
ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಸಾಧುಗೋನಹಳ್ಳಿ ಗ್ರಾಮದ ಸರ್ವೇ.ನಂಬರ್ 287ರಲ್ಲಿ 35 ವರ್ಷಗಳ ಹಿಂದೆ ರೈತರಿಗೆ ಮಂಜೂರಾಗಿರುವ ರೈತರ 28 ಎಕರೆ ಕೃಷಿ ಭೂಮಿಯನ್ನು ಸರ್ಕಾರಕ್ಕೆ ಕಿತ್ತುಕೊಂಡು ರೈತರನ್ನು ಒಕ್ಕಲೆಬ್ಬಿಸುತ್ತಿರುವ ಸಚಿವ ನಾರಾಯಣಗೌಡರ ಕ್ರಮಕ್ಕೆ ಬಡರೈತರ ಆಕ್ರೋಶ ವ್ಯಕ್ತಪಡಿಸಿ..ಸಚಿವರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು ..
ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ರಾಜ್ಯದ ಯುವಸಬಲೀಕರಣ ಕ್ರೀಡೆ ಹಾಗೂ ರೇಷ್ಮೆ ಸಚಿವರಾದ ಡಾ.ನಾರಾಯಣಗೌಡ ಅವರು ರೈತರ ಭೂಮಿಯನ್ನು ಸರ್ಕಾರಕ್ಕೆ ವಶಪಡಿಸಿಕೊಂಡು ವಿವಿಧ ಜಾತಿವಾರು ಸಮುಧಾಯ ಭವನಗಳ ನಿರ್ಮಾಣಕ್ಕೆ ಎಕರೆಗಟ್ಟಲೆ ಭೂಮಿಯನ್ನು ಹಂಚಿಕೆ ಮಾಡಿರುವ ಕ್ರಮಕ್ಕೆ ರಾಜ್ಯ ಉಚ್ಛ ನ್ಯಾಯಾಲಯವು ತಡೆಯಾಜ್ಞೆ ನೀಡಿರುವುದರಿಂದ ಮಂಡ್ಯ ಜಿಲ್ಲಾಧಿಕಾರಿ ಎಸ್.ಅಶ್ವಥಿ ಅವರು ಸರ್ವೇ.ನಂ 287ರಲ್ಲಿ ಲಿಂಗಾಯತ ಹಾಗೂ ಒಕ್ಕಲಿಗ ಭವನಗಳ ನಿರ್ಮಾಣಕ್ಕೆ ಹಂಚಿಕೆ ಮಾಡಿ ಮಂಜೂರು ಮಾಡಿರುವ ತಲಾ ಒಂದು ಎಕರೆ ಭೂಮಿಯ ಆದೇಶವನ್ನು ರದ್ದುಪಡಿಸಿರುವುದರಿಂದ ಭೂಮಿಯನ್ನು ಉಳುಮೆ ಮಾಡುತ್ತಿದ್ದ ರೈತರ ಹೋರಾಟಕ್ಕೆ ಜಯ ಸಿಕ್ಕಿದ್ದು ಸಚಿವ ನಾರಾಯಣಗೌಡ ಹಾಗೂ ತಾಲ್ಲೂಕು ಆಡಳಿತದ ಮುಖ್ಯಸ್ಥರಾದ ತಹಶೀಲ್ದಾರ್ ಎಂ.ವಿ.ರೂಪ ಮುಖಭಂಗಕ್ಕೆ ಒಳಗಾಗಿದ್ದಾರೆ..
ಸರ್ವೇ ನಂಬರ್ 287ರಲ್ಲಿ ತಮಗೆ ಮಂಜೂರಾಗಿದ್ದು ಸ್ವಾಧೀನಾನುಭವದಲ್ಲಿರುವ 30ಕ್ಕೂಹೆಚ್ಚಿನ ರೈತರು ಪುರಸಭಾ ಸದಸ್ಯ ಕೆ.ಸಿ.ಮಂಜುನಾಥ್ ಅವರ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸಚಿವರು ಹಾಗೂ ತಾಲ್ಲೂಕು ಆಡಳಿತದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು..
ಜಾತಿವಾರು ಭವನಗಳ ನಿರ್ಮಾಣಕ್ಕೆ ರೈತರು ಉಳುಮೆ ಮಾಡುತ್ತಿರುವ ಸರ್ಕಾರವು ದರಖಾಸ್ತು ಮೂಲಕ ಮಂಜೂರು ಮಾಡಿರುವ ಗೋಮಾಳದ ಭೂಮಿಯನ್ನು ಮನಸೋ ಇಚ್ಛೆ ಹಂಚುತ್ತಿರುವ ಸಚಿವ ನಾರಾಯಣಗೌಡ ಅವರು ಜಾತಿಜಾತಿಗಳ ನಡುವೆ ವೈಷಮ್ಯದ ಬೀಜವನ್ನು ಬಿತ್ತುವ ಜೊತೆಗೆ ಬಡ ರೈತರ ಹೊಟ್ಟೆಯ ಮೇಲೆ ಹೊಡೆದು ಒಕ್ಕಲೆಬ್ಬಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ..
ಚುನಾವಣಾ ವರ್ಷವಾದ್ದರಿಂದ ಜಾತಿವಾರು ಮತಗಳನ್ನು ಸೆಳೆಯಲು ಅಧಿಕಾರಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಆಟವಾಡುತ್ತಿರುವ ಸಚಿವರು ಕ್ಷುಲ್ಲಕ ರಾಜಕಾರಣ ಮಾಡುತ್ತ ಜನಸಾಮಾನ್ಯರನ್ನು ಒಬ್ಬರ ಮೇಲೆ ಇನ್ನೊಬ್ಬರನ್ನು ಎತ್ತಿಕಟ್ಟಿ ಹೊಡೆದಾಡಿಸುವ ಕೆಲಸ ಮಾಡುತ್ತಿದ್ದಾರೆ. ನಾರಾಯಣಗೌಡರ ಈ ಆಟ ನಡೆಯುವುದಿಲ್ಲ.ಬಡ ರೈತರಿಗೆ ಜೀವನಾಧಾರವಾದ ಭೂಮಿಯನ್ನು ಕಸಿದುಕೊಂಡು ಸಣ್ಣತನದ ರಾಜಕಾರಣ ಮಾಡುತ್ತಿರುವ ಸಚಿವ ನಾರಾಯಣಗೌಡರ ವಿರುದ್ಧ ಉಗ್ರವಾದ ಹೋರಾಟ ನಡೆಸುವುದಾಗಿ ಪುರಸಭಾ ಸದಸ್ಯ ಕೆ.ಸಿ.ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ..
ಸಾಧುಗೋನಹಳ್ಳಿ ವ್ಯಾಪ್ತಿಯ ಸರ್ವೇ ನಂಬರ್ 287 ರಲ್ಲಿ ನೂರಾರು ಎಕರೆ ಗೋಮಾಳವಿದೆ. ತಾಲ್ಲೂಕು ಆಡಳಿತವು ಈಗ್ಗೆ 35 ವರ್ಷಗಳ ಹಿಂದೆಯೇ ಕೆ.ಆರ್.ಪೇಟೆ ಹಾಗೂ ಹೊಸಹೊಳಲು ವ್ಯಾಪ್ತಿಯ ಬಡ ರೈತರಿಗೆ ಒಂದೂವರೆ, ಎರಡು ಎಕರೆಯಷ್ಟು ಕೃಷಿ ಭೂಮಿಯನ್ನು ಕಿಮ್ಮತ್ತು ಕಟ್ಟಿಸಿಕೊಂಡು ಹಕ್ಕುಪತ್ರ ನೀಡಿದ್ದರೂ ರೈತರು ಇಲ್ಲಿ ಬೇಸಾಯ ಮಾಡುತ್ತಿಲ್ಲ, ಜಮೀನು ಪಾಳುಬಿದ್ದಿದೆ ಎಂದು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸುಳ್ಳು ವರದಿ ನೀಡಿರುವ ತಹಶೀಲ್ದಾರ್ ಮತ್ತು ಉಪವಿಭಾಗಾಧಿಕಾರಿಗಳು ಮಂತ್ರಿಗಳ ತಾಳಕ್ಕೆ ತಕ್ಕಂತೆ ಕುಣಿದು ಭೂಮಿ ಮಂಜೂರಾತಿ ಆದೇಶವನ್ನು ರದ್ದು ಪಡಿಸಿ ಜಾತಿವಾರು ಸಮುದಾಯ ಭವನಗಳ ನಿರ್ಮಾಣಕ್ಕೆ ಭೂಮಿ ಹಂಚಲು ಮುಂದಾಗಿದ್ದಾರೆ. ಜಿಲ್ಲಾಧಿಕಾರಿಗಳ ಕ್ರಮವನ್ನು ಪ್ರಶ್ನಿಸಿ ರಾಜ್ಯದ ಉಚ್ಚನ್ಯಾಯಾಲಯದಲ್ಲಿ ಪ್ರಶ್ನಿಸಿ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದ ರೈತರಿಗೆ ಹೈಕೋರ್ಟ್ ಸರ್ಕಾರಕ್ಕೆ ಭೂಮಿಯನ್ನು ವಶಪಡಿಸಿಕೊಂಡು ಜಾತಿವಾರು ಭವನಗಳ ನಿರ್ಮಾಣಕ್ಕೆ ಭೂಮಿ ಹಂಚಿಕೆ ಮಾಡದಂತೆ ತಡೆಯಾಜ್ಞೆ ನೀಡಿ ಮಾಡಿರುವ ಆದೇಶವು ಬಡ ರೈತರಿಗೆ ನೆಮ್ಮದಿ ತಂದಿದೆ. ಜಿಲ್ಲಾಧಿಕಾರಿಗಳು ಜಾತಿವಾರು ಸಮುದಾಯ ಭವನಗಳ ನಿರ್ಮಾಣಕ್ಕೆ ಹಂಚಿಕೆ ಮಾಡಿದ್ದ ಆದೇಶವನ್ನು ರದ್ದುಪಡಿಸಿರುವುದು ರೈತರ ಹೋರಾಟಕ್ಕೆ ಜಯ ದೊರಕಿದ್ದು ಸಚಿವರು ಮುಖಭಂಗಕ್ಕೊಳಗಾಗಿದ್ದಾರೆ ..
ಪುರಸಭಾ ಸದಸ್ಯ ಕೆ.ಸಿ. ಮಂಜುನಾಥ್ ಮಾತನಾಡಿ ಸಚಿವ ನಾರಾಯಣಗೌಡರು ಬಡರೈತರ ಹೊಟ್ಟೆಯ ಮೇಲೆ ಹೊಡೆದು ರೈತರ ಭೂಮಿಯನ್ನು ಕಸಿದುಕೊಂಡು ಒಕ್ಕಲೆಬ್ಬಿಸುವ ಕೆಲಸ ಮಾಡಲು ಮುಂದಾಗಿದ್ದರು. ನಾನೊಬ್ಬ ಹೋರಾಟಗಾರನಾಗಿ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸಹಿಸಿಕೊಂಡು ಕೂರಲು ಸಾಧ್ಯವಿಲ್ಲ.. ನಾನು ಅನ್ಯಾಯ ವಿರುದ್ಧ ಉಗ್ರವಾದ ಹೋರಾಟ ನಡೆಸುತ್ತೇನೆ. ಬಡ ರೈತರಿಗೆ ನ್ಯಾಯ ದೊರೆಯುವವರೆಗೂ ನನ್ನ ಹೋರಾಟ ನಿರಂತರವಾಗಿ ನಡೆಯುತ್ತದೆ. ಸಚಿವ ನಾರಾಯಣಗೌಡ ಅವರು ಈಗಲಾದರೂ ಎಚ್ಚೆತ್ತುಕೊಂಡು ಬಡರೈತರ ಮೇಲೆ ನಡೆಸುತ್ತಿರುವ ದೌರ್ಜನ್ಯ ದಬ್ಬಾಳಿಕೆಯನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಮುಂಬರುವ ಚುನಾವಣೆಯಲ್ಲಿ ಜನರೇ ತಕ್ಕಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು..
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಡಿ.ಪ್ರೇಮಕುಮಾರ್, ಸುಗುಣಾ ರಮೇಶ್, ಪುರಸಭೆ ಮಾಜಿಅಧ್ಯಕ್ಷ ಚಂದ್ರೇಗೌಡ, ಮಾಜಿಸದಸ್ಯ ಗಂಟೆ ಗೋಪಾಲ್, ಸಿಂಗ್ರಯ್ಯ, ನಾಗರಾಜು, ಕಮಲಮ್ಮ, ಸಾಕಮ್ಮ ಸೇರಿದಂತೆ ಐವತ್ತಕ್ಕೂ ಹೆಚ್ಚಿನ ರೈತರು ಉಪಸ್ಥಿತರಿದ್ದರು.
ವರದಿ ಡಾ.ಕೆ.ಆರ್.ನೀಲಕಂಠ.
ಕೃಷ್ಣರಾಜಪೇಟೆ. ಮಂಡ್ಯ
More Stories
ತಮಟೆಯ ಸದ್ದಿಗೆ ಲಯಬದ್ದವಾಗಿ ಹೆಜ್ಜೆ ಹಾಕಿ ರಂಗ ಕುಣಿದು ಸಂಭ್ರಮಿಸಿದ ಗ್ರಾಮಸ್ಥರು..
ಇಂಧನ ದಕ್ಷ ಪಂಪ್ ಉಪಕರಣಗಳ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ
ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಚುನಾವಣಾಧಿಕಾರಿ ಚಂದ್ರಯ್ಯ ಮನವಿ