಕರ, ದೂರುದಾರ ಪಂಚಾಯತ ಸಿಬ್ಬಂದಿ ವಿನಾಯಕ, ಅನ್ವರ್‌ರನ್ನು ಕರೆಯಿಸಿಕೊಂಡ ಪೊಲೀಸರು, ಪ್ರಕರಣದ ಕುರಿತಂತೆ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು. ಮರಣ ದಾಖಲೆ ಪತ್ರ ನೀಡುವಂತೆ ಅರ್ಜಿ ನೀಡಿರುವ ಮಹಿಳೆ ಮೀನಾಕ್ಷಿ ಬಿ.ಎಚ್. ಪಟ್ಟಣ ಪಂಚಾಯತ ಕಚೇರಿಗೆ ಬಂದಿರುವುದು ದೃಢಪಡದೇ, ಸದರಿ ಅರ್ಜಿಯನ್ನು ಇಸ್ಮಾಯಿಲ್ ಗುಬ್ಬಿಯೇ ಸಿದ್ಧಪಡಿಸಿ ಟಪಾಲಿನಲ್ಲಿ ಸೇರಿಸಿಟ್ಟಿರುವ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದರು.
ಇಬ್ಬರು ಸಿಬ್ಬಂದಿ ಪೊಲೀಸ್ ವಶಕ್ಕೆ:-
ಬಹಳ ಬಡವರಾಗಿದ್ದು, ಸಹಾಯ ಮಾಡುವಂತೆ ಇದೇ ಇಸ್ಮಾಯಿಲ್, ಪಟ್ಟಣ ಪಂಚಾಯತ ಸಿಬ್ಬಂದಿಗೆ ವಿನಂತಿಸಿಕೊAಡಿದ್ದು, ಇಸ್ಮಾಯಿಲ್ ಗುಬ್ಬಿಯ ಮೇಲಿನ ವಿಶ್ವಾಸದಿಂದ ಪಟ್ಟಣ ಪಂಚಾಯತ ಆರೋಗ್ಯ ವಿಭಾಗದ ಸಿಬ್ಬಂದಿ ಮರಣ ದಾಖಲೆ ಪತ್ರವನ್ನು ಸಿದ್ಧಪಡಿಸಿ ಇಸ್ಮಾಯಿಲ್ ಗುಬ್ಬಿಗೆ ಹಸ್ತಾಂತರಿಸಿರುವ ಬಗ್ಗೆ ಮಾಹಿತಿ ಹೊರ ಬಿದ್ದಿತ್ತು. ಕೋಟ್ಯಾಂತರ ರುಪಾಯಿ ವಿಮೆ ಹಣವನ್ನು ಲಪಟಾಯಿಸುವ ಷಡ್ಯಂತ್ರದ ಹಿಂದಿನ ಅಸಲಿ ಕಹಾನಿಯ ಬೆನ್ನು ಹತ್ತಿದ್ದ ಪೊಲೀಸರು ಪ್ರಮುಖ ಆರೋಪಿ ಎಚ್ ಹರ್ಷವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಇದೀಗ ಸುಳ್ಳು ಮರಣ ದಾಖಲೆ ಸೃಷ್ಟಿಗೆ ಕಾರಣರಾದ ಜಾಲಿ ಪಪಂ ಇಬ್ಬರು ಸಿಬ್ಬಂದಿಗಳನ್ನು ವಶಕ್ಕೆ ಪಡೆದಿದ್ದು, ತನಿಖೆ ಅಂತಿಮ ಹಂತಕ್ಕೆ ಬಂದು ಮುಟ್ಟಿದೆ.
ಅರ್ಜಿದಾರರು, ಸತ್ತವರು ಯಾರು?:
ಲಭ್ಯ ಮಾಹಿತಿಯ ಪ್ರಕಾರ ಮರಣ ಹೊಂದಿದವರು ಹಾಗೂ ಮರಣ ದಾಖಲೆಗೆ ಅರ್ಜಿ ಸಲ್ಲಿಸಿದ ಆತನ ತಾಯಿ ಇಬ್ಬರೂ ಹಾಸನ ಮೂಲದವರಾಗಿದ್ದು, ಭಟ್ಕಳದಲ್ಲಿ ಅವರು ವಾಸಿಸಿದ್ದು ಇರುವುದಿಲ್ಲ. ಅಲ್ಲದೇ ಇವರು ಸೃಷ್ಟಿಸಿರುವ ಮರಣ ದಾಖಲೆಯಲ್ಲಿ ಇರುವ ವ್ಯಕ್ತಿ ಮರಣ ಹೊಂದಿಲ್ಲ! ಆದರೆ ಜಾಲಿ ಪಟ್ಟಣ ಪಂಚಾಯತ ಸಿಬ್ಬಂದಿಗಳೇ ಜಾಲಿ ಪಟ್ಟಣ ಪಂಚಾಯತ ಜಂಗನಗದ್ದೆ ವಿಳಾಸದಲ್ಲಿ ಮೃತರು ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದ ಬಗ್ಗೆ ನಕಲಿ ವಿಳಾಸ ಸೃಷ್ಟಿಸಿ ಈ ಕುಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಅರ್ಜಿಯ ಜೊತೆಗೆ ಲಗತ್ತಿಸಿರುವ ಪಂಚನಾಮೆಯಲ್ಲಿರುವ ವ್ಯಕ್ತಿಗಳ ಹೆಸರು, ಫೋನ್ ನಂಬರ ಎಲ್ಲವೂ ನಕಲಿಯಾಗಿರುವುದು ಇದಕ್ಕೆ ಇನ್ನಷ್ಟು ಪುಷ್ಠಿ ನೀಡಿದೆ. ವಿಮೆ ಕಂಪನಿಯ ಮೂಲದ ಪ್ರಕಾರ ಕೋಟಿಗೂ ಅಧಿಕ ವಿಮೆ ಹಣವನ್ನು ಲಪಟಾಯಿಸಲು ಷಡ್ಯಂತ್ರ ರೂಪಿಸಿರುವುದು ಸ್ಪಷ್ಟವಾಗಿದೆ. ಇಲ್ಲಿನ ಜಾಲಿಯ ಯುವ ಮುಖಂಡ ಹರೀಶ ನಾಯ್ಕ, ಈ ಕುರಿತು ದಾಖಲೆ ಸಂಗ್ರಹಿಸಿ ತನಿಖೆ ನಡೆಸುವಂತೆ ಪೊಲೀಸರನ್ನು ಆಗ್ರಹಿಸಿದ್ದರು.

More Stories
ಜನವರಿ 7 ಭಟ್ಕಳ ತಾಲೂಕ 11ನೆ ಸಾಹಿತ್ಯ ಸಮ್ಮೇಳ
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ