May 4, 2024

Bhavana Tv

Its Your Channel

ವಿಶೇಷಚೇತನರ ಸಾಮಾಜಿಕ ಜಾಗೃತಿ ಹಾಗೂ ಕಿವುಡುತನ ತಪಾಸಣೆ ಕುರಿತು ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ

ಕೃಷ್ಣರಾಜಪೇಟೆ :-ವಿಶೇಷಚೇತನರು ದೇವರ ಮಕ್ಕಳಾಗಿದ್ದಾರೆ. ಅವರಿಗೆ ಸಮಾಜದ ತೋರಿಕೆಯ ಸಹಾನುಭೂತಿ, ಅನುಕಂಪ ಬೇಕಾಗಿಲ್ಲ. ಅವರಲ್ಲಿನ ಸಾಮರ್ಥ್ಯದ ಅನುಗುಣವಾಗಿ ಸಾಧನೆ ಮಾಡಲು ಅವಕಾಶ ನೀಡಿ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು. ಸಚಿವ ಡಾ.ನಾರಾಯಣಗೌಡ ಅಭಿಮತ
ವಿಶೇಷಚೇತನರು ದೇವರ ಮಕ್ಕಳಾಗಿದ್ದು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಅಸಾಮಾನ್ಯವಾದ ಛಲವನ್ನು ಹೊಂದಿರುತ್ತಾರೆ. ಇವರ ಬಗ್ಗೆ ಅನುಕಂಪ ತೋರದೆ ಸಾಧನೆ ಮಾಡಿ ಮುನ್ನಡೆಯಲು ಅವಕಾಶವನ್ನು ಮಾಡಿಕೊಡಬೇಕು ಎಂದು ರಾಜ್ಯದ ಯುವಸಬಲೀಕರಣ ಕ್ರೀಡೆ ಹಾಗೂ ರೇಷ್ಮೆ ಸಚಿವರಾದ ಡಾ.ನಾರಾಯಣಗೌಡ ಹೇಳಿದರು.

ಅವರು ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನದಲ್ಲಿ ಮಹಾರಾಷ್ಟ್ರ ರಾಜ್ಯದ ಮುಂಬೈ ಮಹಾನಗರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಡಿಸೇಬಲಿಟೀಸ್ ಸಂಸ್ಥೆಯು ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ, ಕೆ.ಆರ್.ಪೇಟೆ ತಾಲ್ಲೂಕು ಪಂಚಾಯತಿ ಹಾಗೂ ತಾಲ್ಲೂಕು ಆಡಳಿತದ ಸಂಯುಕ್ತಾಶ್ರಯದಲ್ಲಿ ವಿಶೇಷಚೇತನರ ಸಾಮಾಜಿಕ ಜಾಗೃತಿ ಹಾಗೂ ಕಿವುಡುತನ ತಪಾಸಣೆ ಕುರಿತು ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು..

ವಿಶೇಷಚೇತನರ ಬಗ್ಗೆ ಸಮಾಜವು ಕೇವಲ ಅನುಕಂಪ ತೋರಿಸುವ ಬದಲಿಗೆ ಅವರಲ್ಲಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಏನನ್ನಾದರೂ ಸಾಧಿಸಲು ಅವಕಾಶವನ್ನು ಮಾಡಿಕೊಡಬೇಕು. ಒಮ್ಮೆ ಅವರಿಗೆ ಸಾಧನೆ ಮಾಡಿ ಮುನ್ನಡೆದು ತಮ್ಮಲ್ಲಿನ ಸಾಮರ್ಥ್ಯವನ್ನು ಅನಾವರಣ ಮಾಡಲು ಅವಕಾಶ ಸಿಕ್ಕರೆ ಸಾಕು ಖಂಡಿತವಾಗಿ ಅಪಾರವಾದ ಪರಿಶ್ರಮದಿಂದ ಸಾಧಕರಾಗಿ ಹೊರಹೊಮ್ಮುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುವ ಪರಿಪೂರ್ಣವಾದ ವ್ಯಕ್ತಿಗಳಾಗಿ ಹೊರಹೊಮ್ಮುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಚಿವ ನಾರಾಯಣಗೌಡ ಮುಂಬೈ ಮಹಾನಗರದ ವೈದ್ಯಕೀಯ ಸಂಸ್ಥೆಯಲ್ಲಿ ಕೋಆರ್ಡಿನೇಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ನಮ್ಮ ತಾಲ್ಲೂಕಿನ ಭಾರತೀಪುರ ಗ್ರಾಮದ ಭೋಜರಾಜುಗೌಡ ಅವರು ಕಿವುಡುತನ ಸೇರಿದಂತೆ ಅಂಗವಿಕಲತೆಯಿAದ ಬಳಲುತ್ತಿರುವ ನೂರಾರು ಗ್ರಾಮೀಣ ಜನರು ಹಾಗೂ ವಿದ್ಯಾರ್ಥಿಗಳಿಗೆ ವೈದ್ಯಕೀಯ ತಪಾಸಣೆ ನಡೆಸಿ ಅವರ ದೋಷಕ್ಕನುಗುಣವಾಗಿ ಸಾಧನ ಸಲಕರಣೆಗಳನ್ನು ವಿತರಿಸಲು ಮುಂದೆ ಬಂದಿದ್ದಾರೆ. ಇವರ ಸಮಾಜಮುಖಿ ಕಾಳಜಿ ಹಾಗೂ ಜನ್ಮಭೂಮಿಯ ಬಗ್ಗೆ ಇರುವ ಬದ್ಧತೆಯನ್ನು ನಾನು ಮನಸಾರೆ ಶ್ಲಾಘಿಸುತ್ತೇನೆ ಎಂದು ನಾರಾಯಣಗೌಡ ಅಭಿಮಾನದಿಂದ ಹೇಳಿದರು..

ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಧನಂಜಯ್ ಅವರು ಮಾತನಾಡಿ ನೆರೆಯ ಮಹಾರಾಷ್ಟ್ರ ರಾಜ್ಯದ ಮುಂಬೈ ಮಹಾನಗರದಿಂದ ತಜ್ಞ ವೈದ್ಯರು ಹಾಗೂ ಆರೋಗ್ಯ ಸಿಬ್ಬಂಧಿಗಳು ಕೃಷ್ಣರಾಜಪೇಟೆ ತಾಲ್ಲೂಕಿನ ವಿಶೇಷಚೇತನರು ಹಾಗೂ ವಿಕಲಾಂಗರಿಗೆ ಸಾಧನ ಸಲಕರಣೆಗಳು ಸೇರಿದಂತೆ ವೈದ್ಯಕೀಯ ಸೇವೆ ನೀಡಲು ಮುಂದೆ ಬಂದು ತಮ್ಮ ಹೃದಯಶ್ರೀಮಂತಿಕೆಯನ್ನು ಪ್ರದರ್ಶಿಸಿದ್ದಾರೆ. ಆರೋಗ್ಯ ಇಲಾಖೆಯ ವತಿಯಿಂದ ಅವರಿಗೆ ಸಂಪೂರ್ಣ ಸಹಕಾರ ನೀಡುವ ಜೊತೆಗೆ ಸಹಕಾರ ಕಾರ್ಯಗಳಿಗೆ ನಮ್ಮ ತಜ್ಞರೂ ಜೊತೆಯಾಗಿ ಸೇವೆ ಮಾಡಿ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ನಾಂಧಿ ಹಾಡಲಿದ್ದಾರೆ ಎಂದು ಡಾ.ಧನಂಜಯ್ ಹೇಳಿದರು.

ಜಾಗೃತಿ ಶಿಬಿರದಲ್ಲಿ ತಹಶೀಲ್ದಾರ್ ಎಂ.ವಿ.ರೂಪ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್, ಬಿಇಓ ಆರ್.ಎಸ್.ಸೀತಾರಾಮ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಮಧುಸೂದನ್, ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಕೆ.ಎಸ್.ಶಿವಕುಮಾರ್, ಮುಂಬೈ ಆಸ್ಪತ್ರೆಯ ತಜ್ಞವೈದ್ಯರಾದ ಡಾ.ಅರುಣ್ ಬಾನಿಕ್, ಡಾ.ಗಾಯತ್ರಿಅಹುಜಾ, ಸಂಯೋಜಕರಾದ ಗಂಗಾಧರಗೌಡ, ಭೋಜರಾಜುಗೌಡ, ರಾಜಶೇಖರಸ್ವಾಮಿ, ಅರುಣ್ ಕಾಲಬಾಗೆ, ಜಿ.ಪಂ ಮಾಜಿಉಪಾಧ್ಯಕ್ಷ ಶೀಳನೆರೆ ಅಂಬರೀಶ್, ಜಿಲ್ಲಾ ಹಾಫ್ ಕಾಮ್ಸ್ ಅಧ್ಯಕ್ಷ ಕೆ.ಜಿ.ತಮ್ಮಣ್ಣ, ಸಿಡಿಪಿಓ ಅರುಣಕುಮಾರ್, ಕ್ಷೇತ್ರ ಸಮನ್ವಯಾಧಿಕಾರಿ ಲಿಂಗರಾಜು, ಮುಖಂಡರಾದ ಗಿರೀಶ್, ಪಿ.ಜೆ.ಕುಮಾರ್, ಉದೇಶಗೌಡ, ಮಾಕವಳ್ಳಿ ದೇವರಸೇಗೌಡ ಸೇರಿದಂತೆ ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತರು ಹಾಗೂ ಶಿಕ್ಷಕರು, ವಿಶೇಷಚೇತನ ಸಂಘಟನೆಗಳ ಕಾರ್ಯಕರ್ತರು ಜಾಗೃತಿ ಶಿಬಿರದಲ್ಲಿ ಭಾಗವಹಿಸಿದ್ದರು.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ, ಮಂಡ್ಯ

error: