
ಕೃಷ್ಣರಾಜಪೇಟೆ :- ನನ್ನ ರಾಜಕೀಯ ವಿರೋಧಿಗಳಿಗೆ ನನ್ನನ್ನು ಕಂಡರೆ ಭಯವಿದೆ. ನನ್ನ ವಿರುದ್ಧ ಅಪಪ್ರಚಾರ ಮಾಡಿ ಜನರ ದಿಕ್ಕುತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ.ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಅನುಷ್ಠಾನಗೊಳಿಸುವ ಮೂಲಕ ತಕ್ಕ ಉತ್ತರ ನೀಡುತ್ತೇನೆ. ಇನ್ನಾರು ತಿಂಗಳಲ್ಲಿ ಕ್ಷೇತ್ರದ ಚಿತ್ರಣವೇ ಬದಲಾಗಲಿದೆ. ಸಚಿವ ನಾರಾಯಣಗೌಡ ಅಭಿಮತ …
ರಾಜಕಾರಣದಲ್ಲಿ ಅಧಿಕಾರವು ನೀರ ಮೇಲಿನ ಗುಳ್ಳೆಯಿದ್ದಂತೆ ಎಂಬ ಸತ್ಯವು ನನಗೆ ತಿಳಿದಿದೆ. ಜನರು ನೀಡಿರುವ ಅಧಿಕಾರವನ್ನು ಜನಸೇವೆಗೆ ಬಳಸುತ್ತಿದ್ದೇನೆ. ನಾನು ಸಚಿವನಲ್ಲ ಶ್ರೀಸಾಮಾನ್ಯರ ಸೇವಕನಾಗಿದ್ದೇನೆ ಎಂದು ರಾಜ್ಯದ ಯುವ ಸಬಲೀಕರಣ ಕ್ರೀಡೆ ಹಾಗೂ ರೇಷ್ಮೆ ಸಚಿವರಾದ ಡಾ.ನಾರಾಯಣಗೌಡ ಹೇಳಿದರು..
ಅವರು ತಾಲ್ಲೂಕಿನ ಹೆಗ್ಗಡಹಳ್ಳಿ, ಬಿಲ್ಲೇನಹಳ್ಳಿ, ಬೂಕನಕೆರೆ, ಕೊಟಗಹಳ್ಳಿ, ಸಂತೆಬಾಚಹಳ್ಳಿ ಹಾಗೂ ಚೋಕನಹಳ್ಳಿ ಗ್ರಾಮಗಳಲ್ಲಿ ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಮಾಡಿ ಚಾಲನೆ ನೀಡಿ ಮಾತನಾಡಿದರು..
ನನಗೆ ಸಚಿವನೆಂಬ ಗತ್ತು ಗಮ್ಮತ್ತು ಇಲ್ಲ, ಅಧಿಕಾರದ ದರ್ಪ, ರಾಜಕಾರಣದ ಒಳಹೊರಗುಗಳು, ಸುಳ್ಳು ಮೋಸ ಏನೆಂಬುದು ಗೊತ್ತಿಲ್ಲ. ಉಧ್ಯಮಿಯಾಗಿ ಸಮಾಜ ಸೇವಕನಾಗಿದ್ದ ನನಗೆ ತಾಲ್ಲೂಕಿನ ಜನತೆ ನನ್ನ ಜೀವನದಲ್ಲಿಯೇ ಮರೆಯಲಾಗದ ಕಾಣಿಕೆಯನ್ನು ನೀಡಿದ್ದಾರೆ. ಸತತವಾಗಿ ಮೂರು ಭಾರಿ ಶಾಸಕನಾಗಿ ಪ್ರಸ್ತುತ ರಾಜ್ಯ ಸರ್ಕಾರದಲ್ಲಿ ಸಚಿವನಾಗಿ ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇನೆ. ಜನತೆ ನೀಡಿರುವ ಅಧಿಕಾರವನ್ನು ಜನಸೇವೆಗೆ, ಕ್ಷೇತ್ರದ ಅಭಿವೃದ್ಧಿಗೆ ಬಳಸುತ್ತಿದ್ದೇನೆ. ನನ್ನ ರಾಜಕೀಯ ವಿರೋಧಿಗಳು ಮಾಡುವ ಟೀಕೆ ಟಿಪ್ಪಣಿಗಳನ್ನು ಸವಾಲಾಗಿ ಸ್ವೀಕರಿಸಿರುವ ನಾನು ಅಭಿವೃದ್ಧಿಯನ್ನು ಮೂಲಮಂತ್ರವನ್ನಾಗಿಸಿಕೊAಡು ಕೆಲಸ ಮಾಡುತ್ತಿದ್ದೇವೆ. ಇತ್ತೀಚಿಗೆ ಸುರಿದ ಭಾರೀ ಮಳೆಯಿಂದಾಗಿ ಕ್ಷೇತ್ರದ ರಸ್ತೆಗಳು ಹಾಳಾಗಿದ್ದು ಗುಂಡಿ ಬಿದ್ದಿವೆ. ಪ್ರಸ್ತುತ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ. ಇನ್ನಾರು ತಿಂಗಳಲ್ಲಿ ನನ್ನ ತಾಲ್ಲೂಕು ಜಿಲ್ಲೆಯಲ್ಲಿಯೇ ಮಾದರಿ ತಾಲೂಕಾಗಿ ಅಭಿವೃದ್ಧಿ ಹೊಂದಲಿದೆ ಎಂದು ಸಚಿವ ನಾರಾಯಣಗೌಡ ವಿಶ್ವಾಸ ವ್ಯಕ್ತಪಡಿಸಿದರು ..
ನನ್ನ ರಾಜಕೀಯ ವಿರೋಧಿಗಳಿಗೆ ನನ್ನನ್ನು ಕಂಡರೆ ಭಯವಿದೆ. ಕ್ಷೇತ್ರದ ಅಭಿವೃದ್ಧಿಗೆ ನಾನು ನೂರಾರು ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಸಿ ತಂದಿದ್ದರೂ ನಾನು ಏನೂ ಕೆಲಸ ಮಾಡಿಲ್ಲ ಎಂದು ಅಪಪ್ರಚಾರ ಮಾಡಿ ಜನತೆಯ ದಿಕ್ಕು ತಪ್ಪಿಸಲು ಪ್ರಯತ್ನ ಮಾಡುತ್ತಿದ್ದಾರೆ. ಸುಳ್ಳು ಮೋಸ, ಕುತಂತ್ರಗಳು ಹೆಚ್ಚು ದಿನಗಳು ಉಳಿಯುವುದಿಲ್ಲ. ಅಂತಿಮವಾಗಿ ಗೆಲುವು ಸಾಧಿಸುವುದು ಸತ್ಯ ಹಾಗೂ ನ್ಯಾಯ ಆದ್ದರಿಂದ ಯಾರು ಏನೇ ಬೊಬ್ಬೆ ಹೊಡೆದರೂ ಅಭಿವೃದ್ಧಿಯ ಮೂಲಕ ಉತ್ತರ ನೀಡುತ್ತೇನೆ ಎಂದು ನಾರಾಯಣಗೌಡ ಗುಡುಗಿದರು…
ಕೃಷ್ಣರಾಜಪೇಟೆ ತಾಲ್ಲೂಕಿನ ರೈತರ ಜೀವನಾಡಿಯಾಗಿರುವ ಕೋರಮಂಡಲ್ ಸಕ್ಕರೆ ಕಾರ್ಖಾನೆಗೆ ಸಂಪರ್ಕ ಕಲ್ಪಿಸುವ ಹೆಗ್ಗಡಹಳ್ಳಿ, ವಡ್ಡರಹಳ್ಳಿ ಮಾಕವಳ್ಳಿಯ ಏಳೂವರೆ ಕೋಟಿ ರೂಪಾಯಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ನಾರಾಯಣಗೌಡ ಭೂಮಿಪೂಜೆ ಮಾಡಿದರು .
ಈ ಸಂದರ್ಭದಲ್ಲಿ ಮಾಕವಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ವೀಣಾಅಶೋಕ್, ಮೈಮುಲ್ ನಿರ್ದೇಶಕ ಎಸ್.ಸಿ.ಅಶೋಕ್, ಜಿಪಂ ಮಾಜಿಉಪಾಧ್ಯಕ್ಷ ಶೀಳನೆರೆ ಅಂಬರೀಶ್, ತಾಲ್ಲೂಕು ಪಂಚಾಯತಿ ಮಾಜಿಅಧ್ಯಕ್ಷ ಬಿ.ಜವರಾಯಿಗೌಡ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಪರಮೇಶ್ ಅರವಿಂದ್, ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಪ್ರಥಮದರ್ಜೆ ಗುತ್ತಿಗೆದಾರರಾದ ಪುಟ್ಟರಾಜು, ಡಿ.ಪಿ.ಪರಮೇಶ್, ಮಾಳಗೂರು ಚಂದ್ರಶೇಖರ್, ಬಿ.ಆರ್.ಕುಮಾರ್, ರಂಗನಾಥಪುರ ಕ್ರಾಸ್ ಗ್ರಾ.ಪಂ ಮಾಜಿಅಧ್ಯಕ್ಷ ಗೊರವಿಮಂಜೇಗೌಡ, ಮೋದೂರು ಮಂಜು, ಬಿ.ಬಾಚಹಳ್ಳಿ ವೆಂಕಟೇಶ್, ಮಂಜೇಗೌಡ, ಬೂಕನಕೆರೆಮಧು, ಮಾಕವಳ್ಳಿ ರಾಮೇಗೌಡ, ಕರೋಟಿ ಅನಿಲ್, ದೇವರಸೇಗೌಡ, ರಾಜೇಶ್, ಸಾಧುಗೋನಹಳ್ಳಿ ಮಂಜುನಾಥ್, ಸಾರಂಗಿ ಮಂಜುನಾಥಗೌಡ, ಬಿಜೆಪಿ ನಗರ ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಕಲಾ ರಮೇಶ್, ಮಾವಿನಕಟ್ಟೆಕೊಪ್ಪಲು ಚೇತನ್ ಗೌಡ, ಸಚಿವರ ಆಪ್ತಸಹಾಯಕರಾದ ದಯಾನಂದ ಸೇರಿದಂತೆ ನೂರಾರು ಗ್ರಾಮಸ್ಥರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು..
ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ

More Stories
ತಮಟೆಯ ಸದ್ದಿಗೆ ಲಯಬದ್ದವಾಗಿ ಹೆಜ್ಜೆ ಹಾಕಿ ರಂಗ ಕುಣಿದು ಸಂಭ್ರಮಿಸಿದ ಗ್ರಾಮಸ್ಥರು..
ಇಂಧನ ದಕ್ಷ ಪಂಪ್ ಉಪಕರಣಗಳ ಕುರಿತು ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮ
ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಚುನಾವಣಾಧಿಕಾರಿ ಚಂದ್ರಯ್ಯ ಮನವಿ