May 5, 2024

Bhavana Tv

Its Your Channel

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಅಂಗಡಿಗೆ ಬೆಂಕಿ; ಅಪಾರ ನಷ್ಟ.!

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ಡಿವಿಜಿ ಮುಖ್ಯರಸ್ತೆಯಲ್ಲಿರುವ ಬಾಲಾಜಿ ಪ್ರಾವಿಜನ್ ಸ್ಟೋರ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಅವಘಡ ಸಂಭವಿಸಿ ಅಪಾರ ನಷ್ಟ ಉಂಟಾಗಿದೆ,

ಶನಿವಾರ ತಡರಾತ್ರಿ ತಾಲ್ಲೂಕಿನಾದ್ಯಂತ ಭಾರೀ ಮಳೆ ಸುರಿದಿದೆ. ಈ ಮಳೆಗೆ ಪಟ್ಟಣದ ಡಿವಿಜಿ ಮುಖ್ಯರಸ್ತೆಯಲ್ಲಿರುವ ಬಾಲಾಜಿ ಪ್ರಾವಿಜನ್ ಸ್ಟೋರ್‌ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಅವಘಡ ಸಂಭವಿಸಿದೆ. ಇದರ ಪರಿಣಾಮ ಅಂಗಡಿಯಲ್ಲಿದ್ದ ಕಂಪ್ಯೂಟರ್ ಮತ್ತು ಕರೆನ್ಸಿ ಎಣಿಕೆ ಯಂತ್ರದ ಜತೆಗೆ ಅಂಗಡಿಯಲ್ಲಿರುವ ಸರಕುಗಳೂ ಬಹುತೇಕ ಸುಟ್ಟು ಭಸ್ಮವಾಗಿವೆ.

ಇದರ ಜೊತೆಗೆ ಏಳೆಂಟು ರೂ ೫೦೦ ಮುಖಬೆಲೆಯುಳ್ಳ ನೋಟಿನ ಕಂತೆಗಳು ಕೂಡ ಬೆಂಕಿಗೆ ಆಹುತಿಯಾಗಿವೆ. ಅವುಗಳ ಮೊತ್ತ ೧೦ರಿಂದ ೧೫ ಲಕ್ಷ ರೂ. ಇರಬಹುದು ಎನ್ನಲಾಗಿದೆ..

ಬಾಗೇಪಲ್ಲಿ ಪಟ್ಟಣದ ಅತಿದೊಡ್ಡ ಸಗಟು ಮಾರಾಟ ಮಳಿಗೆಗಳಲ್ಲಿ ಇದೂ ಒಂದಾಗಿದ್ದು, ಪ್ರತಿ ದಿನವೂ ಲಕ್ಷಾಂತರ ರೂ. ವ್ಯವಹಾರ ನಡೆಯುತ್ತಿತ್ತು ಎನ್ನಲಾಗಿದೆ.

ಈ ಬಾಲಾಜಿ ಪ್ರಾವಿಷನ್ ಸ್ಟೋರ್ ತ್ಯಾಗರಾಜ್ ಎಂಬುವವರಿಗೆ ಸೇರಿದ್ದಾಗಿದೆ. ಅವಘಡ ಸಂಭವಿಸಿದ ಮಾಹಿತಿ ತಿಳಿದ ತಕ್ಷಣವೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಸುಮಾರು ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದರು.

ಈ ಕಾರ್ಯಾಚರಣೆ ವೇಳೆ ಅಗ್ನಿಶಾಮಕ ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಿಬ್ಬಂದಿಯಾದ ನಾರಾಯಣಸ್ವಾಮಿ ಅವರ ಮೇಲೆ ಮೇಲ್ಛಾವಣಿಯ ಪಿಓಪಿ ಬಿದ್ದು ಅವರಿಗೆ ಸಣ್ಣಪುಟ್ಟ ಗಾಯವಾದರೆ, ಇನ್ನು ಜಯಪ್ಪ ನಾಯಕ್ ಎಂಬುವವರ ಬೆರಳಿಗೆ ಮೊಳೆ ಚುಚ್ಚಿ ರಕ್ತಸ್ರಾವವಾಗಿದೆ. ಆದರೂ ಇದಾವುದನ್ನೂ ಲೆಕ್ಕಿಸದೆ ಅವರೆಲ್ಲರೂ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಮಳಿಗೆಯಲ್ಲಿದ್ದ ಆಹಾರ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿ ಸುಮಾರು ೧೦ ಲಕ್ಷ ರೂ.ಗಳಿಗೂ ಹೆಚ್ಚು ನಷ್ಟವಾಗಿರಬಹುದು ಎಂದು ಅಂದಾಜು ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಎನ್.ಸತ್ಯಪ್ಪ, ಎಂ.ಸಿ.ಜಯಪ್ಪ ನಾಯಕ್, ಚಾಲಕ ನರಸಿಂಹಪ್ಪ, ಗೃಹ ರಕ್ಷಕರಾದ ನಾರಾಯಣಸ್ವಾಮಿ, ವೆಂಕಟೇಶ್ ಪಾಲ್ಗೊಂಡಿದ್ದರು.

ವರದಿ: ಗೋಪಾಲ ರೆಡ್ಡಿ ಬಾಗೆಪಲ್ಲಿ

error: