May 6, 2024

Bhavana Tv

Its Your Channel

ಸ್ವಾಭಿಮಾನಿ ಕಲಾವಿದರ ಸಂಘದ ಉದ್ಘಾಟನೆಯ ಅಂಗವಾಗಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಗೀತನಮನ ಹಾಗೂ ರಕ್ತದಾನ ಶಿಬಿರ

ಕೃಷ್ಣರಾಜಪೇಟೆ ತಾಲ್ಲೂಕಿನ ಸ್ವಾಭಿಮಾನಿ ಕಲಾವಿದರ ಸಂಘದ ಉದ್ಘಾಟನೆಯ ಅಂಗವಾಗಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಗೀತನಮನ ಹಾಗೂ ರಕ್ತದಾನ ಶಿಬಿರವನ್ನು ಕೆ.ಆರ್.ಪೇಟೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಆಯೋಜಿಸಲಾಗಿತ್ತು .

ಮಾಜಿಶಾಸಕ ಕೆ.ಬಿ.ಚಂದ್ರಶೇಖರ್ ಅವರು ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಇತಿಹಾಸದ ಪುಟಗಳಲ್ಲಿ ಸತ್ತ ಮೇಲೂ ಜನಮಾನಸದಲ್ಲಿ ಶಾಶ್ವತವಾಗಿ ಬದುಕಿರುವ ಕೆಲವು ಜನರನ್ನು ಕಾಣುತ್ತೇವೆ ಅಂತಹ ಕೆಲವೇ ಕೆಲವು ಮಹನೀಯರ ಸಾಲಿನಲ್ಲಿ ಪುನೀತ್ ಎದ್ದು ಕಾಣುತ್ತಾರೆ. ಸಮಾಜಸೇವೆಗಾಗಿ ತಮ್ಮ ಜೀವಿತವನ್ನೇ ಸಮರ್ಪಣೆ ಮಾಡಿಕೊಂಡು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಅಪಾರವಾದ ಕಾಣಿಕೆ ನೀಡಿರುವ ಪುನೀತ್ ರಾಜ್‌ಕುಮಾರ್ ಅವರ ಆದರ್ಶಗಳನ್ನು ಯುವಜನರು ಪಾಲಿಸುವ ಮೂಲಕ ಬದಲಾವಣೆಯ ದಿಕ್ಕಿನತ್ತ ಸಾಗಬೇಕು.ಸ್ವಾರ್ಥವೇ ತುಂಬಿರುವ ಈ ಸಮಾಜದಲ್ಲಿ ಸಮಾಜಕ್ಕಾಗಿ ನಾವು ಎಂಬ ವಿಶಾಲವಾದ ಮನೋಭಾವನೆಯನ್ನು ಮೈಗೂಡಿಸಿಕೊಂಡು ಸಮಾಜಮುಖಿಯಾಗಿ ಮುನ್ನಡೆಯಬೇಕು ಎಂದು ಕರೆ ನೀಡಿದ ಚಂದ್ರಶೇಖರ್ ಪುನೀತ್ ರಾಜ್‌ಕುಮಾರ್ ಅವರು ಆದರ್ಶ ವ್ಯಕ್ತಿತ್ವ ಹೊಂದಿರುವ ಮಹಾನ್ ವ್ಯಕ್ತಿ ಮಾತ್ರವಲ್ಲದೆ ಯುವಜನರಿಗೆ ಪ್ರೇರಕ ಶಕ್ತಿಯಾಗಿದ್ದಾರೆ. ಇಂದು ತಾಲ್ಲೂಕಿನ ಸ್ವಾಭಿಮಾನಿ ಕಲಾವಿದರು ಪುನೀತ್ ಅವರ ನೆನಪಿಗಾಗಿ ಗೀತನಮನವನ್ನು ಆಯೋಜಿಸಿ ರಕ್ತದಾನ ಮಾಡಿ, ವಿವಿಧ ಕ್ಷೇತ್ರದಲ್ಲಿ ಸಾಧನೆಮಾಡಿರುವ ಗಣ್ಯರನ್ನು ಸನ್ಮಾನಿಸಿ ಗೌರವಿಸುವ ಜೊತೆಗೆ ಅನ್ನದಾನ ಕಾರ್ಯಕ್ರಮವನ್ನೂ ಕೂಡ ನಡೆಸಿರುವುದು ಮಾದರಿಯಾಗಿದೆ ಎಂದು ಚಂದ್ರಶೇಖರ್ ಗುಣಗಾನ ಮಾಡಿದರು.

ಕೆ.ಆರ್.ಪೇಟೆ ಪುರಸಭೆ ಅಧ್ಯಕ್ಷೆ ಮಹಾದೇವಿನಂಜುAಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಪುನೀತ್ ರಾಜ್‌ಕುಮಾರ್ ಅವರು ಮಾಡಿರುವ ಸಮಾಜಮುಖಿ ಕೆಲಸಗಳು ಯಾರಿಗೂ ತಿಳಿದಿರಲಿಲ್ಲ. ಆದರೆ ಅವರು ಸತ್ತ ನಂತರ ಅವರು ಮಾಡಿರುವ ಪುಣ್ಯದ ಕೆಲಸಗಳು ನೂರಾರು ಬೆಳಕಿಗೆ ಬರುತ್ತಿವೆ. ಇಂತಹ ಪುಣ್ಯಾತ್ಮನನ್ನು ಪಡೆದಿರುವ ಕನ್ನಡ ತಾಯಿಯೇ ಧನ್ಯ..ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಪುನೀತ್ ಕನ್ನಡಿಗರು ಮಾತ್ರವಲ್ಲದೇ ಇಡೀ ಭಾರತಾಂಬೆಯ ಮಕ್ಕಳೇ ಧನ್ಯರಾಗುವಂತೆ ಮಾಡಿದ್ದಾರೆ ಎಂದು ಮಹಾದೇವಿ ಹೇಳಿದರು.

ಪುರಸಭೆ ಸದಸ್ಯ ಡಿ.ಪ್ರೇಮಕುಮಾರ್ ಪುನೀತ್ ಅವರ ನೆಚ್ಚಿನ ಗೊಂಬೆ ಹೇಳುತೈತೆ ಹಾಡಿಗೆ ಧ್ವನಿಯಾದರೆ ಮುಖಂಡರಾದ ಬಸ್ತಿರಂಗಪ್ಪ, ವಡ್ಡರಹಳ್ಳಿ ಧನಂಜಯ, ಮೈಸೂರು ಜಿಲ್ಲಾ ಕಲಾವಿದರ ಸಂಘದ ಕಾರ್ಯದರ್ಶಿ ಪುಟ್ಟಸ್ವಾಮಿ, ಜಾನಪದ ಗಾಯಕಿ ರೇಣುಕಾ, ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷೆ ಕಮಲಾಕ್ಷಿ ನಾಗರಾಜು, ಸ್ವಾಭಿಮಾನಿ ಕಲಾವಿದರ ಸಂಘದ ಅಧ್ಯಕ್ಷರಾದ ಗಾಯಕ ಪ್ರಮೋದ್, ಆರ್ಕೇಸ್ಟ್ರಾ ಮಂಜುನಾಥ್, ಸವಿತಾ, ಗೌರವಾಧ್ಯಕ್ಷ ಸುನೀಲ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್, ರಕ್ತನಿಧಿ ಕೇಂದ್ರದ ಅಧಿಕಾರಿ ಸತೀಶ್, ಪುರಸಭೆ ಮಾಜಿಸದಸ್ಯ ಕೆ.ಆರ್.ನೀಲಕಂಠ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ. ಡಾ.ಕೆ.ಆರ್.ನೀಲಕಂಠ.
ಕೃಷ್ಣರಾಜಪೇಟೆ. ಮಂಡ್ಯ.

error: