ಕೆ.ಆರ್.ಪೇಟೆ: ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಆಲಂಬಾಡಿಕಾವಲು ಗ್ರಾಮದಲ್ಲಿ ಮಂಗಳವಾರ ರಾತ್ರಿ ಸುರಿದ ಬಿರುಗಾಳಿ ಮಳೆಯಿಂದಾಗಿ ರೈತರು ಬೆಳೆದ ಬೆಳಗಳು ನಾಶವಾಗಿದ್ದರೆ, ಹಲವಾರು ಮನೆಗಳ ಮೇಲೆ ಮರಗಳು ಉರುಳಿ ಬಿದ್ದು ಮನೆಗಳಿಗೆ ಹಾನಿಯುಂಟಾದ್ದು ಅಪಾರ ನಷ್ಟ ಉಂಟಾಗಿದೆ. ಮನೆಯ ಮೇಲ್ಚಾವಣಿ ಮುರಿದು ಬಿದ್ದ ಪರಿಣಾಮ ಐವರಿಗೆ ಸಣ್ಣ-ಪುಟ್ಟ ಗಾಯಗಳಾಗಿದೆ.
ಆಲಂಬಾಡಿಕಾವಲು ಗ್ರಾಮದ ವೆಂಕಟೇಶಯ್ಯ, ಸಣ್ಣಹುಚ್ಚಮ್ಮ, ಮಹಾದೇವಯ್ಯ, ರೇವಣ್ಣ, ರಘುಪತಿ, ಯೋಗಾನಂದ ಅವರಿಗೆ ಸೇರಿದ ಮನೆಗಳ ಮೇಲೆ ಮರಗಳು ಉರುಳಿ ಬಿದ್ದಿ ಮನೆಗಳ ಮೇಲ್ಚಾವಣೆಗಳು ಮುರಿದು ಬಿದ್ದಿದ್ದು ಭಾಗಶಃ ಶಿಥಿಲಗೊಂಡಿವೆ. ವೆಂಕಟೇಶಯ್ಯ ಅವರ ಮನೆಯಲ್ಲಿ ಮಲಗಿದ್ದ ಕಲ್ಪನಾ ಮತ್ತು ಸೌಮ್ಯ, ಸಣ್ಣಹುಚ್ಚಮ್ಮ, ವೆಂಕಟೇಶಯ್ಯ ಸೇರಿದಂತೆ ಐವರಿಗೆ ಮೇಲ್ಚಾವಣಿ ಹಾರಿದ್ದರಿಂದ ಹೆಚ್ಚುಗಳು ಪುಡಿ ಪುಡಿಯಾದ ಕಾರಣ ಸಣ್ಣ ಪುಟ್ಟ ಗಾಯಗಳಾಗಿದ್ದು ಹೊರಗೆ ಓಡಿ ಬಂದ ಕಾರಣ ಹೆಚ್ಚಿನ ಅನಾಹುತದಿಂದ ತಪ್ಪಿಸಿಕೊಂಡಿದ್ದಾರೆ. ಪ್ರಮುಖವಾಗಿ ಆಲಂಬಾಡಿಕಾವಲು ದಲಿತ ಕಾಲೋನಿಗೆ ಹೊಂದಿಕೊಂಡಂತೆ ಇರುವ ಮುಜೀಬ್ ಎಂಬುವವರು ತಮ್ಮ ಜಮೀನಿನಲ್ಲಿ ಕಾಡು ಮರಗಳನ್ನು ಮನೆಗಳಿಂದ ಅಂತರ ಕಾಯ್ದುಕೊಳ್ಳದೇ ಮನೆಯ ಪಕ್ಕದಲ್ಲಿಯೇ ನೂರಾರು ಸಸಿ ನೆಟ್ಟಿ ಬೆಳೆಸಿರುವ ಕಾರಣ ಬಿರುಗಾಳಿಗೆ ಸಿಲುಕಿ ದಲಿತರ ಹತ್ತಾರು ಮನೆಗಳಿಂದ ಹಾನಿಯುಂಟಾಗಿದೆ. ಸದರಿ ಜಾಗದಲ್ಲಿರುವ ಬೃಹತ್ ಎತ್ತರದ ಕಾಡು ಜಾತಿಯ ಮರಗಳನ್ನು ಕೂಡಲೇ ತೆರವುಗೊಳಿಸುವ ಮೂಲಕ ಮನೆಗಳನ್ನು ರಕ್ಷಿಸಿಕೊಡಬೇಕೆಂದು ದಲಿತ ಕುಟುಂಬಗಳು ಆಗ್ರಹಿಸಿವೆ.
ಘಟನೆ ಕುರಿತು ಮಾತನಾಡಿರುವ ಗ್ರಾಮದ ಯಜಮಾನರಾದ ಚನ್ನಕೃಷ್ಣ ಅವರು ಮಂಗಳವಾರ ಸುರಿದ ಬಿರುಗಾಳಿ ಸಮೇತ ಸುರಿದ ಮಳೆಯಿಂದಾಗಿ ಹಾನಿಗೊಳಗಾಗಿರುವ ಮನೆಗಳಿಗೆ ತಾಲೂಕು ಆಡಳಿತವು ಸೂಕ್ತ ಪರಿಹಾರ ಒದಗಿಸಿಕೊಡಬೇಕು. ಅಲ್ಲದೆ ಹಾನಿಗೊಳಗಾದ ಕುಟುಂಬಗಳಿಗೆ ಆಶ್ರಯ ಯೋಜನೆ ಅಡಿಯಲ್ಲಿ ಮನೆಗಳನ್ನು ಮಂಜೂರು ಮಾಡಿಕೊಡಬೇಕು ಎಂದು ಒತ್ತಾಯ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಅಕ್ಕಿಹೆಬ್ಬಾಳು ಹೋಬಳಿ ರಾಜಸ್ವ ನಿರೀಕ್ಷಕ ರಾಮಚಂದ್ರಪ್ಪ ಗ್ರಾಮ ಲೆಕ್ಕಾಧಿಕಾರಿ ದಶರಥ, ಗ್ರಾಮ ಪಂಚಾಯಿತಿ ಪಿಡಿಓ ಮಹಾದೇವ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎ.ಎಂ.ಸಂಜೀವಪ್ಪ ಮತ್ತಿತರರು ಬೇಡಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಪ್ರಭಾಕರ್, ಯಜಮಾನ್ ಚನ್ನಕೃಷ್ಣ, ಮುಖಂಡರಾದ ಯೋಗಾನಂದ, ಸ್ವಾಮಯ್ಯ, ವೆಂಕಟೇಶಯ್ಯ, ರೇವಣ್ಣ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದು ಮಳೆಯಿಂದ ಉಂಟಾಗಿರುವ ಹಾನಿಯನ್ನು ವಿವರಿಸಿದರು.
ಬಾಳೆಗಿಡಗಳು ನಾಶ: ಆಲಂಬಾಡಕಾವಲು ಗ್ರಾಮದ ಎ.ರಾಜು ಸೇರಿದಂತೆ ಹಲವು ರೈತರು ತಮ್ಮ ಜಮೀನಿನಲ್ಲಿ ಬೆಳಿದಿದ್ದ ಬಾಳೆ ಬೆಳೆ, ತೆಂಗು, ಅಡಿಕೆ ಮರಗಳು ನಾಶವಾಗಿವೆ. ಅಲ್ಲದೆ ಆಲಂಬಾಡಿಕಾವಲು ಗ್ರಾಮದಿಂದ ಸೋಮನಹಳ್ಳಿಗೆ ಹಾಗೂ ಆಲಂಬಾಡಿ ಗ್ರಾಮಗಳಿಗೆ ಹೋಗುವ ಮುಖ್ಯರಸ್ತೆಯಲ್ಲಿ ಬೃಹತ್ ಗಾತ್ರದ ಮರಗಳು ಬುಡಸಮೇತ ಉರುಳಿ ಬಿದ್ದಿದ್ದು ಸಂಚಾರ ಸಂಪೂರ್ಣ ಬಂದ್ ಆಗಿದೆ. ಅಲ್ಲದೆ ಹತ್ತಾರು ವಿದ್ಯುತ್ ಕಂಬಗಳು ಬಿರುಗಾಳಿಗೆ ಸಿಲುಕಿ ಒಂದು ವಿದ್ಯುತ್ ಟಿಸಿ, ಹತ್ತಾರು ಕಡೆ ವಿದ್ಯುತ್ ಮಾರ್ಗದ ತಂತಿಗಳು ಮರಗಳ ಮುರಿದು ಬಿದ್ದ ಕಾರಣ ತುಂಡಾಗಿ ಬಿದ್ದು ಹೋಗಿವೆ. ಇದರಿಂದ ಆಲಂಬಾಡಿಕಾವಲು, ಸೋಮನಹಳ್ಳಿ, ಬಸವನಹಳ್ಳಿ, ಆಲಂಬಾಡಿ, ಗುಡುಗನಹಳ್ಳಿ ಗ್ರಾಮಗಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣ ಬಂದ್ ಆಗಿದ್ದು ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ.
ಒತ್ತಾಯ: ಈ ಭಾಗದಲ್ಲಿ ಕಡಿದು ಬಿದ್ದಿರುವ ವಿದ್ಯುತ್ ಮಾರ್ಗಗಳನ್ನು ಕೂಡಲೇ ದುರಸ್ಥಿ ಮಾಡಿ, ವಿದ್ಯುತ್ ಸಂಪರ್ಕ ನೀಡಬೇಕು. ಹಾನಿಗೊಳಗಾಗಿರುವ ಮನೆಗಳಿಗೆ ಕೂಡಲೇ ಪರಿಹಾರ ನೀಡಬೇಕು. ಬಿರುಗಾಳಿಯಿಂದ ಫಸಲು ನಷ್ಟಕ್ಕೆ ಒಳಗಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ತಾಲೂಕು ಪಂಚಾಯಿತಿ ಸದಸ್ಯ ಎ.ಎಂ.ಸ0ಜೀವಪ್ಪ ತಾಲೂಕು ಆಡಳಿತವನ್ನು ಒತ್ತಾಯ ಮಾಡಿದ್ದಾರೆ.
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ